SUDDIKSHANA KANNADA NEWS/ DAVANAGERE/ DATE:27-05-2023
ದಾವಣಗೆರೆ(DAVANAGERE): ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಷ್ಟ್ರಾಧ್ಯಕ್ಷ ಶಾಮನೂರು ಶಿವಶಂಕರಪ್ಪರ ಪುತ್ರ ಎಸ್. ಎಸ್. ಮಲ್ಲಿಕಾರ್ಜುನ್ (S. S. MALLIKARJUN) ಅವರು ಸಿಎಂ ಸಿದ್ದರಾಮಯ್ಯರ ಸಂಪುಟಕ್ಕೆ ಸೇರ್ಪಡೆಯಾಗಿದ್ದಾರೆ. ಈ ಹಿಂದೆ ಮೂರು ಬಾರಿ ಶಾಸಕರಾಗಿದ್ದ ಮಲ್ಲಿಕಾರ್ಜುನ್ ಅವರು 2023ರ ವಿಧಾನಸಭೆ ಚುನಾವಣೆಯಲ್ಲಿ ದಾವಣಗೆರೆ ಉತ್ತರ ಕ್ಷೇತ್ರದಿಂದ ಸ್ಪರ್ಧಿಸಿ ಭರ್ಜರಿ ಜಯ ಗಳಿಸಿದ್ದರು. ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಮಲ್ಲಿಕಾರ್ಜುನ್ ಅವರು ಮೂರನೇ ಬಾರಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.

ಕಲ್ಲೇಶ್ವರ ದೇವರ ಹೆಸರಿನಲ್ಲಿ ಬೆಂಗಳೂರಿನಲ್ಲಿ ನಡೆದ ಸಚಿವರ ಪದಗ್ರಹಣ ಸಮಾರಂಭದಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಮಲ್ಲಿಕಾರ್ಜುನ್ ಅವರು, ಈ ಹಿಂದೆ ಯುವಜನ ಕ್ರೀಡೆ, ತೋಟಗಾರಿಕಾ ಸಚಿವರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ. ಈ ಬಾರಿಯ ಸಂಪುಟದಲ್ಲಿ ತೋಟಗಾರಿಕೆ ಮತ್ತು ಗಣಿಗಾರಿಕೆ ಖಾತೆ ನೀಡಲಾಗಿದ್ದು, ಇದೇ ಬಹುತೇಕ ಪಕ್ಕಾ ಎಂದು ಮೂಲಗಳು ದೃಢಪಡಿಸಿವೆ.

ಎಸ್ ಎಸ್ ಎಂ ವಿದ್ಯಾರ್ಹತೆ:
ಎಸ್.ಎಸ್. ಮಲ್ಲಿಕಾರ್ಜುನ್ ಅವರು ಬಿ.ಕಾಂ. ಪದವೀಧರರಾಗಿದ್ದು, ತಂದೆಯವರ ಮಾರ್ಗದರ್ಶನದಂತೆ ವಿದ್ಯಾಭ್ಯಾಸದ ನಂತರ ವ್ಯಾಪಾರದಲ್ಲಿ ತೊಡಗಿಸಿಕೊಂಡರು. ಜೊತೆಯಲ್ಲಿಯೇ ಪ್ರಥಮವಾಗಿ ಸ್ವ-ಸಾಮರ್ಥ್ಯದಿಂದ ಕೈಗಾರಿಕೆಗಳನ್ನು ಸ್ಥಾಪಿಸಲು ಪ್ರಾರಂಭಮಾಡಿ 1991ನೇ ಸಾಲಿನಲ್ಲಿ ಡಿಸ್ಟಿಲರೀ( ಬಾಟ್ಲಿಂಗ್) ಘಟಕ ಶುರು ಮಾಡಿದರು. ನಂತರ ವಿವಿಧ ದೇಶಗಳಿಗೆ ಭೇಟಿ ನೀಡಿ ಡಿಸ್ಟಿಲರಿಗಳ ಬಗ್ಗೆ ಅಧ್ಯಯನ ಮಾಡಿ 2004ನೇ ಸಾಲಿನಲ್ಲಿ ಡಿಸ್ಟಿಲರಿಯನ್ನು ಉನ್ನತೀಕರಿಸಿ, ಪ್ರಾಥಮಿಕ ಘಟಕವನ್ನು ಆರಂಭಿಸಿ ಸ್ಪಿರೀಟ್ ಉತ್ಪಾದಿಸಲು ಪ್ರಾರಂಭಿಸಿದರು.
ನಂತರ ಇನ್ನೂ ಹೆಚ್ಚಿನ ಅಧ್ಯಾಯನಗಳನ್ನು ದೇಶ- ವಿದೇಶಗಳಲ್ಲಿ ತಿಳಿದುಕೊಂಡು ಪೆಟ್ರೋಲಿನ ಜೊತೆಗೆ ಶೇ. 5ರ ಪ್ರಮಾಣದಲ್ಲಿ ಎಥನಾಲನ್ನು ಮಿಶ್ರಣ ಮಾಡುವ ಸಲುವಾಗಿ ತಮ್ಮ ಡಿಸ್ಟಿಲರಿ ಘಟಕದಲ್ಲಿ ಎಥನಾಲ್ ಉತ್ಪಾದನೆಯನ್ನು ಪ್ರಾರಂಭಿಸಿ, ವಿವಿಧ ತೈಲ ಕಂಪನಿಗಳಿಗೆ ಸರಬರಾಜು ಮಾಡಲು ಆರಂಭಿಸಿದರು.
1967ರ ಸೆಪ್ಟಂಬರ್ 22 ರಂದು ಜನಿಸಿದ ಮಲ್ಲಿಕಾರ್ಜುನ್ ಅವರು ಶಾಮನೂರು ಶಿವಶಂಕರಪ್ಪರ ಪ್ರೀತಿಯ ಪುತ್ರ. ಡಾ. ಪ್ರಭಾ ಮಲ್ಲಿಕಾರ್ಜುನ್ ಅವರು ಮಲ್ಲಿಕಾರ್ಜುನ್ ರ ಧರ್ಮಪತ್ನಿ.
ಸಮರ್ಥ ಮೊದಲನೇ ಪುತ್ರ. ಶ್ರೇಷ್ಠಾ. ಎಸ್.ಎಂ. ದ್ವಿತೀಯ ಪುತ್ರಿ. ಶಿವ ಎಸ್.ಎಂ. ಮೂರನೇ ಮಗ.
- ಉದ್ಯೋಗ, ಸಾಧನೆ: ಸಾರ್ವಜನಿಕ ಸೇವೆಗಳು:-
- 1. ಕುವೆಂಪು ವಿಶ್ವವಿದ್ಯಾನಿಲಯದ ಸೆನೆಟ್ ಸದಸ್ಯರು (1993-96)
- 2. ಕುವೆಂಪು ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಸದಸ್ಯರು (1996-99)
- 3. 1997 ರಲ್ಲಿ ಕಾರ್ಯದರ್ಶಿಗಳು, ಕರ್ನಾಟಕ ರಾಜ್ಯ ಯುವ ಕಾಂಗ್ರೆಸ್ ಸಮಿತಿ
- 4. ವಿಧಾನಸಭಾ ಸದಸ್ಯರು,ದಾವಣಗೆರೆ ಕ್ಷೇತ್ರ (ಉಪ-ಚುನಾವಣೆ) ಅತ್ಯಧಿಕ ಮತಗಳಿಂದ ಗೆದ್ದಿದ್ದರು (1998)
- 5. ರಾಜೀವ್‌ಗಾಂಧಿ ವೈದ್ಯಕೀಂಯ ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಸದಸ್ಯರು (1999)
- 6. ವಿಧಾನಸಭಾ ಸದಸ್ಯರು ದಾವಣಗೆರೆ ಕ್ಷೇತ್ರ (1999)
- 7. ಕರ್ನಾಟಕ ರಾಜ್ಯ ಕ್ರೀಡಾ ಪ್ರಾಧಿಕಾರದ ಅಧ್ಯಕ್ಷರು (1999-2004)
- 8. ಕರ್ನಾಟಕ ರಾಜ್ಯ ಪುಟ್‌ಬಾಲ್ ಅಸೋಷಿಯೇಷನ್ ಅಧ್ಯಕ್ಷರು (2000)
- 9. ಕರ್ನಾಟಕ ರಾಜ್ಯ ಅಮೇಚೂರ್ ಕಬ್ಬಡ್ಡಿ ಸಂಸ್ಥೆ ಅಧ್ಯಕ್ಷರು (2000)
- 10. ಕರ್ನಾಟಕ ಸರ್ಕಾರದಲ್ಲಿ ಯುವಜನ ಸೇವೆ ಹಾಗೂ ಕ್ರೀಡಾ ಸಚಿವರಾಗಿ ಸೇವೆ (1999-2004)
- 11. ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆ ಸೋಲು (2004-2005)
- 12. ವ್ಯವಸ್ಥಾಪಕ ನಿರ್ದೇಶಕರು, ಇಂಡಿಯನ್ ಕೇನ್ ಪವರ್ ಲಿ., ಮುಧೋಳ, ಬಾಗಲಕೋಟೆ ಜಿಲ್ಲೆ (2005)
- 13. ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆ, ಸೋಲು (2009-10)
- 14. ವಿಧಾನಸಭಾ ಸದಸ್ಯರು, ದಾವಣಗೆರೆ ಉತ್ತರ ಕ್ಷೇತ್ರ (2013)
- 15. ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆ ಸೋಲು (2014-15)
- 16. ಎಪಿಎಂಸಿ, ತೋಟಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು (2016-2018)
- 17. ವಿಧಾನಸಭಾ ಸದಸ್ಯರು, ದಾವಣಗೆರೆ ಉತ್ತರ ಕ್ಷೇತ್ರ 2023
- 18. ಜಂಟಿ ಕಾರ್ಯದರ್ಶಿಗಳು, ಬಾಪೂಜಿ ವಿದ್ಯಾಸಂಸ್ಥೆ, ದಾವಣಗೆರೆ
- 19. ಉಪಾಧ್ಯಕ್ಷರು, ಬಾಪೂಜಿ ಸಹಕಾರಿ ಬ್ಯಾಂಕ್ ನಿ., ದಾವಣಗೆರೆ
- 20 ಗೌರವ ಅಧ್ಯಕ್ಷರಾಗಿ ಹಲವಾರು ಸಂಘ-ಸಂಸ್ಥೆಗಳು ಮತ್ತು ಧಾರ್ಮಿಕ ಕ್ಷೇತ್ರಗಳಲ್ಲಿ ಸೇವೆ
ನಷ್ಟದಲ್ಲಿದ್ದ ಕಂಪೆನಿ ಲಾಭದತ್ತ:
ಸಾರ್ವಜನಿಕ ಉದ್ಯಮದಲ್ಲಿ ನಷ್ಟವನ್ನು ಅನುಭವಿಸುತ್ತಿದ್ದ, ದಾವಣಗೆರೆ ಸಕ್ಕರೆ ಕಾರ್ಖಾನೆಯನ್ನು 1996 ನೇ ಸಾಲಿನಲ್ಲಿ ತಮ್ಮ ವಶಕ್ಕೆ ತೆಗೆದುಕೊಂಡು ಶಿಥೀಲಾವಸ್ಥೆಯಲ್ಲಿದ್ದ ಕಂಪನಿಯನ್ನು ಹಗಲು-ಇರುಳು ಎನ್ನದೇ ವಿವಿಧ ತಜ್ಞ ನೌಕರರ ಜೊತೆಯಲ್ಲಿ ಕಾರ್ಯನಿರ್ವಹಿಸಿ ಕಂಪನಿಯನ್ನು ಉನ್ನತೀಕರಿಸಿ ಸಾರ್ವಜನಿಕರಿಂದ ಮೆಚ್ಚುಗೆಗೆ ಪಾತ್ರರಾದರು.
ನಂತರ ದುಗ್ಗಾವತಿಯಲ್ಲಿ ಶಾಮನೂರು (SHAMANURU)ಶುಗರ್ಸ್ ಆರಂಭಿಸಲು ಪ್ರಮುಖ ಪಾತ್ರವಹಿಸಿದರು. ತದನಂತರ ಸಕ್ಕರೆ ಉದ್ಯಮವನ್ನು ಇನ್ನೂ ಉನ್ನತೀಕರಿಸಲು ದಾವಣಗೆರೆ(DAVANAGERE)ಯಿಂದ ಸುಮಾರು 300 – 400 ಕಿ.ಮೀ. ದೂರದಲ್ಲಿರುವ ಮುಧೋಳ ತಾಲ್ಲೂಕಿನ ಉತ್ತೂರು ಗ್ರಾಮದಲ್ಲಿ ಅತ್ಯಾಧುನಿಕ ಸಕ್ಕರೆ ಕಾರ್ಖಾನೆಯನ್ನು ಆರಂಭಿಸಲು ಯೋಚಿಸಿ ಹೆಚ್ಚಿನ ಅಧ್ಯಯನಕ್ಕಾಗಿ ಬ್ರೆಜಿಲ್ (BREJIL) ದೇಶದ ಪ್ರವಾಸ ಕೈಗೊಂಡು ಅಲ್ಲಿನ ತಾಂತ್ರಿಕತೆ ತಿಳಿದುಕೊಂಡು ಬಂದು ಮುಧೋಳದಲ್ಲಿ 5000 ಮೆ.ಟನ್ ಸಾಮರ್ಥ್ಯದ ಸಕ್ಕರೆ ಕಾರ್ಖಾನೆಯನ್ನು ಸ್ವತಃ ತಾವೇ ತಜ್ಞರುಗಳ ಸಹಾಯದಿಂದ ಮೇಲುಸ್ತುವಾರಿ ವಹಿಸಿ ಯಶಸ್ವಿಯಾಗಿ ಕಂಪನಿ ಪ್ರಾರಂಭಿಸಿದರು. ಸಕ್ಕರೆ ಉತ್ಪಾದನೆ ಜೊತೆಗೆ ವಿದ್ಯುತ್ (CURRENT) ಉತ್ಪಾದನೆಯನ್ನು ಆರಂಭಿಸಿದರು. ಈಗ ಈ ಸಕ್ಕರೆ ಕಾರ್ಖಾನೆಯ ಕಬ್ಬು ಅರಿಯುವ ಸಾಮರ್ಥ್ಯವನ್ನು 10,000 ಮೆ. ಟನ್‌ಗಳಿಗೆ ಹೆಚ್ಚಿಸಲು ಮತ್ತು ವಿದ್ಯುತ್ (CURRENT)ಉತ್ಪಾದನೆಯನ್ನೂ ಸಹ ಹೆಚ್ಚಿಸಲು ನುರಿತ ತಜ್ಞರೊಂದಿಗೆ ಸಮಾಲೋಚನೆ ನಡೆಸಿದವರು.
ಸಕ್ಕರೆ ಉದ್ಯಮದ ಜೊತೆಗೆ ಅಕ್ಕಿ, ತೊಗರೆ ಬೇಳೆ ಇನ್ನಿತರ ಉದ್ಯಮಗಳನ್ನು ನಡೆಸುತ್ತಿರುವ ಮಲ್ಲಿಕಾರ್ಜುನ್ ಅವರು, ಇತ್ತೀಚಿನ ಬದಲಾದ ತಾಂತ್ರಿಕತೆಯನ್ನು ಅಧ್ಯಯನ ಮಾಡಲು ಚೀನಾ ಮತ್ತಿತರ ದೇಶಗಳಿಗೆ ಭೇಟಿ ಕೊಟ್ಟು ಬದಲಾದ ತಾಂತ್ರಿಕತೆ ತಿಳಿದುಕೊಂಡು ಬಂದು ನೂತನ ಮಾದರಿಯ ಭವ್ಯವಾದ ಅಕ್ಕಿ ಗಿರಣಿ ತಮ್ಮ ಮೇಲುಸ್ತುವಾರಿಯಲ್ಲಿಯೇ ಪ್ರಾರಂಭಿಸಿದ್ದಾರೆ. ಹೊಸದಾಗಿ ಉದ್ಯಮಗಳನ್ನು ಪ್ರಾರಂಭಿಸಬೇಕೆಂದರೆ ತುಂಬಾ ಉತ್ಸುಕತೆ ಇರುತ್ತದೆ.
ವಿದ್ಯೆ, ರಾಜಕೀಯ, ಸಾರ್ವಜನಿಕ ಕ್ಷೇತ್ರದಲ್ಲಿ ಸೇವೆ:
ಮಲ್ಲಿಕಾರ್ಜುನ್‌ರವರು ಕೇವಲ ಉದ್ಯಮ ಅಷ್ಟೇ ಅಲ್ಲದೆ, ವಿದ್ಯಾ ಕ್ಷೇತ್ರ, ರಾಜಕೀಯ ಕ್ಷೇತ್ರ ಹಾಗೂ ಸಾರ್ವಜನಿಕ ಕ್ಷೇತ್ರಗಳಲ್ಲಿ ತಮ್ಮನ್ನು ಸಾಕಷ್ಟು ತೊಡಗಿಸಿಕೊಂಡಿದ್ದಾರೆ. ಇದಕ್ಕಾಗಿ ಮನೆ-ಮಠ, ಊಟ- ನಿದ್ರೆ ಎನ್ನದೇ ದುಡಿಯುತ್ತಿದ್ದಾರೆ. ಕುವೆಂಪು ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಹಾಗೂ ಸೆನೆಟ್ ಸದಸ್ಯರಾಗಿ ಮತ್ತು ರಾಜೀವಗಾಂಧಿ ವೈದ್ಯಕೀಯ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರಾಗಿ ಕಾರ್ಯನಿರ್ವಹಿಸಿರುವುದಲ್ಲದೇ, ದೇಶದ ಪ್ರತಿಷ್ಠಿತ ವಿದ್ಯಾಸಂಸ್ಥೆ ಬಾಪೂಜಿ ವಿದ್ಯಾಸಂಸ್ಥೆ, ದಾವಣಗೆರೆ ಇದರ ಗೌರವ ಜಂಟಿ ಕಾರ್ಯದರ್ಶಿಗಳಾಗಿ, ವಿದ್ಯಾ ಕ್ಷೇತ್ರದಲ್ಲಿ ಹಲವಾರು ಸಾಧನೆಗಳನ್ನು ಮಾಡಿದ್ದಾರೆ.
ಕ್ರೀಡಾ ಸಚಿವರಾಗಿ ಕ್ರೀಡೆಗೆ ಪ್ರೋತ್ಸಾಹ:
ಕರ್ನಾಟಕ ರಾಜ್ಯದ ವಿಧಾನಸಭೇಗೆ 1998ನೇ ಸಾಲಿನಲ್ಲಿ ಆಯ್ಕೆಯಾಗಿ 3 ಬಾರಿ ವಿಧಾನಸಭಾ ಸದಸ್ಯರಾಗಿರುತ್ತಾರೆ. 1999 ನೇ ಸಾಲಿನಲ್ಲಿ ಕರ್ನಾಟಕ ರಾಜ್ಯ ಸರ್ಕಾರದ ಸಚಿವ ಸಂಪುಟದಲ್ಲಿ ಸಚಿವರಾಗಿ ಯಾವುದೇ ಕಪ್ಪುಚುಕ್ಕೆ ಇಲ್ಲದೇ ಸೇವೆ. 1999 ರಿಂದ 2004 ರವರೆಗೆ ಕರ್ನಾಟಕ ರಾಜ್ಯ ಕ್ರೀಡಾ ಪ್ರಾಧಿಕಾರದ ಅಧ್ಯಕ್ಷರಾಗಿ ಕ್ರೀಡೆಯಲ್ಲಿ ಹಲವಾರು ಬದಲಾವಣೆಗಳನ್ನು ಮಾಡಿ ರಾಜ್ಯದ ಯುವಕರು ಕ್ರೀಡೆಯಲ್ಲಿ ಹೆಚ್ಚು ಆಸಕ್ತಿ ವಹಿಸುವಂತೆ ಮಾಡಿರುವುದಲ್ಲದೆ ರಾಷ್ಟ್ರ ಮಟ್ಟದ ಕಬಡ್ಡಿ ಪಂದ್ಯಾವಳಿಗಳು, ಬಾಸ್ಕೆಟ್‌ಬಾಲ್, ಟೆನಿಸ್, ವಾಲಿಬಾಲ್ ಟೂರ್ನಿಗಳನ್ನು ನಡೆಸಿ ಕ್ರೀಡೆಗೆ ಹೆಚ್ಚಿನ ಪ್ರೋತ್ಸಾಹವನ್ನು ನೀಡಿರುವುದು ಮತ್ತೊಂದು ಹೆಗ್ಗಳಿಕೆ.
ಕುಂದುವಾಡ ಕೆರೆ ನಿರ್ಮಾಣ:
ಎಸ್.ಎಸ್.ಮಲ್ಲಿಕಾರ್ಜುನ್‌ರವರು, ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವರಾಗಿ ಸೇವೆಸಲ್ಲಿಸಿದ್ದು, ಆ ಸಂದರ್ಭದಲ್ಲಿ ದಾವಣಗೆರೆ ಜನತೆಗೆ ಬಹು ಜನೋಪಯೋಗಿ ಕಾರ್ಯಗಳನ್ನು ಮಾಡಿರುತ್ತಾರೆ. ಅಂದಿನ ದಿನಗಳಲ್ಲಿ ದಾವಣಗೆರೆಯಲ್ಲಿ ಕುಡಿಯುವ ನೀರಿನ ಹಾಹಾಕಾರವು ಬಹಳ ಇದ್ದು, ಜನರು ಕುಡಿಯುವ ನೀರಿಗಾಗಿ ಪರದಾಡುತ್ತಿದ್ದರು. ಇದನ್ನು ಮನಗಂಡು ಯಾರೂ ನಿರೀಕ್ಷಸದೇ ಇದ್ದ ಮತ್ತು ಎಲ್ಲಾ ಊಳು ತುಂಬಿಕೊಂಡು ಗಿಡ-ಗಂಟೆಗಳು ಬೆಳೆದಿದ್ದ ಕುಂದುವಾಡ ಕೆರೆಯನ್ನು ಪತ್ತೆಮಾಡಿ ನಗರಸಭೆಯ ಅಭಿಯಂತರರೊಂದಿಗೆ ಸ್ವತಃ ತಾವೇ ಕುಂದುವಾಡ ಕೆರೆಯ ಜಾಗವನ್ನು ಪರಿಶೀಲಿಸಿ ನೂತನವಾಗಿ ಕೆರೆಯನ್ನು ನಿರ್ಮಿಸಲು ಅಂದಾಜು ವೆಚ್ಚ ಸಿದ್ದಪಡಿಸಿಕೊಂಡು ಅಂದಿನ ಸರ್ಕಾರದ ಮುಖ್ಯಮಂತ್ರಿ ಎಸ್. ಎಂ. ಕೃಷ್ಣಾರವರಿಂದ ಕೊಟ್ಯಾಂತರ ಹಣವನ್ನು ತಂದು ಕುಂದುವಾಡ ಕೆರೆಯನ್ನು ಪುನರ್‌ನಿರ್ಮಿಸಿ ಗುರುತ್ವಾಕರ್ಷಣಾ ಬಲದಿಂದ ಭದ್ರಾ ನಾಲೆಯಿಂದ ನೀರನ್ನು ಕುಂದುವಾಡ ಕೆರೆಗೆ ಹರಿಸಿ ದಾವಣಗೆರೆ ಜನರ ನೀರಿನ ಧಗೆಯನ್ನು ನಿವಾರಿಸಿ ದಾವಣಗೆರೆಯಲ್ಲಿ ಇತಿಹಾಸ ನಿರ್ಮಿಸಿದರು.
ನಿರಾಶ್ರಿತರಿಗೆ ಮನೆ ಕೊಟ್ಟ ಆಶ್ರಯದಾತ:
ಅಂದಿನ ಸಂದರ್ಭದಲ್ಲಿ ಹಮಾಲರು ಕೂಲಿ, ಕಾರ್ಮಿಕರು, ಇನ್ನೂ ಹಲವಾರು ಬಡವರ್ಗದವರು ಸ್ವಂತ ಮನೆಯಿಲ್ಲದೇ – ಬಾಡಿಗೆ ಮನೆಗೆ ಹಣ ಕಟ್ಟಲಾಗದೆ ಜೀವನಮಾಡಲು ಪರದಾಡುತ್ತಿದ್ದರು. ಇದನ್ನು ಮನಗಂಡು ದಾವಣಗೆರೆಯ ವಿವಿಧ ಭಾಗಗಳಲ್ಲಿ ರೈತರ ಮನವೊಲಿಸಿ ಮತ್ತು ರೈತರುಗಳಿಂದ ಬಂದ ಹಲವಾರು ಪ್ರತಿರೋಧಗಳನ್ನು ತಮ್ಮ ಬುದ್ದಿಮತ್ತೆಯಿಂದ ಸುಲಭವಾಗಿ ಬಗೆಹರಿಸಿ ರೈತರ ಜಮೀನುಗಳನ್ನು ಕೊಂಡುಕೊಂಡು ಬಡವರಿಗೆ ಒಟ್ಟು 15000 ಕ್ಕೂ ಹೆಚ್ಚು ಮನೆಗಳನ್ನು ನಿರ್ಮಿಸಿಕೊಟ್ಟಿರುತ್ತಾರೆ.
ಶಾಸಕರಾಗುವುದಕ್ಕಿಂತ ಮುಂಚೆ ದಾವಣಗೆರೆ ನಗರದಲ್ಲಿ ಸುಸಜ್ಜಿತವಾದ ರಸ್ತೆಗಳಿಲ್ಲದೆ ಜನರು ಒಡಾಡಲು ಕಷ್ಟ ಪಡುತ್ತಿದ್ದರು. ಇದನ್ನು ಮನಗಂಡು ತಜ್ಞರುಗಳೊಂದಿಗೆ ಚರ್ಚಿಸಿ, ಡಾಂಬಾರ್ ರಸ್ತೆಗಳನ್ನು ಮಾಡುವುದರಿಂದ ಪ್ರತಿ ವರ್ಷವೂ ರಸ್ತೆಗಳು ಹಾಳಾಗಿ ಮತ್ತೆ-ಮತ್ತೆ ದುರಸ್ತಿ ಮಾಡಬೇಕಾಗುತ್ತದೆ. ಇದರ ಬದಲು ಸಿಮೆಂಟ್ ರಸ್ತೆ ಮಾಡುವುದೇ ಸೂಕ್ತವೆಂದು ದಾವಣಗೆರೆ ನಗರದಲ್ಲಿ ಸುಂದರವಾದ ಸಿಮೆಂಟ್ ರಸ್ತೆಗಳನ್ನು ವಿವಿಧ ಮುಖ್ಯ ರಸ್ತೆಗಳಲ್ಲಿ ಮತ್ತು ಅತೀ ಹಿಂದುಳಿದ ಪ್ರದೇಶಗಳಲ್ಲಿ ನಿರ್ಮಿಸಿ ಜನ ಮೆಚ್ಚುಗೆಗೆ ಪಾತ್ರರಾದರು.
2004 ಮತ್ತು 2009ನೇ ಸಾಲಿನಲ್ಲಿ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿ ಸೋಲು ಕಂಡಿದ್ದಾರೆ. 2004ನೇ ಸಾಲಿನಲ್ಲಿ ಕರ್ನಾಟಕ ರಾಜ್ಯದಲ್ಲಿ ಭಾರಿ ಬರಗಾಲದಿಂದ ಜನರು ತತ್ತರಿಸಿ, ಅಂದಿನ ಕಾಂಗ್ರೆಸ್ ಸರ್ಕಾರದ ಮೇಲಿನ ಕೋಪದಿಂದ ಮತ್ತು 2009ನೇ ಸಾಲಿನಲ್ಲಿ ರಾಜ್ಯದಲ್ಲಿ ಜನರು ಬಿ.ಜೆ.ಪಿ. ಪರವಾಗಿ ಹೆಚ್ಚು ಒಲವಿದ್ದ ಸಂದರ್ಭದಲ್ಲಿಯೂ ಸಹ ಅತ್ಯಧಿಕ ಮತಗಳನ್ನು ಪಡೆದು ಅಲ್ಪ ಮತಗಳ ಅಂತರರದಿಂದ ಪರಾಭವಗೊಂಡಿದ್ದರು.
ಪಕ್ಷನಿಷ್ಠೆ:
ಶಾಮನೂರು ಶಿವಶಂಕರಪ್ಪರನ್ನು ಕರ್ನಾಟಕದ ಕಾಂಗ್ರೆಸ್ ಪಕ್ಷದ ಖಾಯಂ ಖಜಾಂಚಿ ಎಂದೇ ಕರೆಯುವುದುಂಟು. ಏಕೆಂದರೆ ಶಾಮನೂರು ಮನೆತನದವರು ಎಂಥಹ ಸಂದರ್ಭದಲ್ಲಿಯೂ ಸಹ ಕಾಂಗ್ರೆಸ್ ಬಿಟ್ಟು ಬೇರೆ ಪಕ್ಷದ ಕಡೆ ತಿರುಗಿಯೂ ನೋಡಿದವರಲ್ಲ. ಕರ್ನಾಟಕ ರಾಜ್ಯದಲ್ಲಿ ಬಿ.ಎಸ್. ಯಡೆಯೂರಪ್ಪನವರು ಮುಖ್ಯ ಮಂತ್ರಿಯಾದ ಸಂದರ್ಭದಲ್ಲಿ ರಾಜ್ಯದ ಕಾಂಗ್ರೆಸ್ ನ ಪ್ರಮುಖ ಲಿಂಗಾಯತ ಮುಖಂಡರಿಗೆ ಸರ್ಕಾರದಲ್ಲಿ ಹಲವಾರು ಪ್ರಮುಖ ಹುದ್ದೆಗಳನ್ನು ನೀಡಿ ಬಿ.ಜೆ.ಪಿ.ಗೆ ಪಕ್ಷಾಂತರ ಮಾಡಿಸಿಕೊಂಡರು. ಆ ಸಂದರ್ಭದಲ್ಲಿಯೇ ಡಾ. ಶಾಮನೂರು ಶಿವಶಂಕರಪ್ಪನವರನ್ನು ಉಪಮುಖ್ಯಮಂತ್ರಿಯನ್ನಾಗಿ ಮಾಡುವುದಾಗಿಯೂ ಮತ್ತು ಎಸ್.ಎಸ್. ಮಲ್ಲಿಕಾರ್ಜುನ್ ರವರನ್ನು ಸಂಸತ್ ಸದಸ್ಯರನ್ನಾಗಿ ಮಾಡುವುದಾಗಿ ಆಸೆ ತೋರಿಸಿ ಕಾಂಗ್ರೆಸ್ ತೊರೆದು ಬಿ.ಜೆ.ಪಿ. ಸೇರುವಂತೆ ಹಲವಾರು ಮುಖಂಡರು ಮತ್ತು ಮಠಾಧೀಶರುಗಳಿಂದ ಒತ್ತಡ ಹಾಕಿದರೂ ಸಹ ಯಾವುದೇ ಆಸೆ-ಆಕಾಂಕ್ಷೆಗಳಿಗೆ ಒಳಗಾಗದೆ ನಮಗೆ ಅಧಿಕಾರ ಮುಖ್ಯವಲ್ಲ ದೇಶದ ಅಭಿವೃದ್ಧಿ ಮುಖ್ಯ. ದೇಶದಲ್ಲಿ ಸ್ಥಿರ ಸರ್ಕಾರಗಳು ಇರಬೇಕಾದರೆ ಅದು ಕೇವಲ ಕಾಂಗ್ರೆಸ್ ಪಕ್ಷದಿಂದ ಮಾತ್ರವೆಂದು ಹೇಳಿ ಪಕ್ಷಾಂತರ ಮಾಡದೇ ಕಾಂಗ್ರೆಸ್ ಪಕ್ಷದಲ್ಲಿಯೇ ಉಳಿದು ಪಕ್ಷ ನಿಷ್ಠೆ ತೋರಿದರು.
ದಾವಣಗೆರೆ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷವು ಪೂರಾ ನೆಲಕಚ್ಚಿತ್ತು. ಅಂದಿನ ಜನತಾದಳ ಸರ್ಕಾರಗಳು ಇದ್ದಾಗಲೂ ಜಿಲ್ಲೆಯು ಜನತಾದಳದ ಪಾಲಾಗಿತ್ತು. ನಂತರ ಶಾಮನೂರು ಶಿವಶಂಕರಪ್ಪನವರಿಗೆ ದಾವಣಗೆರೆ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷದ ಉಸ್ತುವಾರಿಯನ್ನು ವಹಿಸಿ ವಿಧಾನಸಭಾ ಕ್ಷೇತ್ರಕ್ಕೆ ಸ್ಪರ್ಧಿಸಲು ಅವಕಾಶ ಮಾಡಿಕೊಟ್ಟ ನಂತರ ದಾವಣಗೆರೆ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷವು ದಿನದಿಂದ ದಿನಕ್ಕೆ ವರ್ಚಸ್ಸು ಗಳಿಸುತ್ತಾ ಗ್ರಾಮ ಪಂಚಾಯ್ತಿಗಳು, ತಾಲ್ಲೂಕು ಪಂಚಾಯ್ತಿಗಳು, ಜಿಲ್ಲಾ ಪಂಚಾಯ್ತಿ, ಪುರ-ಸಭೆ, ನಗರಸಭೆಗಳಲ್ಲಿ ಕಾಂಗ್ರೆಸ್ ಪಕ್ಷವು ಅತೀ ಹೆಚ್ಚು ಸ್ಥಾನಗಳನ್ನು ಗೆದ್ದಿದ್ದು ಇತಿಹಾಸ.
ಕೈ ಪಾಲಾದ ಪಾಲಿಕೆ ಆಡಳಿತ:
ಬಿ.ಜೆ.ಪಿ. ಅಧಿಕಾರದಲ್ಲಿದ್ದ ದಾವಣಗೆರೆ ಮಹಾನಗರ ಪಾಲಿಕೆಯಲ್ಲಿ ಬಿ.ಜೆ.ಪಿ.ಯನ್ನು ಧೂಳಿಪಟ ಮಾಡಿ 41 ಸ್ಥಾನಗಳಲ್ಲಿ 39 ಸ್ಥಾನಗಳನ್ನು ಕಾಂಗ್ರೆಸ್ ತನ್ನ ಬುಟ್ಟಿಗೆ ಹಾಕಿಕೊಂಡಿತು. 2013ರ ವಿಧಾನಸಭಾ ಚುನಾವಣೆಯಲ್ಲಿ ದಾವಣಗೆರೆ ಜಿಲ್ಲೆಯ 8 ವಿಧಾನಸಭಾ ಕ್ಷೇತ್ರಗಳ ಪೈಕಿ ಎಸ್.ಎಸ್.ಮಲ್ಲಿಕಾರ್ಜುನ್ ರವರ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷವು 7ವಿಧಾನಸಭಾ
ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿತು. ವಿಶೇಷವೆಂದರೆ, ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಎಸ್. ಎ. ರವೀಂದ್ರನಾಥ (S.A. RAVINDRANATH)ರನ್ನು ದಾವಣಗೆರೆ ಉತ್ತರ ಕ್ಷೇತ್ರದಲ್ಲಿ ಎಸ್.ಎಸ್.ಮಲ್ಲಿಕಾರ್ಜುನ್ ರವರು ಅತ್ಯಧಿಕ ಮತಗಳಿಂದ ಸೋಲಿಸಿದರು.
ಗ್ಲಾಸ್ ಹೌಸ್ ಹಿರಿಮೆ:
2016ರಲ್ಲಿ ಎಪಿಎಂಸಿ, ತೋಟಗಾರಿಕೆ ಹಾಗೂ ದಾವಣಗೆರೆ ಜಿಲ್ಲಾ ಸಚಿವರಾಗಿ ಅತ್ಯುತ್ತಮ ಸೇವೆ ಸಲ್ಲಿಸಿ ಏಷ್ಯಾದಲ್ಲಿ ಅತಿ ದೊಡ್ಡದಾದ ಸುಂದರ ಗ್ಲಾಸ್ ಹೌಸ್ ನಿರ್ಮಾಣ ಹಾಗೂ ದಾವಣಗೆರೆ ಸ್ಮಾರ್ಟ್ ಸಿಟಿ ಯೋಜನೆಗೆ ಆಯ್ಕೆಯಾಗಲು ಮತ್ತು ಜಲಸಿರಿಯಂತಹ ಮಹತ್ವದ ಯೋಜನೆಗಳನ್ನು ಜಾರಿಗೆ ತಂದ ಕೀರ್ತಿ ಮಲ್ಲಿಕಾರ್ಜುನ್ ಅವರಿಗೆ ಸಲ್ಲುತ್ತದೆ.
2018ರಲ್ಲಿ ನಡೆದ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಬಿ.ಜೆ.ಪಿ.ಯವರ ಅಪಪ್ರಚಾರದಿಂದಾಗಿ ಪರವಾಗಿ ಹೆಚ್ಚು ಒಲವಿದ್ದ ಸಂದರ್ಭದಲ್ಲಿಯೂ ಸಹ ಅತ್ಯಧಿಕ ಮತಗಳನ್ನು ಪಡೆದು ಅಲ್ಪ ಮತಗಳ ಅಂತರದಿಂದ ಪರಾಭವಗೊಂಡರು. ಪರಾಭವಗೊಂಡರು ಸಹ ಸುಮ್ಮನಿರದೇ ಜಿಲ್ಲೆಯಾದ್ಯಂತ ಪಕ್ಷ ಸಂಘಟನೆಯಲ್ಲಿ ತೊಡಗಿ ಜನರ ಬಳಿ ಮತ್ತು ಕಾರ‍್ಯಕರ್ತರ ಜೊತೆ ನಿರಂತರ ಸಂಪರ್ಕ ಹೊಂದಿದ ಮಲ್ಲಿಕಾರ್ಜುನ್ ಅವರು 2023ರ ಮೇ.10ರಂದು ನಡೆದ ಚುನಾವಣೆಯಲ್ಲಿ ಜಿಲೆಯ 7 ಕ್ಷೇತ್ರಗಳ ಪೈಕಿ 6 ಕ್ಷೇತ್ರಗಳಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಂಡರು.
ತಮ್ಮ ತಂದೆ 92 ವರ್ಷದ ಇಳಿ ವಯಸ್ಸಿನಲ್ಲಿ 27,888 ಮತಗಳನ್ನು ಮಡೆಯುವ ಮೂಲಕ ಆಯ್ಕೆಯಾಗಿದ್ದು ಗಿನ್ನಿಸ್ ದಾಖಲೆಗೆ ಸೇರುವಂತೆ ಮಾಡಿದೆ.