SUDDIKSHANA KANNADA NEWS/ DAVANAGERE/ DATE:07-03-2024
ದಾವಣಗೆರೆ: ಲೋಕಸಭೆ ಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಗಳ ಘೋಷಣೆಗೆ ಮ್ಯಾರಾಥಾನ್ ಸಭೆ ನಡೆಸುತ್ತಿದೆ. ಸಭೆ ಮೇಲೆ ಸಭೆ ನಡೆಸಿ ಅಳೆದು ತೂಗಿ ಟಿಕೆಟ್ ನೀಡಲು ಮುಂದಾಗಿದೆ. ಮಾಜಿ ಸಚಿವ ಎಂ. ಪಿ. ರೇಣುಕಾಚಾರ್ಯ ಬಣ ದಾವಣಗೆರೆ ಲೋಕಸಭಾ ಕ್ಷೇತ್ರದ ಸಂಸದರು ಹಾಗೂ ಟಿಕೆಟ್ ಆಕಾಂಕ್ಷಿಗಳೂ ಆದ ಡಾ. ಜಿ. ಎಂ. ಸಿದ್ದೇಶ್ವರರ ವಿರುದ್ಧ ಬಹಿರಂಗವಾಗಿಯೇ ಸೆಟೆದಿತ್ತು. ಆದ್ರೆ, ಇದೀಗ ಸಾಮಾಜಿಕ ಜಾಲತಾಣಗಳಲ್ಲಿಯೂ ಸಿದ್ದೇಶ್ವರರ ವಿರುದ್ಧ ಪೋಸ್ಟರ್ ಅಭಿಯಾನ ಶುರು ಮಾಡಲಾಗಿದೆ.
ಫೇಸ್ ಬುಕ್, ವ್ಯಾಟ್ಸಪ್ ಗಳಲ್ಲಿ ಸಿದ್ದೇಶ್ವರರ ವಿರುದ್ಧ ಪೋಸ್ಟ್ ಗಳನ್ನು ಹಾಕಲಾಗುತ್ತಿದೆ. ಲೋಕಸಭೆ ಚುನಾವಣೆಗೆ ಇನ್ನೆರಡು ದಿನಗಳಲ್ಲಿ ರಾಜ್ಯದ ಬಿಜೆಪಿ ಅಭ್ಯರ್ಥಿಗಳ ಹೆಸರು ಘೋಷಿಸಲಾಗುವುದು ಎಂದು ಮಾಜಿ ಸಿಎಂ ಬಿ. ಎಸ್. ಯಡಿಯೂರಪ್ಪ ಹೇಳಿದ್ದಾರೆ. ಇನ್ನೇನೂ ಕೆಲ ದಿನಗಳಲ್ಲಿಯೇ ಅಭ್ಯರ್ಥಿಗಳ ಹೆಸರು ಘೋಷಿಸಲಾಗುತ್ತದೆ. ಆದ್ರೆ, ಸಿದ್ದೇಶ್ವರರ ವಿರುದ್ಧ ಪೋಸ್ಟರ್ ಗಳನ್ನು ಹಾಕಲಾಗುತ್ತಿದೆ.
ಪೋಸ್ಟರ್ ನಲ್ಲೇನಿದೆ…?
ಹಲೋ ನಮಸ್ಕಾರ, 1. ನಿಮ್ಮ ಎಂಪಿನಾ ನೋಡಿದ್ರಾ, 2. ಎಲ್ಲಾದ್ರೂ ಸಿಕ್ಕಿದ್ರಾ..? 3. ಪಾರ್ಲಿಮೆಂಟಿನಲ್ಲೂ ಆಬ್ಸೆಂಟ್… 4. ಹತ್ತು ವರ್ಷ ಏನು ದಬಾಕಿದ್ರು…? ANY IDEA? ಬೇಡ ಸ್ವಾಮಿ ಬೇಡ, ಈ ವೇಸ್ಟ್ ಬಾಡಿ ಎಂಪಿ.
ನಮ್ಮ ದಾವಣಗೆರೆಗೆ ಬೇಡ, ನಮ್ಮ ದಾವಣಗೆರೆ ಜಿಲ್ಲೆಯವರೇ ಬೇಕು. ಇಂಥದ್ದೊಂದು ಸಂದೇಶವುಳ್ಳ ಪೋಸ್ಟ್ ವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಮಾತ್ರವಲ್ಲ, ಫೇಸ್ ಬುಕ್, ವ್ಯಾಟ್ಸಪ್ ನಲ್ಲಿಯೂ ಹೆಚ್ಚಾಗಿ ಶೇರ್ ಮಾಡಲಾಗುತ್ತಿದೆ.
ಉಡುಪಿ – ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ವಿರುದ್ಧ ಗೋ ಬ್ಯಾಕ್ ಶೋಭಾ ಅಭಿಯಾನ ಶುರು ಮಾಡಲಾಗಿತ್ತು. ಅಕ್ಕ.. ಬೇಡ.. ಅಕ್ಕ… ಎಂದು ಹಾಡು ಕಟ್ಟಿ ವಿಭಿನ್ನ ರೀತಿಯಲ್ಲಿ ಟ್ರೋಲ್ ಮಾಡಲಾಗಿತ್ತು. ಆದ್ರೆ, ಇದೀಗ ಸಂಸದ ಸಿದ್ದೇಶ್ವರರ ವಿರುದ್ಧ ಪೋಸ್ಟರ್ ವಾರ್ ಶುರು ಮಾಡಲಾಗಿದೆ. ಟಿಕೆಟ್ ಘೋಷಣೆಗೂ ಮುನ್ನವೇ ಈ ಅಭಿಯಾನ ಆರಂಭಿಸಲಾಗಿದೆ.
ಕಾಂಗ್ರೆಸ್ ಕಾರ್ಯಕರ್ತರ ಶೇರ್:
ಇನ್ನು ಕಾಂಗ್ರೆಸ್ ಕಾರ್ಯಕರ್ತರು ಈ ಪೋಸ್ಟ್ ಅನ್ನು ಸಖತ್ತಾಗಿಯೇ ಶೇರ್ ಮಾಡುತ್ತಿದ್ದಾರೆ. ಈ ಪೋಸ್ಟರ್ ಯಾರು ಮಾಡಿದ್ದಾರೆ ಎಂಬುದು ತಿಳಿದು ಬಂದಿಲ್ಲ. ಆದ್ರೆ, ಕಾಂಗ್ರೆಸ್ ಕಾರ್ಯಕರ್ತರು, ಮುಖಂಡರ ಫೇಸ್ ಬುಕ್, ವ್ಯಾಟ್ಸಪ್ ಗ್ರೂಪ್ ಗಳಲ್ಲಿ ಹೆಚ್ಚಾಗಿ ಶೇರ್ ಮಾಡಲಾಗುತ್ತಿದೆ.
ಇನ್ನು ಸಂಸದ ಸಿದ್ದೇಶ್ವರರ ವಿರುದ್ಧ ಈಗಾಗಲೇ ಎಂ. ಪಿ. ರೇಣುಕಾಚಾರ್ಯ, ಲೋಕಿಕೆರೆ ನಾಗರಾಜ್ ಸೇರಿದಂತೆ ಬಿಜೆಪಿ ಮುಖಂಡರು ಬಹಿರಂಗವಾಗಿಯೇ ಅಸಮಾಧಾನ ಹೊರಹಾಕಿದ್ದರು. ಸ್ಥಳೀಯರಿಗೆ ಟಿಕೆಟ್
ನೀಡಬೇಕು ಎಂಬ ಬೇಡಿಕೆ ಇಟ್ಟಿದ್ದರು.
ಈ ಬೆಳವಣಿಗೆಯ ನಡುವೆಯೇ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ಪೋಸ್ಟರ್ ಹಿಂದೆ ಸಿದ್ದೇಶ್ವರರ ಜನಪ್ರಿಯತೆ ಸಹಿಸದೇ ದುಷ್ಕರ್ಮಿಗಳು ಮಾಡಿದ ಕೆಲಸ ಆಗಿದೆ. ಸಿದ್ದೇಶ್ವರ ಅವರು ಸೋಲಿಲ್ಲದ ಸರದಾರ. ನಾಲ್ಕು ಬಾರಿ ಗೆದ್ದು ಇತಿಹಾಸ ನಿರ್ಮಿಸಿದ್ದಾರೆ. ಐದನೇ ಬಾರಿಯೂ ಅವರಿಗೆ ಟಿಕೆಟ್ ಸಿಕ್ಕರೆ ಗೆಲುವು ಖಚಿತ. ಇದನ್ನು ಸಹಿಸದೇ ಈ ರೀತಿ ಮಾಡಲಾಗುತ್ತಿದೆ ಎಂದು ಬಿಜೆಪಿ ನಾಯಕರು ಹೇಳುತ್ತಿದ್ದಾರೆ.
ಒಟ್ಟಾರೆ, ಲೋಕಸಭೆ ಚುನಾವಣೆಗೆ ಅಭ್ಯರ್ಥಿಗಳ ಘೋಷಣೆಗೆ ಇನ್ನು ಕೆಲ ದಿನಗಳು ಬಾಕಿ ಇರುವಂತೆಯೇ ಈ ಪೋಸ್ಟರ್ ಹಾಕಲಾಗಿದೆ. ಮತ್ತೊಂದು ಇಂಟ್ರೆಸ್ಟಿಂಗ್ ವಿಷಯ ಎಂದರೆ ನಮ್ಮ ದಾವಣಗೆರೆಗೆ ಬೇಡ, ದಾವಣಗೆರೆ ಜಿಲ್ಲೆಯವರೇ ಬೇಕು ಎಂಬ ವಾಕ್ಯವೂ ಹೆಚ್ಚಾಗಿ ಗಮನ ಸೆಳೆಯುತ್ತಿದೆ. ಇದು ಯಾವ ಮಟ್ಟಕ್ಕೆ ಹೋಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ.