Home ಕ್ರೈಂ ನ್ಯೂಸ್ ಅಪಪ್ರಚಾರ, ಕೊಲೆ ಬೆದರಿಕೆ ಹಾಕ್ತಿರೋ ರೇಣುಕಾಚಾರ್ಯ ಬಂಧಿಸಿ: ಹೆಚ್. ಬಿ. ಮಂಜಪ್ಪ ಮಾಡಿರುವ ಆರೋಪಗಳೇನು? ದೂರಿನ ಕಂಪ್ಲೀಟ್ ಡೀಟೈಲ್ಸ್
ಕ್ರೈಂ ನ್ಯೂಸ್ದಾವಣಗೆರೆಬೆಂಗಳೂರು

ಅಪಪ್ರಚಾರ, ಕೊಲೆ ಬೆದರಿಕೆ ಹಾಕ್ತಿರೋ ರೇಣುಕಾಚಾರ್ಯ ಬಂಧಿಸಿ: ಹೆಚ್. ಬಿ. ಮಂಜಪ್ಪ ಮಾಡಿರುವ ಆರೋಪಗಳೇನು? ದೂರಿನ ಕಂಪ್ಲೀಟ್ ಡೀಟೈಲ್ಸ್

Share
Share

ದಾವಣಗೆರೆ: ಮಾಜಿ ಸಚಿವ ಎಂ.ಪಿ ರೇಣುಕಾಚಾರ್ಯ ಅವರು ನನ್ನ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡುತ್ತಿದ್ದು ಹಾಗೂ ನನಗೆ ಸಾರ್ವಜನಿಕವಾಗಿ ತೇಜೋವಧೆ, ಸಾಮಾಜಿಕ ಜಾಲತಾಣದ ಮೂಲಕ ಕೊಲೆ ಬೆದರಿಕೆ ಹಾಕುತ್ತಿದ್ದಾರೆ. ಕೂಡಲೇ ಕಾನೂನು ಪ್ರಕಾರ ಪ್ರಕರಣ ದಾಖಲಿಸಿ ರೇಣುಕಾಚಾರ್ಯ ಬಂಧಿಸಬೇಕು ಎಂದು ಆಗ್ರಹಿಸಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ರಿಗೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್. ಬಿ. ಮಂಜಪ್ಪ ದೂರು ಸಲ್ಲಿಸಿದ್ದಾರೆ.

ದಾವಣಗೆರೆ

ದೂರಿನಲ್ಲೇನಿದೆ?

ನಾನು ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷನಾಗಿದ್ದು ಇದಕ್ಕಿಂತ ಪೂರ್ವದಲ್ಲಿ ನಾನು ಹೊನ್ನಾಳಿ ಪಟ್ಟಣ ಪಂಚಾಯಿತಿಯ ಸದಸ್ಯನಾಗಿ,ಅಧ್ಯಕ್ಷರಾಗಿ, ತಾಲ್ಲೂಕು ಪಂಚಾಯಿತಿಯ ಸದಸ್ಯನಾಗಿ, ಅಧ್ಯಕ್ಷರಾಗಿ ಹಾಗೂ ಜಿಲ್ಲಾ ಪಂಚಾಯಿತಿಯ ಸದಸ್ಯನಾಗಿ, ಅಧ್ಯಕ್ಷನಾಗಿ ಹಾಗೂ 2019 ರ ಲೋಕಸಭಾ ಚುನಾವಣೆಯಲ್ಲಿ ದಾವಣಗೆರೆಯ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿರುತ್ತೆೇನೆ. ಈಗ ದಾವಣಗೆರೆ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷನಾಗಿ ಹಾಗೂ ಕರ್ನಾಟಕ ಸರ್ಕಾರದ ಬಯಲುಸೀಮೆ ಪ್ರದೇಶಾಭಿವೃದ್ಧಿ ಮಂಡಳಿಯ ಅಧ್ಯಕ್ಷನಾಗಿ ಕಾರ್ಯ ನಿರ್ವಹಿಸುತ್ತಿದ್ದೇನೆ.

ಈ ಸುದ್ದಿಯನ್ನೂ ಓದಿ: ಕಾಂಗ್ರೆಸ್ ಗೂಂಡಾ ಅಧ್ಯಕ್ಷ ಎಂದಿದ್ದ ರೇಣುಕಾಚಾರ್ಯ ವಿರುದ್ದ ಎಸ್ಪಿ ಉಮಾ ಪ್ರಶಾಂತ್ ಗೆ ದಾವಣಗೆರೆ ಜಿಲ್ಲಾ ಕಾಂಗ್ರೆಸ್ ದೂರು!

ಎಂ.ಪಿ ರೇಣುಕಾಚಾರ್ಯ ನನ್ನ ರಾಜಕೀಯ ಬೆಳವಣಿಗೆ ಸಹಿಸದೇ ನನ್ನ ಮೇಲೆ 2004ರಿಂದಲೂ ದ್ವೇಷವನ್ನು ಸಾಧಿಸುತ್ತಿದ್ದಾರೆ, ಅದೇ ವರ್ಷದಲ್ಲಿ ಅವರ ಬಿ.ಜೆ.ಪಿ ಪಕ್ಷದ ನಾಯಕಿ ಉಮಾ ಭಾರತಿ ಬಂಧನವಾಯಿತು. ಬಂಧನದ ವಿರುದ್ಧವಾಗಿ ಎಂ.ಪಿ ರೇಣುಕಾಚಾರ್ಯ ಅವರು ಆಗಿನ ಶಾಸಕರಾಗಿದ್ದರು. ಯಾವುದೇ ಅನುಮತಿ ಪಡೆಯದೆ ಹೊನ್ನಾಳಿ ಬಂದ್ ಗೆ ಕರೆಯನ್ನು ಕೊಟ್ಟು, ದಬ್ಬಾಳಿಕೆಯಿಂದ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿಸಿ, ಸರ್ಕಾರಿ ಕಚೇರಿಗಳಿಗೆ ಈವರೆ ಖುದ್ದಾಗಿ ನಿಂತು, ಕಾರ್ಯಕರ್ತರೊಂದಿಗೆ ಸರ್ಕಾರಿ ಕಚೇರಿಗಳಿಗೆ ಬೀಗವನ್ನು ಹಾಕಿ ಬೀಗದ “ಕೀ’ ಗಳನ್ನು ಜೇಬಿನಲ್ಲಿ ಹಾಕಿಕೊಂಡು ಹೋಗಿದ್ದರು,

ಅದೇ ವರ್ಷ ನಾನು ಸಹ ತಾಲ್ಲೂಕು ಪಂಚಾಯಿತಿಯ ಅಧ್ಯಕ್ಷನಾಗಿದ್ದೆ. ನಮ್ಮ ತಾಲ್ಲೂಕು ಪಂಚಾಯಿತಿಯ ಸಾಮನ್ಯ ಸಭೆ ಕರೆದಿದ್ದವು. ಆದರೆ ನಮ್ಮ ಸಾಮನ್ಯ ಸಭೆ ನಡೆಯಬಾರದೆಂದು ದುರುದ್ದೇಶದಿಂದ ಬೀಗ ಹಾಕಿಕೊಂಡು ಹೊಗಿದ್ದರು, ಇದನ್ನು ನಾನು ಮತ್ತು ನಮ್ಮ ತಾಲ್ಲೂಕು ಪಂಚಾಯಿತಿಯ ಕಾರ್ಯನಿರ್ವಾಹಣ ಅಧಿಕಾರಿಗಳು ಖಂಡಿಸಿ ದೂರನ್ನು ಕೊಟ್ಟಿದ್ದೆವು. ತಾಲ್ಲೂಕಿನ ತಹಶೀಲ್ದಾರರು ಸಹ ರೇಣುಕಾಚಾರ್ಯರವರ ಮೇಲೆ ದೂರು ನೀಡಿದ್ದರು. ಪೊಲೀಸ್ ಇಲಾಖೆಯು ಸಹ ಇವರ ಮೇಲೆ IPCC ಸೆಕ್ಷನ್ ಪ್ರಕಾರ ಪ್ರಕರಣ ದಾಖಲಿಸಿತ್ತು. ಆ ಸಂದರ್ಭದಲ್ಲಿಯು ಸಹ ನನ್ನ ಮೇಲೆ ಪ್ರಚೋದನಕಾರಿ ಹೇಳಿಕೆಗಳನ್ನು ನೀಡಿದ್ದರು.

ಅದೇ ರೀತಿ 2006ರಲ್ಲಿಯೂ ಇವರು ಹಾಲಿ ಶಾಸಕರಾಗಿದ್ದರು. ನನಗೂ ಮತ್ತು ಅಂದಿನ ಮಾಜಿ ಶಾಸಕರಾಗಿದ್ದ ಡಿ.ಜಿ ಶಾಂತನಗೌಡರಿಗೆ ಪಕ್ಷದ ಕೆಲವು ವಿಚಾರವಾಗಿ ಹಾಗು ಅಭಿವೃದ್ಧಿ ಕೆಲಸದ ವಿಚಾರವಾಗಿ ಈ ರೇಣುಕಾಚಾರ್ಯನಿಗೆ ಮತ್ತು ನಮಗೆ ಮಾತಿನ ವಾಗ್ವಾದಗಳು ನಡೆದಿದ್ದವು, ಈ ವಿಚಾರವಾಗಿ ಎಂ.ಪಿ ರೇಣುಕಾಚಾರ್ಯ ನನಗೆ ಅಂದಿನ ಮಾಜಿ ಶಾಸಕರಾಗಿದ್ದ ಡಿ.ಜಿ ಶಾಂತನಗೌಡರಿಗೆ ತಾಕತ್ತಿದ್ದರೆ ಬಸ್ ನಿಲ್ದಾಣಕ್ಕೆ ಬನ್ನಿ ಎಂದು ಸವಾಲನ್ನು ಎಸೆದಿದ್ದರು. ಅವರ ಮಾತಿನಂತೆ ನಾವು ಬಸ್ ನಿಲ್ದಾಣಕ್ಕೆ ಬಂದಿದ್ದೆವು. ಆಗಿನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾಗಿದ್ದ ಸೋನಿಯ ನಾರಂಗ್ ಮೇಡಂ ಅವರು ನಮಗೆ ತಿಳುವಳಿಕೆ ಹೇಳಿ ಶಾಂತಗೊಳಿಸಿ ಕಳುಹಿಸಿದರು.

ಆದರೆ, ಈ ರೇಣುಕಾಚಾರ್ಯ ಪೊಲೀಸ್ ವರಿಷ್ಠಾಧಿಕಾರಿ ಅವರಿಗೆ ಹಾಗೂ ಪೊಲೀಸ್ ಅಧಿಕಾರಿಗಳಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಕಾರ್ಯಕರ್ತರ ಜೊತೆ ಸೇರಿ ಪೊಲೀಸರ ಮೇಲೆ ದೌರ್ಜನ್ಯ ನಡೆಸಿದ್ದರು. ಪೊಲೀಸ್ ವರಿಷ್ಠಾಧಿಕಾರಿ ಸೋನಿಯಾ
ನಾರಂಗ್ ಮೇಡಂ ಅವರು ಈತನ ಮೇಲೆ ಹಾಗೂ ಅವರ ಕಾರ್ಯಕರ್ತರ ಮೇಲೆ ಲಾಠಿ ಚಾರ್ಜ್ ಮಾಡಿ ಪೊಲೀಸ್ ಠಾಣೆಗೆ ಕರೆದೊಯ್ದು ಪ್ರಕರಣ ದಾಖಲಿಸಿದ್ದರು,

ಅದಾದ ನಂತರ 2008ರಲ್ಲಿ ಹೊನ್ನಾಳಿಯ ಎಲ್.ಐ.ಸಿ ಆಫೀಸ್ ಪಕ್ಕದ ಮೈದಾನದಲ್ಲಿ ರಾಜ್ಯ ಮಟ್ಟದ ಕನಕ ಜಯಂತ್ಯೋತ್ಸವವನ್ನು ಸಮಾಜದ ಗುರುಗಳಾದ ಶ್ರೀ ಕಾಗಿನೆಲೆ ಮಹಾಸಂಸ್ಥಾನ ಕನಕ ಗುರುಪೀಠದ ಪರಮ ಪೂಜ್ಯ ಜಗದ್ಗುರುಗಳಾದ ಶ್ರೀ ಶ್ರೀ ಡಾ|| ನಿರಂಜನಾನಂದಪುರಿ ಮಹಾಸ್ವಾಮಿಜಿಗಳು,ಹೊಸದುರ್ಗ ಶಾಖ ಮಠದ ಪರಮ ಪೂಜ್ಯ ಗುರುಗಳಾದ ಶ್ರೀ ಶ್ರೀ ಈಶ್ವರಾನಂದಪುರಿ ಮಹಾಸ್ವಾಮಿಜಿಗಳವರ ದಿವ್ಯ ಸಾನಿಧ್ಯದಲ್ಲಿ ನಾನು ಆ ಜಯಂತ್ಯೋತ್ಸವದ ಸ್ವಾಗತ ಸಮಿತಿ ಅಧ್ಯಕ್ಷನಾಗಿದ್ದೆ. ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ, ಕೇಂದ್ರದ ಮಾಜಿ ಸಚಿವ ಸಿ.ಎಂ ಇಬ್ರಾಹಿಂ ಅವರು ಸೇರಿದಂತೆ ರಾಜ್ಯದ ಹಲವರು ಶಾಸಕರುಗಳು, ಸಂಸದರು ಭಾಗವಹಿಸಿದ್ದರು.

ಮೂರು ದಿನಗಳ ಕಾಲ ಸುಸಜ್ಜಿತವಾದ ಪೆಂಡಾಲ್ ನಲ್ಲಿ ಸಾಮೂಹಿಕ ವಿವಾಹಗಳು, ಬೀರ ದೇವರುಗಳ ಉತ್ಸವ ಹಾಗು ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಇಂತಹ ಪೆಂಡಾಲ್ ನಲ್ಲಿ ಕನಕ ಜಯಂತ್ಯೋತ್ಸವ ಮುಗಿದ ಮಾರನೆಯ
ದಿನ ಬಿ.ಜೆ.ಪಿ ಪಕ್ಷದ ಬಿ.ಎಸ್ ಯಡಿಯೂರಪ್ಪ ನೇತೃತ್ವದಲ್ಲಿ ಕಾರ್ಯಕ್ರಮ ನಡೆಸಲು ರೇಣುಕಾಚಾರ್ಯ ಪೂಜ್ಯ ಗುರುಗಳಾದ ಶ್ರೀ ಶ್ರೀ ಈಶ್ವರಾನಂದಪುರಿ ಮಹಾಸ್ವಾಮಿಜಿಗಳವರನ್ನು ನಿಮ್ಮ ಪೆಂಡಲ್ ನಲ್ಲಿ ನಾನು ಪಕ್ಷದ ಕಾರ್ಯಕ್ರಮವನ್ನು ಮಾಡುತ್ತೇನೆಂದು ಸ್ವಾಮೀಜಿಯವರನ್ನು ಕೇಳಿಕೊಂಡಾಗ, ಸ್ವಾಮೀಜಿಯವರು ಆ ಪೆಂಡಾಲ್ ನಲ್ಲಿ ಮೂರು ದಿನಗಳ ಕಾಲ ನಮ್ಮ ಸಮಾಜದ ಧಾರ್ಮಿಕ ಸಮಾರಂಭ ನಡೆದಿರುವುದರಿಂದ, ನೀವು ಆ ವೇದಿಕೆಯನ್ನು ಬಳಸಿಕೊಂಡರೆ, ಸಮಾಜಕ್ಕೆ ತಪ್ಪು ಸಂದೇಶ ಹೋಗುತ್ತದೆ, ಸ್ವಾಮೀಜಿಯವರು ಯಾವುದೊ ಒಂದು ಪಕ್ಷದ ಪರವಾಗಿದ್ದಾರೆಂದು ಕಳಂಕ ತಟ್ಟುತ್ತದೆ, ಅದರಿಂದ ದಯವಿಟ್ಟು ನಿಮ್ಮ ಸಭೆಯನ್ನು ಬೇರೆ ಕಡೆ ಎಲ್ಲಾದರು ಮಾಡಿಕೊಳ್ಳಿ ಎಂದು ತಿಳಿಸಿದ್ದರು.

ಆದರೂ ಸಹ ಈ ರೇಣುಕಾಚಾರ್ಯ ತಡ ರಾತ್ರಿ ಅಕ್ರಮವಾಗಿ ನಮ್ಮ ಪೆಂಡಾಲ್ ನಲ್ಲಿ ಪ್ರವೇಶಿಸಿ ನಮ್ಮದೆ ಸಾಮಾಗ್ರಿಗಳನ್ನು ಮತ್ತು ವಿದ್ಯುತ್ ಅನ್ನು ಬಳಸಿಕೊಂಡು ನಾಳಿನ ಕಾರ್ಯಕ್ರಮಕ್ಕೆ ಸಿದ್ಧತೆಯನ್ನು ಮಾಡುತ್ತಿದ್ದರು. ಆ ಸಂದರ್ಭದಲ್ಲಿ ಕೆಲವು ನಮ್ಮ ಸಮಾಜದ ಯುವಕರು ಹಾಗು ಮುಖಂಡರು ನನ್ನ ಗಮನಕ್ಕೆ ತಂದರು ನಾನು ಅಲ್ಲಿಗೆ ತೆರಳಿ, ರೇಣುಕಾಚಾರ್ಯನ ಕೇಳಿದ ಸ್ವಾಮೀಜಿಯವರು ಬೇಡವೆಂದರೂ ಯಾಕೆ ದಬ್ಬಾಳಿಕೆ ಮಾಡುತ್ತಿದ್ದೀರಿ ಎಂದು ಕೇಳಿದ್ದಕ್ಕೆ ನನ್ನ ಮೇಲೆ ಮತ್ತು ನಮ್ಮ ಸಮಾಜದ ಯುವಕರ ಮೇಲೆ ಹಾಗೂ ನನ್ನ ಸಹೋದರರ ಮೇಲೆ, ಇವರು ಮತ್ತು ಇವರ ಹಿಂಬಾಲಕರು ಹಾಗು ಇವರ ಸಹೋದರರು ಸೇರಿ ನಮ್ಮ ಮೇಲೆ ಹಲ್ಲೆ ಮಾಡಲು ಮುಂದಾದರು, ಈ ಸಂದರ್ಭದಲ್ಲಿ ಪೊಲೀಸರು ಮಧ್ಯ ಪ್ರವೇಶಿಸಿ ತಿಳಿಗೊಳಿಸಿದ್ದರು.

ಮಾರನೆಯ ದಿನ ನನ್ನ ಮೇಲೆ ಮತ್ತು ನನ್ನ ಸಹೋದರರು ಹಾಗು ನಮ್ಮ ಸಮಾಜದ ಯುವಕರ ಮೇಲೆ ದುರುದ್ದೇಶದಿಂದ ಸುಳ್ಳು ದೂರುಗಳನ್ನು, ಆಗಿನ ಬಿ.ಜೆ.ಪಿ ಸರ್ಕಾರವನ್ನು ಮತ್ತು ಲೋಕಸಭಾ ಸದಸ್ಯರನ್ನು ಹಾಗು ಜಿಲ್ಲಾ ಉಸ್ತುವಾರಿ ಸಚಿವರನ್ನು ಬಳಸಿಕೊಂಡು ಪೊಲೀಸರಿಗೆ ಒತ್ತಡವನ್ನು ತಂದು ನನ್ನ ಮೇಲೆ ಮತ್ತು ನನ್ನ ಸಹೋದರರು ಹಾಗು ನಮ್ಮ ಸಮಾಜದ ಯುವಕರ ಮೇಲೆ ಪ್ರಕರಣ ದಾಖಲಿಸಿದ್ದರು, ನಾವು ಸಹ ಇವರ ಮೇಲೆ ಪ್ರತೀ ದೂರನ್ನು ನೀಡಿ ಪ್ರಕರಣವನ್ನು ದಾಖಲಿಸಿದ್ದೆವು.

ಈ ಎಲ್ಲಾ ಪ್ರಕರಣಗಳು ಹೊನ್ನಾಳಿ ಜೆ.ಎಂ.ಎಫ್‌.ಸಿ ನ್ಯಾಯಾಲಯದಲ್ಲಿ ಸುಳ್ಳು ದೂರುಗಳೆಂದು ಖುಲಾಸೆಯಾಗಿರುತ್ತವೆ. ಅಂದಿನಿಂದಲೂ ಸಹ ಈ ರೇಣುಕಾಚಾರ್ಯ ಶಾಸಕನಾಗಿ,ಸಚಿವನಾಗಿ ಕೆಲಸ ಮಾಡಿದ್ದಾರೆ. ನಾನು ಸಹ ಈ ತಾಲ್ಲೂಕಿನಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ಇವರ ಬಿ.ಜೆ.ಪಿ ಯ ಧೋರಣೆಗಳನ್ನು ಖಂಡಿಸುತ್ತ, ಹೋರಾಟ ಮಾಡುತ್ತಾ ಹೊನ್ನಾಳಿ ಪಟ್ಟಣ ಪಂಚಾಯಿತಿಯ ಅಧ್ಯಕ್ಷನಾಗಿ, ತಾಲ್ಲೂಕು ಪಂಚಾಯಿತಿಯ ಅಧ್ಯಕ್ಷನಾಗಿ, ದಾವಣಗೆರೆ ಜಿಲ್ಲಾ ಪಂಚಾಯಿತಿಯ ಅಧ್ಯಕ್ಷನಾಗಿ ಹಾಗೂ 2019ರ ಸಾರ್ವತ್ರಿಕ ಲೋಕಸಭಾ ಚುನಾವಣೆಯಲ್ಲಿ ದಾವಣಗೆರೆ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ, ಬಿ.ಜೆ.ಪಿ ಯ ಅಭ್ಯರ್ಥಿಗೆ ಪ್ರಬಲ ಪೈಪೋಟಿ ನೀಡಿ ಸುಮಾರು ನಾಲ್ಕು ಲಕ್ಷ ಎಂಬತ್ತೈದು ಸಾವಿರ ಮತಗಳನ್ನು ಪಡೆದಿರುತ್ತೇನೆ.

ಸುಮಾರು ಹನ್ನೆರಡು ವರ್ಷಗಳಿಂದ ದಾವಣಗೆರೆಯ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷನಾಗಿ ಕಾರ್ಯ ನಿರ್ವಹಿಸುತ್ತಿದ್ದೇನೆ. ಇತ್ತೀಚೆಗೆ ಮುಖ್ಯಮಂತ್ರಿಗಳು ಹಾಗೂ ಉಪ ಮುಖ್ಯಮಂತ್ರಿಗಳವರು ನನಗೆ ಕರ್ನಾಟಕ ಸರ್ಕಾರದ ಬಯಲುಸೀಮೆ ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷರಾಗಿ ನೇಮಕ ಮಾಡಿದ್ದಾರೆ. ಇದನ್ನೂ ಸಹಿಸದ ರೇಣುಕಾಚಾರ್ಯ ನನ್ನ ಗೌರವಕ್ಕೆ ಧಕ್ಕೆ ಉಂಟು ಮಾಡುವ ಮಾತುಗಳನ್ನು ಸಾಮಾಜಿಕ ಜಾಲತಾಣದ ಮೂಲಕ ನನಗೆ “ರೌಡಿ” ಜಿಲ್ಲಾಧ್ಯಕ್ಷ, “ಗೂಂಡಾ” ಅಧ್ಯಕ್ಷ ಹಾಗು ಇನ್ನು ಕೆಲವು ಅಸಭ್ಯ ಮಾತುಗಳನ್ನು ಆಡಿ, ವಿಡಿಯೊ ಗಳನ್ನು ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದರ ಮುಖಾಂತರ ಬೆದರಿಕೆಯನ್ನು ಹಾಕಿ, ಸಾರ್ವಜನಿಕವಾಗಿ ದಮ್ಮು ಇದ್ದರೆ ತಾಕತ್ತಿದ್ದರೆ ಸಂಗೊಳ್ಳಿ ರಾಯಣ್ಣ ವೃತ್ತಕ್ಕೆ ಬಾ ನಿನ್ನ ನೋಡಿಕೊಳ್ಳುತ್ತೆೇನೆ, ಇಲ್ಲ ನನ್ನ ಕಾರ್ಯಕರ್ತರು ನಿನ್ನನ್ನು ನೋಡಿಕೊಳ್ಳುತ್ತಾರೆ, ನಾನು ಶಾಸಕ, ಸಚಿವನಾಗಿದ್ದೆ. ನನಗೆ ಸಾಕಷ್ಟು ಬಲವಿದೆ. ನಿನ್ನನ್ನು ನಾನು ಏನು ಬೇಕಾದರೂ ಮಾಡಬಲ್ಲೆ ಎಂದು ಕೊಲೆ ಬೆದರಿಕೆಯ ಧಮ್ಮಿಯನ್ನು ಹಾಕಿ, ತಾಕತ್ತಿದ್ದರೆ 2028ರ ಚುನಾವಣೆಗೆ ಬಾ ಎಂದು ಸವಾಲನ್ನು ಹಾಕಿದ್ದಾರೆ.

ಇವರ ಉದ್ದೇಶ ಮುಂದಿನ ವಿಧಾನಸಭೆ ಸಾರ್ವತ್ರಿಕ ಚುನಾವಣೆಯಲ್ಲಿ ನನ್ನನ್ನು ಗೂಂಡಾ, “ರೌಡಿ”, ‘ಜಾತಿ ವಿರೋಧಿ’ ಎಂದೆಲ್ಲಾ ಕೆಟ್ಟ ಅಭಿಪ್ರಾಯವನ್ನು ಸಾರ್ವಜನಿಕರಲ್ಲಿ ಮೂಡಿಸಿ, ನನ್ನನ್ನು ರಾಜಕೀಯವಾಗಿ ತೇಜೋವಧೆ ಮಾಡಲು. ಸಾರ್ವಜನಿಕರಿಗೆ ತಪ್ಪು ಸಂದೇಶವನ್ನು ತರಲು ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋಗಳನ್ನು ಮಾಡಿ ಹರಿಬಿಡುತ್ತಿದ್ದಾರೆ. ನನಗೆ ಜೀವ ಬೆದರಿಕೆಯನ್ನು ಸಹ ಸಾರ್ವಜನಿಕವಾಗಿ ಹಾಕುತ್ತಿದ್ದಾರೆ. ಆದ್ದರಿಂದ ಈ ರೇಣುಕಾಚಾರ್ಯರ ಮೇಲೆ ಕೂಡಲೇ ಕಾನೂನು ಕ್ರಮವನ್ನು ಕೈಗೊಂಡು, ನನಗೆ ನ್ಯಾಯ ದೊರಕಿಸಿ ಕೊಡಬೇಕು. ಕೂಡಲೇ ಇಪ್ರಕರಣ ದಾಖಲಿಸಿ ಬಂಧಿಸಬೇಕೆಂದು ಈ ಮೂಲಕ ತಮ್ಮಲ್ಲಿ ವಿನಂತಿಸಿಕೊಳ್ಳುತ್ತೆನೆ ಎಂದು ಹೆಚ್. ಬಿ. ಮಂಜಪ್ಪರು ಎಸ್ಪಿ ಅವರಿಗೆ ನೀಡಿರುವ ದೂರಿನಲ್ಲಿ ಆಗ್ರಹಿಸಿದ್ದಾರೆ.

Share

Leave a comment

Leave a Reply

Your email address will not be published. Required fields are marked *