SUDDIKSHANA KANNADA NEWS/ DAVANAGERE/ DATE:17-03-2024
ದಾವಣಗೆರೆ: ಆ ಜೋಡಿಗಳ ಬದುಕಿನಲ್ಲಿ ಬೀಸಿತ್ತು ಬಿರುಗಾಳಿ. ವೈವಾಹಿಕ ಜೀವನದಲ್ಲಿ ಬಂದಿದ್ದ ಸಮಸ್ಯೆ ವಿವಾಹ ವಿಚ್ಚೇದನದವರೆಗೆ ಬಂದಿತ್ತು. ಡಿವೋರ್ಸ್ ಗೆ ಅರ್ಜಿಯನ್ನೂ ಹಾಕಿದ್ದರು. ಮತ್ತೆ ಒಂದಾಗಿ ಸಂಸಾರ ನಡೆಸುವುದಿಲ್ಲ ಎಂಬ ನಿರ್ಧಾರಕ್ಕೆ ಬಂದಿದ್ದರು. ಆದ್ರೆ, ನ್ಯಾಯಾಧೀಶರ ಬದುಕಿನಲ್ಲಿ ಈ ಜೋಡಿಗಳ ಬದುಕಿನಲ್ಲಿ ಈಗ ತಂಗಾಳಿ ಬೀಸಿದೆ.
ನಗರದ ಕೌಟುಂಬಿಕ ನ್ಯಾಯಾಲಯದಲ್ಲಿ ನಡೆದ ಲೋಕ ಅದಾಲತ್ನಲ್ಲಿ ದಾಂಪತ್ಯ ಜೀವನದಲ್ಲಿ ಬಿರುಕು ಕಂಡು ವಿಚ್ಚೇದನ ಪಡೆಯುವ ಹಂತಕ್ಕೆ ತಲುಪಿ ನ್ಯಾಯಾಲಯದ ಮೆಟ್ಟಿಲು ಏರಿದ್ದ ದಂಪತಿಗಳು ಮತ್ತೆ
ಒಂದಾದರು.
7 ದಂಪತಿಗಳು ಕಳೆದ 4 ವರ್ಷದಿಂದ ನ್ಯಾಯಾಲಯಕ್ಕೆ ವಿಚ್ಚೇದನಕ್ಕಾಗಿ ಅಲೆದಾಡುತ್ತಿದ್ದರು. ಇವರಲ್ಲಿ ಪರಶುರಾಮ ಕೋಂ ಇಂದಿರಾ, ಇವರು ಮಾರ್ಚ್ 16 ರಂದು ನಡೆದ ಲೋಕಅದಾಲತ್ನಲ್ಲಿ ಒಂದಾಗಿದ್ದಾರೆ. ವೀರೇಶ್ ಕೋಂ ಪೂಜಾ, ಇವರು 2 ವರ್ಷದಿಂದ ನ್ಯಾಯಲಯದಲ್ಲಿ ವಿಚ್ಚೇದನಕ್ಕೆ ಅರ್ಜಿ ಸಲ್ಲಿಸಿದ್ದು, ಈಗ ಲೋಕಅದಾಲತ್ನಲ್ಲಿ ಹೊಂದಾಣಿಕೆ ಮಾಡಿಕೊಂಡಿದ್ದಾರೆ.
ಪ್ರೀತಂ ಕೋಂ ಚಂದನ್, ಮಂಜುನಾಥ ಕೋಂ ಕಲ್ಪನ, ಸಂದೀಪ ಕೋಂ ವಿಶಾಲ ಲೋಕದಾಲತ್ನಲ್ಲಿ ಒಂದಾಗಿದ್ದಾರೆ. ರಾಷ್ಟ್ರೀಯ ಲೋಕ ಅದಾಲತ್ ಮೂಲಕ ರಾಜಿ ಸಂಧಾನದಡಿ ಜಿಲ್ಲೆಯಲ್ಲ್ಲಿ 4,000 ಪ್ರಕರಣಗಳನ್ನು ನ್ಯಾಯಲಯದ ಪ್ರಕರಣಗಳನ್ನು ಮುಕ್ತಾಯಗೊಳಿಸಲಾಗಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷರಾದ ರಾಜೇಶ್ವರಿ ಎನ್. ಹೆಗಡೆ ತಿಳಿಸಿದರು.
ಲೋಕಅದಾಲತ್ನಲ್ಲಿ ಇನ್ನೂ 1000 ಪ್ರಕರಣಗಳು ರಾಜಿಯಾಗಬಹುದು. ಲೋಕ ಅದಾಲತ್ ಪರ್ಯಾಯ ವಿವಾದ ಪರಿಹಾರ ಕಾರ್ಯವಿಧಾನಗಳಲ್ಲಿ ಒಂದು. ವ್ಯಾಜ್ಯ ಪೂರ್ವ ಹಂತದಲ್ಲಿ ಬಾಕಿ ಇರುವ ವಿವಾದಗಳು, ಪ್ರಕರಣಗಳನ್ನು ಇತ್ಯರ್ಥಪಡಿಸುವ ವೇದಿಕೆಯಾಗಿದೆ ಎಂದರು.
ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮಹಾವೀರ.ಮ.ಕರೆಣ್ಣವರ, ಜಿಲ್ಲಾ ಕೌಟುಂಬಿಕ ನ್ಯಾಯಾಲಯದ ನ್ಯಾಯಾಧೀಶರಾದ ದಶರಥ.ಬಿ, 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಪ್ರವೀಣಕುಮಾರ್, ಪೋಕ್ಸೋ ನ್ಯಾಯಾಧೀಶರಾದ ಶ್ರೀಪಾದ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರಾದ ಎಲ್.ಹೆಚ್.ಅರುಣಕುಮಾರ್, ಹಾಗೂ ಇನ್ನಿತರರು ಉಪಸ್ಥಿತರಿದ್ದರು.