SUDDIKSHANA KANNADA NEWS/ DAVANAGERE/ 23-05-2023
ದಾವಣಗೆರೆ (DAVANAGERE): ರಾಜ್ಯದ ಜನತೆ ಕಾಂಗ್ರೆಸ್ ಪಕ್ಷಕ್ಕೆ ಅಭೂತಪೂರ್ವ ಬಹುಮತ ನೀಡಿದ್ದಾರೆ. ಕರ್ನಾಟಕದಲ್ಲಿ ಕಾಂಗ್ರೆಸ್ ನ ಪರ್ವ ಶುರುವಾಗಿದೆ. ಜಿಲ್ಲೆಯ ಆರು ಕ್ಷೇತ್ರಗಳಲ್ಲಿ ಕೈ ಅಭ್ಯರ್ಥಿಗಳು ಜಯಭೇರಿ ಬಾರಿಸಿದ್ದಾರೆ. ಈ ಹಿಂದೆ ಸಚಿವರಾಗಿ ಕಾರ್ಯನಿರ್ವಹಿಸಿದ ಅನುಭವವಿರುವ ಮಾಜಿ ಸಚಿವ ಹಾಗೂ ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಎಸ್. ಎಸ್. ಮಲ್ಲಿಕಾರ್ಜುನ್ ಅವರಿಗೆ ಸಚಿವ ಸ್ಥಾನ ನೀಡಬೇಕು. ಪ್ರಬಲ ಖಾತೆ ಕೊಡಬೇಕು ಎಂದು ಜಿಲ್ಲಾ ಕಾಂಗ್ರೆಸ್ ಸಮಿತಿ ಒತ್ತಾಯಿಸಿದೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾಧ್ಯಕ್ಷ ಹೆಚ್. ಬಿ. ಮಂಜಪ್ಪ ಅವರು, 1999 ಹಾಗೂ 2013ರಲ್ಲಿ ಸಚಿವರಾಗಿ ಕಾರ್ಯನಿರ್ವಹಿಸಿರುವ ಎಸ್. ಎಸ್. ಮಲ್ಲಿಕಾರ್ಜುನ್ ಅವರಿಗೆ ವೈದ್ಯಕೀಯ, ಲೋಕೋಪಯೋಗಿ, ವಸತಿ, ನಗರಾಭಿವೃದ್ಧಿ ಇವುಗಳಲ್ಲಿ ಯಾವುದಾದರೂ ಒಂದು ಖಾತೆ ನೀಡಬೇಕು. ಯುವಕರಿರುವ ಕಾರಣ ರಾಜ್ಯದ ತುಂಬೆಲ್ಲಾ ಓಡಾಡಲಿದ್ದಾರೆ. ಅಭಿವೃದ್ಧಿ ವಿಚಾರದಲ್ಲಿ ದೂರದೃಷ್ಟಿತ್ವ ಇದೆ. ಪಕ್ಷದ ಹೈಕಮಾಂಡ್ ಇದನ್ನು ಪರಿಗಣಿಸಬೇಕು ಎಂದು ಆಗ್ರಹಿಸಿದರು.
ಎಸ್. ಎಸ್. ಮಲ್ಲಿಕಾರ್ಜುನ್ ಗೆ ಸಚಿವ ಸಂಪುಟದಲ್ಲಿ ಸ್ಥಾನ ನೀಡಬೇಕು. ಕ್ಯಾಬಿನೆಟ್ ದರ್ಜೆಯ ಸಚಿವ ಸ್ಥಾನಮಾನ ಸಿಗಬೇಕು. ಜಿಲ್ಲೆಯ ಜನ ಕಾಂಗ್ರೆಸ್ ಗೆ ಬೆಂಬಲ ನೀಡಿ ಆರು ಶಾಸಕರನ್ನು ಆಯ್ಕೆ ಮಾಡಿದ್ದಾರೆ. ಕಾಂಗ್ರೆಸ್ ಪಕ್ಷದಿಂದ
ಕೈಗೊಂಡ ಜನಪರ ಕಾರ್ಯಕ್ರಮಗಳಾದ ಪ್ರಜಾಧ್ವನಿ, ಸಿದ್ದರಾಮಯ್ಯ ಅವರ ಜನ್ಮದಿನದ ಅಮೃತ ಮಹೋತ್ಸವ, ಗ್ಯಾರಂಟಿ ಕಾರ್ಡ್ ನಂತಹ ಜನಮೆಚ್ಚುವ ಕಾರ್ಯಕ್ರಮಗಳಿಂದ ಜನಮನ ಗೆದ್ದಿದ್ದು, ಎಸ್ ಎಸ್ ಎಂ ಗೆ ಸಚಿವ ಸ್ಥಾನ ನೀಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ ಶಿವಕುಮಾರ್ ಹಾಗೂ ಹೈಕಮಾಂಡ್ ಗೆ ಮನವಿ ಮಾಡಿದರು.
ಶಾಮನೂರು ಶಿವಶಂಕರಪ್ಪರಿಗೆ ಸಚಿವ ಸ್ಥಾನ ಕೊಡಲಿ. ಅವರಿಗೆ ವಯಸ್ಸಾಗಿರುವ ಕಾರಣ ಎಲ್ಲೆಡೆ ಸಂಚರಿಸಲು ಕಷ್ಟವಾಗುತ್ತದೆ. ಅವರಿಗೆ ಸೂಕ್ತ ಸ್ಥಾನ ಮಾನ ನೀಡಿದರೆ ಸ್ವಾಗತ. ಹೊನ್ನಾಳಿ ಶಾಸಕ ಡಿ. ಜಿ. ಶಾಂತನಗೌಡರು ಸಹ
ಮೂರು ಬಾರಿ ಗೆದ್ದಿದ್ದಾರೆ. ಜಿಲ್ಲೆಯಲ್ಲಿ ಅವರಿಗೂ ಸಚಿವ ಸ್ಥಾನ ಕೊಟ್ಟರೆ ಒಳ್ಳೆಯದು. ನಮ್ಮದು ಮಲ್ಲಿಕಾರ್ಜುನ್ ಅವರಿಗೆ ನೀಡಿದರೆ ಈ ಹಿಂದೆ ದಾವಣಗೆರೆ ಅಭಿವೃದ್ಧಿಪಡಿಸಿದಂತೆ ಈ ಬಾರಿಯೂ ಅಭಿವೃದ್ಧಿ ಪರ್ವ ಆರಂಭವಾಗಲಿದೆ. ಈ ಕಾರಣಕ್ಕಾಗಿಯೇ ಮಲ್ಲಿಕಾರ್ಜುನ್ ಅವರು ಸಚಿವರಾಗಬೇಕು ಎಂಬ ಅಭಿಲಾಷೆ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರದ್ದು ಎಂದು ತಿಳಿಸಿದರು.
ಗೋಷ್ಠಿಯಲ್ಲಿ ಪಾಲಿಕೆ ಸದಸ್ಯರಾದ ಅಬ್ದುಲ್ ಲತೀಫ್, ನಾಗರಾಜ್, ಆಯೂಬ್ ಪೈಲ್ವಾನ್, ಮುದೇಗೌಡ್ರು ಗಿರೀಶ್, ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಸ್. ಮಲ್ಲಿಕಾರ್ಜುನ್, ಶಾಮನೂರು ಟಿ. ಬಸವರಾಜ್ ಮತ್ತಿತರರು ಉಪಸ್ಥಿತರಿದ್ದರು.