Site icon Kannada News-suddikshana

ಉಡುಪಿ: ಪತ್ನಿಯ ಕುತ್ತಿಗೆ ಕಡಿದು ನರ್ತಿಸಿದ ಪಾಪಿ ಪತಿ..!

ಉಡುಪಿ: ಕುಡಿದ ಮತ್ತಿನಲ್ಲಿ ಪತಿ ತನ್ನ ತಾಳಿ ಕಟ್ಟಿದ ಪತ್ನಿಯ ಕುತ್ತಿಗೆ ಕಡಿದು ನರ್ತಿಸಿದ ಘಟನೆ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಬಸ್ರೂರು ನಲ್ಲಿ ನಡೆದಿದೆ. ಅನಿತಾ (38) ಗಂಡನಿಂದ ಮಾರಣಾಂತಿಕವಾಗಿ ಹಲ್ಲೆಗೊಳಗಾದವರು.

ಬಸ್ರೂರು ಕಾಶಿ ಮಠ ಸಂಬಂಧಿಸಿದ ರೆಸಿಡೆನ್ಶಿಯಲ್ ಬ್ಲಾಕ್​ನ ಬಾಡಿಗೆ ಮನೆಯಲ್ಲಿ ಈ ಘಟನೆ ನಡೆದಿದೆ. ಸೊರಬ ತಾಲೂಕು ಮೂಲದ ಲಕ್ಷ್ಮಣ (ರಮೇಶ್) ಎಂಬಾತ ತನ್ನ ಪತ್ನಿ ಮೇಲೆ ಹಲ್ಲೆ ಮಾಡಿದ್ದಾನೆ.

ಲಕ್ಷ್ಮಣ ಮತ್ತು ಅನಿತಾ ದಂಪತಿ ಕಾಶಿಮಠದ ತೋಟ ನೋಡಿಕೊಳ್ಳುತ್ತಿದ್ದರು. ನಾಲ್ಕು ತಿಂಗಳ ಹಿಂದಯಷ್ಟೆ ತೋಟ ನೋಡಿಕೊಳ್ಳಲು ಉಡುಪಿ ಜಿಲ್ಲೆಗೆ ಬಂದಿದ್ದಾರೆ. ನಿನ್ನೆ ರಾತ್ರಿ ಕುಡಿದ ಮತ್ತಿನಲ್ಲಿದ್ದ ಪತಿ ಲಕ್ಷ್ಮಣ ಪತ್ನಿಯ ಕುತ್ತಿಗೆಗೆ ಕಡಿದು ಮಾರಣಾಂತಿಕವಾಗಿ ಗಾಯಗೊಳಿಸಿದ್ದಾನೆ.

ಗಾಯಗೊಂಡ ಅನಿತಾ ರಕ್ತದ ಮಡುವಿನಲ್ಲಿ ಮನೆಯ ಅಡುಗೆ ಕೋಣೆಯಲ್ಲಿ ಬಿದ್ದಿದ್ದಾಳೆ. ಅತ್ತ ಪತಿ ಮನೆಯ ಬಾಗಿಲ ಚಿಲಕ ಹಾಕಿ ಹಾಲ್​ನಲ್ಲಿ ಕೈಯಲ್ಲಿ ಕತ್ತಿ ಹಿಡಿದು ನರ್ತಿಸುತ್ತಿದ್ದ ದೃಶ್ಯ ಕ್ಯಾಮೆರಾ ಕಣ್ಣಿಗೆ ಕಾಣಿಸಿದೆ. ಇತ್ತ ಸ್ಥಳೀಯರು ಕಿಟಕಿ ಒಡೆದು ಅಡುಗೆ ಕೋಣೆಗೆ ತೆರಳಿ ಪತ್ನಿಯನ್ನು ಹೊರತಂದಿದ್ದಾರೆ. ಚಿಂತಾಜನಕ ಸ್ಥಿತಿಯಲ್ಲಿರುವ ಪತ್ನಿಯನ್ನು ಸ್ಥಳೀಯರು ಮಣಿಪಾಲ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಘಟನೆ ಬೆಳಕಿಗೆ ಬಂದಂತೆ ಸ್ಥಳೀಯರು ಪೊಲೀಸರಿಗೆ ತಿಳಿಸಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಮತ್ತು ಅಗ್ನಿಶಾಮಕ ಸಿಬ್ಬಂದಿಗಳು ಮನೆಯೊಳಗೆ ಅಶ್ರುವಾಯು ಪ್ರಯೋಗಿಸಿ ಸುಮಾರು‌ ಒಂದೂವರೆ ಗಂಟೆಯ ಬಳಿಕ ಆರೋಪಿಯನ್ನು ಸೆರೆಹಿಡಿದಿದ್ದಾರೆ. ಕಂಡ್ಲೂರು ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.

Exit mobile version