Site icon Kannada News-suddikshana

ಮುನಿಸು ಮರೆತು ಒಂದೇ ವೇದಿಕೆಯಲ್ಲಿ ಬಿಜೆಪಿ ನಾಯಕರು: ಹಾಲಿ, ಮಾಜಿ ಸಂಸದರಿಂದ 2ನೇ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸ್ವಾಗತ!

ವಂದೇ ಭಾರತ್ ಎಕ್ಸ್‌ಪ್ರೆಸ್

SUDDIKSHANA KANNADA NEWS/ DAVANAGERE/DATE:10_08_2025

ದಾವಣಗೆರೆ: ದಾವಣಗೆರೆ ಎರಡನೇ ವಂದೇ ಭಾರತ್ ಎಕ್ಸ್‌ಪ್ರೆಸ್  ಹಸಿರು ನಿಶಾನೆ ಕಾರ್ಯಕ್ರಮ ವಿಶೇಷತೆಗೆ ಸಾಕ್ಷಿಯಾಯ್ತು. ಹಾಲಿ ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್, ಮಾಜಿ ಸಂಸದ ಹಾಗೂ ಕೇಂದ್ರದ ಮಾಜಿ ಸಚಿವ ಡಾ. ಜಿ. ಎಂ. ಸಿದ್ದೇಶ್ವರ, ಶಾಸಕ ಬಿ. ಪಿ. ಹರೀಶ್, ಬಿಜೆಪಿ ಭಿನ್ನಮತೀಯ ನಾಯಕ ಎಂದೇ ಕರೆಸಿಕೊಳ್ಳುವ ಮಾಜಿ ಸಚಿವ ಎಂ. ಪಿ. ರೇಣುಕಾಚಾರ್ಯ ಸೇರಿದಂತೆ ಹಲವು ಬಿಜೆಪಿ ಮುಖಂಡರು ಒಂದೆಡೆ ಕಾಣಿಸಿಕೊಂಡರು.

2ನೇ ವಂದೇ ಭಾರತ್ ಎಕ್ಸ್ ಪ್ರೆಸ್ ಗೆ ಚಾಲನೆ:

ಬೆಂಗಳೂರು-ದಾವಣಗೆರೆ- ಬೆಳಗಾವಿಗೆ ವಂದೇ ಭಾರತ್ ಎಕ್ಸ್‍ಪ್ರೆಸ್ ರೈಲು ಸೇವೆಯಿಂದ ಶಿಕ್ಷಣ, ಆರೋಗ್ಯ ಸೇವೆಯ ಅನುಕೂಲದ ಜೊತೆಗೆ ವ್ಯಾಪಾರ ವಹಿವಾಟು ವೃದ್ದಿಯಾಗಲಿದೆ ಎಂದು ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ತಿಳಿಸಿದರು.

READ ALSO THIS STORY: ಮತಗಳ್ಳತನ ಆರೋಪದ ನಡುವೆ ಮೆಟ್ರೋ ಪ್ರಯಾಣ ವೇಳೆ ನರೇಂದ್ರ ಮೋದಿ, ಸಿದ್ದರಾಮಯ್ಯ, ಡಿಕೆಶಿ ಗಹಗಹಿಸಿ ನಗಲು ಕಾರಣವೇನು?

ಅವರು ಬೆಂಗಳೂರು ನಿಲ್ದಾಣದಿಂದ ಹೊರಟ ಸ್ವದೇಶಿ ನಿರ್ಮಿತ, ಸೆಮಿ, ಹೈಸ್ಪೀಡ್, ಸ್ವಯಂ ಚಾಲಿತ ರೈಲು ಬೆಂಗಳೂರು-ಬೆಳಗಾವಿ ವಂದೇ ಭಾರತ್ ರೈಲನ್ನು ದಾವಣಗೆರೆ ರೈಲ್ವೆ ನಿಲ್ದಾಣದಲ್ಲಿ ಸ್ವಾಗತಿಸಿ ಬೆಳಗಾವಿಗೆ ಹೊರಟ ರೈಲಿಗೆ ಹಸಿರು ನಿಶಾನೆ ತೋರಿಸಿದರು. ಈ ವೇಳೆ ಡಾ. ಜಿ. ಎಂ. ಸಿದ್ದೇಶ್ವರ ಅವರು ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರ ಪಕ್ಕದಲ್ಲಿಯೇ ಇದ್ದರು.

ಬಳಿಕ ಮಾತನಾಡಿದ ಅವರು, ಹೆಚ್ಚಿನ ವೇಗದ ರೈಲು ಸೇವೆಯಿಂದ ಶಿಕ್ಷಣಕ್ಕಾಗಿ ಇಲ್ಲಿಗೆ ಮತ್ತು ಇಲ್ಲಿಂದ ಬೇರೆ ಕಡೆ ಹೋಗಲು ಮತ್ತು ಆರೋಗ್ಯಕ್ಕೆ ಸಂಬಂಧಿಸಿದಂತೆ ಚಿಕಿತ್ಸೆಗೆ ಬೇರೆ ಕಡೆ ಹೋಗಲು ಮತ್ತು ಆಗಮಿಸಲು ವೇಗದ ಪ್ರಯಾಣ ಸೌಲಭ್ಯದಿಂದ ಜನರಿಗೆ ಅನುಕೂಲದ ಜೊತೆಗೆ ವ್ಯಾಪಾರ ವಹಿವಾಟಿ ಗರಿಗೆದರಲಿದೆ. ಸಾರ್ವಜನಿಕರು ಸಹ ರೈಲು ಸೇವೆ ಪಡೆದುಕೊಳ್ಳಬಹುದಾಗಿದೆ.

ತುಮಕೂರು-ದಾವಣಗೆರೆ ನೇರ ರೈಲು ಆದಷ್ಟು ಬೇಗ ನಿರ್ಮಾಣವಾದಲ್ಲಿ ಇನ್ನೂ ಹೆಚ್ಚು ಅನುಕೂಲವಾಗಲಿದೆ. ರೈಲ್ವೆ ನಿಲ್ದಾಣದಲ್ಲಿ ಗುಣಮಟ್ಟದ ಆಹಾರ ಪ್ರಯಾಣಿಕರಿಗೆ ಸಿಗಬೇಕೆಂದು ಮತ್ತು ಸ್ವಚ್ಚತೆಯನ್ನು ಕಾಪಾಡಿಕೊಳ್ಳಲು ಸಚಿವರೊಂದಿಗೆ ಚರ್ಚಿಸಲಾಗಿದ್ದು ಅಗತ್ಯವಿರುವ ಕಡೆ ರೈಲು ಸೇವೆಯನ್ನು ವಿಸ್ತರಿಸಲೂ ಸಹ ಮನವಿ ಮಾಡಲಾಗಿದೆ ಎಂದು ಪ್ರಭಾ ಮಲ್ಲಿಕಾರ್ಜುನ್ ಅವರು ತಿಳಿಸಿದರು.

ಬೆಂಗಳೂರು-ಬೆಳಗಾವಿ ವಂದೇ ಭಾರತ್ ರೈಲು ಪ್ರತಿದಿನ ಬೆಂಗಳೂರಿನಿಂದ ಮಧ್ಯಾಹ್ನ 2.20 ಕ್ಕೆ ಹೊರಟು ಸಂಜೆ 5.48 ಕ್ಕೆ ದಾವಣಗೆರೆಗೆ ಆಗಮಿಸಿ ರಾತ್ರಿ 10.40 ಕ್ಕೆ ಬೆಳಗಾವಿ ತಲುಪಲಿದೆ. ಬೆಳಗಾವಿಯಿಂದ ಪ್ರತಿದಿನ ಬೆಳಗ್ಗೆ 5.20 ಕ್ಕೆ ಹೊರಟು ದಾವಣಗೆರೆಗೆ ಬೆಳಗ್ಗೆ 9.25 ಕ್ಕೆ ತಲುಪಿ ಮಧ್ಯಾಹ್ನ 1.50 ಕ್ಕೆ ಬೆಂಗಳೂರಿಗೆ ಈ ವಂದೇ ಭಾರತ್ ಎಕ್ಸ್‍ಪ್ರೆಸ್ ರೈಲು ತಲುಪಲಿದೆ.

ಕಾರ್ಯಕ್ರಮದಲ್ಲಿ ಮಾಜಿ ಸಂಸದ ಜಿ.ಎಂ.ಸಿದ್ದೇಶ್ವರ, ಹರಿಹರ ಶಾಸಕ ಬಿ.ಪಿ.ಹರೀಶ್, ದೂಡಾ ಅಧ್ಯಕ್ಷ ದಿನೇಶ್ ಕೆ.ಶೆಟ್ಟಿ, ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ, ಚೇಂಬರ್ಸ್ ಆಫ್ ಕಾಮರ್ಸ್ ಅಧ್ಯಕ್ಷ ಶಂಬಣ್ಣ, ಮೈಸೂರು ರೈಲ್ವೆ ವಿಭಾಗದ ಹೆಚ್ಚುವರಿ ವಿಭಾಗೀಯ ವ್ಯವಸ್ಥಾಪಕ ಶಾಮಿದ್ ಹಮೀದ್ ಹಾಗೂ ಇನ್ನಿತರೆ ಗಣ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

 

Exit mobile version