SUDDIKSHANA KANNADA NEWS/ DAVANAGERE/ DATE:26-02-2024
ದಾವಣಗೆರೆ: ದಾವಣಗೆರೆ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಪ್ರಬಲ ಆಕಾಂಕ್ಷಿ, ಯುವ ನಾಯಕ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ವಿಭಾಗದ ರಾಜ್ಯ ಉಪಾಧ್ಯಕ್ಷ ಜಿ.ಬಿ. ವಿನಯಕುಮಾರ್ ಕಕ್ಕರಗೊಳ್ಳ ಅವರಿಗೆ ಟಿಕೆಟ್ ನೀಡುವಂತೆ ದಾವಣಗೆರೆ ತಾಲೂಕು ಅಹಿಂದ ಒಕ್ಕೂಟ ಒತ್ತಾಯಿಸಿದೆ.
ದಾವಣಗೆರೆ ಲೋಕಸಭಾ ಕ್ಷೇತ್ರದ ಜನರ ನಾಡಿಮಿಡಿತ ಅರಿತಿರುವ ವಿನಯ್ ಕುಮಾರ್ ವಿನಯವಂತ, ಪ್ರಜ್ಞಾವಂತ, ಶೈಕ್ಷಣಿಕ ಚಿಂತಕ, ಜನಸಾಮಾನ್ಯರ ನೋವು-ನಿಲುವುಗಳಿಗೆ ತಕ್ಷಣ ಸ್ಪಂದಿಸುವ ಯುವ ನಾಯಕರಾದ ಅವರಿಗೆ ಟಿಕೆಟ್ ನೀಡಿದರೆ ದಾವಣಗೆರೆ ಲೋಕಸಭಾ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿ ಸಾಧ್ಯ ಎಂದು ಒಕ್ಕೂಟದ ತಾಲ್ಲೂಕು ಅಧ್ಯಕ್ಷ ದಳವಾಯಿ ಹೇಮಂತ್ ಕುಮಾರ್ ಹದಡಿ ಒತ್ತಾಯಿಸಿದ್ದಾರೆ.
ದಾವಣಗೆರೆ ತಾಲ್ಲೂಕು, ಕಕ್ಕರಗೊಳ್ಳ ಗ್ರಾಮದಲ್ಲಿ ಜನಿಸಿ, ಪ್ರಾಥಮಿಕ ಶಾಲೆಯನ್ನು ಗ್ರಾಮದಲ್ಲೇ ಪೂರೈಸಿ, ನಂತರ ನವೋದಯ ಶಾಲೆಯಲ್ಲಿ ವ್ಯಾಸಂಗ ಮಾಡಿದ ಅವರು, ಬಿ.ಎಸ್ಸಿ. ಪದವಿ ನಂತರ ಪಿಡಿಒ ಆಗಿ ಕರ್ತವ್ಯ ನಿರ್ವಹಿಸಿ, ಹುದ್ದೆಗೆ ರಾಜೀನಾಮೆ ನೀಡಿದ ಅವರು, ಕೆ.ಎ.ಎಸ್. ಪರೀಕ್ಷೆ ಮೂಲಕ ವಾಣಿಜ್ಯ ತೆರಿಗೆ ಅಧಿಕಾರಿ ಹುದ್ದೆಗೆ ಆಯ್ಕೆಯಾಗಿತ್ತು. ಅನಿವಾರ್ಯ ಕಾರಣದಿಂದ ಆಯ್ಕೆ ಪಟ್ಟಿ ರದ್ದಾದ ಕಾರಣ ಅವರು ನಂತರ ಐಎಎಸ್ ಪರೀಕ್ಷೆ ಬರೆದು ಕೇವಲ 2 ಅಂಕಗಳಲ್ಲಿ ಆಯ್ಕೆಯಲ್ಲಿ ವಂಚಿತರಾಗಿದ್ದರು. ಕೋಚಿಂಗ್ ಸೆಂಟರ್ ಪ್ರಾರಂಭ ಮಾಡಬಾರದು ಎಂದು ಆಲೋಚನೆ ಮಾಡಿ ಬೆಂಗಳೂರಲ್ಲಿ ಕೇವಲ 40 ಜನರಿಂದ ಇನ್ಸೈಟ್ಸ್ ಸಂಸ್ಥೆಯು ಇದೀಗ ಸಾವಿರಾರು ಐ.ಎ.ಎಸ್. ಅಧಿಕಾರಿಗಳನ್ನ ತಯಾರು ಮಾಡಿ ಭಾರತದಾದ್ಯಂತ ಹೆಸರು ಪಡೆದಿದೆ ಎಂದಿದ್ದಾರೆ.
ಸರ್ವ ಸಮುದಾಯಗಳನ್ನು ಒಪ್ಪಿ ಅಪ್ಪಿಕೊಂಡು ಹೋಗುವ ಜನರ ಪ್ರೀತಿ ವಿಶ್ವಾಸಕ್ಕೆ ಪಾತ್ರರಾಗಿರುವ ವಿನಯ್ ಕುಮಾರ್ ಈಗಾಗಲೇ ಲೋಕಸಭಾ ಕ್ಷೇತ್ರ ಸುತ್ತಿ ಪಾದಯಾತ್ರೆ ಮಾಡಿ ಅನೇಕ ಜನೋಪಯೋಗ ಕಾರ್ಯಕ್ರಮಗಳನ್ನು ಮಾಡಿದ್ದು, ಅನೇಕರಿಗೆ ಸಹಾಯ ಹಸ್ತ ಚಾಚಿದ್ದಾರೆ. ಈ ಮೂಲಕ ಅವರು ಜನ ಮೆಚ್ಚಿದ ನಾಯಕರಾಗಿದ್ದಾರೆ ಎಂದಿದ್ದಾರೆ.
ಕಾಂಗ್ರೆಸ್ ಪಕ್ಷ ಇವರ ಜನಸೇವೆ ಗುರುತಿಸಿ, ಟಿಕೆಟ್ ನೀಡಬೇಕೆಂದು ವರಿಷ್ಟರಲ್ಲಿ ಮನವಿ ಮಾಡುತ್ತೇವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಒಳಗೊಂಡಂತೆ ರಾಜ್ಯ ಹಾಗೂ ಕೇಂದ್ರದ ಕಾಂಗ್ರೆಸ್ ಹಿರಿಯ ಮುಖಂಡರುಗಳ ಪ್ರೀತಿಗೆ ಪಾತ್ರರಾಗಿರುವ ಹಾಗೂ ಅಪಾರ ಜನ ಬೆಂಬಲವಿರುವ ಇವರಿಗೆ ಹೈಕಮಾಂಡ್ ಟಿಕೆಟ್ ನೀಡಿದರೆ ದಾವಣಗೆರೆ ಲೋಕಸಭಾ ಕ್ಷೇತ್ರ ಕಾಂಗ್ರೆಸ್ ಯುವ ನಾಯಕ ವಿನಯ್ ಕುಮಾರ್ ಅವರು ಗೆದ್ದು ಮತ್ತಷ್ಟು ಅಭಿವೃದ್ಧಿ ಕಾರ್ಯ ಮಾಡಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.