SUDDIKSHANA KANNADA NEWS/ DAVANAGERE/ DATE:24-06-2024
ದಾವಣಗೆರೆ: ಜಗಳೂರು ತಾಲ್ಲೂಕು ಲಕ್ಕಂಪುರ ಗ್ರಾಮದ ಜಮೀನಿನಲ್ಲಿ ಗಾಂಜಾ ಗಿಡಗಳನ್ನು ಬೆಳೆದಿದ್ದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಅಪರಾಧಿಗೆ ಒಂದು ವರ್ಷ ಜೈಲು ಶಿಕ್ಷೆ ಹಾಗೂ ರೂ. 25 ಸಾವಿರ ದಂಡ ವಿಧಿಸಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ತೀರ್ಪು ನೀಡಿದೆ.
ಈರಪ್ಪ ಎಂಬುವರಿಗೆ ಸೇರಿದ ಸರ್ವೆ ನಂ 25/*ರ ಜಮೀನಿನ ಮೇಲೆ ಉಪ ಆಯುಕ್ತರ ನಿರ್ದೇಶನದ ಮೇರೆಗೆ ಅಬಕಾರಿ ಉಪಅಧೀಕ್ಷಕರ ಮಾರ್ಗದರ್ಶನದಲ್ಲಿ 2021ರ ಆಗಸ್ಟ್ 26ರಂದು ದಾಳಿ ಮಾಡಲಾಗಿ ಈ ಜಮೀನನಲ್ಲಿ ಅಕ್ರಮವಾಗಿ 3,480 ಕೆ.ಜಿ ಗಾಂಜಾ ಗಿಡಗಳನ್ನು ಬೆಳೆದಿರುವುದು ಕಂಡು ಬಂದಿತ್ತು. ಗಾಂಜಾ ಸಮೇತ ಜಮೀನಿನ ಮಾಲೀಕರನ್ನು ಬಂಧಿಸಿ ಪ್ರಕರಣ ದಾಖಲಿಸಲಾಗಿತ್ತು.
ಪ್ರಕರಣ ತನಿಖೆಯನ್ನು ಅಬಕಾರಿ ಉಪ ನಿರೀಕ್ಷಕರಾದ ಎನ್. ಸಾವಿತ್ರಿ ಅವರು ನಡೆಸಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಸುಧೀರ್ಘ ವಿಚಾರಣೆ ನಡೆಸಿದ ಬಳಿಕ ನ್ಯಾಯಾಧೀಶರು ಆರೋಪಿಗೆ ಒಂದು ವರ್ಷ ಶಿಕ್ಷೆ ಮತ್ತು ರೂ.25,000 ದಂಡ ವಿಧಿಸಿದ್ದಾರೆ.
ಈ ದಾಳಿ ವೇಳೆ ಅಬಕಾರಿ ನಿರೀಕ್ಷಕರಾದ ಶೀಲಾ.ಜೆ.ಕೆ, ಹರಿಹರ ವಲಯ ಮತ್ತು ಸಿಬ್ಬಂದಿಗಳಾದ ಅರವಿಂದ ಸಿ.ಜಿ, ಮಂಜುನಾಥ ಹಿರೇಮಠ, ಅಬಕಾರಿ ಹಿರಿಯ ಪೇದೆಯವರು, ಸಹಾಯಕ ನಿರ್ದೇಶಕರಾದ ಬಿ.ಮಹೇಶ್ವರಪ್ಪ, ಜಗಳೂರು ಸಮಾಜ ಕಲ್ಯಾಣ ಇಲಾಖೆಯ ಶ್ರೀನಿವಾಸ.ಕೆ.ಎಸ್ ಇತರರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.