SUDDIKSHANA KANNADA NEWS/ DAVANAGERE/ DATE:14-03-2024
ದಾವಣಗೆರೆ: ಎಲ್ಲಾ ಜಿಲ್ಲಾ ಕೇಂದ್ರದಲ್ಲಿ ಡಾ; ಬಿ.ಆರ್.ಅಂಬೇಡ್ಕರ್ ರವರ ಭವನ ನಿರ್ಮಾಣವಾಗಿದ್ದರೂ ದಾವಣಗೆರೆಯಲ್ಲಿ ಬಹು ವರ್ಷಗಳಿಂದಲೂ ನಿವೇಶನದ ಸಮಸ್ಯೆಯಿಂದ ಭವನ ನಿರ್ಮಾಣ ಮಾಡಲು ಸಾಧ್ಯವಾಗಿರುವುದಿಲ್ಲ. ದಲಿತ ಮುಖಂಡರ ಒಕ್ಕೋರಲಿನ ಬೇಡಿಕೆ ಇದಾಗಿದ್ದು ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿನ ಸರ್ಕ್ಯೂಟ್ ಹೌಸ್ ಪಕ್ಕದಲ್ಲಿ ಒಂದು ಎಕರೆ ಜಾಗವನ್ನು ಡಾ. ಬಿ.ಅರ್.ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಮೀಸಲಿಡಲಾಗುತ್ತದೆ ಎಂದು ಜಿಲ್ಲಾಧಿಕಾರಿ ಡಾ. ಎಂ. ವಿ. ವೆಂಕಟೇಶ್ ತಿಳಿಸಿದರು.
ಅವರು ಜಿಲ್ಲಾಡಳಿತ ಭವನದ ತುಂಗಭದ್ರಾ ಸಭಾಂಗಣದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ಕುಂದುಕೊರತೆಯ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಜಿಲ್ಲೆಯ ಎಲ್ಲಾ ತಾಲ್ಲೂಕುಗಳಿಂದ ಆಗಮಿಸಿದ ದಲಿತ ಮುಖಂಡರು, ಸಾರ್ವಜನಿಕರಿಂದ ಅಹವಾಲುಗಳನ್ನು ಆಲಿಸಿ ನಂತರ ಮಾತನಾಡಿದರು.
ದಲಿತ ಮುಖಂಡರು ಒಕ್ಕೋರಲಿನಿಂದ ಜಿಲ್ಲಾ ಕೇಂದ್ರದಲ್ಲಿ ಡಾ. ಬಿ.ಆರ್.ಅಂಬೇಡ್ಕರ್ ಭವನ ನಿರ್ಮಾಣ ಮಾಡಲು ನಗರದ ಮಧ್ಯ ಭಾಗದಲ್ಲಿ ಜಾಗವನ್ನು ನೀಡಬೇಕೆಂದು ಒತ್ತಾಯ ಮಾಡುವ ಜೊತೆಗೆ ಭವನ ನಿರ್ಮಾಣ ಮಾಡಿದ್ದಲ್ಲಿ ಹೋರಾಟ ಮಾಡಲು ಹಿಂದೆ ಬೀಳುವುದಿಲ್ಲ ಎಂದು ಮುಖಂಡರು ತಮ್ಮ ಭಾವನೆಗಳನ್ನು ಹಂಚಿಕೊಂಡರು. ಈ ವೇಳೆ ಜಿಲ್ಲಾಧಿಕಾರಿಯವರು ನಗರದ ಒಳಗೆ ಒಂದು ಎಕರೆ ಸರ್ಕಾರಿ ಜಾಗ ಸಿಗದ ಕಾರಣ ಮತ್ತು ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ನಿರ್ಮಾಣ ಮಾಡಿದರೆ ವಾಹನಗಳ ಸಂಚಾರಕ್ಕೆ ಮತ್ತು ನಗರ ಬೆಳೆಯುತ್ತಿರುವುದರಿಂದ ಸಕ್ರ್ಯೂಟ್ ಹೌಸ್ ಪಕ್ಕದ ಜಾಗ ಸೂಕ್ತವಾಗಿದ್ದು ಅಲ್ಲಿ ಒಂದು ಎಕರೆ ಜಾಗವನ್ನು ಮೀಸಲಿಡಲಾಗುತ್ತದೆ ಎಂದಾಗ ಬಹುತೇಕ ಮುಖಂಡರು ತಮ್ಮ ಸಂತೋಷ ವ್ಯಕ್ತಪಡಿಸಿದರು.
ಹಾಸ್ಟೆಲ್ ಸ್ವಂತ ಕಟ್ಟಡ ನಿರ್ಮಾಣಕ್ಕಾಗಿ ಎಲ್ಲಾ ಇಲಾಖೆಗಳಿಂದ 15 ಹಾಸ್ಟೆಲ್ಗಳಿಗೆ ನಿವೇಶನ ಮಂಜೂರು ಮಾಡಿ ಪಹಣಿಯನ್ನು ಮಾಡಲಾಗಿದೆ. ಸಮಾಜದ ಬದಲಾವಣೆಗೆ ಶಿಕ್ಷಣ ಪ್ರಮುಖವಾಗಿದ್ದು ಈ ನಿಟ್ಟಿನಲ್ಲಿ ಪರಿಶಿಷ್ಟ ಜಾತಿ, ಪ.ಪಂಗಡದ ವಿದ್ಯಾರ್ಥಿಗಳು ಹಾಸ್ಟೆಲ್ ಪ್ರವೇಶಕ್ಕೆ ಬಂದಾಗ ನಿರಾಕರಣೆ ಮಾಡದೆ ಪ್ರವೇಶ ಕಲ್ಪಿಸಲಾಗಿದೆ. ಪ್ರತಿ ಗ್ರಾಮದಲ್ಲಿಯು ಸ್ಮಶಾನ ಇದ್ದು ಇದನ್ನು ಅಭಿವೃದ್ದಿ ಮಾಡುವ ಮೂಲಕ ಲ್ಯಾಂಡ್ ಬೀಟ್ ಮಾಡಲಾಗುತ್ತದೆ
ಎಂದರು.
ಜಗಳೂರು ತಾಲೂಕಿನ ಕೆಚ್ಚೇನಹಳ್ಳಿಯಲ್ಲಿ ಸಾಮಾಜಿಕ ಬಹಿಷ್ಕಾರ, ಅಸ್ಪೃಶ್ಯತೆ ಆಚರಣೆ ಇದೆ ಎಂದು ದಲಿತ ಮುಖಂಡರು ಹೇಳುತ್ತಿದ್ದು ಈಗಲೂ ಇದು ಆಚರಣೆಯಲ್ಲಿದ್ದರೆ ನಾಗರಿಕ ಸಮಾಜ ತಲೆತಗ್ಗಿಸುವಂತದ್ದಾಗಿದ್ದು ಉಪವಿಭಾಗಾಧಿಕಾರಿ ಹಾಗೂ ಪೊಲೀಸ್ ಉಪಾಧೀಕ್ಷಕರನ್ನು ಗ್ರಾಮಕ್ಕೆ ಕಳುಹಿಸಿ ತನಿಖೆ ಮಾಡಿ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.
ಬಗರ್ ಹುಕುಂ ಜಮೀನು ಮಂಜೂರಾತಿ, ಇ-ಸ್ವತ್ತು, ನಕಾಶೆ ರಸ್ತೆ ಒತ್ತುವರಿ, ಸಿಜಿ ಆಸ್ಪತ್ರೆಯಲ್ಲಿ ಹೊರಗುತ್ತಿಗೆಯನ್ನು ನೇರಪಾವತಿ ಮೂಲಕ ಸಿಬ್ಬಂದಿ ನೇಮಕ ಸೇರಿದಂತೆ ಅನೇಕ ಕುಂದುಕೊರತೆಗಳ ಬಗ್ಗೆ ಅನೇಕ ಮುಖಂಡರು ಸಭೆಯಲ್ಲಿ
ಪ್ರಸ್ತಾಪಿಸಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸುರೇಶ್ ಬಿ.ಇಟ್ನಾಳ್ ಅವರು ಗ್ರಾಮಗಳಲ್ಲಿ ಆಗಬೇಕಾದ ಕಾಮಗಾರಿಗಳು, ಅಂಗನವಾಡಿ ಕಳಪೆ, ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳ ಮೇಲೆ ಕರ್ತವ್ಯ ಲೋಪದ ಬಗ್ಗೆ ತಿಳಿಸಿದ್ದು
ಕ್ರಮ ಕೈಗೊಳ್ಳಲಾಗುತ್ತದೆ. ಕೆಲವು ಗ್ರಾಮಗಳಲ್ಲಿ ನಿವೇಶನ, ಕುಡಿಯುವ ನೀರಿನ ಪೂರೈಕೆ ಬಗ್ಗೆ ತುರ್ತು ಕ್ರಮ ಜರುಗಿಸಲಾಗುತ್ತದೆ ಎಂದರು.
ಹೆಚ್ಚುವರಿ ರಕ್ಷಣಾಧಿಕಾರಿ ವಿಜಯಕುಮಾರ್ ಎಂ.ಸಂತೋಷ್ ಮಾತನಾಡಿ ಜಾತ್ರೆ ಸಂದರ್ಭದಲ್ಲಿ ಅಲೆಮಾರಿಗಳು ಮಕ್ಕಳಿಗೆ ಆಟಗಳನ್ನು ಆಡಿಸುವರು. ಈ ವೇಳೆ ಪೊಲೀಸ್ ಸಿಬ್ಬಂದಿ ಅನುಮತಿ ನೀಡಲು ಹಣ ಕೇಳುತ್ತಾರೆ. ದೌರ್ಜನ್ಯ ಪ್ರಕರಣಗಳ ಬಗ್ಗೆ ಜನರು ಪ್ರಸ್ತಾಪಿಸಿದ್ದು ಯಾವುದೇ ದೌರ್ಜನ್ಯ ಪ್ರಕರಣಗಳು ಕಂಡುಬಂದಲ್ಲಿ ತಕ್ಷಣ ಪೊಲೀಸ್ ಠಾಣೆಗೆ ಹೋಗಿ ದೂರು ದಾಖಲಿಸಬೇಕು. ಜಾತ್ರೆಗಳಲ್ಲಿ ಮನರಂಜನ ಆಟವಾಡಿಸಲು ಹಣ ಕೇಳಿದಲ್ಲಿ ಮೇಲಾಧಿಕಾರಿಗಳ ಗಮನಕ್ಕೆ ತರಲು ತಿಳಿಸಿದರು.
ನ್ಯಾಮತಿ ತಾಲ್ಲೂಕಿನ ಜಯಮ್ಮ ಎಂಬ ವೃದ್ದ ಮಹಿಳೆ ತನ್ನ ಮಕ್ಕಳು ನನ್ನ ಜಮೀನಿನ ಎಲ್ಲಾ ದಾಖಲೆಗಳನ್ನು ಪಡೆದು ನನಗೆ ಮನೆಯಿಂದ ಹೊರಗೆ ಹಾಕಿದ್ದಾರೆ. ಇದರಿಂದ ನಾನು ಬೇರೆಯವರ ಮನೆ ಬಾಗಿಲಲ್ಲಿ ಮತ್ತು ದೇವಸ್ಥಾನದಲ್ಲಿ ವಾಸಿಸುವ ಸ್ಥಿತಿ ಬಂದಿದೆ ಎಂದಾಗ ಹಿರಿಯ ನಾಗರಿಕರ ಕೋರ್ಟ್ ಎ.ಸಿ. ಅಧ್ಯಕ್ಷತೆಯಲ್ಲಿ ನಡೆಸಲಿದ್ದು ನಾಳೆಯೇ ಕೋರ್ಟ್ ನಡೆಸುವ ಮೂಲಕ ಜಯಮ್ಮನವರಿಗೆ ನ್ಯಾಯ ಒದಗಿಸಿಕೊಡುತ್ತೇನೆ ಎಂದು ಹೊನ್ನಾಳಿ ಉಪವಿಭಾಗಾಧಿಕಾರಿ ಅಭಿಷೇಕ್ ತಿಳಿಸಿದರು.
ಸಿಪಿಓ ಮಲ್ಲನಾಯ್ಕ್, ದಾವಣಗೆರೆ ಉಪವಿಭಾಗಾಧಿಕಾರಿ ದುರ್ಗಶ್ರೀ, ಪಾಲಿಕೆ ಆಯುಕ್ತೆ ರೇಣುಕಾ ಹಾಗೂ ಇನ್ನಿತರರು ಉಪಸ್ಥಿತರಿದ್ದರು. ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ನಾಗರಾಜ್ 2020 ರಲ್ಲಿ ನಡೆದ ಕುಂದುಕೊರತೆ ಸಭೆಯ ನಡಾವಳಿಯನ್ನು ಸಭೆಯ ಗಮನಕ್ಕೆ ತಂದರು.