Home ದಾವಣಗೆರೆ ಕಾಂಗ್ರೆಸ್ ವೀರಶೈವರ – ಶ್ರೀಮಂತರ ಪಾಲಾದ ಅಖಿಲ ಭಾರತ ವೀರಶೈವ ಮಹಾಸಭಾ: ಶಾಸಕ ಬಿ. ಪಿ. ಹರೀಶ್ ಗಂಭೀರ ಆರೋಪ!
ದಾವಣಗೆರೆಬೆಂಗಳೂರು

ಕಾಂಗ್ರೆಸ್ ವೀರಶೈವರ – ಶ್ರೀಮಂತರ ಪಾಲಾದ ಅಖಿಲ ಭಾರತ ವೀರಶೈವ ಮಹಾಸಭಾ: ಶಾಸಕ ಬಿ. ಪಿ. ಹರೀಶ್ ಗಂಭೀರ ಆರೋಪ!

Share
ವೀರಶೈವ
Share

ದಾವಣಗೆರೆ: ಅಖಿಲ ಭಾರತ ವೀರಶೈವ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ ಈಶ್ವರ ಖಂಡ್ರೆ ಅವರು ವೀರಶೈವ ಸಮಾಜದ ಸಭೆ ನಡೆಸಿ ದಾವಣಗೆರೆಯ ಜನತೆಗೆ ಬಹಳಷ್ಟು ಸುಳ್ಳು ಮಾಹಿತಿ ನೀಡಿದ್ದಾರೆ ಎಂದು ಶಾಸಕ ಬಿ.ಪಿ.ಹರೀಶ್ ಅವರು ಆಕ್ಷೇಪಿಸಿದ್ದಾರೆ. ಅಖಿಲ ಭಾರತ ವೀರಶೈವ ಮಹಾಸಭಾವು ದುಡ್ಡಿದ್ದಂತ, ಕೇವಲ ಕಾಂಗ್ರೆಸ್ ವೀರಶೈವರ ಹಾಗೂ ಶ್ರೀಮಂತರ ಪಾಲಾಗಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.

ಬಿಜೆಪಿ ಕಚೇರಿಯಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.

ಭ್ರಷ್ಟಾಚಾರ ಮಾಡಲು, ರಾಜಕೀಯ ಪಕ್ಷಗಳನ್ನು ಹೆದರಿಸಿ ಮಂತ್ರಿ ಸ್ಥಾನ ಪಡೆಯಲು ಈ ಮಹಾಸಭಾವನ್ನು ಇವರು ದುರುಪಯೋಗ ಪಡಿಸಿಕೊಂಡಿದ್ದಾರೆ. ಬಡ ವೀರಶೈವರಿಗೆ ಇವರ ಕೊಡುಗೆ ಇಲ್ಲ ಎಂದು ಟೀಕಿಸಿದರು.

ಈಶ್ವರ ಖಂಡ್ರೆ ಅವರು ಬಹಳ ಮುಜುಗರದಿಂದ ಪತ್ರಿಕಾಗೋಷ್ಠಿ ನಡೆಸಿದ್ದಾರೆ. ಅಭ್ಯರ್ಥಿ ಸಮರ್ಥ ಅವರ ತಂದೆಯ ಒಡೆತನದ ಸಕ್ಕರೆ ಕಾರ್ಖಾನೆ, ಡಿಸ್ಟಿಲರೀಸ್‍ನಿಂದ ಕೈಗಾರಿಕಾ ತ್ಯಾಜ್ಯವನ್ನು ಸರಿಯಾಗಿ ಸಂಸ್ಕರಿಸದೇ ನೇರವಾಗಿ ತುಂಗಭದ್ರಾ ನದಿಗೆ ಬಿಡಲಾಗುತ್ತಿದೆ. ಅರಣ್ಯ ಸಚಿವರಾದ ತಮ್ಮ ಅಡಿಯಲ್ಲೇ ಮಾಲಿನ್ಯ ನಿಯಂತ್ರಣ ಮಂಡಳಿಯೂ ಇದೆ. ಇಂಥ ಅಭ್ಯರ್ಥಿ ಪರವಾಗಿ ತಾವು ಮಾತನಾಡಿದ್ದು ಸರಿಯೇ ಎಂದು ಕೇಳಿದರು.

ರೈತರ ಜಮೀನಿನ ಬೆಳೆಗಳ ಮೇಲೆ ಹಾರು ಬೂದಿ ದೂಳು ಬೀಳುತ್ತಿದೆ. ಬಡ ರೈತರಿಗೆ ಅನ್ಯಾಯ ಮಾಡುತ್ತಿರುವ ಬಗ್ಗೆ ಸದನದಲ್ಲಿ ಎತ್ತಿದಾಗ ಖಂಡ್ರೆಯವರು ಸುಳ್ಳು ಮಾಹಿತಿ ಕೊಟ್ಟಿದ್ದರು. ಖಂಡ್ರೆಯವರೇ, ಮಲ್ಲಿಕಾರ್ಜುನ್ ಅವರ ದುರಾಡಳಿತ, ಕುಡಿಯುವ ನೀರಿನ ಮೇಲಿನ ದುಷ್ಪರಿಣಾಮ ನಿಮಗೆಲ್ಲ ಗೊತ್ತಿದೆ. ಎವಿಕೆ ಕಾಲೇಜು ಸ್ಥಾಪಿಸಿ ಯುವತಿಯರಿಗೆ ಶಿಕ್ಷಣ ಸಿಗುವಂತೆ ಮಾಡಿದ್ದಾಗಿ ಹೇಳಿದ್ದೀರಿ. ಖಂಡ್ರೆಯವರೇ, ಸುಳ್ಳು ಮಾಹಿತಿ ಕೊಡದಿರಿ. ದಾವಣಗೆರೆಯಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಅಭಿವೃದ್ಧಿ ಆಗಲು ರಾಜನಳ್ಳಿ, ಅಜ್ಜಂಪುರ ಮನೆತನದವರು, ದಾನಿಗಳು ದೊಡ್ಡ ಕೊಡುಗೆ ನೀಡಿದ್ದಾರೆ. ಚಿಗಟೇರಿ ಆಸ್ಪತ್ರೆಯನ್ನು ಆ ಮನೆತನದವರ ಕೊಡುಗೆ ಮೂಲಕ ಸ್ಥಾಪಿಸಿದ್ದಾರೆ. ಶಾಮನೂರು ಶಿವಶಂಕರಪ್ಪ ಅವರು ಆ ಕೊಡುಗೆ ನೀಡಿದ್ದಾಗಿ ಸುಳ್ಳು ಹೇಳಿದ್ದೀರಲ್ಲವೇ ಎಂದು ಕೇಳಿದರು.

ವೀರಶೈವರು ಸಸ್ಯಾಹಾರಿಗಳು; ಶಾಮನೂರು ಶಿವಶಂಕರಪ್ಪ ಅವರ ಪುತ್ರ ನೂರಾರು ಪ್ರಾಣಿ ಹಿಂಸೆ ಮಾಡಿ, ಅನೇಕ ಕೃಷ್ಣ ಮೃಗವನ್ನು ಹಿಡಿದಿದ್ದಾರೆ. ಇಡೀ ಸಮಾಜವನ್ನು ಪ್ರತಿನಿಧಿಸುವ ಅಧ್ಯಕ್ಷರಾಗಿ ಅವರ ಮನೆಯಲ್ಲಿ ಶೇ 15ರಷ್ಟು ಸಸ್ಯಾಹಾರವನ್ನೂ ಸೇವಿಸಿಲ್ಲ ಎಂದು ಆಕ್ಷೇಪಿಸಿದರಲ್ಲದೇ ಇದು ನಮ್ಮ ಸಂಸ್ಕೃತಿಯೇ? ಅದನ್ನು ನಾವು ಒಒಪ್ಪಿಕೊಳ್ಳಬೇಕೇ ಎಂದರು. ಅಖಿಲ ಭಾರತ ವೀರಶೈವ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷರಾಗಿ ಒಬ್ಬ ರಾಜಕಾರಣಿ ಇರಬಾರದು. ಇವರಿಂದ ವೀರಶೈವರಿಗೆ ನ್ಯಾಯ ನೀಡಲು ಸಾಧ್ಯವಾಗದು ಎಂದು ತಿಳಿಸಿದರು. ಮಹಾಸಭಾದಲ್ಲಿ ಸಾಮಾನ್ಯ ವೀರಶೈವರಿಲ್ಲ ಎಂದು ದೂರಿದರು.

ದಾವಣಗೆರೆಯಲ್ಲಿ ವೈದ್ಯಕೀಯ- ಎಂಜಿನಿಯರಿಂಗ್ ಕಾಲೇಜು, ಬಾಪೂಜಿ ವಿದ್ಯಾಸಂಸ್ಥೆ ಬಗ್ಗೆ ಜನಸಾಮಾನ್ಯರಿಗೆ ತಿಳಿದಿದೆ. ಇದನ್ನು ಕಟ್ಟಿದವರು, ಬೆಳೆಸಿದವರು, ಕಸಿದುಕೊಂಡವರು ಯಾರೆಂದು ಜನಸಾಮಾನ್ಯರಿಗೆ ಗೊತ್ತಿದೆ ಎಂದು ಗಮನ ಸೆಳೆದರು. ಶಿವಶಂಕರಪ್ಪನವರು, ನಿಧನರಾದ ಮನೆತನದ ಸದಸ್ಯರಿಗೆ ದೂರವಿಟ್ಟು ತನ್ನ ಮನೆಮಂದಿಯನ್ನು ಸೇರಿಸುತ್ತ ಬಂದರು. ಆದರೆ, ಅದಕ್ಕಿಂತ ಮುಂದೆ ಹೋದ ಭ್ರಷ್ಟ, ದುರಾಡಳಿತ ಮಾಡುವ ನಮ್ಮ ಜಿಲ್ಲಾ ಸಚಿವರು ಅವರ ಮನೆತನದವರನ್ನೂ ಇಲ್ಲದಂತೆ ಮಾಡಿದ್ದಾರೆ. ಬಾಪೂಜಿ ವಿದ್ಯಾಸಂಸ್ಥೆಯಲ್ಲಿ ಅವರ ಸೋದರರಿಲ್ಲ. ಅವರು, ಅವರ ಶ್ರೀಮತಿ, ಅವರ ಕಾರ್ಖಾನೆಯಲ್ಲಿ ಕೆಲಸ ಮಾಡುವವರಿದ್ದಾರೆ ಎಂದು ಆರೋಪಿಸಿದರು.

ಮಲ್ಲಿಕಾರ್ಜುನ್ ಅವರು ಮನೆತನದ ಎಲ್ಲರನ್ನೂ ಮುಳುಗಿಸಿ ಅವರ ಪಾಲು ಮಾಡಿಕೊಂಡು ಬಂದ ದುಷ್ಟ. ಇವರಿಂದ ವೈದ್ಯಕೀಯ- ಎಂಜಿನಿಯರಿಂಗ್ ಕಾಲೇಜು ಆಗಲೀ ಆಗಿಲ್ಲ ಎಂದು ತಿಳಿಸಿದರು. ಇದರ ಹಿಂದೆ ಬಹಳಷ್ಟು ಮನೆತನಗಳ ತ್ಯಾಗ ಇದೆ. ಅದನ್ನು ಜನರಿಗೆ ತಿಳಿಸಬೇಕಿದೆ ಎಂದು ಹೇಳಿದರು. ಬಡ ಮಹಿಳೆಯರ ತಾಳಿ ಕಿತ್ತುಕೊಳ್ಳುವ ಡಿಸ್ಟಿಲರಿ ಸ್ಥಾಪಿಸಿದ್ದನ್ನು ಈಶ್ವರ ಖಂಡ್ರೆಯವರು ಹೆಗ್ಗಳಿಕೆಯಂತೆ ಹೇಳಿದ್ದಾರೆ ಎಂದು ದೂರಿದರು.

ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾಧ್ಯಕ್ಷ ರಾಜಶೇಖರ್ ವೀರೇಶ್, ಪ್ರಮುಖರಾದ ವಿಜೇಂದ್ರ ಡಿ.ಟಿ., ಅವಿನಾಶ್ ಪಿ.ಎಸ್, ವಿಶ್ವಾಸ್ ಮತ್ತಿತರರು ಇದ್ದರು.

Share

Leave a comment

Leave a Reply

Your email address will not be published. Required fields are marked *