ನವದೆಹಲಿ: ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ವಿಚಾರ ಮತ್ತೆ ಜೋರಾಗಿದೆ. ದಾವಣಗೆರೆಯಲ್ಲಿ ಮಾತನಾಡಿದ ಡಿಸಿಎಂ ಡಿ. ಕೆ. ಶಿವಕುಮಾರ್ ಆಪ್ತ ಚನ್ನಗಿರಿ ಶಾಸಕ ಶಿವಗಂಗಾ ಬಸವರಾಜ್ ಹೈಕಮಾಂಡ್ ಡಿ. ಕೆ. ಶಿವಕುಮಾರ್ ಅವರನ್ನು ಆಹ್ವಾನಿಸಿರುವುದು ಒಳ್ಳೆಯ ಬೆಳವಣಿಗೆ ಎಂದು ಹೇಳಿದ್ದರು. ಈ ನಡುವೆ ನವದೆಹಲಿಯಲ್ಲಿ ವಿಪಕ್ಷ ನಾಯಕ ಹಾಗೂ ಕಾಂಗ್ರೆಸ್ ಅಧಿನಾಯಕ ರಾಹುಲ್ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಅವರನ್ನು ಭೇಟಿ ಮಾಡಿದ್ದಾರೆ.
ಭೇಟಿ ವೇಳೆ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ. ಸಿ. ವೇಣುಗೋಪಾಲ್ ಉಪಸ್ಥಿತಿ ಸಾಕಷ್ಟು ಕುತೂಹಲ ಕೆರಳಿಸಿದೆ. 2023ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಸಾಕಷ್ಟು ಶ್ರಮಿಸಿದ್ದೇನೆ. ಅಧಿಕಾರ ಹಂಚಿಕೆ ವಿಚಾರಕ್ಕೆ
ಸಂಬಂಧಿಸಿದಂತೆ ನೀವೇ ಕೊಟ್ಟ ಮಾತಿನಂತೆ ಸಿಎಂ ಗಾದಿ ನೀಡುವಂತೆ ರಾಹುಲ್ ಗಾಂಧಿ ಮತ್ತು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಮನವಿ ಮಾಡಿದ್ದಾರೆ ಎನ್ನಲಾಗಿದೆ. ಅಲ್ಲದೇ, ಕೆಪಿಸಿಸಿ ಅಧ್ಯಕ್ಷ ಸ್ಥಾನ ನಿಭಾಯಿಸಿದ್ದೇನೆ. ಪಕ್ಷ
ಸಂಘಟನೆ ಜೊತೆಗೆ ಕಷ್ಟಕಾಲದಲ್ಲಿ ನೀವು ನನ್ನ ಜೊತೆ ನಿಂತಿದ್ದೀರಾ. ನಾನು ಅದೇ ರೀತಿಯಲ್ಲಿ ನಡೆದುಕೊಂಡಿದ್ದೇನೆ. ಪಕ್ಷ ದ್ರೋಹ ಕೆಲಸ ಎಂದಿಗೂ ಮಾಡಿಲ್ಲ. ಪಕ್ಷ ನಿಷ್ಠೆ ಹೊಂದಿರುವ ನನಗೆ ಸಿಎಂ ಪಟ್ಟ ನೀಡುವಂತೆ ಮನವಿ ಮಾಡಿದ್ದಾರೆ
ಎಂದು ತಿಳಿದು ಬಂದಿದೆ.
ಮೈಸೂರಿಗೆ ಬಂದಾಗ ಡಿ. ಕೆ. ಶಿವಕುಮಾರ್ ಜೊತೆ ಪ್ರತ್ಯೇಕವಾಗಿ ಮಾತನಾಡಿದ್ದ ರಾಹುಲ್ ಗಾಂಧಿ ಅವರು ನವದೆಹಲಿಯಲ್ಲಿಯೂ ಡಿ. ಕೆ. ಶಿವಕುಮಾರ್ ಜೊತೆ ಚರ್ಚೆ ನಡೆಸಿದ್ದಾರೆ. ಮುಂಬರುವ ಐದು ರಾಜ್ಯಗಳ ಚುನಾವಣೆ, ಕರ್ನಾಟಕದಲ್ಲಿನ ಕಾಂಗ್ರೆಸ್ ಬೆಳವಣಿಗೆಗಳ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ. ಬಿಜೆಪಿ ಯಾವುದೇ ಕಾರಣಕ್ಕೂ ಗೆಲ್ಲಬಾರದು. ಇದಕ್ಕೆ ಕಾರ್ಯತಂತ್ರ ರೂಪಿಸಬೇಕು. ಸ್ಥಳೀಯ ಸಂಸ್ಥೆಗಳ ಚುನಾವಣೆ, ಉಪಚುನಾವಣೆ ಸೇರಿದಂತೆ ಯಾವುದೇ ಚುನಾವಣೆ ಎದುರಾದರೂ ಕಾಂಗ್ರೆಸ್ ಗೆಲ್ಲಬೇಕು. ಅಧಿಕಾರ ಹಂಚಿಕೆ ವಿಚಾರ ಸಂಬಂಧ ಪಕ್ಷದೊಳಗೆ ಗೊಂದಲ, ಗಲಾಟೆ, ಭಿನ್ನಾಭಿಪ್ರಾಯ ಹೆಚ್ಚಾಗಬಾರದು. ಇದನ್ನು ನಿಯಂತ್ರಿಸಬೇಕಿದೆ. ಈ ನಿಟ್ಟಿನಲ್ಲಿಯೂ ಆಲೋಚಿಸಿ. ಸಿದ್ದರಾಮಯ್ಯರ ಮನವೊಲಿಸಿ. ಬೆಂಬಲಿಗರ ವಿಶ್ವಾಸ ಸಂಪಾದಿಸಿ. ಶಾಸಕರ ಬಲಾಬಲ ಪಡೆಯಿರಿ. ನಿಮಗೆ ಪಕ್ಷ ಎಂದಿಗೂ ದ್ರೋಹ ಮಾಡದು ಎಂದು ರಾಹುಲ್ ಗಾಂಧಿ ಅವರು ಡಿ. ಕೆ. ಶಿವಕುಮಾರ್ ಅವರಿಗೆ ಭರವಸೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಇಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ ಅವರ ನೇತೃತ್ವದಲ್ಲಿ ಅಸ್ಸಾಂ ರಾಜ್ಯ ನಾಯಕತ್ವ ಕುರಿತಂತೆ ಚರ್ಚೆ ನಡೆಸಲಾಯಿತು, ವೀಕ್ಷಕರ ಸಭೆಯಲ್ಲಿ ಅಸ್ಸಾಂನಲ್ಲಿನ ಬೆಳವಣಿಗೆಗಳ ಕುರಿತಂತೆಯೂ ಮಾಹಿತಿ ಪಡೆದಿರುವ ನಾಯಕರು ಯಾವುದೇ ಸಮಸ್ಯೆ ಎದುರಾಗದಂತೆ ನೋಡಿಕೊಳ್ಳಿ ಎಂದು ಸಲಹೆ ನೀಡಿದ್ದಾರೆ.
ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಕೆಸಿ ವೇಣುಗೋಪಾಲ್, ಅಸ್ಸಾಂ ಉಸ್ತುವಾರಿ ಜಿತೇಂದ್ರ ಎಸ್ ಆಳ್ವಾರ್, ಭೂಪೇಶ್ ಬಾಘೇಲ್ ಮತ್ತು ಬಂಧು ಟಿರ್ಕಿ, ಅಸ್ಸಾಂ ಪಿಸಿಸಿ ಅಧ್ಯಕ್ಷ ಗೌರವ್ ಗೊಗೊಯ್ ಮತ್ತು ಸಿಎಲ್ಪಿ ನಾಯಕ ದೇವಬ್ರತ ಸೈಕಿಯಾ ಅವರು ಹಾಜರಿದ್ದರು.





Leave a comment