ದಾವಣಗೆರೆ: ಮಾರ್ಚ್ 27 ಇಲ್ಲವೇ 28ಕ್ಕೆ 2023ರ ವಿಧಾನಸಭೆ ಚುನಾವಣೆ ಘೋಷಣೆಯಾಗುವ ಸಾಧ್ಯತೆ ಇದೆ. ಇನ್ನು ಉಳಿದಿರುವುದು ಕೇವಲ 45 ದಿನಗಳಷ್ಟೇ. ಎಲ್ಲರೂ ಹೊಸಪ್ರತಿನಿಧಿ ಆಯ್ಕೆ ಮಾಡುವ ದಿನ ಹತ್ತಿರ ಬಂದಿದೆ. ಸುಳ್ಳು ಹೇಳಿಕೊಂಡು ಬಿಜೆಪಿ ವಿಜಯಸಂಕಲ್ಪ ಯಾತ್ರೆ ಮಾಡ್ತಿದೆ. ಸ್ವಲ್ಪನೂ ಮಾನ, ಮರ್ಯಾದೆ ಬಿಜೆಪಿ ಮುಖಂಡರಿಗಿಲ್ಲ, ಲಜ್ಜೆಗೆಟ್ಟವರು. ಬೇರೆ ಯಾರೇ ಮುಖ್ಯಮಂತ್ರಿಯಾಗಿದ್ದರೂ ರಾಜೀನಾಮೆ ಕೊಡುತ್ತಿದ್ದರು. ಆದ್ರೆ, ಬಸವರಾಜ್ ಬೊಮ್ಮಾಯಿ ನೂರಕ್ಕೆ ನೂರು ಸುಳ್ಳು ಹೇಳುವ ಸಿಎಂ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.
ಚನ್ನಗಿರಿಯಲ್ಲಿ ಏರ್ಪಡಿಸಿದ್ದ ಪ್ರಜಾ ಧ್ವನಿ ಯಾತ್ರೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರದ ವಿರುದ್ಧ ಭ್ರಷ್ಟಾಚಾರ, ದುರಾಡಳಿತ, ಜನ ವಿರೋಧಿ ನೀತಿ ವಿರುದ್ಧ ಆರೋಪ ಮಾಡಿದಾಗ ಸುಳ್ಳು ಹೇಳ್ತೇವೆ ಅಂದ್ರು. ಬೊಮ್ಮಾಯಿ ಅಚಾನಕ್ ಆಗಿ ಸಿಎಂ ಆಗಿದ್ದೀಯಾ. ನೂರಕ್ಕೆ ನೂರು ಸುಳ್ಳು ಹೇಳಲು ಹೋಗಬೇಡ. ನೂರಕ್ಕೆ ನೂರು ಸುಳ್ಳು ಹೇಳುವ ಮನುಷ್ಯ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕರ್ನಾಟಕದ ಇತಿಹಾಸದಲ್ಲಿ ಗುತ್ತಿಗೆದಾರರ ಸಂಘದವರು ಕಮೀಷನ್ ಕೇಳುತ್ತಾರೆಂದು ಪ್ರಧಾನಿಗೆ ಪತ್ರ ಬರೆದರು. ಸಿಎಂ ಆಗಬೇಕಾದರೆ 2,500 ಕೋಟಿ ರೂಪಾಯಿ ನೀಡಬೇಕು. ಮಂತ್ರಿಯಾಗಬೇಕಾದರೆ 200 ಕೋಟಿ ರೂಪಾಯಿ ಕೊಡಬೇಕೆಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಆರೋಪ ಮಾಡಿದ್ದು, ಕೇಂದ್ರದ ಮಂತ್ರಿಯಾಗಿದ್ದವರು. ಸಬ್ ಇನ್ ಸ್ಪೆಕ್ಟರ್ ನೇಮಕಾತಿಯಲ್ಲಿ ಯಡಿಯೂರಪ್ಪರ ಪುತ್ರನ ಮೂಗಿನ ಮೇಲೆ ಆಗಿದೆ ಎಂಬ ಆರೋಪ ಕೇಳಿ ಬಂದಿತ್ತು. ಬೊಮ್ಮಾಯಿ, ಯಡಿಯೂರಪ್ಪರ ವಿರುದ್ಧ ಮಾತನಾಡಿದ್ದಾರೆ. 20 ಸಾವಿರ ಕೋಟಿ ರೂಪಾಯಿ ಯೋಜನೆಗೆ ಶೇ. 10ರಷ್ಟು ಲಂಚ ಪಡೆದಿದ್ದಾರೆ ಎಂದು ವಿಶ್ವನಾಥ್ ಹೇಳಿದ್ದರು. ಇದನ್ನೆಲ್ಲಾ ಆರೋಪ ಮಾಡಿದ್ದು ಬಿಜೆಪಿಯ ನಾಯಕರೇ. ಎಡಿಜಿಪಿ ಜೈಲಿಗೆ ಹೋಗಿದ್ದಾರೆ. ಬಸವರಾಜ್ ಬೊಮ್ಮಾಯಿಗೆ ಇದಕ್ಕಿಂತ ಸಾಕ್ಷ್ಯ ಬೇಕಾ. ಮಾನಗೆಟ್ಟ ಜನರು, ಮೂರನ್ನೂ ಬಿಟ್ಟವರು ಊರಿಗೆ ದೊಡ್ಡವರು ಎಂಬಂತೆ ಬಿಜೆಪಿ ವರ್ತಿಸುತ್ತಿದೆ ಎಂದು ಆರೋಪಿಸಿದರು.
ನೂರು ಬಾರಿ ಸುಳ್ಳು ಹೇಳಿ ಸತ್ಯ ಮಾಡಲು ಹೊರಟಿರುವ ಬಿಜೆಪಿ, ಆರ್ ಎಸ್ ಎಸ್, ಹಿಂದೂ ಮಹಾಸಭಾದವರು ಜರ್ಮನಿಯಲ್ಲಿದ್ದ ಹಿಟ್ಲರ್ ನ ಬಳಿ ತರಬೇತಿ ಪಡೆದವರು. ಸುಳ್ಳನ್ನೇ ಕರಗತ ಮಾಡಿಕೊಂಡಿದ್ದಾರೆ. ನಾವು
ಅಧಿಕಾರದಲ್ಲಿದ್ದಾಗ 7 ಕೆ ಜಿ ಅಕ್ಕಿಯನ್ನು ಉಚಿತವಾಗಿ ನೀಡಿದೆವು. ಆದ್ರೆ ಬಿಜೆಪಿಯವರು ಐದು ಕೆಜಿ ಕೊಡುತ್ತಿದ್ದಾರೆ. ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಹತ್ತು ಕೆಜಿ ಅಕ್ಕಿಯನ್ನು ಉಚಿತವಾಗಿ ನೀಡುತ್ತೇವೆ. ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ ಅನುಷ್ಠಾನಗೊಳಿಸುತ್ತೇವೆ ಎಂದು ಭರವಸೆ ನೀಡಿದರು.
ಪ್ರಧಾನಿ ನರೇಂದ್ರ ಮೋದಿ ಮೋದಿ ಅಚ್ಚೇ ದಿನ್ ಆಯೇಂಗೆ ಅಂದ್ರು. ಬಂತಾ ಒಳ್ಳೆಯ ದಿನ. ಮನಮೋಹನ್ ಸಿಂಗ್ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದಾಗ ಡೀಸೆಲ್ ಲೀ. 54 ರೂ, ಪೆಟ್ರೋಲ್ ಗೆ 70 ರೂಪಾಯಿ, ಗ್ಯಾಸ್ ಸಿಲಿಂಡರ್ 414 ರೂಪಾಯಿ ಇತ್ತು. ಇಂದು ಗ್ಯಾಸ್ ಸಿಲಿಂಡರ್ 1151 ರೂಪಾಯಿ ಆಗಿದೆ. ಜನರಿಗೆ ತೆರಿಗೆ ಹಾಕಿ ಕೇಂದ್ರ ಸರ್ಕಾರವು ಜನರ ತಲೆ ಬೋಳಿಸಿ, ರಕ್ತ ಕುಡಿಯುತ್ತಿದೆ. ಅಕ್ಕಿ, ಹಾಲು, ಮೊಸರು, ಪೆನ್ಸಿಲ್, ಪೆನ್, ನೋಟ್ ಬುಕ್, ಮಂಡಕ್ಕಿ ಸೇರಿದಂತೆ ಎಲ್ಲಾ ವಸ್ತುಗಳ ಮೇಲೆ ತೆರಿಗೆ ವಿಧಿಸಲಾಗುತ್ತಿದೆ. ನಮ್ಮ ಕಾಲದಲ್ಲಿ ಇರಲಿಲ್ಲ. ಶೇಕಡಾ 5 ರಿಂದ 15ರವರೆಗೆ ತೆರಿಗೆ ಹಾಕಿದ್ದಾರೆ. ಈ ದುಡ್ಡು ಕೊಡೋದು ಸಾಮಾನ್ಯ ಜನರು,ಬಡವರು ಎಂದರು.
ದಯಮಾಡಿ ಯಾರು ಜೆಡಿಎಸ್ ಗೆ ಮತ ಹಾಕಬೇಡಿ. ಅವರು ಗೆದ್ದ ಎತ್ತಿನ ಬಾಲ ಹಿಡಿಯುವವರು,ಅವಕಾಶವಾದಿಗಳು. ನಾವು ಸಿಎಂ ಮಾಡಿದ್ರೆ ಆ ಗಿರಾಕಿ ವೇಸ್ಟ್ ಅಂಡ್ ಹೊಟೇಲು ಸೇರಿದ್ದು. ಅದಕ್ಕೆ ಬಿಜೆಪಿ ಮತ್ತು ಜೆಡಿಎಸ್ ಗೆ ಮತ
ಹಾಕಬೇಡಿ. ಬಿಜೆಪಿಗೆ ಜನಾಶಿರ್ವಾದವಿಲ್ಲ. ಆಪರೇಷನ್ ಕಮಲ ಮೂಲಕ ಅಧಿಕಾರಕ್ಕೆ ಬಂದಿದ್ದಾರೆ. ಒಬ್ಬೊಬ್ಬರಿಗೆ 30-40 ಕೋಟಿ ಕೊಟ್ಟಿದ್ದಾರೆ. ಮೊನ್ನೆ ಮಾಡಾಳ್ ಮನೆಯಲ್ಲಿ 8 ಕೋಟಿ ಸಿಕ್ಕಿದೆ ಅಂದ್ರೆ, ಮಂತ್ರಿಗಳು ಎಷ್ಟು ಮಾಡಿದ್ದಾರೆಂದು
ಯೋಚಿಸಿ ಎಂದರು.
ವೇದಿಕೆಯಲ್ಲಿ ಮಾಜಿ ಶಾಸಕ ವಡ್ನಾಳ್ ರಾಜಣ್ಣ, ಮುಖಂಡರಾದ ಹೊದಿಗೆರೆ ರಮೇಶ್, ಶಿವಗಂಗಾ ಬಸವರಾಜ್, ಸಲೀಂ ಅಹ್ಮದ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹೆಚ್. ಬಿ. ಮಂಜಪ್ಪ, ಸಚಿನ್ ಮೆಘಾ ಸೇರಿದಂತೆ ಹಲವರು ಹಾಜರಿದ್ದರು.
ಸಿದ್ದುಗೆ ಟಗರು ಗಿಫ್ಟ್..!
ಚನ್ನಗಿರಿ ಪ್ರಜಾಧ್ವನಿ ಯಾತ್ರೆ ಸಮಾವೇಶಜದಲ್ಲಿ ತಾಲೂಕು ಕುರುಬ ಸಮುದಾಯದಿಂದ ಸಿದ್ದರಾಮಯ್ಯರಿಗೆ ಕಂಬಳಿ ಹೊದಿಸಿ ಟಗರನ್ನು ಅಭಿಮಾನಿಗಳು ಕೊಡುಗೆಯಾಗಿ ನೀಡಿದರು.