Site icon Kannada News-suddikshana

ಕರ್ನಾಟಕದಂತೆ ತೆಲಂಗಾಣದಲ್ಲಿಯೂ ಬಿಜೆಪಿಯಿಂದ “ವೋಟ್ ಚೋರಿ”: ಜೋರಾಗ್ತಿದೆ ಯುವ ಕಾಂಗ್ರೆಸ್ ಅಭಿಯಾನ!

ತೆಲಂಗಾಣ

SUDDIKSHANA KANNADA NEWS/DAVANAGERE/DATE:29_09_2025

ಹೈದರಾಬಾದ್: ತೆಲಂಗಾಣದಲ್ಲಿ ಬಿಜೆಪಿ 8 ಲೋಕಸಭಾ ಸ್ಥಾನಗಳನ್ನು ‘ವೋಟ್ ಚೋರಿ’ ಮೂಲಕ ಪಡೆದುಕೊಂಡಿದೆ. ಇದರಿಂದಾಗಿ ಪ್ರಧಾನಿ ನರೇಂದ್ರ ಮೋದಿ ಮೂರನೇ ಅವಧಿಗೆ ಅಧಿಕಾರಕ್ಕೆ ಮರಳಲು ಸಾಧ್ಯವಾಗಿದೆ ಎಂದು ತೆಲಂಗಾಣ ಪ್ರದೇಶ ಕಾಂಗ್ರೆಸ್ ಸಮಿತಿ (ಟಿಪಿಸಿಸಿ) ಅಧ್ಯಕ್ಷ ಮಹೇಶ್ ಕುಮಾರ್ ಗೌಡ, ತೆಲಂಗಾಣ ಯುವ ಕಾಂಗ್ರೆಸ್ ಉಸ್ತುವಾರಿ ಸೈಯದ್ ಖಾಲಿದ್ ಅಹ್ಮದ್ ಆರೋಪಿಸಿದ್ದಾರೆ.

READ ALSO THIS STORY: ರಾಹುಲ್ ಗಾಂಧಿಯ ಎದೆಗೆ ಗುಂಡು ಹಾರುತ್ತೆ: ಬಿಜೆಪಿ ನಾಯಕನ ವಿರುದ್ಧ ಕ್ರಮಕ್ಕೆ ಅಮಿತ್ ಶಾಗೆ ಕಾಂಗ್ರೆಸ್ ಆಗ್ರಹ!

ಹೈದರಾಬಾದ್ ಗಾಂಧಿ ಭವನದಲ್ಲಿ ಮಾಜಿ ಪಿಸಿಸಿ ಅಧ್ಯಕ್ಷ ವಿ. ಹನುಮಂತ ರಾವ್ ಮತ್ತು ಯುವ ಕಾಂಗ್ರೆಸ್ ಅಧ್ಯಕ್ಷ ಶಿವಶಂಕರ್ ರೆಡ್ಡಿ ಅವರೊಂದಿಗೆ ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿದ ಅವರು, ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಬಿಜೆಪಿ “ಪ್ರಜಾಪ್ರಭುತ್ವ ಮೌಲ್ಯಗಳು ಮತ್ತು ಸಂವಿಧಾನಕ್ಕೆ ಅಪಚಾರ ಎಸಗಿದೆ” ಎಂದು ಆರೋಪಿಸಿದರು.

‘ರಾಹುಲ್ ಗಾಂಧಿಯವರ ಹೇಳಿಕೆಗಳು ಸಾಕ್ಷ್ಯಗಳೊಂದಿಗೆ ದೃಢೀಕರಿಸಲ್ಪಟ್ಟಿವೆ’. ಹಿರಿಯ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ದೊಡ್ಡ ಪ್ರಮಾಣದ ಮತ ವಂಚನೆಯ ಆರೋಪಗಳನ್ನು ಅವರು ಉಲ್ಲೇಖಿಸಿ ಮಾತನಾಡಿದ ನಾಯಕರು ತೆಲಂಗಾಣದಲ್ಲಿಯೂ ಮತಗಳ್ಳತನ ಆಗಿದೆ. ಜೊತೆಗೆ ರಾಹುಲ್ ಗಾಂಧಿಯವರ ಹೋರಾಟ ಬೆಂಬಲಿಸಿ ತೆಲಂಗಾಣದಾದ್ಯಂತ ಕಾಂಗ್ರೆಸ್ ಸಹಿ ಅಭಿಯಾನವನ್ನು ಪ್ರಾರಂಭಿಸಲಿದೆ ಎಂದು ಘೋಷಿಸಿದರು. ಪ್ರತಿ ಹಳ್ಳಿಯಲ್ಲಿ ಕನಿಷ್ಠ 100 ಜನರಿಂದ ಅನುಮೋದನೆಗಳನ್ನು ಸಂಗ್ರಹಿಸಲಾಗುತ್ತದೆ, ನಂತರ ಅದನ್ನು ಭಾರತದ ಚುನಾವಣಾ ಆಯೋಗಕ್ಕೆ ಸಲ್ಲಿಸಲಾಗುತ್ತದೆ ಎಂದು ಮಾಹಿತಿ ನೀಡಿದರು.

“ಮತ ಕದಿಯುವ ಮೂಲಕ ಬಿಜೆಪಿ ಪ್ರಜಾಪ್ರಭುತ್ವ ಮತ್ತು ಸಂವಿಧಾನವನ್ನು ತುಳಿದಿದೆ. ತೆಲಂಗಾಣದಲ್ಲಿ ಎದ್ದಿರುವ ಗಂಭೀರ ಆರೋಪಗಳಿಗೆ ಕೇಂದ್ರ ಸಚಿವ ಬಂಡಿ ಸಂಜಯ್ ಅಥವಾ ಯಾವುದೇ ಬಿಜೆಪಿ ನಾಯಕರು ಇಲ್ಲಿಯವರೆಗೆ ಪ್ರತಿಕ್ರಿಯಿಸಿಲ್ಲ. ಶಾಶ್ವತವಾಗಿ ಅಧಿಕಾರದಲ್ಲಿ ಉಳಿಯುವ ದುರಾಸೆಯಿಂದ ಮೋದಿ ಪ್ರಜಾಪ್ರಭುತ್ವ ವಿರೋಧಿಯಾಗಿ ವರ್ತಿಸುತ್ತಿದ್ದಾರೆ” ಎಂದು ಮಹೇಶ್ ಕುಮಾರ್ ಗೌಡ ಮತ್ತು ಸೈಯದ್ ಖಾಲಿದ್ ಅಹ್ಮದ್ ಆರೋಪಿಸಿದರು.

‘ಬಿಜೆಪಿ ಉದ್ದೇಶಪೂರ್ವಕವಾಗಿ ಮೀಸಲಾತಿಯನ್ನು ಸ್ಥಗಿತಗೊಳಿಸುತ್ತಿದೆ’. ಕೇಂದ್ರದಲ್ಲಿರುವ ಬಿಜೆಪಿ ಸರ್ಕಾರವು ಬಿಸಿ ಮೀಸಲಾತಿ ವಿಷಯವನ್ನು ಉದ್ದೇಶಪೂರ್ವಕವಾಗಿ ತಡೆಹಿಡಿದಿದೆ ಮತ್ತು ಹಿಂದುಳಿದ ವರ್ಗಗಳಿಗೆ ನ್ಯಾಯ ಒದಗಿಸುವಲ್ಲಿ ವಿಫಲವಾಗಿದೆ
ಎಂದು ಅವರು ಆರೋಪಿಸಿದರು.

ಪತ್ರಿಕಾಗೋಷ್ಠಿಯ ಸಂದರ್ಭದಲ್ಲಿ, ಕಾಂಗ್ರೆಸ್ ನಾಯಕರು ಗ್ರೇಟರ್ ಹೈದರಾಬಾದ್ ಮುನ್ಸಿಪಲ್ ಕಾರ್ಪೊರೇಷನ್ (ಜಿಎಚ್‌ಎಂಸಿ) ಮಿತಿಯ ಹಲವಾರು ಭಾಗಗಳಲ್ಲಿ ಮತದಾರರ ಪಟ್ಟಿಯಲ್ಲಿನ ಅಕ್ರಮಗಳನ್ನು ಪ್ರಸ್ತಾಪಿಸಿ ಈ ಬಗ್ಗೆ ಮಾಹಿತಿಯನ್ನೂ ನೀಡಿದರು.

ಯುವ ಕಾಂಗ್ರೆಸ್ ‘ವೋಟ್ ಚೋರಿ’ ಅಭಿಯಾನವನ್ನು ತೀವ್ರವಾಗಿ ಕೈಗೆತ್ತಿಕೊಳ್ಳಬೇಕಾಗಿದೆ. ಯುವ ಕಾಂಗ್ರೆಸ್ ಮುಖಂಡರು ಎಲ್ಲಾ ಗ್ರಾಮಗಳಲ್ಲಿ “ವೋಟ್ ಚೋರಿ” ಸಹಿ ಅಭಿಯಾನ ನಡೆಸುವ ಮೂಲಕ ಮತ ಕಳ್ಳತನದ ಬಗ್ಗೆ ವ್ಯಾಪಕ ಜಾಗೃತಿ ಮೂಡಿಸಲಾಗುವುದು
ಎಂದು ತಿಳಿಸಿದರು.

“ಪ್ರಜಾಪ್ರಭುತ್ವವನ್ನು ರಕ್ಷಿಸಲು, ಟಿಪಿಸಿಸಿ ಎಐಸಿಸಿ ನಿರ್ದೇಶನಗಳ ಪ್ರಕಾರ ಪ್ರತಿ ಗ್ರಾಮದಲ್ಲಿ ಸಹಿ ಅಭಿಯಾನವನ್ನು ಕೈಗೊಳ್ಳುತ್ತಿದೆ. ಪ್ರತಿ ಗ್ರಾಮದಲ್ಲಿ ಕನಿಷ್ಠ 100 ಸಹಿಗಳನ್ನು ಸಂಗ್ರಹಿಸಲಾಗುತ್ತಿದೆ” ಎಂದು ಅವರು ಹೇಳಿದರು.

ಎಲ್ಲಾ ಗ್ರಾಮಗಳಲ್ಲಿ “ವೋಟ್ ಚೋರಿ” ಸಹಿ ಅಭಿಯಾನ ನಡೆಸುವ ಮೂಲಕ ಮತ ಕಳ್ಳತನದ ಬಗ್ಗೆ ವ್ಯಾಪಕ ಜಾಗೃತಿ ಮೂಡಿಸುವಂತೆ ಟಿಪಿಸಿಸಿ ಮುಖ್ಯಸ್ಥ ಮತ್ತು ಎಂಎಲ್‌ಸಿ ಮಹೇಶ್ ಕುಮಾರ್ ಗೌಡ, ಸೈಯದ್ ಖಾಲಿದ್ ಅಹ್ಮದ್ ಅವರು ಯುವ ಕಾಂಗ್ರೆಸ್ ನಾಯಕರಿಗೆ
ಸೂಚಿಸಿದರು.

“ಬಿಜೆಪಿಯ ಮತ ಕಳ್ಳತನ ಎತಲಾ ರಾಜೇಂದರ್ 3 ಲಕ್ಷ ಮತಗಳನ್ನು ಪಡೆಯಲು ಸಹಾಯ ಮಾಡಿತು” ಎಂದು ಅವರು ಹೇಳಿದರು, ದೇಶದ 80% ಜನರು ಮತ ಕಳ್ಳತನ ನಡೆದಿದೆ ಎಂದು ನಂಬುತ್ತಾರೆ. ಆದರೆ ಬಿಜೆಪಿಯವರು ಮಾತ್ರ ಇದನ್ನು ಒಪ್ಪುವುದಿಲ್ಲ. ಕಾರ್ಪೊರೇಷನ್ ವ್ಯಾಪ್ತಿಯಲ್ಲಿಯೂ ಮತಚೋರಿ ಆಗಿದೆ ಎಂದು ದೂರಿದರು.

ಗೋಷ್ಠಿಯಲ್ಲಿ ಯುವ ಕಾಂಗ್ರೆಸ್ ರಾಜ್ಯಾಧ್ಯಕ್ಷ ಶಿವಚರಣ್ ರೆಡ್ಡಿ ಜಕ್ಕಿಡಿ, ಐವೈಸಿ ಜಿಎಸ್ ಶ್ರವಣ್ ಸಂಯೋಜಕ ಭಾಯಿ ಮತ್ತು ರೋಶ್ನಿ ಜೈಸ್ವಾಲ್ ಹಾಜರಿದ್ದರು.

Exit mobile version