Site icon Kannada News-suddikshana

ದಾವಣಗೆರೆ ಮಹಾನಗರ ಪಾಲಿಕೆ ವಿರುದ್ಧ ಉಪಲೋಕಾಯುಕ್ತ ಗರಂ: ಕೇಸ್ ದಾಖಲಿಸಿ, ಇಬ್ಬರ ಸಸ್ಪೆಂಡ್ ಗೆ ಸೂಚನೆ..!

SUDDIKSHANA KANNADA NEWS/ DAVANAGERE/ DATE-23-04-2025

ದಾವಣಗೆರೆ: ದಾವಣಗೆರೆ ಮಹಾನಗರ ಪಾಲಿಕೆಗೆ ದಿಢೀರ್ ಭೇಟಿ ನೀಡಿದ ಉಪಲೋಕಾಯುಕ್ತರು ಅವ್ಯವಸ್ಥೆ ಕಂಡು ಗರಂ ಆದರು. ಮಾತ್ರವಲ್ಲ, ಲೋಪದೋಷ ಕಂಡು ಬಂದ ಕಾರಣಕ್ಕೆ ಮಹಾನಗರ ಪಾಲಿಕೆ ವಿರುದ್ಧ ಲೋಕಾಯುಕ್ತ ಕೇಸ್ ದಾಖಲಿಸುವಂತೆ ಸೂಚನೆ ನೀಡಿದರು. ಈ ವೇಳೆ ಇಬ್ಬರು ಅಧಿಕಾರಿಗಳ ಅಮಾನತಿಗೆ ಪಾಲಿಕೆ ಆಯುಕ್ತೆ ರೇಣುಕಾಗೆ ಕಟ್ಟುನಿಟ್ಟಿನ ಸೂಚನೆ ಕೊಟ್ಟರು.

ಮಂಗಳವಾರ ರಾತ್ರಿಯಿಂದ ನಗರದ ವಿವಿಧೆಡೆ ದಿಢೀರ್ ದಾಳಿ ನಡೆಸಿದ ಉಪಲೋಕಾಯುಕ್ತರು ಕೆಲವೆಡೆ ಅವ್ಯವಸ್ಥೆ ಕಂಡು ಆಕ್ರೋಶ ವ್ಯಕ್ತಪಡಿಸಿದರು. ನ್ಯೂನತೆ ಎಸಗಿದ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು. ಅವ್ಯವಸ್ಥೆ ಸರಿಪಡಿಸದಿದ್ದರೆ ಕ್ರಮ ಗ್ಯಾರಂಟಿ ಎಂದು ಎಚ್ಚರಿಸಿದರು. ಮಹಾನಗರ ಪಾಲಿಕೆಗೆ ಭೇಟಿ ನೀಡಿದಾಗ ಆಯುಕ್ತೆ, ಅಧಿಕಾರಿಗಳು ಒಮ್ಮೆಲೆ ತಬ್ಬಿಬಾದರು. ಖಾಸಗಿ ವ್ಯಕ್ತಿ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿ ಬಂಧಿಸುವಂತೆ ಉಪಲೋಕಾಯುಕ್ತರು ಸೂಚನೆ ನೀಡಿದರು.

ಪಾಲಿಕೆಯಲ್ಲಿನ ಎಲ್ಲಾ ವಾಹನಗಳ ಎಫ್ ಸಿ ಪರಿಶೀಲಿಸಿ ವರದಿ ನೀಡುವಂತೆ ಆರ್ ಟಿ ಒ ಅಧಿಕಾರಿಗಳಿಗೆ ಬಿ. ವೀರಪ್ಪ ಅವರು ಆದೇಶಿಸಿದರು. ಪಾಲಿಕೆಯಲ್ಲಿ ಅಧಿಕಾರಿಗಳು, ಪೌರಕಾರ್ಮಿಕರು ಸೇರಿದಂತೆ ಎಲ್ಲಾ ನೌಕರರ ಹಾಜರಾತಿ
ಪುಸ್ತಕವನ್ನು ಪರಿಶೀಲಿಸಿದರು.

ಸಾರ್ವಜನಿಕರ ಸಮಸ್ಯೆಗಳನ್ನು ಆದಷ್ಟು ಬೇಗ ಮುಗಿಸಬೇಕು. ಜಿಲ್ಲೆಯಲ್ಲಿ ಹೆಚ್ಚಿನ ಕುಂದುಕೊರತೆ ನಿವಾರಿಸಬೇಕು, ಭ್ರಷ್ಟಾಚಾರ ಉತ್ತುಂಗಕ್ಕೆ ತಲುಪಿದೆ. ಆಸ್ತಿಗೋಸ್ಕರ ಗಂಡನನ್ನು ಸಾಯಿಸುವುದು ಸಾಮಾನ್ಯವಾಗಿದೆ. ಜನರಲ್ಲಿ ಸಂಸ್ಕಾರ, ಸಂಸ್ಕೃತಿ ಮರೆಯಾಗಿದೆ. ಮರು ನಿರ್ಮಾಣ ಮಾಡುವ ಜೊತೆಗೆ ನಾವೆಲ್ಲರೂ ಸೇರಿ ಲೋಕಾಯುಕ್ತ ಸಂಸ್ಥೆ ಇದೆ ಎಂಬುದನ್ನು ಸಾಬೀತು ಮಾಡಬೇಕಾಗಿದೆ‌ ಎಂದು ಉಪಲೋಕಾಯುಕ್ತರು ಹೇಳಿದರು.

ಈ ವೇಳೆ ಸಿಇಒ ಸುರೇಶ್ ಬಿ.ಇಟ್ನಾಳ್, ಎಸ್.ಪಿ.ಉಮಾಪ್ರಶಾಂತ್, ಲೋಕಾಯುಕ್ತ ಅಪರ ನಿಬಂಧಕರಾದ ರಾಜಶೇಖರ್, ಎನ್.ವಿ.ಅರವಿಂದ್, ಮಿಲನ, ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಎಂ.ಎಸ್.ಕೌಲಾಪೂರೆ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

ಎಲ್ಲೆಲ್ಲಿ ಭೇಟಿ..?

ದಾವಣಗೆರೆ ಶ್ರೀರಾಮನಗರದ ಮಹಿಳಾ ನಿಲಯಕ್ಕೆ ಉಪಲೋಕಾಯುಕ್ತರು ಭೇಟಿ ನೀಡಿ ಪರಿಶೀಲಿಸಿದರು.

ಬಿ.ವೀರಪ್ಪನವರು ಶ್ರೀರಾಮನಗರದಲ್ಲಿನ ರಾಜ್ಯ ಮಹಿಳಾ ನಿಲಯಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ನಿಲಯದಲ್ಲಿ 54 ಮಹಿಳೆಯರಿದ್ದಾರೆ. ಇಲ್ಲಿನ ಸೌಲಭ್ಯಗಳ ಜೊತೆಗೆ ಪ್ರೀತಿಯನ್ನು ತೋರಿಸುವುದು ಮುಖ್ಯವಾಗಿರುತ್ತದೆ. ವೈದ್ಯರು ಕೆಲವು ದಿನ ಹಾಜರಿರುವುದಿಲ್ಲ. ನೊಟೀಸ್ ನೀಡಲು ಉಪಲೋಕಾಯುಕ್ತರು ತಿಳಿಸಿ ಗುಣಮಟ್ಟದ ಆಹಾರ ನೀಡಲು ತಾಕೀತು ಮಾಡಿದರು.

ಇಲ್ಲಿನ ಕೆಲವು ಮಹಿಳೆಯರು ವಾಪಸ್ ಹೋಗಲು ಮನವಿ ಮಾಡಿದಾಗ ಅವರ ಸಂಬಂಧಿಕರೊಂದಿಗೆ ಸಮಾಲೋಚನೆ ನಡೆಸಿ ಕ್ರಮ ಕೈಗೊಳ್ಳಲು ತಿಳಿಸಿದರು. ಇಲ್ಲಿನ ಇಬ್ಬರು ಮಹಿಳೆಯರಿಗೆ ನೂತನ ವರನನ್ನು ನೋಡಿದ್ದು ಆದಷ್ಟು ಬೇಗ
ನಿಯಮಾನುಸಾರ ಎಲ್ಲರೂ ನಿಂತು ಮದುವೆ ಮಾಡಿಸಲು ತಿಳಿಸಿದರು.

ಮಹಿಳಾ ನಿಲಯದಲ್ಲಿ ಮೂಲಭೂತ ಸೌಕರ್ಯ ಕೊರತೆ ಇದ್ದು ಲೋಕಾಯುಕ್ತ ಪ್ರಕರಣ ದಾಖಲಿಸುವುದಾಗಿ ತಿಳಿಸಿ, ಇನ್ನು ಸಾಕಷ್ಟು ಸುಧಾರಣೆ ಆಗಬೇಕಾಗಿದೆ ಎಂದರು.

ಸರ್ಕಾರಿ ಬಾಲಕಿಯರ ಬಾಲ ಮಂದಿರಕ್ಕೆ ಭೇಟಿ ಇಲ್ಲಿಂದ ಶಾಲೆಗೆ ಹೋಗಲು ವಾಹನ ವ್ಯವಸ್ಥೆ ಮಾಡಲು ಸೂಚನೆ ನೀಡಿದರು.ಗೋಧಿಯಲ್ಲಿ ಹುಳು ಇದೆ, ನಿಲಯ ಪಾಲಕರು ಇದನ್ನು ನೋಡಿಕೊಂಡು. ಸರಬರಾಜು ಮಾಡಿದಾಗ ತಿರಸ್ಕರಿಸಬೇಕು ಎಂದು ಸೂಚಿಸಿದರು.

ತೂಕ, ಅಳತೆ ಯಂತ್ರ ಪರಿಶೀಲನೆ ನಡೆಸಿ ಇಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಲೇಬರ್ ಕಾರ್ಡ್ ಮಾಡಲು ಸೂಚನೆ ನೀಡಿ ತೂಕದ ಯಂತ್ರ ಪರಿಶೀಲನೆ ನಡೆಸಿದರು. ಕಲ್ಲೇಶ್ವರ ಎಂಟರ್ ಪ್ರೈಸಸ್ ಇವರು ರಸೀದಿ ಪುಸ್ತಕವಿಟ್ಟಿಲ್ಲ. ರೈತರಿಂದ ಕಮೀಷನ್ ತೆಗೆದುಕೊಳ್ಳುವಂತಿಲ್ಲ. ಮೂಲ ರಸೀದಿಯನ್ನೆ ಕೊಡಬೇಕೆಂದು ಸೂಚನೆ ನೀಡಿ ಎಪಿಎಂಸಿ ಅಧಿಕಾರಿಗಳಿಗೆ ಸೂಚನೆ ನೀಡಿದರು‌. ಕೆಎಸ್ ಆರ್ ಟಿಸಿ ಬಸ್ ನಿಲ್ದಾಣದ ಹೋಟೆಲ್ ಗೆ ತೆರಳಿ ಪರಿಶೀಲನೆ ನಡೆಸಿ ಆಹಾರ ಸುರಕ್ಷತಾ ಕ್ರಮ
ಅನುಸರಿಸಲು ಸೂಚಿಸಿ ಆಹಾರ ಸುರಕ್ಷತಾ ಅಧಿಕಾರಿಗಳಿಗೆ ಪರೀಕ್ಷೆ ಮಾಡಲು ಸೂಚನೆ ನೀಡಿದರು.

ಜಿಲ್ಲಾ ಆಸ್ಪತ್ರೆಯಲ್ಲಿ ಹೊರರೋಗಿಗಳ ವಿಭಾಗದಲ್ಲಿ ಮಹಿಳೆಯರಿಗೆ ಪ್ರತ್ಯೇಕ ಸರದಿ, ಸಾಲು ಮಾಡಲು ತಿಳಿಸಿ ವಯೋವೃದ್ಧರಿಗೆ ಮೊದಲ ಆದ್ಯತೆ ನೀಡಲು ಸೂಚಿಸಿದರು. ವೃದ್ಧರು ರಕ್ತದೊತ್ತಡ, ಮಧುಮೇಹ ತಪಾಸಣೆಗೆ ಹೆಚ್ಚಿನ ಸಮಯ ಸಾಲಿನಲ್ಲಿ ನಿಲ್ಲುವುದಕ್ಕಾಗುವುದಿಲ್ಲ ಎಂದು ಜಿಲ್ಲಾ ಸರ್ಜನ್ ಗೆ ತಿಳಿಸಿದರು.

Exit mobile version