ದಾವಣಗೆರೆ: ಕಾಂಗ್ರೆಸ್ ಪಕ್ಷದಲ್ಲಿ ಆಂತರಿಕ ಪ್ರಜಾಪ್ರಭುತ್ವವೇ ಇಲ್ಲ. ಅಲ್ಪಸಂಖ್ಯಾತರಿಗೆ ಅನ್ಯಾಯ ಮಾಡಿರುವುದು ಎಸ್. ಎಸ್. ಮಲ್ಲಿಕಾರ್ಜುನ್ ಅವರೇ. ಯಾರೇ ವಿಧಾನಸಭೆ ಮತ್ತು ಲೋಕಸಭೆಗೆ ಟಿಕೆಟ್ ಕೇಳಿದರೆ ಮಟ್ಟ ಹಾಕುವ ಕೆಲಸ ಈ ಹಿಂದಿನಿಂದಲೂ ಮಾಡಿಕೊಂಡು ಬಂದಿದ್ದಾರೆ. ಬಿಜೆಪಿ ಬಗ್ಗೆ ಎಚ್ಚರಿಕೆಯಿಂದ ಮಾತನಾಡಬೇಕು ಎಂದು ದಾವಣಗೆರೆ ಜಿಲ್ಲಾ ಬಿಜೆಪಿ ಘಟಕದ ಮಾಜಿ ಅಧ್ಯಕ್ಷ ಯಶವಂತರಾವ್ ಜಾಧವ್ ಆಕ್ರೋಶ ವ್ಯಕ್ತಪಡಿಸಿದರು.
ನಾವು ಹೊಡೆದಾಡಿಕೊಂಡಿಲ್ಲ:
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಿಜೆಪಿ ಪಕ್ಷದಲ್ಲಿ ಆಂತರಿಕ ಪ್ರಜಾಪ್ರಭುತ್ವ ಇದೆ. ಸಾಮಾನ್ಯ ಕಾರ್ಯಕರ್ತನೂ ರಾಜ್ಯಮಟ್ಟದ ನಾಯಕರಿಗೆ ಪ್ರಶ್ನೆ ಮಾಡುವ ಹಕ್ಕು ಬಿಜೆಪಿಯು ಕಾರ್ಯಕರ್ತರಿಗೆ ನೀಡಿದೆ. ಕೆಲವು ವಿಚಾರ ಬಗ್ಗೆ ರಾಜ್ಯ ನಾಯಕರು ಬಂದಾಗ ನಮ್ಮ ವಿಚಾರ ವ್ಯಕ್ತಪಡಿಸಿದ್ದೇವೆ. ಅದನ್ನೇ ಮಲ್ಲಿಕಾರ್ಜುನ್ ಅವರು ಬಿಜೆಪಿಯವರು ಹೊಡೆದಾಡಿಕೊಂಡಿದ್ದಾರೆ ಎಂದಿದ್ದಾರೆ ಎಂದು ಹೇಳಿದರು.
ಕಾಂಗ್ರೆಸ್ ನಲ್ಲಿ ಆಂತರಿಕ ಪ್ರಜಾಪ್ರಭುತ್ವ ಇದೆಯಾ?
ಕಾಂಗ್ರೆಸ್ ನಲ್ಲಿ ಆಂತರಿಕ ಪ್ರಜಾಪ್ರಭುತ್ವ ಇದೆಯಾ? ಕಾಂಗ್ರೆಸ್ ನ ರಾಜ್ಯ ಮತ್ತು ರಾಷ್ಟ್ರ ನಾಯಕರು ನಿರ್ಧರಿಸಿ 2008ರಲ್ಲಿ ಸೈಯದ್ ಸೈಫುಲ್ಲಾ ಅವರಿಗೆ ಬಿ ಫಾರಂ ನೀಡಿದ್ದರು. ಹೆಲಿಕಾಪ್ಟರ್ ನಲ್ಲಿ ಬಿ ಫಾರಂ ಬಂದಿತ್ತು. ಆಗ ಬಿ ಫಾರಂ ತಿದ್ದಿ ಅಭ್ಯರ್ಥಿ ಇಲ್ಲದೇ ಹಾಗೆ ಮಾಡಿದ್ದೀರಾ. ಅಲ್ಪಸಂಖ್ಯಾತನಿಗೆ ಕೊಟ್ಟ ಬಿ ಫಾರಂ ತಿದ್ದಿ ಅನ್ಯಾಯ ಮಾಡಿದ್ದು ನೆನಪಿಲ್ಲವೇ ಎಂದು ಪ್ರಶ್ನಿಸಿದರು.
ಚಮನ್ ಸಾಬ್ ಮತ್ತು ಮಲ್ಲಿಕಾರ್ಜುನ್ ಗಲಾಟೆ ಮಾಡಿಕೊಂಡಿರಲಿಲ್ವಾ?
ಈಗ ನಿಮ್ಮ ಕುಟುಂಬ ಮತ್ತು ನಿಮಗೆ ಭಾರೀ ಬಹುಪರಾಕ್ ಹೇಳುತ್ತಿರುವ ಮಾಜಿ ಮೇಯರ್ ಕೆ. ಚಮನ್ ಸಾಬ್ ನಗರಸಭೆ ಟಿಕೆಟ್ ನೀಡಲಿಲ್ಲ ಎಂಬ ಕಾರಣಕ್ಕೆ ಎಸ್. ಎಸ್. ಮಲ್ಲಿಕಾರ್ಜುನ್ ಗಲಾಟೆ ಮಾಡಿಕೊಂಡಿದ್ದರು. ನೀವು ನಮ್ಮ ಬಗ್ಗೆ ಹೇಳುತ್ತೀರಾ. ಮಲ್ಲಿಕಾರ್ಜುನ್ ಅವರದ್ದು ಹಿಟ್ಲರ್ ಸಂಸ್ಕೃತಿ. ಪ್ರಶ್ನೆ ಮಾಡುವವರನ್ನು ತುಳಿಯುವ ಕೆಲಸ ಮಾಡಿದ್ದಾರೆ. ಅಬ್ದುಲ್ ಜಬ್ಬಾರ್ ನಿಂದ ಪಕ್ಷ ಹಾಳಾಗಿದೆ ಎನ್ನುತ್ತೀರಾ. ಆದರೆ ಅಬ್ದುಲ್ ಜಬ್ಬಾರ್ 2 ಬಾರಿ ಜಿಲ್ಲಾಧ್ಯಕ್ಷರಾಗಿದ್ದಾಗ ಶಾಮನೂರು ಶಿವಶಂಕರಪ್ಪರಿಗೆ ಟಿಕೆಟ್ ನೀಡಿ ಎಂದಿದ್ದೇ ಅವರು. ಹಿರಿಯರು, ವಯಸ್ಸಾಗಿದೆ ಶಾಮನೂರು ಶಿವಶಂಕರಪ್ಪರಿಗೆ ಟಿಕೆಟ್ ಅವಕಾಶ ಕೊಡಿ ಎಂದು ಹೇಳಿದ ಏಕೈಕ ವ್ಯಕ್ತಿ ಅಬ್ದುಲ್ ಜಬ್ಬಾರ್. ಇಂದು ಅವರ ವಿರುದ್ಧವೇ ಮಾತನಾಡುತ್ತಿರುವ ಮಲ್ಲಿಕಾರ್ಜುನ್ ಇದನ್ನು ಯಾಕೆ ನೆನಪು ಮಾಡಿಕೊಳ್ಳುತ್ತಿಲ್ಲ ಎಂದು ಕೇಳಿದರು.
ಬಿಜೆಪಿಯಲ್ಲಿ 8 ಆಕಾಂಕ್ಷಿಗಳು:
ಬಿಜೆಪಿಯಲ್ಲಿ ನಾನು, ರಾಜನಹಳ್ಳಿ ಶಿವಕುಮಾರ್, ಅಜಯ್ ಕುಮಾರ್, ಶ್ರೀನಿವಾಸ್ ದಾಸಕರಿಯಪ್ಪ, ಕೊಳೇನಹಳ್ಳಿ ಸತೀಶ್, ಜಯಮ್ಮ, ದೇವರಮನಿ ಶಿವಕುಮಾರ್ ಕೃಷ್ಣಮೂರ್ತಿ ಪವಾರ್ ಅವರು ಟಿಕೆಟ್ ಕೇಳಿದ್ದೇವೆ. ನಮ್ಮೊಳಗೆ ಭಿನ್ನಾಭಿಪ್ರಾಯವಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಟಿಕೆಟ್ ಕೇಳುವ ಹಕ್ಕು ಇದೆ. 2013ರಲ್ಲಿ ಟಿಕೆಟ್ ನನಗೆ ಕೊಡಲಿಲ್ಲ. ಕೊಟ್ಟಿದ್ದರೆ ಗೆದ್ದುಬಿಡುತ್ತಿದ್ದೆ. ಸೈಯದ್ ಸೈಫುಲ್ಲಾ ಅವರು ಎರಡನೇ ಸ್ಥಾನಕ್ಕೆ ಬಂದರು. ಬಿಜೆಪಿ ಮೂರನೇ ಸ್ಥಾನಕ್ಕೆ ಬಂತು. ಆಗ ಪಕ್ಷ ತೀರ್ಮಾನ ಮಾಡಿ ಕಾಂಗ್ರೆಸ್ ನಿಂದ ಬಂದಿದ್ದ ಲೋಕೇಶ್ ಗೆ ಟಿಕೆಟ್ ನೀಡಿತು. ಅವರ ಪರವಾಗಿ ವಾರ್ಡ್, ಪ್ರತಿ ಮನೆ, ಹಳ್ಳಿಹಳ್ಳಿಗಳಿಗೆ ಹೋಗಿ ಪ್ರಚಾರ ಮಾಡಿದ್ದೇನೆ. ಯಾರಿಗೆ ಟಿಕೆಟ್ ಕೊಟ್ಟರೂ ಪ್ರಾಮಾಣಿಕವಾಗಿ ಕೆಲಸ ಮಾಡಿಕೊಂಡು ಬಂದಿದ್ದೇವೆ. 2023ರಲ್ಲಿ ಅಜಯ್ ಕುಮಾರ್ ಅವರಿಗೆ ಟಿಕೆಟ್ ನೀಡಿತು ಪಕ್ಷ. ಆಗಲೂ ಅಭ್ಯರ್ಥಿ ಪರ ಕೆಲಸ ಮಾಡಿದ್ದೇನೆ. ಬೆನ್ನಿಗೆ ಚೂರಿಗೆ ಹಾಕುವ ಕೆಲಸ ಮಾಡಿಲ್ಲ. ನಮ್ಮ ಪಕ್ಷದ ಕಾರ್ಯಕರ್ತರು ಮತ್ತು ಮುಖಂಡರು ಮಾಡಲ್ಲ ಎಂದು ಯಶವಂತರಾವ್ ಜಾಧವ್ ಹೇಳಿದರು.
ಬೆನ್ನಿಗೆ ಚೂರಿ ಹಾಕುವ ಸಂಸ್ಕೃತಿ ಕಾಂಗ್ರೆಸ್ ನದ್ದು:
ಬೆನ್ನಿಗೆ ಚೂರಿ ಹಾಕುವ ಸಂಸ್ಕೃತಿ ಕಾಂಗ್ರೆಸ್ ನದ್ದು. ಚನ್ನಯ್ಯ ಒಡೆಯರ್ ರಿಂದ ಹಿಡಿದು ಇಲ್ಲಿಯವರೆಗೆ ಮಲ್ಲಿಕಾರ್ಜುನ್ ತನ್ನ ವಿರುದ್ಧ ನಿಂತವರನ್ನು ಮಟ್ಟ ಹಾಕಿದರು. ಬಿ. ವೀರಣ್ಣ ಟಿಕೆಟ್ ಕೇಳಿದ್ದಕ್ಕೆ ಅಟ್ರಾಸಿಟಿ ಕೇಸ್ ಹಾಕಿ ಮೂರು ತಿಂಗಳು ಊರು ಬಿಡಿಸಿದ್ದರು. ಈ ರೀತಿ ಹಿನ್ನೆಲೆ ಇರುವ ಮಲ್ಲಿಕಾರ್ಜುನ್ ಅವರು ಸಾಧಾರಣ ಮನುಷ್ಯನಲ್ಲ. ದಾವಣಗೆರೆ ಜನರು ಎಲ್ಲಾ ಆಟಗಳನ್ನು ನೋಡಿದ್ದಾರೆ ಎಂದು ಹೇಳಿದರು.
ಬಿಜೆಪಿ ಮತ್ತು ಕಾಂಗ್ರೆಸ್ ನಡುವಿನ ಚುನಾವಣೆ ಆದರೂ ಈಗ ಎಸ್. ಎಸ್. ಮಲ್ಲಿಕಾರ್ಜುನ್ ಕುಟುಂಬ ಮತ್ತು ಅಲ್ಪಸಂಖ್ಯಾತರ ನಡುವೆ ಟಿಕೆಟ್ ಗೆ ಹೋರಾಟ ನಡೆಯುತ್ತಿದೆ. ಯಾರೇ ಸ್ಪರ್ಧೆ ಮಾಡಿದರೂ ಕಟಿಬದ್ದರಾಗಿ ಎಂಟೂ ಆಕಾಂಕ್ಷಿಗಳು ಸನ್ನದ್ಧವಾಗಿವೆ. ಒಡಕಿಲ್ಲ. ಭಿನ್ನಾಭಿಪ್ರಾಯ ಇಲ್ಲ. ರಾಜ್ಯ ನಾಯಕರು ಬಂದಾಗ ವಿಷಯ ಹಂಚಿಕೊಂಡಿದ್ದೇನೆ. ಅದನ್ನೇ ದೊಡ್ಡದಾಗಿ ಬಿಂಬಿಸುವ ಅಗತ್ಯವಿಲ್ಲ ಎಂದು ಯಶವಂತರಾವ್ ಜಾಧವ್ ಹೇಳಿದರು.
ಗೋಷ್ಠಿಯಲ್ಲಿ ಮಹಾನಗರ ಪಾಲಿಕೆ ಮಾಜಿ ಸದಸ್ಯ ಶಿವನಗೌಡ ಟಿ. ಪಾಟೀಲ್, ಟಿಂಕರ್ ಮಂಜಣ್ಣ ಮತ್ತಿತರರು ಹಾಜರಿದ್ದರು.
- BJP vs Congress Davanagere
- Davanagere BJP Leaders
- Davanagere Election Update 2026
- DAVANAGERE NEWS
- Hitler Culture
- Karnataka Politics
- Minority Justice
- Shamanur Shivashankarappa
- SS Mallikarjun
- Syed Saifulla B Form Issue
- Yashwanth Rao Jadhav
- ಅಲ್ಪಸಂಖ್ಯಾತರ ಅನ್ಯಾಯ
- ಎಸ್. ಎಸ್. ಮಲ್ಲಿಕಾರ್ಜುನ್
- ಕರ್ನಾಟಕ ರಾಜಕಾರಣ
- ದಾವಣಗೆರೆ ರಾಜಕೀಯ
- ದಾವಣಗೆರೆ ಸುದ್ದಿ
- ಬಿಜೆಪಿ ಕಾಂಗ್ರೆಸ್ ವಾಗ್ದಾಳಿ
- ಬಿಜೆಪಿ ಮಾಧ್ಯಮ ಗೋಷ್ಠಿ
- ಯಶವಂತರಾವ್ ಜಾಧವ್
- ಶಾಮನೂರು ಶಿವಶಂಕರಪ್ಪ
- ಸೈಯದ್ ಸೈಫುಲ್ಲಾ ಬಿ ಫಾರಂ ವಿವಾದ
- ಹಿಟ್ಲರ್ ಸಂಸ್ಕೃತಿ





Leave a comment