SUDDIKSHANA KANNADA NEWS/ DAVANAGERE/ DATE: 31-01-2024
ದಾವಣಗೆರೆ: ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ ಹಾಗೂ 25 ಸಾವಿರ ರೂಪಾಯಿ ದಂಡ ವಿಧಿಸಿ ದಾವಣಗೆರೆ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ಎಫ್.ಟಿ.ಎಸ್.ಸಿ- 1 ನ್ಯಾಯಾಲಯವು ತೀರ್ಪು ನೀಡಿದೆ.
ದಾವಣಗೆರೆ ಜಿಲ್ಲೆಯ ಹರಿಹರ ಟೌನ್ ವಾಸಿಯಾದ ಪಿರ್ಯಾದಿಯವರು 2020ರ ಸೆಪ್ಚಂಬರ್ 14ರಂದು ಹರಿಹರ ಪೊಲೀಸ್ ಠಾಣೆಗೆ ಹಾಜರಾಗಿ ತನ್ನ ಅಪ್ರಾಪ್ತ ವಯಸ್ಸಿನ ಎರಡನೆ ಮಗಳನ್ನು ಅಂದೇ ತನ್ನ ಸಂಬಂಧಿ ಮನೆಗೆ ಹೋಗಿದ್ದಳು. ಆಗ ಮಕ್ಸೂದ್ (28) ಎಂಬಾತನು ತನ್ನ ಮಗಳಿಗೆ ಚಾಕಲೇಟ್ ಆಸೆ ತೋರಿಸಿ ಮನೆಗೆ ಕರೆದುಕೊಂಡು ಹೋಗಿ ಕದ ಹಾಕಿಕೊಂಡು ತನ್ನ ಅಪ್ರಾಪ್ತ ವಯಸ್ಸಿನ ಮಗಳನ್ನು ಅತ್ಯಾಚಾರ ಮಾಡಿದ್ದಾನೆ. ಈತನ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಿ ಎಂದು ದೂರು ನೀಡಿದ್ದರು.
ದೂರು ದಾಖಲಿಸಿಕೊಂಡ ಹರಿಹರ ನಗರ ಪೊಲೀಸರು, ಪೊಕ್ಸೋ ಆಕ್ಟ್-2012ರ ರೀತ್ಯಾ ಪ್ರಕರಣ ದಾಖಲಿಸಿದ್ದರು. ಈ ಹರಿಹರ ವೃತ್ತದ ಸಿಪಿಐ ಎಂ. ಶಿವಪ್ರಸಾದ್ ಅವರು ತನಿಖೆ ಕೈಗೊಂಡು ಆರೋಪಿ ವಿರುದ್ದ ನ್ಯಾಯಾಲಯಕ್ಕೆ ದೋಷರೋಪಣಾ ಪಟ್ಟಿ ಸಲ್ಲಿಸಿದ್ದರು.
ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ಎಫ್.ಟಿ.ಎಸ್.ಸಿ-1 ನ್ಯಾಯಾಲಯ, ದಾವಣಗೆರೆ ನ್ಯಾಯಾಲಯದಲ್ಲಿ ನ್ಯಾಯಾಧೀಶರಾದ ಎನ್. ಶ್ರೀಪಾದ್ ಅವರು ಆರೋಪಿ ಮಕ್ಸೂದ್ ಅಹ್ಮದ್ ಈತನ ಮೇಲೆ ಆರೋಪ ಸಾಬೀತಾಗಿದ್ದರಿಂದ ಅಪರಾಧಿಗೆ 20 ವರ್ಷ ಶಿಕ್ಷೆ ಹಾಗೂ 25,000 ರೂಪಾಯಿ ದಂಡ ವಿಧಿಸಿ ತೀರ್ಪು ನೀಡಿದರಲ್ಲದೇ, ಸಂತ್ರಸ್ಥೆಗೆ ಸರ್ಕಾರದಿಂದ 6 ಲಕ್ಷ ರೂ ಪರಿಹಾರ ನೀಡುವಂತೆ ತೀರ್ಪು ನೀಡಿದ್ದಾರೆ.
ಈ ಪ್ರಕರಣದಲ್ಲಿ ಪಿರ್ಯಾದಿಯವರ ಪರವಾಗಿ ಸರ್ಕಾರಿ ವಕೀಲರಾದ ಸುನಂದಾ ಮಡಿವಾಳರ್ ಅವರು ನ್ಯಾಯ ಮಂಡನೆ ಮಾಡಿದ್ದರು. ಈ ಪ್ರಕರಣದ ತನಿಖೆ ಕೈಗೊಂಡು ಆರೋಪಿ ವಿರುದ್ಧ ಘನ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿಯನ್ನು ಸಲ್ಲಿಸಿದ ತನಿಖಾಧಿಕಾರಿ ಶಿವಪ್ರಸಾದ್ ಹಾಗೂ ಪಿರ್ಯಾದಿದಾರರ ಪರವಾಗಿ ನ್ಯಾಯ ಮಂಡನೆ ಮಾಡಿದ ಸರ್ಕಾರಿ ವಕೀಲರಾದ ಸುನಂದಾ ಮಡಿವಾಳರ್ ಅವರನ್ನು ಪೊಲೀಸ್ ಅಧೀಕ್ಷಕಿ ಉಮಾ ಪ್ರಶಾಂತ್, ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ವಿಜಯಕುಮಾರ ಎಂ. ಸಂತೋಷ ಮತ್ತು ಮಂಜುನಾಥ ಜಿ. ಅವರು ಶ್ಲಾಘಿಸಿದ್ದಾರೆ.