SUDDIKSHANA KANNADA NEWS/ DAVANAGERE/ DATE:25-01-2024
ದಾವಣಗೆರೆ: ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರು ಕಾಂಗ್ರೆಸ್ ಬಿಟ್ಟು ಮತ್ತೆ ಬಿಜೆಪಿ ಸೇರ್ಪಡೆಯಾಗಿರುವುದರಿಂದ ಪಕ್ಷಕ್ಕೆ ಯಾವುದೇ ಎಫೆಕ್ಟ್ ಆಗಲ್ಲ ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಹಾಗೂ ತೋಟಗಾರಿಕೆ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ತಿಳಿಸಿದರು. ಜಗದೀಶ್ ಶೆಟ್ಟರ್ ಸಂಬಂಧಿಯೂ ಆಗಿರುವ ಎಸ್. ಎಸ್. ಮಲ್ಲಿಕಾರ್ಜುನ್ ರ ಈ ಹೇಳಿಕೆ ಅಚ್ಚರಿ ಮೂಡಿಸಿದೆ.
ಮಾಧ್ಯಮದವರ ಜೊತೆ ಮಾತನಾಡಿದ ಅವರು, ಜಗದೀಶ್ ಶೆಟ್ಟರ್ ಅವರು ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದರು. ಆಗಲೂ ಏನೂ ಲಾಭ ಆಗಿರಲಿಲ್ಲ ಎಂದು ಪ್ರತಿಕ್ರಿಯೆ ನೀಡಿದರು.
ಶೆಟ್ಟರ್ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದಾಗ ಹೇಳಿಕೊಳ್ಳುವಂತ ಬದಲಾವಣೆ ಅಥವಾ ಲಾಭವೇನೂ ಆಗಿರಲಿಲ್ಲ, ಈಗ ಬಿಜೆಪಿಗೆ ಹೋದಾಗಲು ನಮಗೇನೂ ಎಫೆಕ್ಟ್ ಆಗಲ್ಲ. ಎಫೆಕ್ಟ್ ಆಗುವಂತಿದ್ದರೆ ಜಗದೀಶ್ ಶೆಟ್ಟರ್ ಅವರು ವಿಧಾನಸಭಾ ಚುನಾವಣೆಯಲ್ಲಿ ಯಾಕೆ ಸೋಲು ಕಂಡರು ಎಂದು ಪ್ರಶ್ನಿಸಿದರು.
ಕಾಂಗ್ರೆಸ್ ಪಕ್ಷಕ್ಕೆ ಕಾರ್ಯಕರ್ತರ ಶಕ್ತಿ ಇದೆ. ಅವರವರ ವೈಯುಕ್ತಿಕ ಬೆಳವಣಿಗೆಯಿಂದ ಹೋಗಿದ್ದಾರೆ. ಮನೆಯೊಳಗೆ ಬೀಗರು ಇರುತ್ತಾರೆ. ಪಕ್ಷಕ್ಕೆ ಸಂಬಂಧಿಸಿದಂತೆ ಅಲ್ಲ. ಕಾಂಗ್ರೆಸ್ ಗೆ ತನ್ನದೇ ಆದಂತ ವೋಟ್ ಇವೆ. ಏನೂ ಹಾನಿಯಾಗಲ್ಲ ಎಂದು ಪ್ರತಿಕ್ರಿಯಿಸಿದರು.
ಅಯೋಧ್ಯೆಯಲ್ಲಿ ಶ್ರೀ ರಾಮ ಮಂದಿರ ಪ್ರತಿಷ್ಠಾಪನೆ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿಗೆ ಹೆಚ್ಚೇನೂ ಲಾಭ ಆಗಲ್ಲ. ನಾವೂ ಕೂಡ ರಾಮನಭಕ್ತರು. ಪೂಜೆ ಸಲ್ಲಿಸುತ್ತೇವೆ. ಅದೇ ವಿಚಾರವನ್ನೆ ಹಿಡಿದುಕೊಂಡು ಚುನಾವಣೆಗೆ ಹೋಗುವುದಿಲ್ಲ. ಮೊದಲು ಜನರಿಗೆ ಊಟ, ವಸತಿ, ಶಿಕ್ಷಣ ಬೇಕು ಎಂದು ಪ್ರತಿಪಾದಿಸಿದರು.