SUDDIKSHANA KANNADA NEWS/ DAVANAGERE/ DATE-29-04-2025
ಜೈಪುರದಲ್ಲಿ ನಡೆದ ಗುಜರಾತ್ ಟೈಟನ್ಸ್ ವಿರುದ್ಧದ ಪಂದ್ಯದಲ್ಲಿ ಅಬ್ಬರಿಸಿ ಬೊಬ್ಬಿರಿದ ಕೇವಲ 14 ವರ್ಷದ ಹುಡುಗ ಈಗ ವಿಶ್ವ ಕ್ರಿಕೆಟ್ ತನ್ನತ್ತ ನೋಡುವಂತ ಸಾಧನೆ ಮಾಡಿದ್ದು, ಉದಯೋನ್ಮುಖ ಬ್ಯಾಟ್ಸ್ ಮನ್ ಆಗಿ ಭರವಸೆ ಮೂಡಿಸಿದ್ದಾರೆ.
ಈ ಬಾರಿಯ ಐಪಿಎಲ್ ನಲ್ಲಿ ರಾಜಸ್ತಾನ ರಾಯಲ್ಸ್ ಪರ ಕೇವಲ ಮೂರನೇ ಪಂದ್ಯ ಆಡುತ್ತಿರುವ ವೈಭವ ಸೂರ್ಯವಂಶಿ ಕೇವಲ 35 ಎಸೆತಗಳಲ್ಲಿ ಶತಕ ಬಾರಿಸುವ ಮೂಲಕ ಸ್ಫೋಟಕ ಬ್ಯಾಟಿಂಗ್ ನಡೆಸಿ ತಂಡದ ಗೆಲುವಿಗೆ ಕಾರಣಕರ್ತರಾಗಿದ್ದಾರೆ. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ ಟೈಟನ್ಸ್ ಶುಭಮನ್ ಗಿಲ್, ಜೋಸ್ ಬಟ್ಲರ್ ಆಕರ್ಷಕ ಅರ್ಧಶತಕ ಬಾರಿಸಿ 20 ಓವರ್ ಗಳಲ್ಲಿ 209 ರನ್ ಕಲೆ ಹಾಕಿತು.
ಈ ಕಠಿಣ ಗುರಿ ಬೆನ್ನತ್ತಿದ ರಾಜಸ್ತಾನ ರಾಯಲ್ಸ್ ಭರ್ಜರಿ ಆರಂಭ ಪಡೆಯಿತು. ವೈಭವ್ ಸೂರ್ಯವಂಶಿ ಬ್ಯಾಟಿಂಗ್ ಗೆ ಗುಜರಾತ್ ಟೈಟನ್ಸ್ ಬೌಲರ್ ಗಳು ಬೆವರಿದರು. ಸಿಕ್ಸರ್, ಬೌಂಡರಿಗಳ ಮೂಲಕ ಕ್ರೀಡಾಂಗಣದ ಮೂಲೆ ಮೂಲೆಗೂ ಚೆಂಡು ಹೋಗುವಂತೆ ಮಾಡಿದ ವೈಭವ್ ಸೂರ್ಯವಂಶಿ ಆಟಕ್ಕೆ ಎಲ್ಲರೂ ತಲೆದೂಗಿದರು. ವೈಭವ್ ಶತಕ ಬಾರಿಸುತ್ತಿದ್ದಂತೆ ರಾಜಸ್ತಾನ ರಾಯಲ್ಸ್ ತಂಡದ ಕೋಚ್ ರಾಹುಲ್ ದ್ರಾವಿಡ್, ಸಹ ಆಟಗಾರರು ಕುಣಿದು ಕುಪ್ಪಳಿಸಿದರು. ಯಶಸ್ವಿ ಜೈಸ್ವಾಲ್ ಹಾಗೂ ವೈಭವ್ ಸೂರ್ಯವಂಶಿ ವೈಭವ ಆಟಕ್ಕೆ ಸುಲಭವಾಗಿ ಗೆಲುವು ದಕ್ಕಿತು. 70 ರನ್ ಬಾರಿಸಿ ಯಶಸ್ವಿ ಜೈಸ್ವಾಲ್ ಔಟಾಗದೇ ಉಳಿದರು.
35 ಎಸೆತಗಳಲ್ಲಿ ಐಪಿಎಲ್ ಸೆಂಚುರಿ ಬಾರಿಸಿರುವ ವೈಭವ್ ಸೂರ್ಯವಂಶಿ ಕಷ್ಟಪಟ್ಟು ಬಡತನದ ಬೇಗೆಯಲ್ಲಿ ಬೆಳೆದವರು. ಐಪಿಎಲ್ ಹುಟ್ಟಿದಾಗ ವೈಭವ್ ಸೂರ್ಯವಂಶಿ ಹುಟ್ಟಿಯೇ ಇರಲಿಲ್ಲ. ಐಪಿಎಲ್ ಶುರುವಾಗಿ 3 ವರ್ಷಗಳ ನಂತರ ಹುಟ್ಟಿದವನು ಇವತ್ತು ಇಡೀ ಕ್ರಿಕೆಟ್ ಜಗತ್ತೇ ತನ್ನತ್ತ ತಿರುಗಿ ನೋಡುವಂತೆ ಮಾಡಿದ್ದಾನೆ.
14ನೇ ವಯಸ್ಸಿನಲ್ಲಿ ರಶೀದ್ ಖಾನ್, ಪ್ರಸಿದ್ಧ್ ಕೃಷ್ಣ, ಮೊಹಮ್ಮದ್ ಸಿರಾಜ್, ಇಶಾಂತ್ ಶರ್ಮಾರಂತಹ ವರ್ಲ್ಡ್ ಕ್ಲಾಸ್ ಬೌಲರ್’ಗಳ ಮುಂದೆ ಎದೆಯುಬ್ಬಿಸಿ ನಿಂತು ಶತಕ ಬಾರಿಸುವುದೆಂದರೆ..? ಅದೂ 35 ಎಸೆತಗಳಲ್ಲಿ ನಿಜಕ್ಕೂ ಊಹಿಸುವುದು ಕಷ್ಟ. ಆದ್ರೆ, ಇದು ಸಾಧ್ಯವಾಗಿದೆ.
ಇಶಾಂತ್ ಶರ್ಮಾ ಒಂದೇ ಓವರ್ನಲ್ಲಿ 3 ಸಿಕ್ಸರ್ಸ್, 28 ರನ್. 18 ವರ್ಷಗಳ ಹಿಂದೆ ಆಸ್ಟ್ರೇಲಿಯಾದಲ್ಲಿ ರಿಕಿ ಪಾಂಟಿಂಗ್ ಇಶಾಂತ್ ಶರ್ಮಾ ಕನಸಲ್ಲೂ ಬೆಚ್ಚಿ ಬೀಳುವಂತೆ ಮಾಡಿದ್ದರು. ಈಗ ವೈಭವ್ ಸೂರ್ಯವಂಶಿ ನೆನಪು ಮಾಡುವಂತೆ ಮಾಡಿದ್ದಾರೆ.
ಗುಜರಾತ್ ವಿರುದ್ಧ ವೈಭವ್ ಸೂರ್ಯವಂಶಿ ಪವರ್ ಪ್ಲೇನಲ್ಲೇ ಬಾರಿಸಿದ್ದು ಆರು ಸಿಕ್ಸರ್ ಬಾರಿಸಿದ್ದು ವಿಶೇಷ. ಚೆನ್ನೈ ಸೂಪರ್ ಕಿಂಗ್ಸ್ ತಂಡ ಇಡೀ ಟೂರ್ನಿಯಲ್ಲಿ ಪವರ್ ಪ್ಲೇನಲ್ಲಿ ಬಾರಿಸಿದ ಸಿಕ್ಸರ್ಗಳ ಸಂಖ್ಯೆ ಐದು.
ವೈಭವ್ ಸೂರ್ಯವಂಶಿ ಬಿಹಾರದ ಸಮಷ್ಠಿಪುರದವನು. ಮಗನ ಕ್ರಿಕೆಟ್ ಭವಿಷ್ಯಕ್ಕಾಗಿ ಜೀವನಕ್ಕೆ ಆಧಾರವಾಗಿದ್ದ ತುಂಡು ಜಮೀನನ್ನು ಮಾರಿದ್ದರು ತಂದೆ ಸಂಜೀವ್ ಸೂರ್ಯವಂಶಿ. ಇವತ್ತು ಆ ತಂದೆ ಮಗನ ಆಟವನ್ನು ನೋಡಿ ಹೆಮ್ಮೆಪಟ್ಟರು.
ಗೊಬ್ಬ ಹುಡುಗನಿದ್ದಾನೆ, ನೋಡು ಎಂದು ಸೂರ್ಯವಂಶಿ ಬಗ್ಗೆ ರಾಜಸ್ಥಾನ ರಾಯಲ್ಸ್ ತಂಡದ ಹೆಡ್ ಕೋಚ್ ರಾಹುಲ್ ದ್ರಾವಿಡ್ ಅವರಿಗೆ ಹೇಳಿದವರು ವಿವಿಎಸ್ ಲಕ್ಷ್ಮಣ್. ಈ ಇಬ್ಬರ ನಿರ್ಧಾರ ಸರಿ ಎಂಬಂತೆ ಸೂರ್ಯವಂಶಿ ಆಡಿದ್ದಷ್ಟೇ
ಅಲ್ಲ ಕ್ರೀಡಾಂಗಣವೇ ಹುಚ್ಚೆದ್ದು ಕುಣಿಯುವಂತೆ ಮಾಡಿದ್ದು ಗಮನ ಸೆಳೆದಿದೆ.