SUDDIKSHANA KANNADA NEWS/DAVANAGERE/DATE:25_10_2025
ದಾವಣಗೆರೆ: ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ಅವರಿಗೆ ಹಣ ಮತ್ತು ಅಧಿಕಾರದ ಹುಚ್ಚು ಹಿಡಿದಿದೆ. ಹುಚ್ಚುನಾಯಿಯಿಂದ ನಾನು ಕಡಿಸಿಕೊಂಡಿದ್ದೇನೆ. ಹುಚ್ಚು ಬಿಡುವ ರೀತಿಯಲ್ಲಿ ಭ್ರಷ್ಟಾಚಾರ ಬಯಲಿಗೆಳೆಯುತ್ತೇನೆ ಎಂದು ಹರಿಹರ ಬಿಜೆಪಿ ಶಾಸಕ ಬಿ. ಪಿ. ಹರೀಶ್ ವಾಗ್ದಾಳಿ ನಡೆಸಿದರು.
READ ALSO THIS STORY: ಆರ್ ಎಸ್ ಎಸ್ ವಿಶ್ವದ ಅತ್ಯಂತ ಶ್ರೀಮಂತ ಎನ್ ಜಿಒ ಆಗಿದ್ದು ಹೇಗೆ? ಐಟಿ, ಇಡಿ ಆಡಿಟ್ ಗೆ ಸಿದ್ಧವೇ: ಪ್ರಿಯಾಂಕ್ ಖರ್ಗೆ ಹೊಸ ದಾಳ!
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹುಚ್ಚುನಾಯಿ ಸರಿಮಾಡಬೇಕು. ಹುಚ್ಚುನಾಯಿ ನನಗೆ ಕಡಿದಿದ್ದು, ಅಷ್ಟು ಸುಲಭವಾಗಿ ಬಿಡಲ್ಲ. ಹುಚ್ಚುನಾಯಿಯ ಹುಚ್ಚು ಹೋಗುವ ರೀತಿಯಲ್ಲಿ ಹೋರಾಟ ಮಾಡುತ್ತೇವೆ. ಬಡರೈತರ ಶಾಪ ಇವರಿಗೆ ತಟ್ಟದೇ ಇರದು. ದಾವಣಗೆರೆ ಮತ್ತು ವಿಜಯನಗರ ಜಿಲ್ಲೆಗಳಲ್ಲಿ ಅರಣ್ಯ ಹಾಗೂ ಸರ್ಕಾರಿ ಭೂಮಿ ಒತ್ತುವರಿಯಾಗಿದೆ. ಈ ಕುರಿತಂತೆ ಸದನದಲ್ಲಿಯೂ ಪ್ರಶ್ನೆ ಮಾಡಿದ್ದೇನೆ. ಸೋಮವಾರ ತನಿಖೆ ತಂಡ ಬರುತ್ತಿದೆ. ಈ ಸಂದರ್ಭದಲ್ಲಿ ಸೂಕ್ತ ದಾಖಲಾತಿ ನೀಡುತ್ತೇವೆ ಎಂದು ತಿಳಿಸಿದರು.
ದಾವಣಗೆರೆಯ ಹರಿಹರ, ವಿಜಯನಗರ ಜಿಲ್ಲೆಯ ಹರಪನಹಳ್ಳಿಯಲ್ಲಿ ಕಂದಾಯ ಭೂಮಿ ಮತ್ತು ಅರಣ್ಯ ಭೂಮಿ ಒತ್ತುವರಿಯಾಗಿದೆ. ಹರಿಹರದಲ್ಲಿ ಹಳ್ಳಗಳನ್ನು ಮುಚ್ಚಿಸುವ ಕೆಲಸ ಮಾಡಲಾಗುತ್ತದೆ. ಮಳೆಗಾಲದ ವೇಳೆ ನೀರು ಬಂದರೆ ಹಳ್ಳದ ಹಿಂಭಾಗದ ಜಮೀನುದಾರರು ಕೇಳಿದ ದರಕ್ಕೆ ಭೂಮಿ ಕೊಟ್ಟು ಹೋಗಬೇಕೆಂಬುದೇ ಇವರ ದುರಾಸೆ. ಬಡ ರೈತರಿಗೆ ಹಿಂಸೆ ಮಾಡಿ ತಿಳಿದ ದರಕ್ಕೆ ಖರೀದಿಸುವ ದುಷ್ಟತನ ಬಂದಿದೆ. ಹಣದ ಹುಚ್ಚು ಹಿಡಿದಿದ್ದು, ಬಿಡಿಸಬೇಕಿದೆ. ಈ ಕಾರಣಕ್ಕೆ ಹೋರಾಟ ಪ್ರಾರಂಭ ಮಾಡಿದ್ದೇವೆ. ಗಂಗೆ ಮತ್ತು ಭೂ ತಾಯಿಗೆ ದ್ರೋಹ ಮಾಡಿದ ಯಾರಿಗೂ ಒಳ್ಳೆಯದಾಗಿಲ್ಲ. ತಾತ್ಕಾಲಿಕ ಲಾಭ ಅಷ್ಟೇ. ಬಡರೈತರ ಶಾಪ ಮುಟ್ಟೇ ಮುಟ್ಟುತ್ತದೆ ಎಂದು ಕಿಡಿಕಾರಿದರು.
ಇನ್ನು ಮುಂದಾದರೂ ಪ್ರಾಮಾಣಿಕವಾಗಿ ಸಮಾಜ ಸೇವೆ ಮಾಡುವಂತಾಗಲಿ. ಇಲ್ಲದಿದ್ದರೆ ಜಿಲ್ಲೆಯ ಅವ್ಯವಹಾರಗಳ ಕುರಿತಂತೆ ವಾರಕ್ಕೊಂದು ಪತ್ರಿಕಾಗೋಷ್ಠಿ ನಡೆಸುತ್ತೇವೆ ಎಂದು ತಿಳಿಸಿದರು.
ಗೋಷ್ಠಿಯಲ್ಲಿ ದೂಡಾ ಮಾಜಿ ಅಧ್ಯಕ್ಷ ಯಶವಂತರಾವ್ ಜಾಧವ್, ಬಿ. ಎಸ್. ಜಗದೀಶ್, ಶಿವನಗೌಡ ಪಾಟೀಲ್, ಟಿಂಕರ್ ಮಂಜಣ್ಣ ಮತ್ತಿತರರು ಹಾಜರಿದ್ದರು.


