SUDDIKSHANA KANNADA NEWS/ DAVANAGERE/ DATE: 04-05-2023
ದಾವಣಗೆರೆ (DAVANAGERE): ಕಾಂಗ್ರೆಸ್ (CONGRESS)ನ ಭದ್ರಕೋಟೆಯಾಗಿದ್ದ ಜಗಳೂರು ಕ್ಷೇತ್ರವು ಬಿಜೆಪಿ ತೆಕ್ಕೆಗೆ ಬಿದ್ದದ್ದು 2004ರಲ್ಲಿ. ಅಲ್ಲಿಯವರೆಗೆ ಇಲ್ಲಿ ಕಮಲ ಅರಳಿರಲಿಲ್ಲ. ಈ ಬಾರಿ ಈ ಕದನ ಕಣದಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. ಬಿಜೆಪಿ(BJP)ಯಿಂದ ಎಸ್. ವಿ. ರಾಮಚಂದ್ರಪ್ಪ ಸ್ಪರ್ಧಾ ಕಣದಲ್ಲಿದ್ದರೆ, ಕಾಂಗ್ರೆಸ್ (CONGRESS) ಪಕ್ಷವು ದೇವೇಂದ್ರಪ್ಪ ಅವರಿಗೆ ಬಿ ಫಾರಂ (B FORM)ನೀಡಿದೆ. ಕೈ ಟಿಕೆಟ್ ಸಿಗದ ಕಾರಣ ಹೆಚ್. ಪಿ. ರಾಜೇಶ್ ಕಾಂಗ್ರೆಸ್ ಗೆ ಸೆಡ್ಡು ಹೊಡೆದು ಪಕ್ಷೇತರ ಹುರಿಯಾಳಾಗಿ ಸ್ಪರ್ಧೆ ಮಾಡಿದ್ದು, ಹಾಗಾಗಿ ತ್ರಿಕೋನ ಸ್ಪರ್ಧೆ ಇಲ್ಲಿದೆ.
ಎಸ್. ವಿ. ರಾಮಚಂದ್ರಪ್ಪರ (S. V. RAMACHANDRAPPA) ಪಕ್ಷಾಂತರ ಆಟಕ್ಕೆ ಕಳೆದ ಹದಿಮೂರು ವರ್ಷ ಸಾಕ್ಷಿಯಾಗಿದೆ. 2008ರಲ್ಲಿ ಕಾಂಗ್ರೆಸ್ ನಿಂದ ಗೆದ್ದರೂ ಆಪರೇಷನ್ ಕಮಲಕ್ಕೆ ಒಳಗಾದ ಕಾರಣ ಹೆಚ್ಚು ಸುದ್ದಿಯಾದ ಕ್ಷೇತ್ರ. ಆ ಬಳಿಕ ನಡೆದ ಉಪಚುನಾವಣೆಯಲ್ಲಿ ಗೆದ್ದು ಬೀಗಿದರು. ಮತ್ತೆ 2013ರಲ್ಲಿ ಕೆಜೆಪಿಯಿಂದ ಸ್ಪರ್ಧಿಸಿ ಪರಾಜಯಗೊಂಡಿದ್ದರು. ಮತ್ತೆ ಅಂದರೆ 2008ರಲ್ಲಿ ಬಿಜೆಪಿಯಿಂದ ಗೆದ್ದು ಶಾಸಕರಾದರು. ಹಾಗಾಗಿ, ಇವರ ಆಟಕ್ಕೆ ಬ್ರೇಕ್ ಹಾಕಲು ದೇವೇಂದ್ರಪ್ಪ ಹಾಗೂ ಹೆಚ್. ಪಿ. ರಾಜೇಶ್ ಭಾರೀ ರಣತಂತ್ರ ರೂಪಿಸಿದ್ದಾರೆ.
ಲಿಂಗಾಯತ ಸಮುದಾಯದವರೇ ಹೆಚ್ಚಿರುವ ಈ ಕ್ಷೇತ್ರವು ಎಸ್ಟಿ ಮೀಸಲು ಕ್ಷೇತ್ರ. ವಾಲ್ಮೀಕಿ ಸಮುದಾಯದ ಜನಸಂಖ್ಯೆಯೂ ಇದೆ. ಲಿಂಗಾಯತ ಸಮುದಾಯ, ಎಸ್ಟಿ ಮತಗಳು ಯಾರೇ ಪಡೆದರೂ ಗೆಲುವು ಕಟ್ಟಿಟ್ಟ ಬುತ್ತಿ. ಈ ಬಾರಿ ಲಿಂಗಾಯತ ಸಮುದಾಯ ಎಸ್. ವಿ. ರಾಮಚಂದ್ರಪ್ಪರ ವಿರುದ್ದ ಮುನಿಸಿಕೊಂಡಿದೆ. ಶಾಸಕರಾಗಿ ಆಯ್ಕೆಯಾದ ಬಳಿಕ ಈ ಬಾರಿ ಈ ಸಮುದಾಯ ಕಡೆಗಣಿಸಿರುವ ಎಸ್. ವಿ. ರಾಮಚಂದ್ರಪ್ಪರಿಗೆ ಮೈನಸ್ ಪಾಯಿಂಟ್. ಇಂದು ಲಿಂಗಾಯತ ಸಮುದಾಯದ ಮುಖಂಡರು ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರಿರುವುದು ಬಿಜೆಪಿ ಶಾಸಕನಿಗೆ ತಳಮಳ ಸೃಷ್ಟಿಸಿದೆ. ಲಿಂಗಾಯತ ಸಮುದಾಯದ ಮತಗಳಿಂದಲೇ ಗೆದ್ದು ಬಂದಿದ್ದ ರಾಮಚಂದ್ರಪ್ಪರ ಪರ ಯಡಿಯೂರಪ್ಪ ಅವರು ಈಗ ಬರುವ ಸ್ಥಿತಿಯಲ್ಲಿ ಇಲ್ಲ. ಹಾಗಾಗಿ, ಫಲಿತಾಂಶ (RESULT) ಏನಾಗಬಹುದು ಎಂಬ ಕುತೂಹಲ ಗರಿಗೆದರುವಂತೆ ಮಾಡಿದೆ.
ಆಪರೇಷನ್ ಕಮಲಕ್ಕೆ ಒಳಗಾಗಿದ್ದ ಎಸ್. ವಿ. ರಾಮಚಂದ್ರಪ್ಪರಿಂದ ಕ್ಷೇತ್ರಕ್ಕೆ ಕೆಟ್ಟ ಹೆಸರು ಬಂದಿದೆ. ಇಂಥ ಪಕ್ಷ ನಿಷ್ಠೆಯಿಲ್ಲದವರು ಸೋಲಬೇಕು, ಯಡಿಯೂರಪ್ಪರ ಮುಖ ನೋಡಿಕೊಂಡು ಸುಮ್ಮನಿದ್ದೆವು. ಆದ್ರೆ, ಗೆಲ್ಲಲು ಸಹಕಾರ ಮಾಡಿದವರಿಗೆ ಮೋಸ ಮಾಡಿದವರಿಗೆ ತಕ್ಕ ಶಿಕ್ಷೆಯಾಗಬೇಕು. ಅಂದರೆ ಚುನಾವಣೆಯಲ್ಲಿ ಸೋಲಿಸಬೇಕು ಎಂಬ ತೀರ್ಮಾನಕ್ಕೆ ಕ್ಷೇತ್ರದ ಜನರು ಬಂದಿದ್ದಾರೆ ಎಂಬುದು ಕಾಂಗ್ರೆಸ್ (CONGRESS) ವಾದ.
ಪ್ರಧಾನಿ ನರೇಂದ್ರ ಮೋದಿ, ಬಸವರಾಜ್ ಬೊಮ್ಮಾಯಿ ಅವರ ಕಾರ್ಯಕ್ರಮಗಳು ನಮಗೆ ಶ್ರೀರಕ್ಷೆ ಎನ್ನುವುದು ಎಸ್. ವಿ. ಆರ್. ಅಭಿಮತ. ನನಗೆ ಟಿಕೆಟ್ ನೀಡದೇ ಕಾಂಗ್ರೆಸ್ ಮೋಸ ಮಾಡಿದೆ. ಈ ಬಾರಿ ಚುನಾವಣೆಯಲ್ಲಿ ಪ್ರಾಮಾಣಿಕ ವ್ಯಕ್ತಿಗೆ ಮತ ನೀಡುತ್ತಾರೆ ಎಂಬುದು ಪಕ್ಷೇತರ ಅಭ್ಯರ್ಥಿ ಹೆಚ್. ಪಿ. ರಾಜೇಶ್ ವಿಶ್ವಾಸ. ಒಟ್ಟಾರೆ ಯಾರು ಏನೇ ಹೇಳಿದರೂ ಮೇ.10ರಂದು ಕ್ಷೇತ್ರದ ಜನರು ಭವಿಷ್ಯ ಬರೆಯಲಿದ್ದು, ಮೇ. 13ಕ್ಕೆ ಫಲಿತಾಂಶ ಹೊರ ಬಿದ್ದಮೇಲೆಯೇ ಗೊತ್ತಾಗುತ್ತದೆ.
1962ರಲ್ಲಿ ನಡೆದ ಮೊದಲ ಚುನಾವಣೆಯಲ್ಲಿ ಇಂಡಿಯನ್ ನ್ಯಾಷನಲ್ ಕಾಂಗ್ರೆಸ್, 1967ರಲ್ಲಿ ಐಎನ್ ಸಿಯಿಂದ ಜೆ. ಆರ್. ಹಾಲಸ್ವಾಮಿ, 1972, 1978, 1983, 1985, 1989ರಲ್ಲಿ ಐಎನ್ ಸಿಯಿಂದ ಜಿ. ಹೆಚ್. ಅಶ್ವಥ ರೆಡ್ಡಿ, 1994ರಲ್ಲಿ ಕೆಸಿಪಿಯಿಂದ ಮಾಗನೂರು ಬಸಪ್ಪ, 1999ರಲ್ಲಿ ಐಎನ್ ಡಿಯಿಂದ ಜಿ. ಹೆಚ್. ಅಶ್ವಥ ರೆಡ್ಡಿ, 2004ರಲ್ಲಿ ಬಿಜೆಪಿಯ ಟಿ. ಗುರುಸಿದ್ದನಗೌಡ, 2008ರಲ್ಲಿ ಗೆದ್ದು ಬೀಗಿದ್ದರು.
2008ರಲ್ಲಿ ಎಸ್. ವಿ. ರಾಮಚಂದ್ರ ಕಾಂಗ್ರೆಸ್ (CONGRESS) ನಿಂದ ಸ್ಪರ್ಧಿಸಿ ಜಯ ಗಳಿಸಿದ್ದರು. ಆ ಬಳಿಕ ಆಪರೇಷನ್ ಕಮಲಕ್ಕೆ ಒಳಗಾಗಿ ಬಿಜೆಪಿ (BJP)ಸೇರಿ ಉಪಚುನಾವಣೆಯಲ್ಲಿ ಗೆದ್ದು ಬೀಗಿದ್ದರು. ಆದ್ರೆ, 2013ರಲ್ಲಿ ಕೆಜೆಪಿಯಿಂದ ಸ್ಪರ್ಧಿಸಿದ್ದ
ಎಸ್. ವಿ. ರಾಮಚಂದ್ರ ಅವರನ್ನು ಕಾಂಗ್ರೆಸ್ ನ ಹೆಚ್. ಪಿ. ರಾಜೇಶ್ ಗೆದ್ದಿದ್ದರು. 2018ರಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಎಸ್. ವಿ. ರಾಮಚಂದ್ರಪ್ಪ ಮತ್ತೆ ಜಯ ಗಳಿಸಿದರು.
ಕ್ಷೇತ್ರ ವಿಶೇಷ:
ಕ್ರಿಸ್ತಶಕ 1882ರವರೆಗೆ ಕಣಕುಪ್ಪೆ ತಾಲೂಕಿಗೆ ಒಳಪಟ್ಟಿದ್ದ ಜಗಳೂರು ಚಿತ್ರದುರ್ಗ ಉಪ ತಾಲೂಕಾಗಿ ಕ್ರಿ. ಶ. 1986ರಲ್ಲಿ ಸ್ವತಂತ್ರ ತಾಲೂಕೆಂದು ಘೋಷಿಸಲಾಯಿತು. 1962ರಲ್ಲಿ ಇಲ್ಲಿ ಮೊದಲ ವಿಧಾನಸಭೆ ಚುನಾವಣೆ ನಡೆದಿತ್ತು. ಉತ್ತರದಲ್ಲಿ ಕೂಡ್ಲಗಿ, ದಕ್ಷಿಣದಲ್ಲಿ ಚಿತ್ರದುರ್ಗ, ದಾವಣಗೆರೆ ಮತ್ತು ಹರಪನಹಳ್ಳಿ, ಪೂರ್ವದಲ್ಲಿ ಚಳ್ಳಕೆರೆ ತಾಲೂಕುಗಳಿಂದ ಸುತ್ತುವರಿಯಲ್ಪಟ್ಟಿದೆ.
ಭೌಗೋಳಿಕವಾಗಿ ಉಬ್ಬು ದಿಣ್ಣೆ, ತೆಗ್ಗುಗಳಿಂದ ಕೂಡಿದ ಮೈದಾನ ಪ್ರದೇಶ. ವಾಯುವ್ಯ ದಿಕ್ಕಿನಲ್ಲಿ ಸಣ್ಣಪುಟ್ಟ ಗುಡ್ಡಗಳು ಹರಡಿವೆ. ಮುಖ್ಯವಾಗಿ ಕೊಡದಗುಡ್ಡ, ಕೊಣಚಗಲ್, ರಂಗಪ್ಪನ ಬೆಟ್ಟ,ಹಾಲೆಕಲ್ಲು ಬೆಟ್ಟದ ಸಾಲುಗಳನ್ನು ನೋಡಬಹುದು. ಈಗ ಅರ್ಧದಷ್ಟು ನೀರಾವರಿ ಸೌಲಭ್ಯವಿದ್ದರೆ, ಉಳಿದೆಲ್ಲಾ ಮರಳು ಮಿಶ್ರಿತ ಕೆಂಪು ಮಣ್ಣಿನ ಭೂಮಿ. ಕ್ರಿ.ಶ. 1526ರಲ್ಲಿಯ ನಿಬಗೂರು ಶಾಸನದಲ್ಲಿ ಜಗಳೂರು ಸೀಮೆ ಎಂದು, ಕ್ರಿ. ಶ. 1680ರಲ್ಲಿಯ ಶಾಸನದಲ್ಲಿ ಜಗಳೂರ್ ನಾಡ್ ಎಂದಿದೆ. ಬರಬರುತ್ತಾ ಜಗಳೂರು ಎಂದು ಕರೆಯಲಾಗುತ್ತಿದೆ.