Site icon Kannada News-suddikshana

ಕುರುಬರಿಗೆ ಎಸ್ಟಿ ಮೀಸಲಾತಿ ನೀಡಿದರೆ ವಾಲ್ಮೀಕಿ ಸಮಾಜಕ್ಕೆ ಅನ್ಯಾಯವಾಗಲ್ಲ, ಊಹಾಪೋಹಕ್ಕೆ ಕಿವಿಗೊಡಬೇಡಿ: ಕಾಗಿನೆಲೆ ಶ್ರೀಗಳ ಮನವಿ!

ಕುರುಬ

SUDDIKSHANA KANNADA NEWS/DAVANAGERE/DATE:08_10_2025

ದಾವಣಗೆರೆ: ಕುರುಬರಿಗೆ ಎಸ್ಟಿ ಮೀಸಲಾತಿ ನೀಡಿದರೆ ವಾಲ್ಮೀಕಿ ಸಮಾಜಕ್ಕೆ ಅನ್ಯಾಯವಾಗಲ್ಲ. ಸಮಾಜದಲ್ಲಿ ಯಾವತ್ತೂ ಸಹೋದರ ಸಮಾಜಗಳಂತಿರುವ ನಾವು – ನೀವುಗಳು ಸಾಂವಿಧಾನಿಕ ಹಕ್ಕುಗಳನ್ನು ಪಡೆದುಕೊಳ್ಳಲು ಸಾಮರಸ್ಯ, ಸೌಹಾರ್ದತೆಯಿಂದ ಇದ್ದು ಸಮಾಜದ ಸ್ವಾಸ್ಥ್ಯ ಕಾಪಾಡಿಕೊಳ್ಳೋಣ ಎಂದು ಶ್ರೀ ಕಾಗಿನೆಲೆ ಮಹಾಸಂಸ್ಥಾನ ಕನಕಗುರುಪೀಠದ ಶ್ರೀ ನಿರಂಜನಾನಂದಪುರಿ ಮಹಾಸ್ವಾಮೀಜಿ ಮನವಿ ಮಾಡಿದ್ದಾರೆ.

READ ALSO THIS STORY: 19 ವರ್ಷದ ಸಹೋದರಿ ಅನೈತಿಕ ಸಂಬಂಧಕ್ಕೆ ಬೇಸತ್ತು ನೀರಿನಲ್ಲಿ ಮುಳುಗಿಸಿ ಕೊಲೆ: ಪೊಲೀಸರಿಗೆ ಕರೆ ಮಾಡಿದ ಸಹೋದರ!

ಈ ಸಂಬಂಧ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಶ್ರೀಗಳು, ಲೋಕೂರು ಸಮಿತಿಯ ಮಾನದಂಡಗಳಂತೆ ಇರುವ ಕುರುಬ ಸಮುದಾಯದ ಲಕ್ಷಣಗಳನ್ನು ಆಧರಿಸಿ ಕೇಂದ್ರ ಸರ್ಕಾರ ನಮಗೆ ಎಸ್. ಟಿ. ಮೀಸಲಾತಿ ನೀಡಿದರೆ ನಿಮ್ಮ 7% ಮೀಸಲಾತಿಯಲ್ಲಿ ನಾವು ಪಾಲನ್ನು ಪಡೆಯುವುದಿಲ್ಲ ನಾವು ಈಗಾಗಲೇ 2ಎ ಮೀಸಲಾತಿಯಲ್ಲಿನ ಕುರುಬರ ಜನಸಂಖ್ಯಾಗನುಣವಾಗಿ ಮೀಸಲಾತಿ ಪ್ರಮಾಣವನ್ನು ಪಡೆದುಕೊಂಡು ಎಸ್. ಟಿ. ಮೀಸಲಾತಿ ಪಡೆಯುತ್ತೇವೆ ಎಂದು ಹೇಳಿದ್ದಾರೆ.

ವಾಲ್ಮೀಕಿ ಸಮುದಾಯದವರು ಯಾವುದೇ ಊಹಾಪೋಹ, ಗೊಂದಲಗಳಿಗೆ ಕಿವಿಗೊಡದೇ ಸಂವಿಧಾನಬದ್ಧವಾಗಿ “ನಮ್ಮ ಹಕ್ಕುಗಳನ್ನು ನಾವು ಪಡೆಯುತ್ತೇವೆ” ಎಂದು ಸ್ಪಷ್ಟಪಡಿಸುತ್ತೇವೆ. ಸಮಾಜದಲ್ಲಿ ಯಾವತ್ತೂ ಸಹೋದರ ಸಮಾಜಗಳಂತಿರುವ ನಾವು – ನೀವುಗಳು ಸೌಹರ್ದತೆಯಿಂದ ಇರೋಣ ಎಂದು ಹೇಳಿದ್ದಾರೆ.

2021 ರಲ್ಲಿ ಶ್ರೀಕಾಗಿನೆಲೆ ಮಹಾಸಂಸ್ಥಾನ, ಕನಕ ಗುರುಪೀಠ ಮತ್ತು ಕರ್ನಾಟಕ ರಾಜ್ಯ ಕುರುಬರ ಎಸ್.ಟಿ. ಹೋರಾಟ ಸಮಿತಿಯ ಕೆ. ವಿರೂಪಾಕ್ಷಪ್ಪ, ಕೆ. ಎಸ್. ಈಶ್ವರಪ್ಪ, ಹೆಚ್. ವಿಶ್ವನಾಥ, ಹೆಚ್. ಎಂ. ರೇವಣ್ಣ, ಬಂಡೆಪ್ಪ ಕಾಶಂಪೂರ್, ಹಾಲುಮತ ಮಹಾಸಭಾದ ರುದ್ರಣ್ಣ ಗುಳಗುಳಿ ಹಾಗೂ ಮುಖಂಡರು ಮತ್ತು ಕುರುಬ ಸಮಾಜದ ಎಲ್ಲಾ ಸಂಘಟನೆಗಳ ಸಂಯುಕ್ತ ಆಶ್ರಯದಲ್ಲಿ ಕಟ್ಟ ಕಡೆಯ ಕುರುಬರೂ, ಕುರುಬರಿಗೆ ಎಸ್. ಟಿ. ಮೀಸಲಾತಿ ಹೋರಾಟದ ಪಾದಯಾತ್ರೆಯು ದಿನಾಂಕ 15-01-2021 ರಂದು ಕಾಗಿನೆಲೆಯಿಂದ ಬೆಂಗಳೂರಿನವರೆಗೆ 360 ಕಿ. ಮೀ ಕ್ರಮಿಸಿ, ದಿನಾಂಕ 07-02-2021 ರಂದು ಬೆಂಗಳೂರಿನಲ್ಲಿ ಬೃಹತ್ ಸಮಾವೇಶ ಮಾಡಿ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು ಎಂದು ಮಾಹಿತಿ ನೀಡಿದ್ದಾರೆ.

ತದನಂತರ ನಿರಂತರ ಪ್ರಯತ್ನ ಹಾಗೂ ಒತ್ತಾಯದಿಂದ ಅಂದಿನ ಬಿಜೆಪಿ ನೇತೃತ್ವದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ಸರ್ಕಾರವು ದಿನಾಂಕ 24-03-2023 ರಂದು ಸಚಿವ ಸಂಪುಟ ಸಭೆಯಲ್ಲಿ ಅನುಮೋದಿಸಿ, ದಿನಾಂಕ 28-03-2023 ರಂದು ಆದೇಶ ಮಾಡಿತು. ತದ ನಂತರದ ಕಾಂಗ್ರೆಸ್ ಸರ್ಕಾರ ದಿನಾಂಕ 20-07-2023 ರಂದು ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಿ ಕಳುಹಿಸಿ ಕೊಟ್ಟಿತು. ಪ್ರಸ್ತುತ ಕುರುಬರ ಎಸ್. ಟಿ. ಮೀಸಲಾತಿಯ ಕುರಿತು ಕೇಂದ್ರ ಸರ್ಕಾರವು ಹಲವು ಮಾಹಿತಿ ಕೇಳಿದ್ದು, ಅದನ್ನು ರಾಜ್ಯ ಸರ್ಕಾರವು ನೀಡುತ್ತಿದೆ ಎಂದು ತಿಳಿಸಿದ್ದಾರೆ.

ನಮ್ಮೆಲ್ಲರ ಹೋರಾಟದ ಫಲಕ್ಕೆ ಸಂವಿಧಾನಾತ್ಮಕವಾಗಿ ನ್ಯಾಯಸಿಗುವ ನಿರೀಕ್ಷೆ ನಮ್ಮದು. ಇದರ ಮಧ್ಯೆ ಸಹೋದರ ಸಮಾಜವಾದ ಈಗಾಗಲೇ ಎಸ್.ಟಿ. ಮೀಸಲಾತಿ ಸೌಲಭ್ಯ ಪಡೆಯುತ್ತಿರುವ ನಾಯಕ (ವಾಲ್ಮೀಕಿ) ಬಂಧುಗಳು ಕುರುಬರಿಗೆ ಎಸ್. ಟಿ. ಮೀಸಲಾತಿ ಕೊಡಬಾರದು, ನಮಗೆ ಅನ್ಯಾಯವಾಗುತ್ತದೆ, ನಾವುಗಳು ಉಗ್ರ ಹೋರಾಟ ಮಾಡುತ್ತೇವೆ ಎಂದು ಸರ್ಕಾರಕ್ಕೆ ಮನವಿ ನೀಡಿದ್ದಾರೆ. ಹಲವು ಬಹಿರಂಗ ವೇದಿಕೆಯ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಪ್ರಚೋದನೆಯ ಮಾತುಗಳನ್ನಾಡಿ ಖಂಡಿಸುತ್ತಿರುವುದನ್ನು ಗಮನಿಸಿದ್ದೇವೆ. ಶ್ರೀಕನಕ ಗುರುಪೀಠವು ನಾಯಕ(ವಾಲ್ಮೀಕಿ) ಬಂಧುಗಳಿಗೆ ಕುರುಬ ಸಮುದಾಯದ ಗುರಿ, ಉದ್ದೇಶವನ್ನು ಮನದಟ್ಟು ಮಾಡಿಕೊಡಲು ಬಯಸುತ್ತದೆ ಎಂದು ಶ್ರೀಗಳು ಹೇಳಿದ್ದಾರೆ.

Exit mobile version