SUDDIKSHANA KANNADA NEWS| DAVANAGERE| DATE:28-05-2023
ದಾವಣಗೆರೆ (DAVANAGERE): ಭೂಮಿ ಸಂಬಂಧಿತ ನಕಲಿ ದಾಖಲೆ ಸೃಷ್ಟಿಸಿದ ಆರೋಪ ಎದುರಿಸುತ್ತಿದ್ದ ಆರ್ ಟಿ ಐ ಕಾರ್ಯಕರ್ತ ಹರೀಶ್ ಹಳ್ಳಿ ಪೊಲೀಸರಿಂದ ತಪ್ಪಿಸಿಕೊಳ್ಳುವ ಯತ್ನದಲ್ಲಿ ಮೇಲ್ಸೇತುವೆಯಿಂದ ಹಾರಿ ಸಾವಿಗೀಡಾದ ಘಟನೆ ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಚನ್ನಗಿರಿ ತಾಲೂಕಿನ ಕಬ್ಬಳ ಗ್ರಾಮದ ಆರ್ ಟಿ ಐ ಕಾರ್ಯಕರ್ತನಾಗಿದ್ದ ಹರೀಶ್ ಹಳ್ಳಿ ವಿರುದ್ಧ ಮೂರು ನಿವೇಶನಗಳ ನಕಲಿ ದಾಖಲೆ ಸೃಷ್ಟಿಸಿ ಕುಟುಂಬದವರ ಹೆಸರಿಗೆ ಮಾಡಿಸಿಕೊಂಡ ಆರೋಪ ಎದುರಿಸುತ್ತಿದ್ದರು. ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಈ ಸಂಬಂಧ ಗಾಂಧಿನಗರ ಪಿಎಸ್ ಐ ಪೊಲೀಸ್ ಠಾಣೆಗೆ ಆರೋಪಿಯನ್ನು ಕರೆತರುತ್ತಿದ್ದರು. ಈ ವೇಳೆ ಮುಂಜಾನೆ 2.30ರ ವೇಳೆ ಮೇಲ್ಸೇತುವೆಯಿಂದ ಜಿಗಿದು ಸರ್ವಿಸ್ ರಸ್ತೆಗೆ ಬಿದ್ದಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಆತನನ್ನು ಎಸ್ಎಸ್ ಹೈಟೆಕ್ ಆಸ್ಪತ್ರೆಗೆ ಕರೆದೊಯ್ಯುವ ವೇಳೆ ಮಾರ್ಗಮಧ್ಯೆ ಕೊನೆಯುಸಿರೆಳೆದಿದ್ದಾರೆ.
40 ವರ್ಷದ ಹರೀಶ್ ಹೆಚ್.ಆರ್. ಲಿಂಗಾಯತ ಸಮುದಾಯಕ್ಕೆ ಸೇರಿದ್ದಾರೆ.ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಮೃತ ಪತ್ನಿಯು ಪಿಎಸ್ಐ, ಇಬ್ಬರು ಪೊಲೀಸರ ವಿರುದ್ಧ ಕೊಲೆ ಕೇಸ್ ದಾಖಲಿಸುವಂತೆ ಪೊಲೀಸರಿಗೆ ದೂರು ನೀಡಿದ್ದಾರೆ. ಬಾಬುರಾವ್ ಎಂಬುವವರ ಕುಮ್ಮಕ್ಕಿನಿಂದ ಹತ್ಯೆ ಮಾಡಲಾಗಿದೆ ಎಂದು ಹರೀಶ್ ಪತ್ನಿ ದೂರಿನಲ್ಲಿ ಆರೋಪಿಸಿದ್ದಾರೆ.
ಪ್ರಕರಣ ದಾಖಲಾಗಿದ್ದು, ಘಟನೆ ಸಂಬಂಧ ತನಿಖೆ ಮುಂದುವರಿದಿದೆ ಎಂದು ದಾವಣಗೆರೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಅರುಣ್ ಮಾಹಿತಿ ನೀಡಿದ್ದಾರೆ.
Comments 2