SUDDIKSHANA KANNADA NEWS/ DAVANAGERE/ DATE:17-12-2023
ದಾವಣಗೆರೆ: ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರವೆಸಗಿದ ಮಲತಂದೆಗೆ 20 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಹಾಗೂ 22 ಸಾವಿರ ರೂಪಾಯಿ ದಂಡ ವಿಧಿಸಿ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತೀರ್ಪು ನೀಡಿದೆ.
ಮಂಜುನಾಥ್ ಶಿಕ್ಷೆಗೊಳಪಟ್ಟ ಅಪರಾಧಿ. ಬಾಲಕಿ ತಾಯಿಯು ಮಹಿಳಾ ನಗರ ಪೊಲೀಸ್ ಠಾಣೆಗೆ 2020ರ ಮಾರ್ಚ್ 14ರಂದು ಹಾಜರಾಗಿ ತನ್ನ ಗಂಡ ತೀರಿಹೋದ ಮೇಲೆ ಆರೋಪಿ ಮಂಜುನಾಥನನ್ನು ಪ್ರೀತಿಸಿ ಮದುವೆಯಾಗಿದ್ದೆ. ತಮ್ಮ ಮೊದಲನೇ ಗಂಡನ ಮಗಳು ಅಪ್ರಾಪ್ತ ವಯಸ್ಸಿನ ಮಗಳು ಕಾಣೆಯಾಗಿದ್ದು ಪತ್ತೆ ಮಾಡಿಕೊಡಿ ಅಂತ ದೂರು ದೂರು ನೀಡಿದ್ದರು.

ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು, ಬಾಲಕಿಯನ್ನು ಪತ್ತೆ ಮಾಡಲಾಗಿ ಮಲತಂದೆಯಾದ ಆರೋಪಿ ಮಂಜುನಾಥನು ಸಂತ್ರಸ್ಥೆಯಾದ ಅಪ್ರಾಪ್ತ ವಯಸ್ಸಿನ ಬಾಲಕಿಗೆ ಪ್ರೀತಿಸುವುದಾಗಿ ಪುಸಲಾಯಿಸಿ, ತಾಳಿ ಕಟ್ಟಿ ಮಂಗಳೂರಿನಲ್ಲಿ ಬಾಡಿಗೆ ಮನೆ ಮಾಡಿಕೊಂಡಿದ್ದ. ಸಂತ್ರಸ್ಥೆ ಅಪ್ರಾಪ್ತೆ ಅಂತ ಗೊತ್ತಿದ್ದರೂ ಮೇಲಿಂದ ಮೇಲೆ ಅತ್ಯಾಚಾರವೆಸಗಿದ್ದರಿಂದ ಗರ್ಭಿಣಿಯಾಗಿ ಗಂಡು ಮಗುವಿಗೆ ತಾಯಿಯಾಗಿದ್ದು ವಿಚಾರಣೆ ವೇಳೆ ತಿಳಿದು ಬಂದಿತ್ತು.
ಈ ಪ್ರಕರಣದಲ್ಲಿ ತನಿಖಾಧಿಕಾರಿಗಳಾದ ವೈ. ಎಸ್. ಶಿಲ್ಪಾ ಅವರು, ಬಾಲ್ಯ ವಿವಾಹ ನಿಷೇಧ ಕಾಯ್ದೆ, ಪೋಕ್ಸೋ ಆಕ್ಟ್ ಅಡಿ ಭಾಗಶಃ ತನಿಖೆ ನಡೆಸಿ ದಾವಣಗೆರೆ ನಗರ ಉಪವಿಭಾಗದ ಪೊಲೀಸ್ ಉಪಾಧೀಕ್ಷಕ ನಾಗೇಶ್ ಐತಾಳ್ ಅವರಿಗೆ ವರ್ಗಾವಣೆ ಮಾಡಿದ್ದರು. ಆ ಬಳಿಕ ತನಿಖೆ ಪೂರೈಸಿ ದೋಷಾರೋಪಣಾ ಪಟ್ಟಿಯನ್ನು ತಯಾರಿಸಿ ನ್ಯಾಯಾಲಯಕ್ಕೆ ಸಲ್ಲಿಸಲಾಗಿತ್ತು.
ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಎಫ್.ಟಿ.ಎಸ್.ಸಿ-೧ ದಾವಣಗೆರೆ ನ್ಯಾಯಾಲಯದಲ್ಲಿ ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಶ್ರೀಪಾದ್ ಎನ್. ಅವರು ಆರೋಪಿ ಮಂಜುನಾಥ ಅಲಿಯಾಸ್ ಮಂಜು ಮೇಲಿನ ಆರೋಪ ಸಾಬೀತಾದ ಕಾರಣ ಆರೋಪಿತನಿಗೆ 20 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಹಾಗೂ 22,000/- ರೂ ದಂಡ ವಿಧಿಸಿ ತೀರ್ಪು ನೀಡಿದರು.
ಆರೋಪಿ, ಸಂತ್ರಸ್ಥೆಗೆ ಜನಿಸಿದ ಮಗುವಿಗೆ ಮತ್ತು ಸಂತ್ರಸ್ಥೆಗೆ ಸರ್ಕಾರದಿಂದ 5 ಲಕ್ಷ ರೂ ಪರಿಹಾರ, ಆರೋಪಿಯ ದಂಡದಲ್ಲಿ 20 ಸಾವಿರ ರೂ. ಮಗುವಿಗೆ ಹಾಗೂ 2 ಸಾವಿರ ರೂ ಸರ್ಕಾರಕ್ಕೆ ನೀಡಬೇಕೆಂದು ತೀರ್ಪು ನೀಡಿದ್ದಾರೆ. ಈ ಪ್ರಕರಣದಲ್ಲಿ ಸರ್ಕಾರಿ ವಕೀಲ ಜಯ್ಯಪ್ಪ ಅವರು ವಾದ ಮಂಡಿಸಿದ್ದರು.
ಈ ಪ್ರಕರಣದಲ್ಲಿ ತನಿಖೆ ನಡೆಸಿ ಆರೋಪಿ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ ಪೊಲೀಸ್ ಅಧಿಕಾರಿ, ಸಿಬ್ಬಂದಿ ಹಾಗೂ ಸಂತ್ರಸ್ತೆ ಪರವಾಗಿ ವಾದ ಮಂಡಿಸಿದ ಸರ್ಕಾರಿ ವಕೀಲ ಜಯ್ಯಪ್ಪ ಅವರನ್ನು ಪೊಲೀಸ್ ಅಧೀಕ್ಷಕಿ ಉಮಾ ಪ್ರಶಾಂತ್ ಹಾಗೂ ಹೆಚ್ಚುವರಿ ಪೊಲೀಸ್ ಅಧೀಕ್ಷಕ ವಿಜಯ ಕುಮಾರ ಎಂ. ಸಂತೋಷ ಅವರು ಅಭಿನಂದಿಸಿದ್ದಾರೆ.