ದಾವಣಗೆರೆ: ಚನ್ನಗಿರಿ ಅಡಿಕೆ ನಾಡು ಅಂತಾನೇ ಪ್ರಸಿದ್ದಿ. ಇಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ಒಂದೂವರೆ ದಶಕದಿಂದ ರಾಜಕೀಯದ ಮೇಲಾಟ ನಡೆದೇ ಇದೆ. ಆದ್ರೆ, ಈ ಬಾರಿ ಚನ್ನಗಿರಿ ಕ್ಷೇತ್ರವು ರಾಜ್ಯ ಮಾತ್ರವಲ್ಲ ದೇಶವೇ ಇತ್ತ ತಿರುಗಿನೋಡುವಂತೆ ಮಾಡಿದೆ. ಇದಕ್ಕೆ ಪ್ರಮುಖ ಕಾರಣ ಬೆಂಗಳೂರಿನಲ್ಲಿ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪರ (MADAL VIRUPAKSHAPPA) ಪುತ್ರ ಪ್ರಶಾಂತ್ ಮಾಡಾಳ್ ಸುಮಾರು ಎರಡು ಕೋಟಿ 20 ಲಕ್ಷ ರೂಪಾಯಿ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದಿದ್ದರು. ಜೊತೆಗೆ ಮನೆಯಲ್ಲಿ 8 ಕೋಟಿ ರೂಪಾಯಿಯಷ್ಟು ಪತ್ತೆಯಾಗಿತ್ತು. ಈ ಪ್ರಕರಣ ಬಿಜೆಪಿ ಹಾಗೂ ಕಾಂಗ್ರೆಸ್ ನಡುವಿನ ವಾಗ್ಬಾಣಕ್ಕೂ ಕಾರಣವಾಗಿದೆ.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಪ್ರಜಾಧ್ವನಿ ಯಾತ್ರೆ ಮಾರ್ಚ್ 10ಕ್ಕೆ ಅಡಿಕೆ ನಾಡು ಪ್ರವೇಶಿಸಲಿದೆ. ಕಾಂಗ್ರೆಸ್ ಗೆ ಬ್ರಹ್ಮಾಸ್ತ್ರವಾಗಿರುವ ಮಾಡಾಳ್ ವಿರೂಪಾಕ್ಷಪ್ಪರ ಪ್ರಕರಣ ಬಿಜೆಪಿಗೆ ದಿನ ಕಳೆದಂತೆ ಬಿಸಿತುಪ್ಪವಾಗಿ
ಪರಿಣಮಿಸಿದೆ. ನಾಳಿನ ಪ್ರಜಾಧ್ವನಿ ಯಾತ್ರೆಗೆ ಭರ್ಜರಿ ಸಿದ್ಧತೆ ಮಾಡಿಕೊಳ್ಳಲಾಗಿದೆ. ಸುಮಾರು 15 ಸಾವಿರಕ್ಕೂ ಹೆಚ್ಚು ಜನರು ಆಗಮಿಸುವ ಸಾಧ್ಯತೆ ಇದೆ. ಈ ಯಾತ್ರೆಯಲ್ಲಿ ಮಾತನಾಡುವ ಬಹುತೇಕ ನಾಯಕರು ಮಾಡಾಳ್ ವಿರೂಪಾಕ್ಷಪ್ಪರ
ಕುಟುಂಬದ ಮೇಲಿನ ಭ್ರಷ್ಟಾಚಾರ ಆರೋಪದ ಬಗ್ಗೆ ವಾಗ್ದಾಳಿ ನಡೆಸುವ ಸಾಧ್ಯತೆ ಹೆಚ್ಚಿದೆ.
ಬಿಜೆಪಿ ಭದ್ರಕೋಟೆಯಾಗಿದ್ದ ಚನ್ನಗಿರಿ ಕ್ಷೇತ್ರದಲ್ಲಿ ಪ್ರಮುಖ ಸಮುದಾಯದ ಎಂದರೆ ಸಾದು ಲಿಂಗಾಯತ. ಮಾಡಾಳ್ ವಿರೂಪಾಕ್ಷಪ್ಪ (MADAL VIRUPAKSHAPPA) ಈ ಸಮುದಾಯಕ್ಕೆ ಸೇರಿದ್ದು, ಇಲ್ಲಿ ಪೈಪೋಟಿ ಇದ್ದದ್ದು ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ. ಬಿಜೆಪಿಯಿಂದ ಯಾರಿಗೆ ಟಿಕೆಟ್ ಸಿಗುತ್ತದೆ ಎಂಬುದು ಇನ್ನು ಸ್ಪಷ್ಟವಾಗಿಲ್ಲ. ಕಾಂಗ್ರೆಸ್ ನಿಂದ ವಡ್ನಾಳ್ ರಾಜಣ್ಣ ಸ್ಪರ್ಧಿಸುವ ಸಾಧ್ಯತೆ ಹೆಚ್ಚಿದೆ. ಈಗಾಗಲೇ ಮಾಡಾಳ್ ವಿರೂಪಾಕ್ಷಪ್ಪರ ವಿರುದ್ದ ಬೆಂಕಿಯುಗಿಳಿರುವ ವಡ್ನಾಳ್ ರಾಜಣ್ಣ ಚನ್ನಗಿರಿ ಕ್ಷೇತ್ರ ಈಗ ಕುಖ್ಯಾತಿ ಹೊಂದಿದೆ. ಇದಕ್ಕೆ ಕಾರಣ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪರ ಭ್ರಷ್ಟಾಚಾರದಿಂದ. ಕೆಟ್ಟ ಹೆಸರು ತಂದಿರುವ ಕ್ಷೇತ್ರಕ್ಕೆ ಇಂಥವರು ಬೇಕಾ. ಜನರು ನಿರ್ಧಾರ ಮಾಡಲಿ ಎಂದು ಹೇಳಿದ್ದಾರೆ.
ಸಿದ್ದು ವಾಗ್ಬಾಣ:
ಪ್ರಜಾಧ್ವನಿ ಯಾತ್ರೆಯಲ್ಲಿ ಬಿಜೆಪಿ ವಿರುದ್ಧ ಯಾವಾಗಲೂ ಟೀಕಾಪ್ರಹಾರ ನಡೆಸುವ ಸಿದ್ದರಾಮಯ್ಯ ಅವರು, ಪ್ರಜಾಧ್ವನಿ ಯಾತ್ರೆಯಲ್ಲಿ (PRAJA DHWANI YATHRE) ಬಿಜೆಪಿ ಭ್ರಷ್ಟಾಚಾರದ ವಿರುದ್ಧ ವಾಗ್ದಾಳಿ ನಡೆಸುತ್ತಾರೆ. ಚನ್ನಗಿರಿ ಕ್ಷೇತ್ರದಲ್ಲಿ ಆರ್ಭಟಿಸಲಿರುವ ಸಿದ್ದರಾಮಯ್ಯ ಅವರು ಮಾಡಾಳ್ ವಿರೂಪಾಕ್ಷಪ್ಪರ ಭ್ರಷ್ಟಾಚಾರ ಆರೋಪದ ಬಗ್ಗೆ ಮಾತನಾಡಿಯೇ ಮಾತನಾಡುತ್ತಾರೆ. ಕಾಂಗ್ರೆಸ್ ಅಂತೂ ಇದನ್ನೇ ಪ್ರಬಲ ಅಸ್ತ್ರವಾಗಿಸಿಕೊಂಡಿದೆ. ಈ ಪ್ರಕರಣ ಬೆಳಕಿಗೆ ಬಂದ ನಂತರ ಕಾಂಗ್ರೆಸ್ ಹಿಂದಿಗಿಂತ ಈಗ ಹೆಚ್ಚು ಸಕ್ರಿಯವಾಗಿದೆ. ಮುಖಂಡರು ಬಹಿರಂಗವಾಗಿ ಹೊರಗೆ ಬಂದಿದ್ದು, ಪ್ರತಿಭಟನೆ ನಡೆಸಿದ್ದಾರೆ. ಶಾಸಕರ ಬಂಧನಕ್ಕೆ ಒತ್ತಾಯಿಸಿದ್ದಾರೆ. ಮಾತ್ರವಲ್ಲ, ವಿರೂಪಾಕ್ಷಪ್ಪ ಕಟ್ಟಿದ್ದ ಸಾಮ್ರಾಜ್ಯ ಕೋಟಿ ಕೋಟಿ ಹಣದಿಂದ ಕುಸಿಯುವಂತಾಗಿದೆ.
ಮಾಡಾಳ್ ವಿರೂಪಾಕ್ಷಪ್ಪ ಮೊದಲಿನಿಂದಲೂ ಬಿಜೆಪಿ ಏನಲ್ಲ. ಮೊದಲು ಕಾಂಗ್ರೆಸ್ ನಲ್ಲಿದ್ದ ವಿರೂಪಾಕ್ಷಪ್ಪ ಬಳಿಕ ಬಿಜೆಪಿ ಸೇರಿದರು. ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರ ಜೊತೆ ಗುರುತಿಸಿಕೊಂಡರು. ದಿನ ಕಳೆದಂತೆ
ಬಿಎಸ್ ವೈಗೆ ತುಂಬಾನೇ ಆಪ್ತರಾಗಿಬಿಟ್ಟಿದ್ದರು. ಯಡಿಯೂರಪ್ಪ ಕೆಜೆಪಿ ಪಕ್ಷ ಕಟ್ಟಿದಾಗ ಬಿಜೆಪಿಗೆ ಗುಡ್ ಬೈ ಹೇಳಿ ಯಡಿಯೂರಪ್ಪ ಹಿಂಬಾಲಿಸಿದ್ದರು. ಆ ಚುನಾವಣೆಯಲ್ಲಿ ಸೋಲು ಕಂಡಿದ್ದರು. 2018ರಲ್ಲಿ ಮತ್ತೆ ಯಡಿಯೂರಪ್ಪರ ಜೊತೆ ಬಿಜೆಪಿಗೆ ಬಂದ ಮಾಡಾಳ್ ವಿರೂಪಾಕ್ಷಪ್ಪ ಶಾಸಕರಾಗಿ ಆಯ್ಕೆಯಾದರು. ವಿರೂಪಾಕ್ಷಪ್ಪ ಅವರು ಕ್ಷೇತ್ರಕ್ಕೆ ಹೆಚ್ಚು ಅನುದಾನ ತಂದು ಕೆಲಸ ಮಾಡಲು ಯಡಿಯೂರಪ್ಪರ ಶ್ರೀರಕ್ಷೆಯೇ ಕಾರಣ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ.
ದುಡ್ಡು ನೋಡಿ ಜನರು ದಂಗು:
ಇನ್ನು ಮಾಡಾಳ್ ವಿರೂಪಾಕ್ಷಪ್ಪನ ಪುತ್ರ ಪ್ರಶಾಂತ್ ಮಾಡಾಳ್ ಕಚೇರಿಯಲ್ಲಿ ಕುಳಿತಿದ್ದಾಗ ಎದುರುಗಡೆ ಇದ್ದ ಕಂತೆ ಕಂತೆ ಹಣ ಕಂಡು ಕ್ಷೇತ್ರದ ಜನರು ಮಾತ್ರವಲ್ಲ, ಎಲ್ಲರೂ ದಂಗಾಗಿಹೋಗಿದ್ದರು. ಪ್ರಶಾಂತ್ ನಿವಾಸದಲ್ಲಿ ಕೋಟಿ ಕೋಟಿಗಟ್ಟಲೇ
ಹಣ ವಶಪಡಿಸಿಕೊಂಡ ಲೋಕಾಯುಕ್ತರು, ವಿಮಲ್ ಬ್ಯಾಗ್ ನಲ್ಲಿ ತುಂಬಿಕೊಂಡು ಹೋಗಿದ್ದು ಈಗಲೂ ಕಣ್ಣುಕಟ್ಟಿದಂತಿದೆ. ಜೊತಗೆ ಮಾಡಾಳ್ ಅಡಿಕೆ ಸಸಿ ತಳಿ ಸಿಗುತ್ತದೆ ಹಣವಿರುವ ಚಿತ್ರವನ್ನು ಹಾಕಿ ವೈರಲ್ ಮಾಡಲಾಗಿದೆ. ಚನ್ನಗಿರಿಯಲ್ಲಿ ಕಾಂಗ್ರೆಸ್ ಗೆ ಉತ್ತಮ ವಾತಾವರಣ ಇದೆ ಎಂಬುದು ಆ ಪಕ್ಷದ ನಾಯಕರ ವಾದ. ಬಿಜೆಪಿಯಲ್ಲಿ ಅನಭಿಕ್ಷಕ್ತ ಎಂಬಂತಿದ್ದ ಮಾಡಾಳ್ ವಿರೂಪಾಕ್ಷಪ್ಪ ತನ್ನ ಮನೆಯಲ್ಲಿ ಹೊರಗಿನವನು ಎಂಬ ಸ್ಥಿತಿ ಎದುರಾಗಿದೆ.
ಮಲ್ಲಿಕಾರ್ಜುನ್ ಭವಿಷ್ಯವೇನು..?
ಮಾಡಾಳ್ ವಿರೂಪಾಕ್ಷಪ್ಪರ ಪುತ್ರ ಮಲ್ಲಿಕಾರ್ಜುನ್ ಕ್ಷೇತ್ರಾದ್ಯಂತ ಓಡಾಟ ಮಾಡಿದ್ದರು. ಕಾರ್ಯಕರ್ತರು, ಮುಖಂಡರ ಪಡೆ ಕಟ್ಟಿಕೊಂಡು ಈ ಬಾರಿ ಟಿಕೆಟ್ ಪಡೆಯಲು ರಣತಂತ್ರ ರೂಪಿಸಿದ್ದರು. ಎಲ್ಲೆಡೆ ಸಂಚರಿಸಿ ಮನ ಗೆಲ್ಲುವ ಪ್ರಯತ್ನ ಮಾಡಿದ್ದ ಮಾಡಾಳ್ ಮಲ್ಲಿಕಾರ್ಜುನ್ ರ ಭವಿಷ್ಯವೇನು ಎಂಬ ಪ್ರಶ್ನೆ ಎದ್ದಿದೆ. ಬಿಜೆಪಿಯಿಂದ ಧನಂಜಯ್ ಸರ್ಜಿ, ಶಿವಕುಮಾರ್ ತೀವ್ರ ಪೈಪೋಟಿ ನಡೆಸಿದ್ದು, ಹೈಕಮಾಂಡ್ ಯಾವುದೇ ಕಾರಣಕ್ಕೂ ಮಾಡಾಳ್ ವಿರೂಪಾಕ್ಷಪ್ಪರಿಗೆ ಟಿಕೆಟ್ ನೀಡದಿರಲು ನಿರ್ಧರಿಸಿದೆ ಎನ್ನಲಾಗಿದೆ. ಭ್ರಷ್ಟಾಚಾರ ಆರೋಪ ಹೊತ್ತಿದವರಿಗೆ ಟಿಕೆಟ್ ನೀಡಿದರೆ ಪಕ್ಷಕ್ಕೆ ಭಾರೀ ಮುಜುಗರವಾಗಲಿದೆ. ಜೊತೆಗೆ ಕಾಂಗ್ರೆಸ್ ನಾವೇ ಅಸ್ತ್ರ ಕೊಟ್ಟಂತಾಗುತ್ತದೆ. ಪಕ್ಷೇತರರಾಗಿ ಕಣಕ್ಕಿಳಿಯುವ ಕುರಿತಂತೆ ಅಭಿಮಾನಿಗಳು, ಬಿಜೆಪಿಯ ಕೆಲ ಮುಖಂಡರು ಇಂಡಿಪೆಂಡೆಂಟ್ ಆಗಿ ಸ್ಪರ್ಧಿಸುವಂತೆ ಮನವಿ ಮಾಡುತ್ತಿದ್ದಾರೆ ಎಂದು ಆಪ್ತ ಮೂಲಗಳಿಂದ ತಿಳಿದು ಬಂದಿದೆ.
ಕಾಂಗ್ರೆಸ್ ಒಗ್ಗಟ್ಟು ಪ್ರದರ್ಶಿಸಬೇಕು:
ಕಾಂಗ್ರೆಸ್ (CONGRESS) ಒಗ್ಗಟ್ಟು ಪ್ರದರ್ಶಿಸಿದರೆ ಈ ಬಾರಿ ಗೆಲುವು ಕಷ್ಟವಾಗದು. ವಡ್ನಾಳ್ ರಾಜಣ್ಣ, ಹೊದಿಗೆರೆ ರಮೇಶ್, ಶಿವಗಂಗಾ ಬಸವರಾಜ್, ತೇಜಸ್ವಿ ಪಟೇಲ್ ಸೇರಿದಂತೆ ಹಲವರು ಆಕಾಂಕ್ಷಿಗಳಿದ್ದಾರೆ. ಒಟ್ಟಿನಲ್ಲಿ ಅಡಿಕೆ ನಾಡಿನ ರಾಜಕೀಯದ ದಿಕ್ಕು ಬದಿಸುವಂತೆ ಮಾಡಿದ್ದು ಹಣ ಪಡೆಯುವಾಗ ಶಾಸಕರ ಪುತ್ರ ಸಿಕ್ಕಿಬಿದ್ದಿದ್ದು. ಹಾಗಾಗಿ, ಕಾಂಗ್ರೆಸ್ ಮುಖಂಡರಂತೂ ಪ್ರಜಾಧ್ವನಿ ಯಾತ್ರೆಯ ವೇದಿಕೆಯಲ್ಲಿ ಅಬ್ಬರಿಸಿ ಬೊಬ್ಬಿರಿಯುವುದಂತೂ ಸತ್ಯ.