SUDDIKSHANA KANNADA NEWS/ DAVANAGERE/ DATE:06-03-2024
ದಾವಣಗೆರೆ: ಇಂದಿನ ನಮ್ಮ ಹಳ್ಳಿಗಳಲ್ಲಿ ಕೃಷಿ ಕುಟುಂಬದ ಮಹಿಳೆಯರು ಬೆಳಿಗ್ಗೆ ತಮ್ಮ ದೈನಂದಿನ ಚಟುವಟಿಕೆಗಳಲ್ಲಿ ನಿರತರಾಗುತ್ತಿದ್ದರು. ಬೀಸುವುದು, ನೀರು ತರುವುದು, ಸಗಣಿ ಬಾಚುವುದು, ಹಾಲು ಕರೆಯುವುದು, ಹೊಲಗಳಲ್ಲಿ ಹೋಗಿ ಕೆಲಸ ಮಾಡುವುದನ್ನು ಮಾಡುತ್ತಿದ್ದರು. ಇದರಿಂದಾಗಿ ಒಳ್ಳೆ ಆರೋಗ್ಯದಿಂದ ಇರುತ್ತಿದ್ದರು ಎಂದು ಹದಡಿ ಮುರಳಿಧರ ಶ್ರೀಗಳು ತಿಳಿಸಿದರು.
ದಾವಣಗೆರೆ ಸಮೀಪದ ಲೋಕಿಕೆರೆ ಗ್ರಾಮದ ಆಯೋಜಿಸಿದ್ದ ಶ್ರದ್ಧಾಂಜಲಿ ಸಮಾರಂಭದ ಸಾನಿಧ್ಯ ವಹಿಸಿ ಮಾತನಾಡಿದ ಅವರು, ಈಗಿನ ಜೀವನ ಶೈಲಿ ತುಂಬಾ ಬದಲಾಗಿ ರೋಗಗಳು ಕೂಡ ಕಾಡುತ್ತಿವೆ. ಮಹಿಳೆಯರು
ದೈನಂದಿನ ಚಟುವಟಿಕೆಗಳಲ್ಲಿ ಪಾಲ್ಗೊಂಡು ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಅಗತ್ಯವಿದೆ ಎಂದು ಸಲಹೆ ನೀಡಿದರು.
ಸತ್ಯ, ನಿಷ್ಠೆ, ಪ್ರಾಮಾಣಿಕತೆ, ದುಡಿದು ಉಣ್ಣುವ ಶ್ರದ್ಧೆ ಇಂದು ಇಲ್ಲವಾಗಿದೆ. ಇಂದಿನ ನಮ್ಮ ಹಳ್ಳಿಯ ಪರಿಸರದಂತೆ ಜನರು ಒಗ್ಗಟ್ಟಾಗಿ ಸಹಬಾಳ್ವೆಯಿಂದ ಜೀವನ ಸಾಗಿಸಬೇಕೆಂದು ಆಶಿಸಿದ ಅವರು, ಧಾರ್ಮಿಕತೆಯಿಂದ ಒಬ್ಬರಿಗೆ ಸಹಾಯ, ದಾನ, ಧರ್ಮ, ಪರಸ್ಪರ ಕೊಡು ಕೊಳ್ಳುವ ಭಾವ ಬರಬೇಕಾಗಿದೆ ಎಂದರು.
ಅತಿಥಿಗಳಾಗಿದ್ದ ಹಿರಿಯ ಪತ್ರಕರ್ತ ಪುರಂದರ ಲೋಕಿಕೆರೆ ಮಾತನಾಡಿ, ಮಕ್ಕಳು ವಿಶ್ವ ಬಾಲವರಿದ್ದಂತೆ. ಮಗು ಹುಟ್ಟುತ್ತಾ ಎಲ್ಲವನ್ನು ಕಲಿಯುತ್ತದೆ. ನಾವು ಅದಕ್ಕೆ ಸುಳ್ಳು ಹೇಳುವುದು ಏನಾದ್ರೂ ಕಲಿಸಿದರೆ ಅದು ಸುಳ್ಳು ಹೇಳುತ್ತದೆ. ಏನಾದ್ರೂ ಜಗಳ ತುಂಟಾಟ ಮಾಡಿದಾಗ ತಿದ್ದಿ ಹೇಳುವುದೇ ಬಿಟ್ಟು ಉತ್ತೇಜನ ನೀಡುವುದು ಸರಿಯಲ್ಲ. ಇದರಿಂದಾಗಿ ಮಕ್ಕಳು ನಾವು ಮಾಡಿದೆಲ್ಲ ಸರಿ ಎಂಬಂತೆ ತಿಳಿದುಕೊಳ್ಳುತ್ತದೆ. ಹಾಗಾಗಿ ಮಕ್ಕಳ ಬಗ್ಗೆ ಕಾಳಜಿ ವಹಿಸಬೇಕು ಎಂದು ಸಲಹೆ ನೀಡಿದರು.
ಮಕ್ಕಳಿಗೆ ಕೇವಲ ಓದಿನ ಬಗ್ಗೆ ಒತ್ತಡ ಹೇರದೇ, ಸಾಮಾನ್ಯ ಜ್ಞಾನ ಹೇಳಿಕೊಡಬೇಕು. ಕೃಷಿ, ಹೊಲ, ಹೈನುಗಾರಿಕೆ ಸೇರಿದಂತೆ ಕೃಷಿಗೆ ಸಂಬಂಧಿತ ವಿಷಯಗಳ ಬಗ್ಗೆ ತಿಳಿಸಿಕೊಡಬೇಕು ಎಂದು ಹೇಳಿದರು.
ವೇದಿಕೆಯಲ್ಲಿ ಭೀಮಪ್ಪ, ಗ್ರಾಮ ಪಂಚಾಯತಿ ಸದಸ್ಯ ಓಬಳಪ್ಪ, ಲೋಕಿಕೆರೆ ಸೊಸೈಟಿ ನಿರ್ದೇಶಕ ಈರಪ್ಪ, ಯುವ ಮುಖಂಡ ಓಂಕಾರಪ್ಪ ಮತ್ತಿತರರು ಹಾಜರಿದ್ದರು.