Site icon Kannada News-suddikshana

ಶೇ.90ಕ್ಕೂ ಹೆಚ್ಚು ಜನರು ಪಕ್ಷೇತರ ನಿಲ್ಲಿ ಅಂತಿದ್ದಾರೆ, ಕೆಲವರು ಬೇಡ ಎನ್ನುತ್ತಿದ್ದಾರೆ: ಹಾಗಿದ್ರೆ ವಿನಯ್ ಕುಮಾರ್ ಮುಂದಿನ ನಡೆ ಏನು…?

SUDDIKSHANA KANNADA NEWS/ DAVANAGERE/ DATE:24-03-2024

ದಾವಣಗೆರೆ: ದಾವಣಗೆರೆ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ವಿನಯ್ ಕುಮಾರ್ ಅವರಿಗೆ ಟಿಕೆಟ್ ಸಿಕ್ಕಿಲ್ಲ. ಹಾಗೆಂದ ಮಾತ್ರಕ್ಕೆ ಸುಮ್ಮನೆ ಕುಳಿತಿಲ್ಲ. ಮತ್ತೆ ಹೊಸದೊಂದು ಅಭಿಯಾನ ಶುರು ಮಾಡಿದ್ದಾರೆ. ವಿನಯ ನಡಿಗೆ ಜನಸಾಮಾನ್ಯರ ಕಡೆಗೆ. ಇದಕ್ಕೆ ಉತ್ತಮ ಸ್ಪಂದನೆ ವ್ಯಕ್ತವಾಗಿದೆ.

ನಾನು ಪಾದಯಾತ್ರೆ ಶುರು ಮಾಡಿದಾಗ ಸೇರಿದ ಜನರಿಗಿಂತ ಈಗ ದುಪ್ಪಟ್ಟು, ಮೂರು ಪಟ್ಟು ಜನರು ಬರುತ್ತಿದ್ದಾರೆ. ಜನರು ತೋರುತ್ತಿರುವ ಪ್ರೀತಿ, ವಿಶ್ವಾಸಕ್ಕೆ ಚಿರಋಣಿಯಾಗಿದ್ದೇನೆ. ಪಾದಯಾತ್ರೆ ವೇಳೆ ಸಿಕ್ಕ ಅಭೂತಪೂರ್ವ ಯಶಸ್ಸು ಹುಮ್ಮಸ್ಸು ತಂದಿದೆ. ಜಗಳೂರು ತಾಲೂಕಿನ ಕರಿಕಟ್ಟೆಯಿಂದ ವಿನಯ ನಡಿಗೆ ಜನಸಾಮಾನ್ಯರ ಕಡೆಗೆ ಆರಂಭಿಸಿದ್ದೇನೆ. ಶನಿವಾರ 15 ಹಳ್ಳಿಗಳಿಗೆ ಭೇಟಿ ನೀಡಿದ್ದೇನೆ. ಜನರಿಗೆ ಧನ್ಯವಾದ ಅರ್ಪಿಸಿದ್ದೇನೆ. ತುಂಬಾನೇ ಪ್ರೀತಿ ಕೊಟ್ಟಿದ್ದಾರೆ ಎಂದು ವಿನಯ್ ಕುಮಾರ್ ತಿಳಿಸಿದರು.

ದಾವಣಗರೆ ಕ್ಷೇತ್ರದ ಭಾವಿ ಟಿಕೆಟ್ ಆಕಾಂಕ್ಷಿಯೂ ಆಗಿದ್ದೇನೆ. ಇನ್ನೂ ಕಾಲ ಮಿಂಚಿಲ್ಲ. ನೀವೆಲ್ಲಾ ಮನಸ್ಸು ಮಾಡಿದ್ರೆ ಸಾಧ್ಯವಾಗುತ್ತದೆ. ಅದು ಒತ್ತಟ್ಟಿಗಿರಲಿ. ಪಾದಯಾತ್ರೆ ವೇಳೆ ತೋರಿದ ಜನರಿಗೆ ಕೃತಜ್ಞತೆ ಸಲ್ಲಿಸುವ ಸಲುವಾಗಿ ಮತ್ತೆ ಬಂದಿದ್ದೇನೆ. ಜೊತೆಗೆ ಟಿಕೆಟ್ ಮಿಸ್ ಆಗಿದೆ. ನನ್ನ ಮುಂದಿನ ನಡೆ ಹೇಗಿರಬೇಕು? ಯಾವ ನಿರ್ಧಾರ ತೆಗೆದುಕೊಳ್ಳಬೇಕು. ಎಲ್ಲಾ ವಿಚಾರಗಳ ಕುರಿತಂತೆ ಮಾಹಿತಿ ಕಲೆ ಹಾಕುತ್ತಿದ್ದೇನೆ ಎಂದು ಹೇಳಿದರು.

ಪಕ್ಷೇತರ ಸ್ಪರ್ಧೆಗೆ ಒತ್ತಡ:

ಇನ್ನು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವಂತೆ ಶೇಕಡಾ 90ಕ್ಕಿಂತ ಹೆಚ್ಚು ಜನರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಮತ್ತೆ ಕೆಲವರು ಬೇಡ ಎನ್ನುತ್ತಿದ್ದಾರೆ. ವಿನಯ್ ಕುಮಾರ್ ಕಾಂಗ್ರೆಸ್ ಟಿಕೆಟ್ ತರಬೇಕೆಂದು ಲಕ್ಷಾಂತರ ಜನರು ಬಯಸಿದ್ದರು. ಆದ್ರೆ, ಅದು ಸಾಧ್ಯವಾಗಲಿಲ್ಲ. ಎಲ್ಲರ ಅಭಿಪ್ರಾಯವನ್ನೂ ಮುಕ್ತವಾಗಿ ಪಡೆಯುತ್ತೇನೆ. ಲೋಕಸಭೆ ಚುನಾವಣೆಗೆ ಸ್ಪರ್ಧಿಸಿದರೆ ಏನಾಗುತ್ತೆ? ನಿಲ್ಲದಿದ್ದರೆ ಹೇಗಾಗುತ್ತೆ? ಎಂಬ ವಿಚಾರದ ಕುರಿತಂತೆಯೂ ಸಮಾಲೋಚನೆ ನಡೆಸುತ್ತಿದ್ದೇನೆ ಎಂದು ಹೇಳಿದರು.

300ರಿಂದ 350 ಹಳ್ಳಿಗಳಿಗೆ ಇನ್ನು ಹನ್ನೆರಡರಿಂದ 13 ದಿನ ಹೋಗುತ್ತೇನೆ. ದಾವಣಗೆರೆ ಲೋಕಸಭೆ ಕ್ಷೇತ್ರಕ್ಕೆ ಬರುವ ಎಂಟು ವಿಧಾನಸಭಾ ಕ್ಷೇತ್ರಗಳಿಗೂ ಹೋಗುತ್ತೇನೆ. ಜಗಳೂರಿನಲ್ಲಿ ಭಾನುವಾರವೂ ನನ್ನ ನಡಿಗೆ ಮುಂದುವರಿಯುತ್ತದೆ. ಆ ನಂತರ ಚನ್ನಗಿರಿ, ಹೊನ್ನಾಳಿ, ಹರಿಹರ, ದಾವಣಗೆರೆ ಉತ್ತರ, ದಾವಣಗೆರೆ ದಕ್ಷಿಣ, ಮಾಯಕೊಂಡ ಕ್ಷೇತ್ರಗಳಿಗೆ ಹೋಗುತ್ತೇನೆ. ಅಭಿಪ್ರಾಯ ಸಂಗ್ರಹಿಸುತ್ತೇನೆ. 13 ದಿನಗಳ ಬಳಿಕ ಪತ್ರಿಕಾಗೋಷ್ಠಿ ಕರೆದು ನಿಮ್ಮೆಲ್ಲರ ಸಮ್ಮುಖದಲ್ಲಿ ನಿರ್ಧಾರ ಘೋಷಣೆ ಮಾಡುತ್ತೇನೆ ಎಂದು ತಿಳಿಸಿದರು.

ಜನಸ್ತೋಮ:

ಅಪಾರ ಸಂಖ್ಯೆಯಲ್ಲಿ ಬೆಂಬಲಿಗರು, ಹಿತೈಷಿಗಳು, ಕಾಂಗ್ರೆಸ್ ಕಾರ್ಯಕರ್ತರು ಬರುತ್ತಿದ್ದಾರೆ. ಸ್ವಯಂಪ್ರೇರಿತರಾಗಿ ಅವರವರ ವಾಹನಗಳಲ್ಲಿ ಬಂದಿದ್ದಾರೆ. ಪಾದಯಾತ್ರೆಗಿಂತ ಎರಡರಿಂದ ಮೂರು ಪಟ್ಟು ಜನರು ಸೇರುತ್ತಿದ್ದಾರೆ. ಇದು ಖುಷಿ ತಂದಿದೆ ಎಂದು ವಿನಯ್ ಕುಮಾರ್ ಹೇಳಿದರು.

ಪಕ್ಷೇತರ ನಿಲ್ಲುತ್ತೇನೋ ಇಲ್ಲವೋ ಅದು ಮುಖ್ಯವಲ್ಲ:

ನಾನು ಪಕ್ಷೇತರ ನಿಲ್ಲುತ್ತೇನೋ ಇಲ್ಲವೋ ಅದು ಮುಖ್ಯವಲ್ಲ. ನಾನು ನಿಮ್ಮ ಜೊತೆಗೆ ಇರುತ್ತೇನೆ. ನಿಮ್ಮ ಧ್ವನಿಯಾಗಿರುತ್ತೇನೆ. ನಿಮ್ಮ ಏನೇ ಕುಂದುಕೊರತೆ ಇದ್ದರೂ ದಯವಿಟ್ಟು ಯಾವುದೇ ಚಿಂತೆ ಮಾಡದೇ, ಹಿಂದೆ ಮುಂದೆ ನೋಡದ ಹಾಗೆ ನನ್ನ ಬಳಿ ಬನ್ನಿ, ಹಂಚಿಕೊಳ್ಳಿ. ನನ್ನ ಕೈಯಲ್ಲಾದಷ್ಟು ಸಹಾಯ ಮಾಡುತ್ತೇನೆ. ರಾಜಕಾರಣದಲ್ಲಿ ಮುಂದುವರಿಯುತ್ತೇನೆ ಎಂದು ಹೇಳಿದರು.

Exit mobile version