ದಾವಣಗೆರೆ: ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರು ನಮ್ಮ ಸರ್ವೋಚ್ಛ ನಾಯಕ. ವಿಧಾನಸಭೆ ಚುನಾವಣೆಯು ಅವರ ಮಾರ್ಗದರ್ಶನದಲ್ಲಿ ಬಿಜೆಪಿ ಎದುರಿಸಲಿದೆ. ಬಿಎಸ್ ವೈ ಸೈಡ್ ಲೈನ್ (SIDELINE) ಮಾಡುವ ಪ್ರಶ್ನೆಯೇ ಇಲ್ಲ. ಅವರೇನೂ ಮೌನ ವಹಿಸಿಲ್ಲ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ (BJP PRESIDENT) ನಳಿನ್ ಕುಮಾರ್ ಕಟೀಲ್ ಸ್ಪಷ್ಟಪಡಿಸಿದರು.
ಜಿಎಂಐಟಿಯ ಸಮೀಪದಲ್ಲಿ ಮಹಾಸಂಗಮ ಕಾರ್ಯಕ್ರಮದ ಭೂಮಿ ಪೂಜೆ ಕಾರ್ಯಕ್ರಮದಲ್ಲಿ ಪಾಲ್ಗೊಂಡ ವೇಳೆ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಸಚಿವರಾದ ಸೋಮಣ್ಣ ಹಾಗೂ ನಾರಾಯಣಗೌಡ ಬಿಜೆಪಿ ತೊರೆಯುವುದಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಮಾಜಿ ಸಿಎಂ ಸಿದ್ದರಾಮಯ್ಯರ ಹುಟ್ಟುಹಬ್ಬದ ಪ್ರಯುಕ್ತ ಸಿದ್ದರಾಮೋತ್ಸವ (SIDDARAMOTSAVA) ನಡೆಸಲಾಯಿತು. ಸಿದ್ದರಾಮಯ್ಯ ಜನುಮದಿನಕ್ಕೆ ಜನರನ್ನು ಕರೆ ತರುವ ಕಾರ್ಯಕ್ರಮ ಆಗಬಾರದು. ರಾಜ್ಯದಿಂದ 3 ಲಕ್ಷ ಮಂದಿ ಕರೆತಂದು 6 ಲಕ್ಷ ಜನರು ಸೇರಿದ್ದರು ಎಂದು ಹೇಳಿಕೊಳ್ಳುತ್ತಾರೆ. ಪ್ರಧಾನಿ ನರೇಂದ್ರ ಮೋದಿ (NARENDRA MODI) ಅವರು ಆಗಮಿಸುತ್ತಿರುವುದರಿಂದ ನಾಲ್ಕು ಜಿಲ್ಲೆಗಳಿಂದ ಜನರನ್ನು ಕರೆತರುವಂತೆ ಸೂಚನೆ ನೀಡಲಾಗಿದೆ. ಅಲ್ಲಿನ ಶಾಸಕರು ಹಾಗೂ ಸಂಸದರು ಈ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಾರೆ ಎಂದು ಹೇಳಿದರು.
ಮಂಡ್ಯದಲ್ಲಿ ಮೋದಿ (MODI) ಸಮಾವೇಶಕ್ಕೆ ಜನರು ಸೇರುತ್ತಾರೋ ಇಲ್ಲವೋ ಎನ್ನುವ ಆತಂಕ ಇತ್ತು. ಆದ್ರೆ, ಮನೆಯಿಂದ ಜನರು ಮೋದಿ ಬರ್ತಾರಂತ ಓಡೋಡಿ ಬಂದರು. ಅಲ್ಲಿ ನಮಗೂ ನಿಲ್ಲಲು ಜಾಗ ಇರಲಿಲ್ಲ. ಮೋದಿ ಅಂದ್ರೆ ಜನರಿಗೆ ತುಂಬಾನೇ ಪ್ರೀತಿ. ಎಲ್ಲರ ಭಾವನೆಯಲ್ಲಿಯೂ ಬೆರೆತು ಹೋಗಿದ್ದಾರೆ. ದಾವಣಗೆರೆಯಲ್ಲಿ ಮಹಾಸಂಗಮ ಐತಿಹಾಸಿಕ ಕಾರ್ಯಕ್ರಮ ಆಗಲಿದೆ. ವಿಧಾನಸಭೆ ಚುನಾವಣೆಯಲ್ಲಿ 150 ಸ್ಥಾನಗಳಲ್ಲಿ ಗೆಲ್ಲಲಿದ್ದೇವೆ. ಯಾವುದೇ ಅನುಮಾನ ಬೇಡ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ವಿಜಯಸಂಕಲ್ಪ ಯಾತ್ರೆ ವೇಳೆ ಹೆಚ್ಚಿನ ಜನ ಸೇರುತ್ತಿದ್ದಾರೆ. ಕಾಂಗ್ರೆಸ್ (CONGRESS) ಪ್ರಜಾಧ್ವನಿಗೆ ಧ್ವನಿಯೇ ಇಲ್ಲದಂತಾಗಿದೆ. ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಲಿ. ಅವರ ಒಳಜಗಳ ಬೀದಿಗೆ ಬರುವುದನ್ನು ನೋಡಲು ಕಾಯುತ್ತಿದ್ದೇವೆ. ಹೋರಾಟ ಆಗುತ್ತೆ, ಕಣ್ಣೀರು ಬರುತ್ತೆ, ಗಲಾಟೆ ಆಗುತ್ತೆ, ಕಲ್ಲು ಬೀಳುತ್ತೆ. ಬೇರೆ ಪಕ್ಷಗಳ ಶಾಸಕರಿಗೆ ಗಾಳ ಹಾಕುವ ಪ್ರಮೇಯ ಎದುರಾಗಿಲ್ಲ ಎಂದ ಅವರು, ಹಾಲಿ ಶಾಸಕರಿಗೆ ಟಿಕೆಟ್ ನೀಡುವುದಿಲ್ಲ ಹಾಗೂ ಸಂಸದರು ರಾಜ್ಯ ರಾಜಕಾರಣಕ್ಕೆ ಬರುತ್ತಾರೋ ಇಲ್ಲವೋ ಎಂಬುದು ಪಕ್ಷದ ಸಂಸದೀಯ ಮಂಡಳಿ ಸಭೆಯಲ್ಲಿ ನಿರ್ಧಾರ ಆಗಲಿದೆ ಎಂದು ತಿಳಿಸಿದರು.
ಹಾಸನಕ್ಕೆ ಜೆಡಿಎಸ್ (JDS) ಸೀಮಿತ. ಇಲ್ಲಿಯೇ ಎಂಜಿನ್ ಸೀಜ್ ಆಗಿದೆ. 20ಕ್ಕಿಂತ ಕಡಿಮೆ ಸ್ಥಾನಗಳಲ್ಲಿ ಅಷ್ಟೇ ಗೆಲ್ಲೋದು. ಕಾಂಗ್ರೆಸ್ ಪಕ್ಷ 75 ಸ್ಥಾನ ದಾಟಲ್ಲ ಎಂದು ನಳಿನ್ ಕುಮಾರ್ ಕಟೀಲ್ ಭವಿಷ್ಯ ನುಡಿದರು.
ಮಹಾಸಂಗಮ ಮುಕ್ತಾಯದ ಬಳಿಕ ವಿಜಯ ದುಂದುಬಿ ದಾವಣಗೆರೆಯಿಂದಲೇ ಮೊಳಗಲು ಶುರು ಆಗುತ್ತದೆ. ಇದು ಸಿದ್ದರಾಮೋತ್ಸವಕ್ಕೆ ಪರ್ಯಾಯವಾಗಿ ಮಹಾಸಂಗಮ ನಡೆಸುತ್ತಿಲ್ಲ. ಇದು ಬಿಜೆಪಿ ವಿಜಯ ಸಂಕಲ್ಪ ಸಮಾವೇಶ. ಮತದಾರರೇ ಅಭಿಮಾನದಿಂದ ಬರುವ ಕಾರ್ಯಕ್ರಮ. ನಿರೀಕ್ಷೆ 7 ಲಕ್ಷ ಇದ್ದು, ಅದು 10 ಲಕ್ಷ ಆದರೂ ಆಗಬಹುದು ಎಂದು ಹೇಳಿದರು.
ನರೇಂದ್ರ ಮೋದಿ ಅವರು ಕಳೆದ 9 ವರ್ಷಗಳಲ್ಲಿ ದೇಶದಲ್ಲಿನ ಎಲ್ಲಾ ರಾಜ್ಯಗಳಿಗೂ ಹೋಗಿದ್ದಾರೆ. ಯಾವ ಪ್ರಧಾನಿಯೂ ಹೋಗಿಲ್ಲ. ಸಮಯ ಸಿಕ್ಕಾಗ ಎಲ್ಲಾ ರಾಜ್ಯಗಳು, ಜಿಲ್ಲೆಗಳು ಹಾಗೂ ಅಭಿವೃದ್ಧಿ ಕಾರ್ಯಗಳಿಗೆ ಶಂಕುಸ್ಥಾಪನೆ ನೆರವೇರಿಸಲು ವಿಧಾನಸಭಾ ಕ್ಷೇತ್ರಗಳಿಗೂ ಹೋಗುತ್ತಾರೆ. ಅರವತ್ತು ವರ್ಷ ದೇಶವಾಳಿದ ಕಾಂಗ್ರೆಸ್ ಪ್ರಧಾನಿಗಳು ಯಾಕೆ ಬಂದಿರಲಿಲ್ಲ ಎಂದು ನಳಿನ್ ಕುಮಾರ್ ಕಟೀಲ್ ಪ್ರಶ್ನಿಸಿದರು.
ಈ ವೇಳೆ ಸಂಸದ ಜಿ. ಎಂ. ಸಿದ್ದೇಶ್ವರ್, ಶಾಸಕ ಸೋಮಶೇಖರ್, ಬಿಜೆಪಿ ಜಿಲ್ಲಾಧ್ಯಕ್ಷ ವೀರೇಶ್ ಹನಗವಾಡಿ, ವಿಧಾನ ಪರಿಷತ್ ಸದಸ್ಯ ನವೀನ್, ವಿಧಾನ ಪರಿಷತ್ ಮುಖ್ಯ ಸಚೇತಕ ಶಿವಯೋಗಿಸ್ವಾಮಿ, ಮಹಾನಗರ ಪಾಲಿಕೆ ಮಾಜಿ ಮೇಯರ್ ಎಸ್. ಟಿ. ವೀರೇಶ್, ಪಾಲಿಕೆ ಸದಸ್ಯ ಕೆ. ಎಂ. ವೀರೇಶ್, ದೂಡಾ ಮಾಜಿ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್, ಬಿಜೆಪಿ ಯುವ ಮುಖಂಡ ಶಿವನಗೌಡ ಪಾಟೀಲ್ ಮತ್ತಿತರರು ಹಾಜರಿದ್ದರು.
ಮಹಾಸಂಗಮಕ್ಕೆ ಭೂಮಿಪೂಜೆ:
ಮಾರ್ಚ್ 25ಕ್ಕೆ ದಾವಣಗೆರೆಯ ಜಿಎಂಐಟಿ ಗೆಸ್ಟ್ ಹೌಸ್ ಸಮೀಪದ ನೂರಾರು ಎಕರೆಯಲ್ಲಿ ಮಹಾ ಸಂಗಮ ಸಮಾವೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಆಗಮಿಸಲಿರುವ ಹಿನ್ನೆಲೆಯಲ್ಲಿ ಸಿದ್ಧತಾ ಕಾರ್ಯಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಭೂಮಿಪೂಜೆ ನೆರವೇರಿಸಿದರು.
ಸಿದ್ದರಾಮಯ್ಯ ಮಾಡಿರುವುದು ಹುಟ್ಟುಹಬ್ಬ. ವಿಜಯ ಸಂಕಲ್ಪ ಯಾತ್ರೆಯ ಸಮಾರೋಪ ಸಮಾರಂಭ ನಮ್ಮದು. ಸವಾಲು ಕೊಡುವ ಸಮಾವೇಶ ಅಲ್ಲ. ಮಧ್ಯಕರ್ನಾಟಕದ ಹೆಬ್ಬಾಗಿಲು ಆಗಿರುವ ಕಾರಣಕ್ಕೆ ಎಲ್ಲಾ ಕಡೆಗಳಿಂದ ಜನರು ಬರಲು ಅನುಕೂಲವಾಗಲಿ ಎಂಬ ಕಾರಣಕ್ಕೆ ಇಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.