SUDDIKSHANA KANNADA NEWS/DAVANAGERE/DATE:19_12_2025
ಬೆಳಗಾವಿ: ವಿಪಕ್ಷ ನಾಯಕ ಆರ್ ಅಶೋಕ್, ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ. ವಿಜಯೇಂದ್ರ ಹಾಗೂ ಇನ್ನಿತರೆ ಬಿಜೆಪಿ ಹಾಗೂ ಜೆಡಿಎಸ್ ಸದಸ್ಯರುಗಳು ನಮ್ಮ ಸರ್ಕಾರ ಉತ್ತರ ಕರ್ನಾಟಕಕ್ಕೆ ಏನೂ ಕೊಟ್ಟಿಲ್ಲ ಎಂದು ಹೇಳಿದ್ದಾರೆ. ಆರ್.ಅಶೋಕ್ ಅವರು ಶ್ವೇತಪತ್ರವನ್ನೂ ಡಿಮ್ಯಾಂಡ್ ಮಾಡಿದ್ದಾರೆ. ನಾವು ತಯಾರಿದ್ದೇವೆ. 2006 ರಿಂದಲೂ ನೀವೇನು ಮಾಡಿದ್ದೀರಿ, ನಾವೇನು ಮಾಡಿದ್ದೇವೆ ಎಂಬುದನ್ನೂ ಹೇಳುತ್ತೇವ ಎಂದು ಸಿಎಂ ಸಿದ್ದರಾಮಯ್ಯ ಸವಾಲು ಹಾಕಿದ್ದಾರೆ.
ಬೆಳಗಾವಿ ವಿಧಾನಸಭೆ ಅಧಿವೇಶನದಲ್ಲಿ ಮಾತನಾಡಿದ ಅವರು ರಾಜ್ಯದಲ್ಲಿ ಪ್ರಸ್ತುತ ಅಂದಾಜು 6.95 ಕೋಟಿ ಜನಸಂಖ್ಯೆ ಇರಬಹುದು. ಅದರಲ್ಲಿ ಉತ್ತರ ಕರ್ನಾಟಕದ 14 ಜಿಲ್ಲೆಗಳಲ್ಲಿ 2,96,28,767 ಜನರಿದ್ದಾರೆ. ರಾಜ್ಯದ ಜನಸಂಖ್ಯೆಯಲ್ಲಿ ಸುಮಾರು ಶೇ.42 ರಷ್ಟು ಜನರು ಈ ಭಾಗದಲ್ಲಿ ವಾಸಿಸುತ್ತಾರೆ. ರಾಜ್ಯದ ಭೌಗೋಳಿಕ ವಿಸ್ತೀರ್ಣ 1,91,791 ಚದರ ಕಿಮೀಗಳು. ಅದರಲ್ಲಿ ಉತ್ತರ ಕರ್ನಾಟಕದ 14 ಜಿಲ್ಲೆಗಳ ವಿಸ್ತೀರ್ಣ1,01,708 ಚದರ ಕಿಮೀಗಳು. ವಿಸ್ತೀರ್ಣದಲ್ಲಿ ಶೇ.53 ರಷ್ಟು ಭೂ ಪ್ರದೇಶ ಈ ಭಾಗದಲ್ಲಿದೆ. ಜನಸಂಖ್ಯೆವಾರು ನೋಡಿದರೆ [ ಜನಸಂಖ್ಯಾ ಸಾಂದ್ರತೆ-ಉತ್ತರ ಕರ್ನಾಟಕದಲ್ಲಿ ಒಂದು ಕಿಮೀಗೆ 292 ಜನ ಜೀವಿಸುತ್ತಿದ್ದಾರೆ. ದಕ್ಷಿಣ ಕರ್ನಾಟಕದಲ್ಲಿ 443 ಜನ ಬದುಕುತ್ತಿದ್ದಾರೆ ಎಂದು ತಿಳಿಸಿದರು.
ಹಾಗೆಯೇ ರಾಜ್ಯದಲ್ಲಿ 224 ವಿಧಾನ ಸಭಾ ಕ್ಷೇತ್ರಗಳಿವೆ. ಉತ್ತರ ಕರ್ನಾಟಕದ 14 ಜಿಲ್ಲೆಗಳಲ್ಲಿ 97 ವಿಧಾನ ಸಭಾ ಕ್ಷೇತ್ರಗಳಿವೆ. ಇದರಲ್ಲೂ ಶೇ. 43 ರಷ್ಟು ಕ್ಷೇತ್ರಗಳು ಈ ಭಾಗದಲ್ಲಿವೆ. ಹಾಗಾಗಿ ಸರ್ಕಾರಗಳು ಜಾರಿಗೆ ತರುವ ಯೋಜನೆಗಳಲ್ಲೂ ಕನಿಷ್ಟ ಶೇ. 42 ರಿಂದ ಶೇ. 43 ರಷ್ಟಾದರೂ ಈ ಭಾಗಕ್ಕೆ ನೀಡಲೇಬೇಕು ಎಂಬುದು ನಮ್ಮ ಇರಾದೆಯಾಗಿದೆ ಎಂದರು.
ನಮ್ಮ ಸರ್ಕಾರದ ಪ್ರಮುಖ ಸ್ಕೀಮುಗಳಲ್ಲಿ ಗ್ಯಾರಂಟಿ ಯೋಜನೆಗಳೂ ಸೇರಿವೆ. ಮೊದಲಿಗೆ ಈ ಭಾಗದ ಜನರಿಗೆ ಕಳೆದ ಎರಡೂವರೆ ವರ್ಷಗಳಲ್ಲಿ ನಾವು ಎಷ್ಟು ಹಣವನ್ನು ಗ್ಯಾರಂಟಿ ಯೋಜನೆಗಳ ಮೂಲಕ ನೇರವಾಗಿ ಜನರ ಖಾತೆಗಳಿಗೆ ವರ್ಗಾವಣೆ ಮಾಡಿದ್ದೇವೆ ಎಂಬ ಮಾಹಿತಿಯನ್ನು ಸದನದ ಮೂಲಕ ಜನರ ಗಮನಕ್ಕೆ ತರಬೇಕಾಗಿರುವುದು ನಮ್ಮ ಜವಾಬ್ಧಾರಿ
ಎಂದು ತಿಳಿಸಿದರು.
ನಾವು ಗ್ಯಾರಂಟಿ ಯೋಜನೆಗಳನ್ನು ಪ್ರಾರಂಭ ಮಾಡಿದ ದಿನಾಂಕದಿಂದ ಅಕ್ಟೋಬರ್- ನವೆಂಬರ್ ವರೆಗೆ ನಮ್ಮ ಸರ್ಕಾರ 106076 ಕೋಟಿ ರೂಪಾಯಿಗಳನ್ನು ವಿನಿಯೋಗಿಸಲಾಗಿದೆ. ಇದರಲ್ಲಿ 46277 ಕೋಟಿ ರೂಪಾಯಿಗಳನ್ನು ಉತ್ತರ ಕರ್ನಾಟಕದ ಜಿಲ್ಲೆಗಳ ಜನರಿಗಾಗಿ ಗ್ಯಾರಂಟಿ ಯೋಜನೆಗಳಿಗಾಗಿ ವೆಚ್ಚ ಮಾಡಲಾಗಿದೆ. ಒಟ್ಟು ವೆಚ್ಚದಲ್ಲಿ ಶೇ. 43.63 ರಷ್ಟು ಅನುದಾನಗಳು ಈ ಭಾಗದ ಜನರಿಗಾಗಿ ವೆಚ್ಚ ಮಾಡಲಾಗಿದೆ ಎಂದು ಹೇಳಿದರು.
ಈ ಸದನದಲ್ಲಿ ಅನೇಕರಿಗೆ ಗ್ಯಾರಂಟಿ ಯೋಜನೆಗಳ ಕುರಿತು ನಕಾರಾತ್ಮಕ ಭಾವನೆಗಳಿವೆ. ಆದರೆ ಇಡೀ ದೇಶದ ಆರ್ಥಿಕತೆ ಕುಸಿಯುತ್ತಿರುವಾಗ ಕರ್ನಾಟಕ ರಾಜ್ಯದ ಆರ್ಥಿಕತೆ ಆರೋಗ್ಯಕರವಾಗಿರುವುದಕ್ಕೆ ಗ್ಯಾರಂಟಿ ಯೋಜನೆಗಳ ಕೊಡುಗೆ ಬಹಳ ದೊಡ್ಡದಿದೆ ಎಂದರು.
ಮಾಜಿ ಸಚಿವರುಗಳಾಗಿದ್ದ ಶಶಿಕಲಾ ಜೊಲ್ಲೆಯವರು ಮತ್ತು ಬಸವನಗೌಡ ಪಾಟೀಲ್ ಯತ್ನಾಳ್ ಅವರು ಉತ್ತರ ಕರ್ನಾಟಕ ಮತ್ತು ದಕ್ಷಿಣ ಕರ್ನಾಟಕಗಳ ಶಾಲೆ, ಕಾಲೇಜು, ಆಸ್ಪತ್ರೆ ಮುಂತಾದವುಗಳ ಕುರಿತಂತೆ ಹಲವು ಅಂಕಿ ಅಂಶಗಳನ್ನು ಪ್ರಸ್ತಾಪಿಸಿದ್ದಾರೆ. ಅವರು ಹೇಳಿರುವ ಅಂಕಿ ಅಂಶಗಳ ಸತ್ಯಾಸತ್ಯತೆಯನ್ನು ಪರಿಶೀಲಿಸಬೇಕಾಗಿದೆ ಎಂದು ಹೇಳಿದರು.





Leave a comment