SUDDIKSHANA KANNADA NEWS/ DAVANAGERE/ DATE-23-04-2025
ಪಹಲ್ಗಾಮ್ ನಲ್ಲಿ ಉಗ್ರರು ನಡೆಸಿದ ದಾಳಿಗೆ ಭಾರತ ದೇಶವೇ ಬೆಚ್ಚಿ ಬಿದ್ದಿದೆ. 26 ಮಂದಿಯನ್ನು ತಲೆಗೆ ಗುಂಡಿಟ್ಟು ಪಾಪಿ ಕ್ರೂರಿಗಳು ಕೊಂದು ಹಾಕಿದ್ದಾರೆ. ಮುಂಬೈ ದಾಳಿ ಬಳಿಕ ದೇಶದಲ್ಲಿ ನಡೆದ ಅತಿ ದೊಡ್ಡ ಭಯೋತ್ಪಾದಕರ ದಾಳಿ ಇದು. ಸೇನೆಯು ಇಬ್ಬರು ಭಯೋತ್ಪಾದಕರ ಫಿನಿಶ್ ಮಾಡಿದ್ದು, ಭಯೋತ್ಪಾದಕನೊಬ್ಬ ಬಂದೂಕು ಹಿಡಿದು ಹೋಗುತ್ತಿರುವ ಮೊದಲ ಫೋಟೋ ಬಿಡುಗಡೆ ಮಾಡಲಾಗಿದೆ.
ಸಮವಸ್ತ್ರ ಧರಿಸಿದ ಭಯೋತ್ಪಾದಕರು ಬೈಸರನ್ ಹುಲ್ಲುಗಾವಲಿನಲ್ಲಿ ಪ್ರವಾಸಿಗರ ಮೇಲೆ ಗುಂಡು ಹಾರಿಸಿದರು. ದಾಳಿ ಸುದ್ದಿ ಗೊತ್ತಾಗುತ್ತಿದ್ದಂತೆ ವಿದೇಶ ಪ್ರವಾಸ ಮೊಟಕುಗೊಳಿಸಿ ಪ್ರಧಾನಿ ನರೇಂದ್ರ ಮೋದಿ ಅವರು ಭಾರತಕ್ಕೆ ವಾಪಸ್ ಆದರು.
ಮೂಲಗಳು ಹೇಳುವಂತೆ ಲಷ್ಕರ್ ಕಮಾಂಡರ್ ಸೈಫುಲ್ಲಾ ಕಸೂರಿ ದಾಳಿಯ ಮಾಸ್ಟರ್ ಮೈಂಡ್. ಇಬ್ಬರು ಕನ್ನಡಿಗರು, ಇಬ್ಬರು ವಿದೇಶಿ ಪ್ರಜೆಗಳು ಸೇರಿದಂತೆ ಕನಿಷ್ಠ 26 ಜನರು ಸಾವನ್ನಪ್ಪಿದ್ದಾರೆ. ನಿಷೇಧಿತ ಭಯೋತ್ಪಾದಕ ಗುಂಪು ಲಷ್ಕರ್-ಎ-ತೈಬಾ ಒಂದು ಭಾಗವಾದ ದಿ ರೆಸಿಸ್ಟೆನ್ಸ್ ಫ್ರಂಟ್‌ನ ಸದಸ್ಯರು ಎಂದು ನಂಬಲಾದ ದಾಳಿಕೋರರು ಮಂಗಳವಾರ ಮಧ್ಯಾಹ್ನ ಪಹಲ್ಗಾಮ್‌ನ ಜನಪ್ರಿಯ ಬೈಸರನ್ ಹುಲ್ಲುಗಾವಲಿನಲ್ಲಿ ಪ್ರವಾಸಿಗರ ಮೇಲೆ ಗುಂಡು ಹಾರಿಸಿದ್ದಾರೆ. ಇದು ದೂರದ ಪರ್ವತ ಪ್ರದೇಶದಲ್ಲಿ ಭೀತಿಯನ್ನು ಉಂಟುಮಾಡಿದೆ.
ಎಲ್‌ಇಟಿಯ ಉನ್ನತ ಕಮಾಂಡರ್ ಸೈಫುಲ್ಲಾ ಕಸೂರಿ ಅಲಿಯಾಸ್ ಖಾಲಿದ್ ಮತ್ತು ಪಿಒಕೆ ಮೂಲದ ಇಬ್ಬರು ಕಾರ್ಯಕರ್ತರನ್ನು ಈ ಹತ್ಯಾಕಾಂಡದ ಮಾಸ್ಟರ್ ಮೈಂಡ್ ಎಂದು ಗುಪ್ತಚರ ಸಂಸ್ಥೆಗಳು ಗುರುತಿಸಿವೆ.
ಈ ದಾಳಿಯು ರಾಷ್ಟ್ರವ್ಯಾಪಿ ಆಕ್ರೋಶಕ್ಕೆ ಕಾರಣವಾಯಿತು. ಪ್ರಧಾನಿ ನರೇಂದ್ರ ಮೋದಿ ಅವರು ಸೌದಿ ಅರೇಬಿಯಾಕ್ಕೆ ತಮ್ಮ ರಾಜತಾಂತ್ರಿಕ ಭೇಟಿಯನ್ನು ಮೊಟಕುಗೊಳಿಸುವಂತೆ ಮಾಡಿದೆ.