SUDDIKSHANA KANNADA NEWS/ DAVANAGERE/ DATE:14-12-2023
ಬೆಳಗಾವಿ: ಬೆಂಗಳೂರನ್ನು ಜಾಗತಿಕ ಮಟ್ಟದ ವಾಸಯೋಗ್ಯ ನಗರವನ್ನಾಗಿ ರೂಪಿಸಲು ಉದ್ದೇಶಿಸಲಾಗಿದೆ ಎಂದು ಉಪ ಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ ಅವರು ವಿಧಾನ ಪರಿಷತ್ನಲ್ಲಿ ಹೇಳಿದರು.
ಸದಸ್ಯೆ ಭಾರತಿ ಶೆಟ್ಟಿಯವರ 122ನೇ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸಿದ ಸಚಿವರು, ಬೆಂಗಳೂರು ದಿನೇದಿನೆ ಬೆಳೆಯುತ್ತಿರುವ ಮಹಾನಗರ. ಸಹಜವಾಗಿ ಸಂಚಾರ ದಟ್ಟಣೆ ಹೆಚ್ಚುತ್ತಿದೆ. ಕಸ ವಿಲೇವಾರಿಯದ್ದು ದೊಡ್ಡ ದಂಧೆಯಾಗಿದೆ. ಇದಕ್ಕೆಲ್ಲ ಕಡಿವಾಣ ಹಾಕಲಾಗುತ್ತಿದೆ. ಬೆಂಗಳೂರಿನ ಘನತಾಜ್ಯ ನಿರ್ವಹಣೆಗಾಗಿ ಕನಿಷ್ಟ ಮೂರು ದಿಕ್ಕುಗಳಲ್ಲಿ ಸುಮಾರು ತಲಾ 100 ಎಕರೆ ಪ್ರದೇಶದಲ್ಲಿ ಎಲ್ಲಾ ಬಗೆಯ ತ್ಯಾಜ್ಯಗಳ ಸಂಸ್ಕರಣಾ ಘಟಕಗಳನ್ನು ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ನಿಗಮ ನಿಯಮಿತದ ಮೂಲಕ ಸ್ಥಾಪಿಸಲು ಯೋಜಿಸಲಾಗಿದೆ ಎಂದು ತಿಳಿಸಿದರು.
ಬೆಂಗಳೂರನ್ನು ಉನ್ನತ ಮಟ್ಟಕ್ಕೆ ವಿಸ್ತರಿಸುವ ಯೋಚನೆಯಡಿ ಈಗಾಗಲೇ ಬ್ರಾಂಡ್ ಬೆಂಗಳೂರು ಪರಿಕಲ್ಪನೆಯನ್ನು ಘೋಷಿಸಲಾಗಿದೆ. ಈ ಯೋಜನೆಗೆ ಸಂಬಂಧಿಸಿದಂತೆ 70,000 ಕ್ಕು ಹೆಚ್ಚು ಅಭಿಪ್ರಾಯ ಸಲಹೆಗಳು ನಾಗರಿಕರು ಮತ್ತು ತಜ್ಞರಿಂದ ಆನ್ಲೈನ್ ಮೂಲಕ ಸ್ವೀಕೃತಗೊಂಡಿವೆ.ಬೆಂಗಳೂರಿನ ವಾಹನ ದಟ್ಟನೆ ತಪ್ಪಿಸಲು ಒಟ್ಟು 25 ಜಂಕ್ಷನ್ಗಳನ್ನು ಅಭಿವೃದ್ಧಿಪಡಿಸುವ 27.90 ಕೋಟಿ ರೂಗಳ ವೆಚ್ಚದ ಕಾಮಗಾರಿ ಪ್ರಗತಿಯಲ್ಲಿದೆ ಎಂದರು.
ಬೆಂಗಳೂರು ಈಗ ಉತ್ತರದ ಕಡೆಗೆ ಹೆಚ್ಚು ಅಭಿವೃದ್ಧಿ ಹೊಂದುತ್ತಿದೆ. ಹಾಗಾಗಿ ತುಮಕೂರು ಸೇರಿದಂತೆ ನಾನಾ ಭಾಗಗಳ ವಾಹನಗಳು ಅಧಿಕವಾಗಿರುವುದರಿಂದ ವಾಹನ ದಟ್ಟಣೆ, ಸಂಚಾರ ದಟ್ಟಣೆ ಹೆಚ್ಚಾಗಿದೆ. ಇವುಗಳಿಗೆಲ್ಲ ಕಡಿವಾಣ ಹಾಕಲು ಜನರು-ಜನಪ್ರತಿನಿಧಿಗಳ ಸಲಹ ಮೇರೆಗೆ ಪ್ರಾಯೋಗಿಕ ಕಾರ್ಯಕ್ರಮ ರೂಪಿಸಲು ಸರಕಾರ ಯೋಚಿಸಿದೆ. ಜೊತೆಗೆ ಪ್ರವಾಸೋದ್ಯಮ ತಾಣವಾಗಿ ಬೆಂಗಳೂರಿನ ಅಭಿವೃದ್ಧಿ ಕುರಿತು ಚಿಂತನೆ ನಡೆದಿದೆ ಎಂದರು.
ಸರಗಳ್ಳತನ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಭಾರತಿ ಶೆಟ್ಟಿಯವರ ಪ್ರಶ್ನೆಗೆ ಉತ್ತರಿಸಿದ ಅವರು, ಗೃಹ ಸಚಿವರು ಮತ್ತು ತಾವು ಸೇರಿ ಈ ಬಗ್ಗೆ ಚಿಂತನೆ ನಡೆಸಿದ್ದೇವೆ. ಜನದಟ್ಟಣೆ ಇರುವಲ್ಲಿ ಸಿಸಿ ಕ್ಯಾಮೆರಾಗಳು, ಪೊಲೀಸ್ ಕಣ್ಗಾವಲು ಹೆಚ್ಚಿಸಿದ್ದೇವೆ ಎಂದು ಉಪ ಮುಖ್ಯಮಂತ್ರಿಗಳು ವಿವರಿಸಿದರು.
ಇದೆ ವೇಳೆ ಗೃಹ ಸಚಿವರಾದ ಡಾ.ಜಿ.ಪರಮೇಶ್ವರ್ ಅವರು ಮಾತನಾಡಿ, ಬೆಂಗಳೂರಿನಾದ್ಯಂತ 7,500 ಎಚ್.ಡಿ.ಗುಣಮಟ್ಟದ ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಸರಗಳ್ಳತನ, ಹಲ್ಲೆ, ದರೋಡೆ ಮತ್ತಿತರ ಅಪರಾಧ ಕೃತ್ಯಗಳ ಪತ್ತೆ ಕ್ರಮದ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸುತ್ತೇವೆ ಎಂದು ತಿಳಿಸಿದರು