
ನವದೆಹಲಿ: ಖಾಲಿಸ್ತಾನಿ ಉಗ್ರ ಗುರ್ಪತ್ವಂತ್ ಸಿಂಗ್ ಪನ್ನುನ್ ದಾಖಲಿಸಿರುವ “ಪೂರ್ವಾಗ್ರಹ ಪೀಡಿತ ಮತ್ತು ಆಧಾರರಹಿತ” ಸಿವಿಲ್ ಮೊಕದ್ದಮೆಗೆ ಸಂಬಂಧಿಸಿದಂತೆ, ನ್ಯೂಯಾರ್ಕ್ನ ದಕ್ಷಿಣ ಜಿಲ್ಲೆಯ ಯುಎಸ್ ಜಿಲ್ಲಾ ನ್ಯಾಯಾಲಯವು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಮತ್ತು ಸಂಶೋಧನೆ ಮತ್ತು ವಿಶ್ಲೇಷಣೆ ವಿಭಾಗದ ಮಾಜಿ ಮುಖ್ಯಸ್ಥ ಸಾಮಂತ್ ಗೋಯಲ್ ಅವರಿಗೆ ಸಮನ್ಸ್ ಜಾರಿಗೊಳಿಸಿದೆ.
ನವೆಂಬರ್ 13 ರಂದು ಹೊರಡಿಸಲಾದ ಆದೇಶದ ಪ್ರಕಾರ, ಪಟಿಯಾಲ ಹೌಸ್, ದ್ವಾರಕಾ ಮತ್ತು ತೀಸ್ ಹಜಾರಿ ಜಿಲ್ಲಾ ನ್ಯಾಯಾಲಯಗಳ ಮೂಲಕ ಈ ಸಮನ್ಸ್ಗಳನ್ನು ತಲುಪಿಸಲು ನಿರ್ದೇಶಿಸಲಾಗಿದೆ.
ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಈ ಮೊಕದ್ದಮೆಯನ್ನು ತೀವ್ರವಾಗಿ ಖಂಡಿಸಿದ್ದು, ಇವು ಸಂಪೂರ್ಣವಾಗಿ ಆಧಾರರಹಿತ ಮತ್ತು ದುರುದ್ದೇಶಪೂರಿತ ಆರೋಪಗಳು ಎಂದು ಸ್ಪಷ್ಟಪಡಿಸಿದೆ. ಭಾರತವು ಈ ತಿರಸ್ಕೃತ ಮತ್ತು ಕ್ಷುಲ್ಲಕ ಮೊಕದ್ದಮೆಗಳನ್ನು ಸಾರಾಸಗಟಾಗಿ ತಳ್ಳಿಹಾಕಿದೆ. ಹೇಗ್ ಒಪ್ಪಂದದಡಿ ಭಾರತದ ಕೇಂದ್ರ ಪ್ರಾಧಿಕಾರದ ಮೂಲಕ ಸಮನ್ಸ್ ತಲುಪಿಸುವ ಪ್ರಮಾಣಿತ ವಿಧಾನ ವಿಫಲವಾದ ಹಿನ್ನೆಲೆಯಲ್ಲಿ, ಯುಎಸ್ ನ್ಯಾಯಾಲಯವು ಭಾರತೀಯ ನಾಗರಿಕ ಪ್ರಕ್ರಿಯಾ ಸಂಹಿತೆಯ (CPC) ನಿಬಂಧನೆಗಳಿಯನ್ವಯ ಪರ್ಯಾಯ ಮಾರ್ಗವನ್ನು ಅನುಸರಿಸಿದೆ.
ಯುಎಸ್ ನ್ಯಾಯಾಲಯದ ಆದೇಶ: ನವೆಂಬರ್ 13 ರಂದು ನ್ಯೂಯಾರ್ಕ್ ನ್ಯಾಯಾಲಯದ ನ್ಯಾಯಾಧೀಶರಾದ ಕ್ಯಾಥರಿನ್ ಪೋಲ್ಕ್ ಫೈಲ್ಲಾ ಅವರು, ಅಜಿತ್ ದೋವಲ್ ಮತ್ತು ಸಾಮಂತ್ ಗೋಯಲ್ ಅವರಿಗೆ ನಿಕಟ ನ್ಯಾಯಾಲಯಗಳ ಮೂಲಕ ಸಿವಿಲ್ ಸಮನ್ಸ್ ಮತ್ತು ನ್ಯಾಯಾಂಗ ದಾಖಲಿಗಳನ್ನು ಕಳುಹಿಸುವಂತೆ ರಿಜಿಸ್ಟ್ರಾರ್ಗೆ ಸೂಚಿಸಿದ್ದಾರೆ.
ಭಾರತ ಸರ್ಕಾರದ ತೀವ್ರ ಪ್ರತಿಕ್ರಿಯೆ: ಪನ್ನುನ್ ಮಾಡಿರುವ ಆರೋಪಗಳು “ಕಲ್ಪಿತ ಮತ್ತು ದುರುದ್ದೇಶಪೂರಿತ” ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಸ್ಪಷ್ಟಪಡಿಸಿದ್ದು, ಭಾರತದಲ್ಲಿ ಯಾವುದೇ ನ್ಯಾಯಾಂಗ ದಾಖಲಿಗಳನ್ನು ತಲುಪಿಸಬೇಕಾದರೆ ಅದು ಕಾನೂನು ಮತ್ತು ನ್ಯಾಯ ಸಚಿವಾಲಯದ ಮೂಲಕವೇ ಅಧಿಕೃತವಾಗಿ ಸಾಗಬೇಕು ಎಂದು ತಿಳಿಸಿದ್ದಾರೆ.
ಹೇಗ್ ಒಪ್ಪಂದದ ತೊಡಕು: ಹೇಗ್ ಒಪ್ಪಂದದಡಿ ಅಧಿಕೃತ ಮಾರ್ಗದ ಮೂಲಕ ಸಮನ್ಸ್ ಜಾರಿಗೊಳಿಸುವ ಪ್ರಯತ್ನಗಳು ತಿರಸ್ಕೃತಗೊಂಡ ಬಳಿಕ, ಯುಎಸ್ ನ್ಯಾಯಾಲಯವು ಭಾರತದ ಸಿಪಿಸಿ (CPC) ಮತ್ತು ಒಪ್ಪಂದದ ವಿಧಿ 19 ರ ಅಡಿಯಲ್ಲಿ ಪರ್ಯಾಯ ಸೇವಾ ವಿಧಾನವನ್ನು ಆಶ್ರಯಿಸಿದೆ.
ಖಾಲಿಸ್ತಾನಿ ಉಗ್ರನ ಹಿತಾಸಕ್ತಿ: ಭಾರತದಲ್ಲಿ ವಿವಿಧ ಭಯೋತ್ಪಾದನಾ ಆರೋಪಗಳನ್ನು ಎದುರಿಸುತ್ತಿರುವ ಮತ್ತು ಬೇಕಾಗಿರುವ ಉಗ್ರ ಗುರ್ಪತ್ವಂತ್ ಸಿಂಗ್ ಪನ್ನುನ್, ಅಮೆರಿಕದ ನ್ಯಾಯಾಲಯದಲ್ಲಿ ಈ ಸಿವಿಲ್ ಮೊಕದ್ದಮೆ ಹೂಡುವ ಮೂಲಕ ಭಾರತೀಯ ಉನ್ನತ ಅಧಿಕಾರಿಗಳನ್ನು ಗುರಿಯಾಗಿಸಲು ನಿರಂತರ ಯ ಪ್ರಯತ್ನ ನಡೆಸುತ್ತಿದ್ದಾರೆ.
ಭಾರತ ಸರ್ಕಾರದ ಉನ್ನತ ಅಧಿಕಾರಿಗಳ ವಿರುದ್ಧ ವಿದೇಶಿ ನೆಲದಿಂದ ನಡೆಯುತ್ತಿರುವ ಈ ಕಾನೂನು ಹೋರಾಟವನ್ನು ಭಾರತ ಸಂಪೂರ್ಣವಾಗಿ ತಿರಸ್ಕರಿಸಿದ್ದು, ರಾಜತಾಂತ್ರಿಕ ಹಾಗೂ ಕಾನೂನು ಮಟ್ಟದಲ್ಲಿ ತಕ್ಕ ತಿರುಗೇಟು ನೀಡಲು ಸಜ್ಜಾಗಿದೆ.




