Site icon Kannada News-suddikshana

ದೆಹಲಿಯಲ್ಲಿ ನಡೆದ ಹೋರಾಟದಲ್ಲಿ ಪಾಲ್ಗೊಂಡ ವಿನಯ್ ಕುಮಾರ್: ರಾಜ್ಯಕ್ಕಾದ ಅನ್ಯಾಯದ ವಿರುದ್ಧ ಧ್ವನಿ ಎತ್ತಿದ ಕಾಂಗ್ರೆಸ್ ಯುವ ನಾಯಕ

SUDDIKSHANA KANNADA NEWS/ DAVANAGERE/ DATE:07-02-2024

ನವದೆಹಲಿ: ಕರ್ನಾಟಕ ರಾಜ್ಯಕ್ಕೆ ನಿರಂತರವಾಗಿ ಕೇಂದ್ರ ಸರ್ಕಾರದಿಂದ ಆಗುತ್ತಿರುವ ಅನ್ಯಾಯ ವಿರೋಧಿಸಿ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಭಾರತೀಯ ಯುವ ಕಾಂಗ್ರೆಸ್ ಔಟ್ರೀಚ್ ವಿಭಾಗದ ಕರ್ನಾಟಕ ರಾಜ್ಯ ಉಪಾಧ್ಯಕ್ಷ, ಕಾಂಗ್ರೆಸ್ ಯುವ ಮುಖಂಡ ವಿನಯ್ ಕುಮಾರ್ ಪಾಲ್ಗೊಂಡರು.

ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ. ಕೆ. ಶಿವಕುಮಾರ್, ಸಚಿವರಾದ ಮುನಿಯಪ್ಪ, ಸತೀಶ್ ಜಾರಕಿಹೊಳಿ, ಆರ್. ವಿ. ದೇಶಪಾಂಡೆ, ಎಸ್. ಎಸ್. ಮಲ್ಲಿಕಾರ್ಜುನ್ ಸೇರಿದಂತೆ ಕಾಂಗ್ರೆಸ್ ನಾಯಕರ ದಂಡೇ ನೆರೆದಿತ್ತು. ಮಾತ್ರವಲ್ಲ, ಕಾಂಗ್ರೆಸ್ ಮುಖಂಡರು ಸಹ ಪ್ರತಿಭಟನೆಯಲ್ಲಿ ಪಾಲ್ಗೊಂಡು ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಇನ್ನು ದಾವಣಗೆರೆಯಿಂದ ತೆರಳಿದ್ದ ವಿನಯ್ ಕುಮಾರ್ ಅವರೂ ಸಹ ಪ್ರತಿಭಟನೆಯಲ್ಲಿ ಭಾಗವಹಿಸಿ ಎಲ್ಲರ ಗಮನ ಸೆಳೆದರು.

ಕೇಂದ್ರ ಸರ್ಕಾರವು ರಾಜ್ಯಕ್ಕೆ ನೀಡಬೇಕಿರುವ ಅನುದಾನ, ಜಿಎಸ್ ಟಿ ಹಣ ಸೇರಿದಂತೆ ಲಕ್ಷಾಂತರ ಕೋಟಿ ರೂಪಾಯಿ ಬಿಡುಗಡೆ ಮಾಡಬೇಕು ಎಂಬ ಒತ್ತಾಯಕ್ಕೆ ಕೂಗು ಹಾಕಿದರು. ಪಾದಯಾತ್ರೆ ಮೂಲಕ ದಾವಣಗೆರೆ ಜಿಲ್ಲೆಯಲ್ಲಿ ಜನರ ಗಮನ ಸೆಳೆದಿದ್ದ ವಿನಯ್ ಕುಮಾರ್ ಪ್ರತಿಭಟನೆಯಲ್ಲಿ ಕಾಂಗ್ರೆಸ್ ನಾಯಕರ ಆಕರ್ಷಣೆಯಾಗಿದ್ದರು.

ಸಿದ್ದರಾಮಯ್ಯರು ಭಾಷಣ ಮಾಡುವಾಗಲೂ ವಿನಯ್ ಕುಮಾರ್ ಅವರ ಮುಖ ನೋಡುತ್ತಾ ಭಾಷಣ ಮಾಡುತ್ತಿದ್ದ ಫೋಟೋಗಳು ವೈರಲ್ ಆಗುತ್ತಿವೆ. ಸಿದ್ದರಾಮಯ್ಯರ ಭಾಷಣದುದ್ದಕ್ಕೂ ಪಕ್ಕದಲ್ಲಿಯೇ ನಿಂತಿದ್ದ ವಿನಯ್ ಕುಮಾರ್ ಅವರ ಸರಳತೆ ಎಲ್ಲರಿಗೂ ಇಷ್ಟವಾಯಿತು. ಇನ್ನು ಸಚಿವ ಸತೀಶ್ ಜಾರಕಿಹೊಳಿ ಜೊತೆ ಹೆಜ್ಜೆ ಹಾಕಿಕೊಂಡು ಬಂದರು.

ವಿನಯ್ ಕುಮಾರ್ ಅವರು ಕಾಂಗ್ರೆಸ್ ನಲ್ಲಿ ಬೆಳೆಯುತ್ತಿದ್ದು, ಐಎಎಸ್ ಕೋಚಿಂಗ್ ಸೆಂಟರ್ ಮೂಲಕ ರಾಜ್ಯದಲ್ಲಿ ಅಷ್ಟೇ ಅಲ್ಲ, ರಾಷ್ಟ್ರದಲ್ಲಿಯೂ ಮನೆ ಮಾತಾಗಿದ್ದಾರೆ. ಕೇಂದ್ರ ಸರ್ಕಾರದ ಧೋರಣೆ ವಿರುದ್ಧ ನಡೆದ ಹೋರಾಟ ಯಶಸ್ವಿಯಾಗಿದ್ದು, ಕೇಂದ್ರ ಸರ್ಕಾರಕ್ಕೆ ಬಿಸಿ ಮುಟ್ಟಿಸುವಲ್ಲಿ ಯಶಸ್ವಿಯಾಗಿದೆ.

ಸಿದ್ದರಾಮಯ್ಯ, ಡಿ. ಕೆ. ಶಿವಕುಮಾರ್ ಅವರಂತೂ ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದರು. ಬಾಯಿ ಮಾತಿನಲ್ಲಿ ಹೇಳಿದರೆ ಆಗದು, ಕೂಡಲೇ ಹಣ ಬಿಡುಗಡೆ ಮಾಡುವಂತೆ ಒತ್ತಾಯಿಸಿದರು. ಭದ್ರಾ ಮೇಲ್ದಂಡೆ ಯೋಜನೆಗೆ 5300 ಕೋಟಿ ರೂಪಾಯಿ ಅನುದಾನವನ್ನು ಕಳೆದ ಬಜೆಟ್ ನಲ್ಲಿ ಘೋಷಣೆ ಮಾಡಿದ್ದರೂ ಇದುವರೆಗೆ ಹಣ ಬಂದಿಲ್ಲ. ಆದಷ್ಟು ಬೇಗ ಬಿಡುಗಡೆ ಮಾಡುವಂತೆ ಒತ್ತಾಯಿಸಿದರು.

Exit mobile version