SUDDIKSHANA NEWS
BANGALORE
ಬೆಂಗಳೂರು: ಬಿಜೆಪಿಯಲ್ಲಿ ಲಿಂಗಾಯತ ಸಮುದಾಯಕ್ಕೆ ಹೆಚ್ಚಿನ ಆದ್ಯತೆ, ಪ್ರಾಮುಖ್ಯತೆ ಬೇಡ ಎಂಬ ಬಿಜೆಪಿ (BJP) ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ. ಟಿ. ರವಿ (C. T. RAVI) ವಿರುದ್ಧ ಭಾರೀ ವಿರೋಧ ವ್ಯಕ್ತವಾಗುತ್ತಿದೆ. ಮಾಜಿ ಸಿಎಂ ಬಿ. ಎಸ್. ಯಡಿಯೂರಪ್ಪರ ಪುತ್ರ ವಿಜಯೇಂದ್ರ ಅವರಿಗೆ ಟಿಕೆಟ್ (TICKET) ನೀಡುವುದು ಕಿಚನ್ ನಲ್ಲಿ ಅಲ್ಲ. ಪಕ್ಷದ ಸಂಸದೀಯ ಮಂಡಳಿ ಎಂದಿದ್ದರು. ಮಾತ್ರವಲ್ಲ, ಸಿ. ಟಿ. ರವಿ ಈ ರೀತಿ ಮಾತನಾಡಿರುವುದು ಲಿಂಗಾಯತ ಸಮುದಾಯವನ್ನು ಕೆರಳಿಸಿದೆ.
ಚಿಕ್ಕಮಗಳೂರಿನಲ್ಲಿ ಸಿ. ಟಿ. ರವಿ (C. T. RAVI) ಗೆಲ್ಲಬೇಕಾದರೆ ಲಿಂಗಾಯತ ಸಮುದಾಯದ ಮತಗಳು ಬೇಕು. ಈ ಬಾರಿ ಕಾಂಗ್ರೆಸ್ ನಿಂದ ಸಿ. ಟಿ. ರವಿ ಪರಮಾಪ್ತ ತಮ್ಮಣ್ಣ ಅವರನ್ನು ಕಾಂಗ್ರೆಸ್ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಸಂಘ ಪರಿವಾರದ ಹಿನ್ನೆಲೆಯುಳ್ಳ ತಮ್ಮಣ್ಣರಿಗೆ ಕಾಂಗ್ರೆಸ್ ಟಿಕೆಟ್ ನೀಡಿದರೆ ರವಿ ಸೋಲುವುದು ಖಚಿತ ಎಂದು ಸಮೀಕ್ಷೆಗಳು ಹೇಳುತ್ತಿವೆ. ಹಾಗಾಗಿ, ಸಿ. ಟಿ. ರವಿಗೆ ತಮ್ಮಣ್ಣ ಕೈ ಕೊಟ್ಟು ಹೋಗಿದ್ದರಿಂದ ಒಳಗೊಳಗೆ ಕುದಿಯುತ್ತಿದ್ದರು. ಹಾಗಾಗಿಯೇ ಯಡಿಯೂರಪ್ಪರ ವಿರುದ್ಧ ಮಾತನಾಡಿದ್ದಾರೆ ಎನ್ನಲಾಗಿದೆ.
ಸಿ. ಟಿ. ರವಿ ಬಂದದ್ದು ಸಂಘ ಪರಿವಾರದಿಂದಲೇ. ಬಿಜೆಪಿ ಕೈ ಹಿಡಿಯಿತು. ವಾಗ್ಬಾಣ, ಭಾಷಣ, ತಂತ್ರಗಾರಿಕೆಯಿಂದ ಗಮನ ಸೆಳೆದಿದ್ದ ಸಿ. ಟಿ. ರವಿ ಶಾಸಕರಾಗಿಯೂ ಆಯ್ಕೆಯಾಗಿದ್ದರು. ಮಂತ್ರಿಯಾಗಿದ್ದರು. ಆ ಬಳಿಕ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹುದ್ದೆ ಅರಸಿ ಬಂದಾಗ ಸಹಜವಾಗಿಯೇ ಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಟ್ಟರು. ಆದ್ರೆ, ಯಾವಾಗಲೂ ವಿವಾದಾತ್ಮಕ ಹೇಳಿಕೆ ನೀಡುವ ಸಿ. ಟಿ. ರವಿ ವಿರುದ್ಧ ಲಿಂಗಾಯತ ಸಮುದಾಯ ಮುನಿಸಿಕೊಂಡಿದ್ದು, ಸಹಜವಾಗಿಯೇ ಬಿಜೆಪಿಗೆ ಹಿನ್ನೆಡೆ ಉಂಟಾಗುತ್ತದೆ.
ಬಿಜೆಪಿ (BJP) ಬೆಂಬಲಿಸುತ್ತಾ ಬಂದಿರುವ ಲಿಂಗಾಯತ ಸಮುದಾಯ ಒಂದು ವೇಳೆ ಕೈ ಕೊಟ್ಟರೆ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಹಿನ್ನೆಡೆ ಉಂಟಾಗುವುದು ನಿಜ. ಯಡಿಯೂರಪ್ಪನವರು 150 ಸ್ಥಾನ ಗೆಲ್ಲುತ್ತೇವೆ ಎಂದು ಹೇಳಿಕೊಂಡು ಹೋಗುತ್ತಿದ್ದಾರೆ. ಬೆಂಗಳೂರು ಮೈಸೂರು ದಶಪಥ ಹೆದ್ದಾರಿ ಉದ್ಘಾಟನೆಯಾಗಿದೆ. ಆದ್ರೆ, ಟೋಲ್ ಸಂಗ್ರಹ ಭಾರೀ ವಿರೋಧಕ್ಕೆ ಕಾರಣವಾಗಿದೆ. ಹೆದ್ದಾರಿ ಕಾಮಗಾರಿ ಪೂರ್ತಿಯಾಗಿ ಮುಗಿದಿಲ್ಲ, ಹಾಗಾಗಿ, ದಿನ ಕಳೆದಂತೆ ಒಂದರ ಮೇಲೊಂದರಂತೆ ವಿವಾದ ಮೈಮೇಲೆ ಎಳೆದುಕೊಳ್ಳುತ್ತಿದೆ.
ಉರಿಗೌಡ, ನಂಜೇಗೌಡರ ದ್ವಾರ ಮಾಡಿದಾಗಲೂ ಒಕ್ಕಲಿಗ ಸಮುದಾಯ ಕೆರಳಿ ಕೆಂಡವಾಗಿದೆ. ಸಿ. ಟಿ. ರವಿ ಸೇರಿದಂತೆ ಬಿಜೆಪಿ ಮುಖಂಡರು ಇದನ್ನು ಸಮರ್ಥನೆ ಮಾಡಿಕೊಂಡರೂ, ವಿವಾದ ಚುನಾವಣೆ ಮುಗಿಯುವವರೆಗೆ ಇರುತ್ತದೆ. ಮಾಜಿ ಸಿಎಂ ಹೆಚ್. ಡಿ. ಕುಮಾರಸ್ವಾಮಿ ಅವರೂ ಸಹ ಸಿ. ಟಿ. ರವಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಲಿಂಗಾಯತ ಸಮುದಾಯದ ವಿರುದ್ದ ಮಾತನಾಡಿರುವ ಸಿ. ಟಿ. ರವಿ ಡ್ಯಾಮೇಜ್ ಕಂಟ್ರೋಲ್ಗೂ (DAMAGE CONTROL) ಮುಂದಾಗಿಲ್ಲ. ಅದೇ ರೀತಿಯಲ್ಲಿ ಯಡಿಯೂರಪ್ಪನವರ ಮೌನ ದೌರ್ಬಲ್ಯವಲ್ಲ ಎಂಬ ವಿಜಯೇಂದ್ರ ಹೇಳಿಕೆ ಚರ್ಚೆಗೆ ಗ್ರಾಸವಾಗಿದೆ.
ರಾಜ್ಯದಲ್ಲಿನ ಬೆಳವಣಿಗೆ ಸೂಕ್ಷ್ಮವಾಗಿ ಗಮನಿಸಿರುವ ಕೇಂದ್ರ ಬಿಜೆಪಿ ನಾಯಕರು ತುಟಿ ಬಿಚ್ಚುತ್ತಿಲ್ಲ. ಆಡಳಿತ ವಿರೋಧಿ ಅಲೆ, ಶೇಕಡಾ 40 ರಷ್ಟು ಕಮೀಷನ್, ಮಾಡಾಳ್ ವಿರೂಪಾಕ್ಷಪ್ಪರ (MADAL VIRUPAKSHAPPA) ಪುತ್ರ ಲೋಕಾಯುಕ್ತ ಬಲೆಗೆ ಬಿದ್ದಾಗ ಸಿಕ್ಕ ಕೋಟಿ ಕೋಟಿ ಹಣ ಬಿಜೆಪಿ ಮುಜುಗರ ತಂದಿದೆ. ಪ್ರಧಾನಿ ನರೇಂದ್ರ ಮೋದಿ (NARENDRA MODI) ಯಾವಾಗಲೂ ಭ್ರಷ್ಟಾಚಾರದ ವಿರುದ್ಧ ಮಾತನಾಡುತ್ತಿದ್ದರು. ಲಂಚ ಮುಕ್ತ ದೇಶ ಮಾಡುವ ಪಣ ತೊಟ್ಟಿದ್ದರು. 9 ವರ್ಷಗಳ ಕಾಲ ಅಧಿಕಾರ ನಡೆಸಿದ್ದರೂ ಯಾವುದೇ ಭ್ರಷ್ಟಾಚಾರ ಕಡಿಮೆಯಾಗಿಲ್ಲ. ಈ ಮಾತನ್ನು ಬಿಜೆಪಿ ಕಾರ್ಯಕರ್ತರೇ ಒಪ್ಪಿಕೊಳ್ಳುತ್ತಾರೆ.
ಸಿ. ಟಿ. ರವಿ ಈಗ ಏನೇ ಮಾತನಾಡಿದರೂ ವಿವಾದ ಅವರ ಸುತ್ತನೇ ಗಿರಕಿ ಹೊಡೆಯುತ್ತದೆ. ಬಿಜೆಪಿ ಮುಖಂಡರು ಸಿ. ಟಿ. ರವಿ ಆಡಿದ ಮಾತಿಗೆ ಸೊಪ್ಪು ಹಾಕುತ್ತಿಲ್ಲ. ಮಾಧ್ಯಮಗಳಲ್ಲಿ ಪ್ರಸಾರವಾಗುತ್ತದೆ. ನೇರವಾಗಿ ಹೇಳದಿದ್ದರೂ ಒಳಗೊಳಗೆ ಸಿ. ಟಿ. ರವಿ ವಿರುದ್ಧ ಬಿಜೆಪಿ (BJP) ನಾಯಕರೇ ಕುದಿಯತೊಡಗಿದ್ದಾರೆ. ಒಟ್ಟಾರೆ, ಈ ಬಾರಿಯ ಚುನಾವಣೆಯು ಕಾಂಗ್ರೆಸ್, ಜೆಡಿಎಸ್ ಹಾಗೂ ಬಿಜೆಪಿ ಪ್ರತಿಷ್ಠೆಯ ಕಣವಾಗಿದೆ. ಮೋದಿ ಮತ್ತು ಅಮಿತ್ ಶಾ ರಾಜ್ಯಕ್ಕೆ ಬಂದು ಹೋಗುತ್ತಲೇ ಇದ್ದಾರೆ. ಅಲೆ ಮಾತ್ರ ಬಿಜೆಪಿಗೆ ಬಂದಿಲ್ಲ. ಕಾಂಗ್ರೆಸ್ ಸಹ ಅಖಾಡಕ್ಕೆ ಸಜ್ಜಾಗಿದ್ದು. ಟಿಕೆಟ್ ಹಂಚಿಕೆ ವಿಚಾರ ಆಂತರಿಕ ಗುದ್ದಾಟಕ್ಕೂ ಕಾರಣವಾಗಿದೆ. ಲಿಂಗಾಯತ ಸಮುದಾಯ ಬಿಜೆಪಿಗೆ ಹೊಡೆತ ಕೊಟ್ಟರೆ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಸುಲಭವಾಗುತ್ತದೆ. ಇತ್ತ ಬಿಜೆಪಿ ನಾಯಕರೂ ಸಹ ಲಿಂಗಾಯತ ಸಮುದಾಯದ ಓಲೈಕೆಯಲ್ಲಿ ತೊಡಗಿದೆ.