Site icon Kannada News-suddikshana

BIG NEWS: ಕಣುಮಾ ಹತ್ಯೆಗೆ ರಿಯಲ್ ಎಸ್ಟೇಟ್, ವೈಯಕ್ತಿಕ ದ್ವೇಷ ಕಾರಣನಾ? ತನಿಖೆಯಿಂದ ಹೊರಬಿತ್ತು ಸ್ಫೋಟಕ ಮಾಹಿತಿ!

SUDDIKSHANA KANNADA NEWS/ DAVANAGERE/ DATE-15-05-2025

ದಾವಣಗೆರೆ: ದಾವಣಗೆರೆಯಲ್ಲಿ ರೌಡಿಶೀಟರ್ ಕಣುಮಾ ಅಲಿಯಾಸ್ ಸಂತೋಷ್ ಕುಮಾರ್ ಹತ್ಯೆ ಪ್ರಕರಣ ಸಂಬಂಧ ಪೊಲೀಸರು 20 ಮಂದಿಯನ್ನು ಬಂಧಿಸಿದ್ದಾರೆ. ವಿಚಾರಣೆ ನಡೆಸುತ್ತಿದ್ದಂತೆ ಹೊಸ ಹೊಸ ವಿಚಾರಗಳು ಬೆಳಕಿಗೆ ಬರುತ್ತಿವೆ. ಕಣುಮಾ ಅಲಿಯಾಸ್ ಸಂತೋಷ್ ಕುಮಾರ್ ರಿಯಲ್ ಎಸ್ಟೇಟ್ ದಂಧೆಯಲ್ಲಿ ಅಧಿಪತ್ಯ ಸಾಧಿಸಲು ಹೊರಟು ಹಲವರ ಶತ್ರುವಾಗಿದ್ದ. ಜೊತೆಗೆ ವೈಯಕ್ತಿಕ ದ್ವೇಷವೂ ಕಣುಮಾನ ಹತ್ಯೆಗೆ ಕಾರಣವಾಗಿದೆ ಎಂದು ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗಿದೆ.

ಭಾರತ್ ಕಾಲೋನಿಯ ಕಬ್ಬುೂರು ಬಸಪ್ಪ ನಗರದ ಸಂತೋಷ @ ಚಾವಳಿ ಸಂತು (28 ). ಹಳೆಚಿಕ್ಕನಹಳ್ಳಿಯ ಹರಳಯ್ಯ ನಗರದ ಪೇಟಿಂಗ್ ಕೆಲಸ ಮಾಡುತ್ತಿದ್ದ ನವೀನ್ ಅಲಿಯಾಸ್ ಸೈಲೆಂಟ್ ನವೀನ (21), ಬೂದಾಳ್ ರಸ್ತೆಯ ಬಾಬು ಜಗಜೀವನ್ ರಾಂ ನಗರದ ಹಮಾಲಿ ಕೆಲಸ ಮಾಡುತ್ತಿದ್ದ ನವೀನ್ @ ಬ್ರಾಕಿ (25), ರಾಜ ಅಲಿಯಾಸ್ ತಾರಕ್, ಭಾರತ್ ಕಾಲೋನಿಯ ಆರ್ ಎಂಸಿ ರಸ್ತೆಯ ಟೈಲ್ಸ್ ಕೆಲಸ ಮಾಡುತ್ತಿದ್ದ ಎ. ಕಾರ್ತಿಕ್ (29), ಬಸವರಾಜ್ ಅಲಿಯಾಸ್ ಪಿಂಗಿ (20), ಭಾರತ್ ಕಾಲೋನಿಯ ಹೊಟೇಲ್ ಕೆಲಸ ಮಾಡುತ್ತಿದ್ದ ಮಾರುತಿ (25), ಪ್ರಭು (30), ಆವರಗೆರೆಯ ಪ್ರಥಮ ವರ್ಷದ ಬಿಕಾಂ ವಿದ್ಯಾರ್ಥಿ ಜಯಸೂರ್ಯ ಅಲಿಯಾಸ್ ಪಿ.ಟಿ. (20), ವಿಶಾಲ್ ಮಾರ್ಟ್ ಹತ್ತಿರದ ಲಗ್ಗೆರೆ ವಾಸಿ ಆಟೋ ಡ್ರೈವರ್ ಭರತ್ @ ಸ್ಲಂ, ಆಂಜನೇಯ ಬಡಾವಣೆಯ ಸಂದೀಪ್ (25), ಶ್ರೀರಾಮನಗರ ನಿವಾಸಿ, ಆರ್ ಟಿಐ ಕಾರ್ಯಕರ್ತ ಸುರೇಶ್ ಆರ್ @ ಸೂರ್ಯಪ್ರಕಾಶ್ (38), ಹಳೇ ಚಿಕ್ಕನಹಳ್ಳಿಯ ಕೂಲಿ ಕೆಲಸ ಮಾಡುತ್ತಿದ್ದ ಶಿವಪ್ಪ ಎ. ಕೆ. ಅಲಿಯಾಸ್ ಕಬಡ್ಡಿ ಶಿವು (35), ರಿಯಲ್ ಎಸ್ಟೇಟ್ ವ್ಯವಹಾರ ಮಾಡುತ್ತಿದ್ದ ವಿಜಯನಾಯ್ಕ್ ಅಲಿಯಾಸ್ ಗಡ್ಡ ವಿಜಿ (31), ತರಕಾರಿ ವ್ಯಾಪಾರಿ ವಿನಯ (25), ಬೌನ್ಸರ್ ಕೆಲಸ ಮಾಡುತ್ತಿದ್ದ ತೋಳಹುಣಸೆಯ ಕೆಳಗಿನಹಟ್ಟಿ ವಾಸಿ ಧನಂಜಯ ಅಲಿಯಾಸ್ ಧನು (35), ಹದಡಿ ಗ್ರಾಮದಲ್ಲಿ ವ್ಯವಸಾಯ ಮಾಡುತ್ತಿದ್ದ ರವಿ ಅಲಿಯಾಸ್ ಹದಡಿ ರವಿ (45), ನಿಟುವಳ್ಳಿಯ ದುರ್ಗಮ್ಮನ ದೇವಸ್ಥಾನದ ಬಳಿ ಮೊಟ್ಟೆ ವ್ಯಾಪಾರ ಮಾಡುತ್ತಿದ್ದ ಕಡ್ಡಿ ರಘು (38), ಮಂಜುನಾಥ್ ಎಂ @ ಖಾರದಪುಡಿಮಂಜ, ರಿಯಲ್ ಎಸ್ಟೇಟ್ ನಲ್ಲಿ ತೊಡಗಿಸಿಕೊಂಡಿದ್ದ ಸಂತೋಷ್ ಕುಮಾರ್ @ ಇಟಗಿ ಸಂತು (35) ಇದುವರೆಗೆ ಬಂಧಿತರಾಗಿರುವ ಆರೋಪಿಗಳು.

ಚಾವಳಿ ಸಂತು ಅಲಿಯಾಸ್ ಸಂತೋಷ್ ಮತ್ತು ಕಣುಮಾ ಅಲಿಯಾಸ್ ಸಂತೋಷ್ ಕುಮಾರ್ ಹಾಗೂ ಆತನ ಸಹಚರರ ನಡುವೆ ಎರಡರಿಂದ ಮೂರು ಬಾರಿ ಗಲಾಟೆಯಾಗಿದೆ. ಜೊತೆಗೆ ಒಮ್ಮೆ ಕಣುಮಾ ಮತ್ತು ಆತನ ಸಹಚರರು ಚಾವಳಿ ಸಂತುಗೆ
ನಿನ್ನದು ಜಾಸ್ತಿಯಾಗಿದೆ. ಮುಗಿಸುತ್ತೇವೆ ನೋಡು ಎಂದು ಬೆದರಿಕೆ ಹಾಕಿದ್ದರು. ಚಾವಳಿ ಸಂತುನನ್ನು ಒಮ್ಮೆ ಥಳಿಸಿದ್ದರು. ಆಗ ಕಣುಮಾ ಮತ್ತು ಚಾವಳಿ ಸಂತು ನಡುವೆ ದ್ವೇಷ ಹೆಚ್ಚಾಗಿದೆ. ತನ್ನನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ ಕಾರಣ ಸ್ನೇಹಿತರೊಟ್ಟಿಗೆ ಸೇರಿ ಕಣುಮಾ ಅಲಿಯಾಸ್ ಸಂತೋಷ್ ಕುಮಾರ್ ಕೊಂದು ಹಾಕಿರುವುದಾಗಿ ಆರೋಪಿ ಚಾವಳಿ ಸಂತು ವಿಚಾರಣೆ ವೇಳೆ ತಿಳಿಸಿರುವುದಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಜೊತೆಗೆ ಖಾರದ ಪುಡಿ ಮಂಜನ ತಮ್ಮ ನವೀನನಿಗೆ ಕಣುಮಾನ ಕಡೆಯವರು ನಿನ್ನ ಅಣ್ಣನನ್ನು ಮುಗಿಸಬೇಕೆಂದು ಸ್ಕೆಚ್ ಹಾಕಿದ್ದಾರೆ ಎಂದು ಚಾವಳಿ ಸಂತು ಹೇಳುತ್ತಾನೆ. ಆಗ ತನ್ನ ಅಣ್ಣನ ಉಳಿಸಬೇಕು, ಕಣುಮಾನ ಕೊಲೆ ಮಾಡಲು ಸಾಥ್ ನೀಡುವುದಾಗಿ ಹೇಳಿದ್ದಾನೆ. ಚಾವಳಿ ಸಂತು ಸೇಡು ತೀರಿಸಿಕೊಳ್ಳಲು ಆರೋಪಿಗಳು ಸಹಕರಿಸಿದ್ದಾರೆ. ಏನೇ ಕಷ್ಟ ಇದ್ದರೆ, ತುರ್ತಾಗಿ ಹಣ ಬೇಕಿದ್ದರೆ, ಜಗಳ ಆದರೆ ಚಾವಳಿ ಸಂತು ಒಂದಲ್ಲಾ ಒಂದು ರೀತಿಯಲ್ಲಿ ಕೊಲೆ ಮಾಡಿದ ಆರೋಪಿಗಳ ಪೈಕಿ ಹತ್ತು ಮಂದಿಗೆ ಸಹಾಯ ಮಾಡಿದ್ದ. ಈ ಕೃತಜ್ಞತೆ ಹಿನ್ನೆಲೆಯಲ್ಲಿ ಇವರೆಲ್ಲರೂ ಕಣುಮಾ ಕೊಲೆಗೆ ಸಹಕರಿಸಿದ್ದಾರೆ ಎಂದು ವಿವರಿಸಿದರು.

ಪ್ರಾರಂಭದಲ್ಲಿ ಬಂಧಿತರಾಗಿದ್ದ ಐವರ ಮೇಲೆ ಯಾವುದೇ ಕೇಸ್ ಗಳಿಲ್ಲ. ಇನ್ನುಳಿದ ಐವರ ಮೇಲೆ ಕೇಸ್ ಗಳಿವೆ. ಚಾವಳಿ ಸಂತು ಮೇಲೆ ನಾಲ್ಕು ಕೇಸ್ ಗಳಿದ್ದರೆ, ನವೀನ್ ಮೇಲೆ ಒಂದು ಕೇಸ್, ಬಸವರಾಜ್ 2, ಮಾರುತಿ ಮತ್ತು ಭರತ್ ಮೇಲೆ ತಲಾ ಒಂದು ಪ್ರಕರಣ ದಾಖಲಾಗಿದೆ. ಇನ್ನು ಗಡ್ಡ ವಿಜಿ, ಖಾರದ ಪುಡಿ ಮಂಜ, ಕಬಡ್ಡಿ ಶಿವು ಮೇಲೆ 302 ಕೇಸ್ ಇದೆ. ಚಾವಳಿ ಸಂತುಗೆ ಹೊಡೆಯಬೇಕು ಎಂದು ತುಂಬಾ ಸಮಯದಿಂದ ಕಣುಮಾ ಮತ್ತು ಆತನ ಸಹಚರರು ತೊಂದರೆ ಕೊಡುವುದಲ್ಲದೇ, ಕೊಂದು ಹಾಕುವುದಾಗಿ ಹೇಳಿದ್ದರಿಂದಲೇ ಇವರೆಲ್ಲರೂ ಸೇರಿ ಈ ಹತ್ಯೆಗೆ ಸಂಚು ರೂಪಿಸಿದ್ದರು ಎಂದು ತಿಳಿಸಿದರು.

ಇನ್ನು ಆರ್ ಟಿಐ ಕಾರ್ಯಕರ್ತ ಸೂರ್ಯ ಪ್ರಕಾಶ್ ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾನೆ. ರಿಯಲ್ ಎಸ್ಟೇಟ್ ವ್ಯವಹಾರ ನಡೆಸಲು ಹೋದಾಗ ಪದೇ ಪದೇ ಅಡ್ಡಿಯಾಗುವುದು, ತೊಂದರೆ ಕೊಡುವುದನ್ನು ಕಣುಮಾ ಮಾಡುತ್ತಿದ್ದ. ಬೆದರಿಕೆ ಕೂಡ ಹಾಕುತ್ತಿದ್ದ. ಈ ಹಿನ್ನೆಲೆಯಲ್ಲಿ 2019ರಲ್ಲಿ ಬುಳ್ಳ ನಾಗನ ಹತ್ಯೆ ಕೇಸ್ ನಲ್ಲಿ ಆರೋಪಿಯಾಗಿದ್ದ ಶಿವಕುಮಾರ್ ಜೊತೆಯಾಗುತ್ತಾರೆ. ಸಂದೀಪ್ ಸಹ ಸೂರ್ಯಪ್ರಕಾಶ್ ಬಳಿ ಈ ಹಿಂದೆ ಕೆಲಸ ಮಾಡುತ್ತಿದ್ದ. ವ್ಯವಹಾರಕ್ಕೆ ಪದೇ ಪದೇ ಕಿರುಕುಳ, ತೊಂದರೆ ಕೊಡುತ್ತಿದ್ದರಿಂದ ಶಿವಕುಮಾರ್, ಸಂದೀಪ್ ಜೊತೆ ಮಾತನಾಡಿ ಸಂತೋಷ್ ಅಲಿಯಾಸ್ ಚಾವಳಿ ಸಂತು ಸಂಪರ್ಕಿಸಿ ಸ್ಕೆಚ್ ಹಾಕಿದ್ದಾರೆ. ಈ ವೇಳೆ 3 ಲಕ್ಷ ರೂಪಾಯಿ ಹಣವನ್ನೂ ಕೊಟ್ಟಿರುವುದಾಗಿ ಸೂರ್ಯಪ್ರಕಾಶ್ ಹೇಳಿದ್ದಾನೆ ಎಂದು ಎಸ್ಪಿ ತಿಳಿಸಿದರು.

ಹದಡಿ ರವಿ, ಧನು, ವಿನಯ್ ಅವರಿಗೆ ರಿಯಲ್ ಎಸ್ಟೇಟ್ ವ್ಯಾಪಾರದಲ್ಲಿ ಬರುವ ಹಣಕ್ಕೆ ಕೊಕ್ಕೆ ಹಾಕಿ ಕಣುಮಾ ನಷ್ಟ ಮಾಡಿದ್ದ. ರವಿಗೆ ವಿನಯ್ ತುಂಬಾನೇ ಆತ್ಮೀಯ ಸ್ನೇಹಿತ. ಸಂತೋಷ್ ನ ಜೊತೆ ಸೇರಿಕೊಂಡು ಹತ್ಯೆಗೆ ಸಂಚು ರೂಪಿಸಿ ಭಾಗಿಯಾಗಿದ್ದಾರೆ. ರಿಯಲ್ ಎಸ್ಟೇಟ್ ನಲ್ಲಿ ಬರುವ ಹಣದಲ್ಲಿ ಮೋಸ, ಆಸ್ತಿ ಮಾರಾಟ ಮಾಡಲು ಮುಂದಾದರೆ ತೊಂದರೆ, ಖರೀದಿಸುವರನ್ನು ಕರೆದುಕೊಂಡು ಹೋದರೆ ಬೆದರಿಕೆ ಹಾಕುತ್ತಿದ್ದ ಕಣುಮಾ ಕಾಟಕ್ಕೆ ಸಾಕು ಸಾಕಾಗಿ ಹೋಗಿದ್ದಾಗಿ ವಿಚಾರಣೆ ವೇಳೆ ಸತ್ಯ ಬಾಯ್ಬಿಟ್ಟಿದ್ದಾರೆ.

ಸಂದೀಪ್, ಸೂರ್ಯಪ್ರಕಾಶ್ ಸರ್ಕಾರಿ ಕಚೇರಿಗೆ ಹೋಗಿ ಆರ್ ಟಿ ಐನಲ್ಲಿ ಮಾಹಿತಿ ಕೇಳಿ ಧಮ್ಕಿ ಹಾಕಿ ಹಣ ಪಡೆಯುತ್ತಿದ್ದರು ಎಂಬ ಮಾಹಿತಿಯೂ ಲಭಿಸಿದೆ. ಇನ್ನೂ ಈ ಪ್ರಕರಣದಲ್ಲಿ ಕೆಲವರಿದ್ದು, ಶೀಘ್ರದಲ್ಲಿಯೇ ಬಂಧಿಸಲಾಗುವುದು. ಈ ಪ್ರಕರಣದ ತಾರ್ಕಿಕ ಅಂತ್ಯಕ್ಕೆ ತೆಗೆದುಕೊಂಡು ಆ ಬಳಿಕ ಸಂಪೂರ್ಣ ಮಾಹಿತಿ ನೀಡುವುದಾಗಿ ಉಮಾ ಪ್ರಶಾಂತ್ ತಿಳಿಸಿದರು.

Exit mobile version