SUDDIKSHANA KANNADA NEWS/ DAVANAGERE/ DATE:25-01-2024
ದಾವಣಗೆರೆ: ಭದ್ರಾ ಡ್ಯಾಂನ ನೀರು ಕೊನೆ ಭಾಗಕ್ಕೆ ತಲುಪಿಲ್ಲ ಎಂದು ಆರೋಪಿಸಿ ಬೆಳ್ಳಿಗನೂಡು ವಿತರಣೆ ನಾಲೆ ಬಳಿ ರೈತರು ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ರೈತ ಮುಖಂಡ ಕೊಳೇನಹಳ್ಳಿ ಬಿ ಎಂ ಸತೀಶ್ ರವರು 2ನೇ ನಾಲಾ ಉಪವಿಭಾಗದ ವ್ಯಾಪ್ತಿಯಲ್ಲಿ ಬರುವ ಕಂದಗಲ್, ಶಾಗಲೆ, ಹೂವಿನಮಡು, ಮತ್ತಿ, ಗೋಣಿವಾಡ, ಹೊನ್ನಮರಡಿ, ಕುಕ್ಕುವಾಡ, ಕೊಳೇನಹಳ್ಳಿ, ನಾಗರಸನಹಳ್ಳಿ ಭಾಗಕ್ಕೆ ನೀರು ತಲುಪಿಲ್ಲ. ದಾವಣಗೆರೆ ಮತ್ತು ಮಲೆಬೆನ್ನೂರು ವಿಭಾಗಕ್ಕೆ ಹರಿಸಬೇಕಾದ ಪ್ರಮಾಣದಲ್ಲಿ ಮುಖ್ಯ ನಾಲೆಯಲ್ಲಿ 11 ಅಡಿ ಬರುವ ಬದಲು ಕೇವಲ 8 ಅಡಿ ನೀರು ಹರಿಯುತ್ತದೆ. ಇದರಿಂದ ನೀರಾವರಿ ಇಂಜಿನಿಯರ್ ಗಳಿಗೆ ಕೊನೆ ಭಾಗಕ್ಕೆ ನೀರು ತಲುಪಿಸಲು ಸಾಧ್ಯವಾಗುತ್ತಿಲ್ಲ ಎಂದು ತಿಳಿಸಿದರು.
12 ದಿನ ನೀರು ಹರಿಸುವುದು ಐಸಿಸಿಯ ತೀರ್ಮಾನ ಅವೈಜ್ಞಾನಿಕವಾಗಿದೆ. ನಾಳೆ ನೀರು ಹರಿಸಿ, 12 ದಿನಗಳಾದವು. ಆದ್ದರಿಂದ ನೀರು ಹರಿಸುವುದನ್ನು ನಿಲ್ಲಿಸಬಾರದು. 20 ದಿನಗಳವರೆಗೆ ಮುಂದುವರೆಸಬೇಕು ಎಂದು ಒತ್ತಾಯಿಸಿದರು.
ಕರ್ನಾಟಕ ನೀರಾವರಿ ನಿಗಮದ ದಾವಣಗೆರೆ ವಿಭಾಗದ ಎಕ್ಸಿಕ್ಯೂಟೀವ್ ಇಂಜಿನಿಯರ್ ಆರ್. ಬಿ. ಮಂಜುನಾಥ ಮಾತನಾಡಿ, ಮುಖ್ಯ ನಾಲೆಯಲ್ಲಿ ನಿಗಧಿತ ಪ್ರಮಾಣದಲ್ಲಿ ನೀರು ಹರಿಸುತ್ತಿಲ್ಲ. ಮುಖ್ಯ ನಾಲೆಯಲ್ಲಿ 11 ಅಡಿ ನೀರು ಹರಿಸಬೇಕು. ಆದರೆ ಕೇವಲ 8 ಅಡಿ ನೀರು ಹರಿಯುತ್ತಿದೆ. 12 ದಿನ ನೀರು ಹರಿಸಬೇಕು ಎಂಬ ವೇಳಾಪಟ್ಟಿಯಂತೆ ಕೊನೆ ಭಾಗಕ್ಕೆ ನೀರು ತಲುಪಿಸಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದರು.