SUDDIKSHANA KANNADA NEWS/ DAVANAGERE/ DATE:15-03-2024
ದಾವಣಗೆರೆ: ಮುಂಗಾರು ಹಂಗಾಮಿನಲ್ಲಿ ರಾಗಿ ಬೆಳೆದ ರೈತರಿಂದ ನೇರವಾಗಿ ಬೆಂಬಲ ಬೆಲೆಯಲ್ಲಿ ರಾಗಿ ಖರೀದಿ ಮಾಡಲು ದಾವಣಗೆರೆ ನಗರದ ಎ.ಪಿ.ಎಂ.ಸಿ. ಗೋದಾಮಿನಲ್ಲಿ ರಾಗಿ ಖರೀದಿ ಕೇಂದ್ರಕ್ಕೆ
ಜಿಲ್ಲಾಧಿಕಾರಿ ಡಾ.ವೆಂಕಟೇಶ ಎಂ.ವಿ. ಚಾಲನೆ ನೀಡಿದರು.
ಯಾವುದೇ ಮಧ್ಯವರ್ತಿಗಳಿಲ್ಲದೇ ನೇರವಾಗಿ ರೈತರಿಂದ ರಾಗಿಯನ್ನು ಪ್ರತಿ ಕ್ವಿಂಟಾಲ್ ರಾಗಿಗೆ ರೂ.3846 ಗಳ ಬೆಂಬಲ ಬೆಲೆಯಲ್ಲಿ ಖರೀದಿ ಮಾಡಲಾಗುತ್ತ್ತಿದೆ. ಜಿಲ್ಲೆಯಲ್ಲಿ ಇದುವರೆಗೆ 1126 ರೈತರು ನೋಂದಾಯಿಸಿಕೊಂಡಿದ್ದು 43,868 ಕ್ವಿಂಟಾಲ್ ರಾಗಿ ಖರೀದಿಯಾಗುವ ನಿರೀಕ್ಷೆ ಇದೆ.
ರಾಗಿ ಬೆಳೆದ ರೈತರು ಯಾವುದೇ ಮಧ್ಯವರ್ತಿಗಳಿಗೆ ರಾಗಿಯನ್ನು ನೀಡದೇ ನೇರವಾಗಿ ಖರೀದಿ ಕೇಂದ್ರಕ್ಕೆ ತರುವ ಮೂಲಕ ಬೆಂಬಲ ಬೆಲೆಯ ಲಾಭ ಪಡೆಯಬೇಕು. ಖರೀದಿ ಕೇಂದ್ರದ ಸಿಬ್ಬಂದಿಗಳು ನಿಯಮಾನುಸಾರ ರೈತರಿಗೆ ತೊಂದರೆಯಾಗದಂತೆ ಕಾರ್ಯನಿರ್ವಹಿಸಲು ಹಾಗೂ ಎ.ಪಿ.ಎಂ.ಸಿ ಯವರು ಆಗತ್ಯ ಮೂಲಭೂತ ಸೌಲಭ್ಯಗಳನ್ನು ನೀಡುವಂತೆ ತಿಳಿಸಿದರು.
ದಾವಣಗೆರೆ, ಹರಿಹರ, ಚನ್ನಗಿರಿ, ಹೊನ್ನಾಳಿ, ಜಗಳೂರು ತಾಲ್ಲೂಕುಗಳಲ್ಲಿ ರಾಗಿ ಖರೀದಿ ಕೇಂದ್ರ ಆರಂಭಿಸಲಾಗಿದ್ದು ಒಟ್ಟು 5 ಕೇಂದ್ರಗಳಲ್ಲಿ ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಮೂಲಕ ಮಾರ್ಚ್ 31 ರ ವರೆಗೆ ಖರೀದಿ ಮಾಡಲಾಗುತ್ತಿದೆ. ರೈತರು ಕೇಂದ್ರಕ್ಕೆ ತರುವಾಗ ಎಫ್ಎಕ್ಯೂ ಮಾದರಿ ರಾಗಿ ಗುಣಮಟ್ಟ ಕಾಪಾಡಿಕೊಳ್ಳಬೇಕೆಂದು ತಿಳಿಸಿದರು.
ಆಹಾರ ಮತ್ತು ನಾಗರಿಕ ಸಬರಬರಾಜು ಇಲಾಖೆ ಉಪನಿರ್ದೇಶಕ ಸಿದ್ದರಾಮ್ ಮರಿಹಾಳ್, ತಹಶೀಲ್ದಾರ್ ಡಾ. ಅಶ್ವಥ್ ಎಂ.ಬಿ ಹಾಗೂ ನಿಗಮದ ಅಧಿಕಾರಿಗಳು ಉಪಸ್ಥಿತರಿದ್ದರು.