SUDDIKSHANA KANNADA NEWS/ DAVANAGERE/ DATE:10-05-2023
ದಾವಣಗೆರೆ: ಮತದಾನ ಪ್ರತಿಯೊಬ್ಬರ ಹಕ್ಕು. ಕೇಂದ್ರ ಚುನಾವಣಾ ಆಯೋಗವು ಮತ ಪ್ರಮಾಣ ಹೆಚ್ಚಳಕ್ಕೆ ಸಾಕಷ್ಟು ಪ್ರಯತ್ನ ಮಾಡುತ್ತಿದೆ. ರಾಜ್ಯ, ಜಿಲ್ಲೆ, ಗ್ರಾಮಗಳಲ್ಲಿದ್ದರೂ ಎಷ್ಟೋ ಮಂದಿ ಇಂದಿಗೂ ಮತ ಹಾಕುವುದಿಲ್ಲ. ಹಾಗಾಗಿ, ಮತ ಪ್ರಮಾಣ ಹೆಚ್ಚಳ ಆಗಲ್ಲ. ಆದ್ರೆ, ಬರೋಬ್ಬರಿ ಹದಿನಾಲ್ಕು ಸಾವಿರ ಕಿಲೋಮೀಟರ್ ನಿಂದ ದಾವಣಗೆರೆಗೆ ಮತ ಹಾಕಲು ಬಂದವರಿಗೆ ನಿರಾಸೆ ಕಾದಿತ್ತು. ಯಾಕೆಂದರೆ ಮತದಾರರ ಪಟ್ಟಿಯಲ್ಲಿ ಹೆಸರೇ ಇರಲಿಲ್ಲ.
ಅಂದ ಹಾಗೆ, ಮತ ಚಲಾಯಿಸಲು ಆಗದೇ ಬೇಸರ ಆದವರು ರಾಘವೇಂದ್ರ ಕಮಲಾಕರ್ ಶೇಟ್. ಅಮೆರಿಕಾದಲ್ಲಿ ಸಾಫ್ಟ್ ವೇರ್ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿರುವ ರಾಘವೇಂದ್ರ ಕಮಲಾಕರ್ ಶೇಟ್ ಅವರು ಮತದಾನದ ಹಕ್ಕು ಬಂದ ಬಳಿಕ ಒಮ್ಮೆಯೂ ತಪ್ಪಿಸಿರಲಿಲ್ಲ. ಎಲ್ಲೇ ಇದ್ದರೂ ಮತ ಚಲಾಯಿಸುತ್ತಿದ್ದರು. ಲೋಕಸಭೆ, ವಿಧಾನಸಭೆ, ಮಹಾನಗರ ಪಾಲಿಕೆ ಸೇರಿದಂತೆ ಯಾವುದೇ ಚುನಾವಣೆ ಇದ್ದರೂ ಹಕ್ಕು ಚಲಾಯಿಸುತ್ತಿದ್ದೆ. ಆದ್ರೆ, ಈ ಬಾರಿ ಮತದಾನದ ಹಕ್ಕು ಸಿಗದಿರುವುದು ದುಃಖ ತಂದಿದೆ ಎಂದು ಹೇಳಿದರು.
ಕಳೆದ 12 ವರ್ಷಗಳಿಂದ ಅಮೆರಿಕಾದಲ್ಲಿದ್ದೇನೆ. ಯಾವುದೇ ಚುನಾವಣೆ ಇರಲಿ. ಬಂದು ಮತ ಹಾಕುತ್ತಿದ್ದೆ. ಯಾವುದೇ ಕಾರಣಕ್ಕೂ ತಪ್ಪಿಸಿಲ್ಲ. ನಾನು ಭಾರತೀಯ ಪ್ರಜೆ ಎಂಬ ಹೆಮ್ಮೆ ಇದೆ. ಮತ ಹಾಕುವುದು ನನ್ನ ಜವಾಬ್ದಾರಿ. 2022ರಲ್ಲಿ ಪೋಷಕರನ್ನು ನೋಡಲು ದಾವಣಗೆರೆಗೆ ಬಂದಿದ್ದೆ. ಆಗ ನನ್ನ ಎಪಿಕ್ ನಂಬರ್ ಇತ್ತು. ವೋಟರ್ ಲೀಸ್ಟ್ ನಲ್ಲಿ ನನ್ನ ಹೆಸರಿತ್ತು. ಜನವರಿ ಅಥವಾ ಫೆಬ್ರವರಿಯಲ್ಲಿ ವೋಟರ್ ಐಡಿಯಲ್ಲಿ ನನ್ನ ಎಪಿಕ್ ನಂಬರ್ ಇರಲಿಲ್ಲ. ಆದ್ರೆ, ಮತದಾರರ ಪಟ್ಟಿಯಲ್ಲಿ ವಿವರ ಇತ್ತು. ಈ ಖಚಿತತೆ ಮೇರೆಗೆ ಒಂದು ವಾರ ರಜೆ ಹಾಕಿ ಅಮೆರಿಕಾದಿಂದ ಬಂದಿದ್ದೇನೆ. ಮತ ಎಣಿಕೆ ಮುಗಿದ ತಕ್ಷಣ ವಾಪಸ್ ಹೋಗುವವನಿದ್ದೆ. ಆದ್ರೆ, ಮತದಾರರ ಪಟ್ಟಿಯಲ್ಲಿ ನನ್ನ ಹೆಸರು ಇಲ್ಲದಿರುವುದು ಆಶ್ಚರ್ಯ ತಂದಿದೆ ಎಂದರು.
ನಾನು ಬಂದಿರುವುದು ಹದಿನಾಲ್ಕು ಸಾವಿರ ಕಿಲೋಮೀಟರ್ ನಿಂದ. 24 ಗಂಟೆ ಪ್ರಯಾಣ ಮಾಡಿದ್ದೇನೆ. ಒಂದು ಕಾಲು ಲಕ್ಷ ರೂಪಾಯಿ ಖರ್ಚು ಮಾಡಿಕೊಂಡು ಬಂದಿದ್ದೇನೆ. ಮತ ಹಾಕಲು ಅವಕಾಶ ಸಿಗದಿದ್ದದ್ದು ಬೇಸರ ತಂದಿದೆ. ನಾನು ಅಮೆರಿಕಾ ಪ್ರಜೆ ಅಲ್ಲ. ಅಲ್ಲಿನ ಪೌರತ್ವವನ್ನೂ ಪಡೆದಿಲ್ಲ. ಯಾಕೆಂದರೆ ನಾನೊಬ್ಬ ಭಾರತೀಯನೆಂಬ ಕಾರಣಕ್ಕೆ ಪಡೆದಿರಲಿಲ್ಲ. ಈಗ ತಪ್ಪು ಮಾಡಿಬಿಟ್ಟೆನಾ, ಅಮೆರಿಕಾ ಪೌರತ್ವ ಪಡೆಯಬೇಕಿತ್ತು ಎಂದೆನಿಸುತ್ತಿದೆ ಎಂದು ಹೇಳಿದರು.
ವೋಟರ್ ಲೀಸ್ಟ್ ನಲ್ಲಿ ನನ್ನ ಹೆಸರು ಡಿಲೀಟ್ ಆಗಿದೆ. ಬೆಳಿಗ್ಗೆ ಏಳು ಗಂಟೆಯಿಂದಲೂ ಮತದಾರರ ಪಟ್ಟಿಯಲ್ಲಿ ನನ್ನ ಹೆಸರು ಯಾಕೆ ಇಲ್ಲಎಂದು ಅಧಿಕಾರಿಗಳಿಗೆ ಕೇಳಿದ್ದೇನೆ, ಕೇಳುತ್ತಲೇ ಇದ್ದೇನೆ. ಬೇಸತ್ತು ವಾಪಸ್ ಹೊರಟಿದ್ದೇನೆ. ಎಪಿಕ್ ನಂಬರ್ ಬರುತ್ತಿಲ್ಲ ಎಂದು ಅಧಿಕಾರಿಗಳು ಹೇಳುತ್ತಾರೆ. ಜನವರಿ ತಿಂಗಳಿನಲ್ಲಿಯೇ ಮತದಾರರ ಪಟ್ಟಿ ಅಂತಿಮವಾಗಿದೆ ಎನ್ನುತ್ತಾರೆ. ಜನವರಿಯಲ್ಲಿ ನಾನು ನೋಡಿಕೊಂಡಿದ್ದೇನೆ. ಈಗ ಇಲ್ಲ. ಇದು ಚುನಾವಣಾಧಿಕಾರಿಗಳ ಬೇಜವಾಬ್ದಾರಿತನವೋ, ಷಡ್ಯಂತ್ರನೋ ಗೊತ್ತಾಗುತ್ತಿಲ್ಲ. ನಾನು ಪಕ್ಷವೊಂದರಲ್ಲಿ ಗುರುತಿಸಿಕೊಂಡಿದ್ದೇನೆ. ಆ ಪಕ್ಷಕ್ಕಾಗಿ ಕೆಲಸ ಮಾಡುತ್ತೇನೆ. ಹಾಗಾಗಿ ಷಡ್ಯಂತ್ರ ರೂಪಿಸಿರಬಹುದು ಎಂಬ ಅನುಮಾನ ಮೂಡಿದೆ ಎಂದು ತಿಳಿಸಿದರು.