Site icon Kannada News-suddikshana

ಶೀಘ್ರದಲ್ಲೇ ಖಾಸಗಿ ಬಸ್‌ ಪ್ರಯಾಣ ದರವೂ ಏರಿಕೆ?

ಉಡುಪಿ/ಬೆಂಗಳೂರು/ಹುಬ್ಬಳ್ಳಿ: ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್‌ಗಳ ಪ್ರಯಾಣ ದರ ಏರಿಕೆ ಮಾಡಲು ಸರಕಾರ ನಿರ್ಧರಿಸಿದ ಬೆನ್ನಲ್ಲೇ ಖಾಸಗಿ ಬಸ್‌ ಮಾಲಕರ ಸಂಘ ಕೂಡ ಖಾಸಗಿ ಬಸ್‌ ಪ್ರಯಾಣ ದರ ಏರಿಕೆಗೆ ಮುಂದಾಗಿವೆ.

ರಾಜ್ಯ ಸರಕಾರದ “ಶಕ್ತಿ’ ಯೋಜನೆಯಿಂದ ಖಾಸಗಿ ಬಸ್‌ ಮಾಲಕರು ಆರ್ಥಿಕ ಸಂಕಷ್ಟದಲ್ಲಿದ್ದಾರೆ. ಡೀಸೆಲ್‌ ದರವೂ ಏರಿಕೆಯಾಗಿದೆ. ಸರಕಾರ ಈಗ ಸಾರಿಗೆ ಸಂಸ್ಥೆ ಬಸ್‌ ಪ್ರಯಾಣ ದರ ಏರಿಸಲು ನಿರ್ಧರಿಸಿದೆ. ಹೀಗಾಗಿ ಖಾಸಗಿ ಬಸ್‌ ಪ್ರಯಾಣ ದರ ಏರಿಕೆ ಮಾಡುವುದು ಅನಿವಾರ್ಯ ಎನ್ನುವ ಅಭಿಪ್ರಾಯಕ್ಕೆ ಒಕ್ಕೂಟದ ಮುಖಂಡರು ಬಂದಿದ್ದಾರೆ.

ದಾವಣಗೆರೆ, ಚಿಕ್ಕಮಗಳೂರಿನಲ್ಲಿ ಶನಿವಾರ ಸಭೆ ನಡೆಸಿದ ಖಾಸಗಿ ಬಸ್‌ ಮಾಲಕರ ಸಂಘದ ಪ್ರಮುಖರು ಪ್ರಯಾಣ ದರ ಏರಿಕೆ ಕುರಿತು ಚರ್ಚೆ ನಡೆಸಿದರು. ಸರಕಾರ ಯಾವಾಗಿನಿಂದ ಎಷ್ಟು ದರ ಏರಿಕೆ ಮಾಡುತ್ತದೆಯೋ ಅಂದಿನಿಂದಲೇ ಖಾಸಗಿ ಬಸ್‌ಗಳಲ್ಲಿಯೂ ಪ್ರಯಾಣ ದರ ಏರಿಕೆ ಮಾಡಬೇಕು ಎಂಬ ಅಭಿಪ್ರಾಯ ಸಭೆಯಲ್ಲಿ ವ್ಯಕ್ತವಾಗಿದೆ. ಆದರೆ ಈ ಕುರಿತು ಅಧಿಕೃತ ನಿರ್ಧಾರ ಪ್ರಕಟಿಸಿಲ್ಲ. ತೆರಿಗೆ, ಡೀಸೆಲ್‌ ಬೆಲೆ ಏರಿಕೆ, ನೌಕರರ ವೇತನ ಹೆಚ್ಚಳ ಮತ್ತಿತರ ಕಾರಣಗಳನ್ನು ನೀಡಿ ಖಾಸಗಿ ಬಸ್‌ ಪ್ರಯಾಣ ದರವನ್ನು ಏರಿಸಲು ಚರ್ಚೆ ನಡೆಯುತ್ತಿದೆ.

ಕೆಎಸ್ಸಾರ್ಟಿಸಿ ಬಸ್‌ ಪ್ರಯಾಣ ದರ ಏರಿಕೆಯಾಗಿದೆ. ಕಾಯ್ದೆಯನುಸಾರ ಈ ನಿಯಮ ಖಾಸಗಿ ಬಸ್‌ಗಳಿಗೂ ಅನ್ವಯವಾಗಲಿದೆ. ಹೀಗಾಗಿ ಶೀಘ್ರವೇ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿ, ಬಸ್‌ ದರ ಏರಿಕೆ ಬಗ್ಗೆ ಚರ್ಚಿಸಲಿದ್ದೇವೆ ಎಂದು ರಾಜ್ಯ ಖಾಸಗಿ ಬಸ್‌ ಮಾಲಕರ ಸಂಘಗಳ ಒಕ್ಕೂಟದ ಅಧ್ಯಕ್ಷ ಕುಯಿಲಾಡಿ ಸುರೇಶ್‌ ನಾಯಕ್‌ ತಿಳಿಸಿದ್ದಾರೆ.

6 ವರ್ಷಗಳಿಂದ ಖಾಸಗಿ ಬಸ್‌ ಪ್ರಯಾಣ ದರ ಏರಿಸಲು ಸರಕಾರ ಅವಕಾಶ ನೀಡಿರಲಿಲ್ಲ. ಅನೇಕ ಸಮಸ್ಯೆಗಳ ನಡುವೆಯೂ ಬಸ್‌ ಮಾಲಕರು ಬಸ್‌ಗಳನ್ನು ಓಡಿಸುತ್ತಿದ್ದಾರೆ. ಈಗ ಸರಕಾರ ಕೆಎಸ್ಸಾರ್ಟಿಸಿ ಪ್ರಯಾಣ ದರ ಏರಿಸಿದ ನಿಯಮದಂತೆ ಖಾಸಗಿ ಬಸ್‌ ದರವೂ ಏರಿಕೆಯಾಗಲಿದೆ ಎಂದು ಅವರು ಹೇಳಿದರು.

ಉಡುಪಿ, ಮಂಗಳೂರು ನಗರ ವ್ಯಾಪ್ತಿಯಲ್ಲಿ ಸಂಚರಿಸುತ್ತಿರುವ ಸಿಟಿ ಬಸ್‌ ಹಾಗೂ ಕರಾವಳಿಯಲ್ಲಿ ಸಂಚರಿಸುತ್ತಿರುವ ಸರ್ವಿಸ್‌ ಬಸ್‌ ದರ ಏರಿಕೆಗೆ ಸಂಬಂಧಿಸಿಯೂ ಸಭೆಯಲ್ಲಿ ಚರ್ಚಿಸಿ ಸೂಕ್ತ ನಿರ್ಧಾರ ತೆಗೆದುಕೊಳ್ಳಲಿದ್ದೇವೆ ಎಂದು ಸುರೇಶ್‌ ನಾಯಕ್‌ ಹೇಳಿದರು. ಪ್ರಯಾಣ ದರ ಹೆಚ್ಚಳ ಕುರಿತು ರಾಜ್ಯ ಸಮಿತಿಯಿಂದ ಈ ಹಿಂದೆಯೇ ಸಾರಿಗೆ ಇಲಾಖೆ ಆಯುಕ್ತರಿಗೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಅದು ಇದುವರೆಗೂ ಕಾರ್ಯರೂಪಕ್ಕೆ ಬಂದಿಲ್ಲ ಎಂದು ಚಿಕ್ಕಮಗಳೂರು ಜಿಲ್ಲಾ ಖಾಸಗಿ ಬಸ್‌ ಮಾಲಕರ ಸಂಘದ ಬಾಲಕೃಷ್ಣ ಭಟ್‌ ತಿಳಿಸಿದರು.

 

Exit mobile version