SUDDIKSHANA KANNADA NEWS/ DAVANAGERE/ DATE-24-04-2025
ದಾವಣಗೆರೆ: ಸ್ವಾರ್ಥಕ್ಕಾಗಿ ಕೆಲ ವ್ಯಕ್ತಿ ಹಾಗೂ ಸಂಘಟನೆಗಳು, ಅಧಿಕಾರಿಗಳ ಮೇಲೆ ಸುಳ್ಳು ಕೇಸು ದಾಖಲಿಸುತ್ತಿರುವುದು ಭ್ರಷ್ಟಾಚಾರ ಆರೋಪ ಪ್ರಕರಣಗಳ ವಿಚಾರಣೆ ವೇಳೆ ಲೋಕಾಯುಕ್ತ ಗಮನಕ್ಕೆ ಬರುತ್ತಿವೆ. ಲೋಕಾಯುಕ್ತ ಕಾಯ್ದೆ ಸೆಕ್ಷನ್ 20 ಅಡಿ ಅಧಿಕಾರಿಗಳ ಮೇಲೆ ಸುಳ್ಳು ಕೇಸು ದಾಖಲಿಸಿದರೆ 6 ತಿಂಗಳಿನಿಂದ 3 ವರ್ಷಗಳ ವರೆಗೆ ಜೈಲು ಶಿಕ್ಷೆ ವಿಧಿಸಲು ಕಾನೂನಿನಲ್ಲಿ ಅವಕಾಶವಿದೆ ಎಂದು ಉಪಲೋಕಾಯುಕ್ತ ನ್ಯಾಯಮೂರ್ತಿ ಬಿ.ವೀರಪ್ಪ ಹೇಳಿದರು.
ನಗರದ ಜಿಲ್ಲಾಡಳಿತ ಭವನದ ತುಂಗಭದ್ರಾ ಸಭಾಂಗಣದಲ್ಲಿ ಕರ್ನಾಟಕ ಲೋಕಾಯುಕ್ತ ವತಿಯಿಂದ ಆಯೋಜಿಸಲಾದ ಸಾರ್ವಜನಿಕರಿಂದ ಅಹವಾಲು ಸ್ವೀಕಾರ ಹಾಗೂ ಪ್ರಕರಣಗಳ ವಿಚಾರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಸರ್ಕಾರಿ ಅಧಿಕಾರಿಗಳು ಭಷ್ಟಾಚಾರದಲ್ಲಿ ತೊಡಗಿರುವ ಹಲವಾರು ಪ್ರಕರಣಗಳು ಸತ್ಯಾಂಶವೂ ಇದೆ. ಆದರೆ ಕೆಲ ವ್ಯಕ್ತಿಗಳು ಸ್ವಾರ್ಥಕ್ಕಾಗಿ ಅಧಿಕಾರಿಗಳ ಮೇಲೆ ಭ್ರಷ್ಟಾಚಾರದ ಆರೋಪ ಮಾಡುತ್ತಾರೆ. ಇದನ್ನು ಲೋಕಾಯುಕ್ತ ಸಹಿಸುವುದಿಲ್ಲ. ಅಧಿಕಾರಿಗಳನ್ನು ಬೆದರಿಸಲು ಮಾಹಿತಿ ಹಕ್ಕು ಹಾಗೂ ಲೋಕಾಯುಕ್ತ ಕಾಯ್ದೆಯ ದುರುಪಯೋಗ ಮಾಡಿಕೊಂಡ ಪ್ರಕರಣಗಳು ನಮ್ಮ ಮುಂದಿವೆ. ವೈಕ್ತಿಯೋರ್ವ 5 ಅಧಿಕಾರಿಗಳ ಮೇಲೆ ಸುಳ್ಳು ಆರೋಪ ಮಾಡಿರುವುದು ವಿಚಾರಣೆಯಲ್ಲಿ ಕಂಡುಬಂದಿತ್ತು ಎಂದು ತಿಳಿಸಿದರು.
ಪ್ರಕರಣದ ತೀರ್ಪಿನಲ್ಲಿ ವ್ಯಕ್ತಿಗೆ ಕಠಿಣ ಎಚ್ಚರಿಕೆ ನೀಡಿ, ಕಾಯ್ದೆಯನ್ನು ದುರುಪಯೋಗ ಪಡಿಸಿಕೊಳ್ಳದಂತೆ ಕಟ್ಟು ನಿಟ್ಟಿನ ಸೂಚನೆ ನೀಡಿದ್ದೇನೆ ಎಂದು ನ್ಯಾ.ಬಿ.ವೀರಪ್ಪ ಹೇಳಿದರು.
ಭ್ರಷ್ಟರ ಸಂಹಾರಕ್ಕಾಗಿ ಲೋಕಾಯಕ್ತ:
ಕರ್ನಾಟಕ ಲೋಕಾಯುಕ್ತ ಸ್ವಾಯತ್ತ ಸಂಸ್ಥೆಯಾಗಿದೆ. ರಾಜಕಾರಣಿಗಳು ಹಾಗೂ ಅಧಿಕಾರಿಗಳ ಮುಲಾಜಿಗೆ ಬಿದ್ದು ಕೆಲಸ ಮಾಡುತ್ತಿಲ್ಲ. ಭ್ರಷ್ಟರ ಸಂಹಾರಕ್ಕಾಗಿ ಲೋಕಾಯಕ್ತ ಸಂಸ್ಥೆ ಅವಿರತ ಪ್ರಯತ್ನ ಮಾಡುತ್ತಿದೆ. ಉಪಲೋಕಾಯುಕ್ತನಾಗಿ ನಿಯುಕ್ತಿಯಾದ ಮೇಲೆ ನನ್ನ ಸಂಪೂರ್ಣ ಆಸ್ತಿ ವಿವರವನ್ನು ಸಾರ್ವಜನಿಕವಾಗಿ ಘೋಷಿಸಿಕೊಂಡಿದ್ದೇನೆ. ಎಲ್ಲರೂ ತಮ್ಮ ಆಸ್ತಿ ವಿವರವನ್ನು ಪ್ರಕಟಿಸಬೇಕು. ಅಧಿಕಾರಿಗಳನ್ನು ಬೆಂಗಳೂರಿನ ಲೋಕಾಯಕ್ತ ಕಚೇರಿ ಕರೆಯಿಸಿ ವಿಚಾರಣೆ ನಡೆಸುವುದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತದೆ. ಈ ಹಿನ್ನಲೆಯಲ್ಲಿ ಇಬ್ಬರು ಉಪಲೋಕಾಯುಕ್ತರು ಸೇರಿ ಎಲ್ಲಾ ಜಿಲ್ಲೆಗಳನ್ನು ಹಂಚಿಕೊಂಡು, ಪ್ರತಿ ಜಿಲ್ಲೆಗೆ 3 ದಿನಗಳ ಪ್ರವಾಸ ಕೈಗೊಂಡು ಅಧಿಕಾರಿಗಳ ವಿರುದ್ಧ ಭ್ರಷ್ಟಾಚಾರ ಪ್ರಕರಣಗಳ ವಿಚಾರಣೆ ನಡೆಸಿ, ವಿಲೆ ಮಾಡಲು ಕ್ರಮ ವಹಿಸಲಾಗಿದೆ ಎಂದು ನ್ಯಾ.ಬಿ.ವೀರಪ್ಪ ಹೇಳಿದರು.
ಆತಿಥ್ಯ ಸ್ವೀಕರಿಸಲು ಜಿಲ್ಲೆಗೆ ಆಗಮಿಸಿಲ್ಲ:
ಬೆಂಗಳೂರಿನಿಂದ ಲೋಕಾಯುಕ್ತ ಅಧಿಕಾರಿಗಳ ತಂಡವನ್ನು ಕರೆದುಕೊಂಡು ಸ್ವಂತ ವಾಹನದಲ್ಲಿ ದಾವಣಗೆರೆ ಜಿಲ್ಲೆಗೆ ಆಗಮಿಸಿದ್ದೇನೆ. ಅಧಿಕಾರಿಗಳು ನೀಡುವ ಆತಿಥ್ಯ ಸ್ವೀಕರಿಸಲು ಜಿಲ್ಲೆಗೆ ಆಗಮಿಸಿಲ್ಲ. ಶಿಷ್ಟಾಚಾರದ ಅನುಸಾರ ಅಧಿಕಾರಿಗಳು ಭದ್ರತೆ ನೀಡಿದ್ದಾರೆ. ಲೋಕಾಯುಕ್ತದಲ್ಲಿ ಕೆಲಸ ಮಾಡುವ ನಮಗೆ ಜೀವ ಬೆದರಿಕೆಯೂ ಇದೆ. ನಗರದ ವಿವಿಧ ಕಚೇರಿಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಜಿಲ್ಲಾಧಿಕಾರಿ, ಜಿ.ಪಂ.ಸಿಇಓ, ಪೊಲೀಸ್ ವರಿಷ್ಠಾಧಿಕಾರಿ ಸೇರಿದಂತೆ ಭದ್ರತಾ ಸಿಬ್ಬಂದಿ, ಹಿರಿಯ ಅಧಿಕಾರಿಗಳು ಹಾಗೂ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ತಮ್ಮ ವಾಹನಗಳಲ್ಲಿ ಸಂಚರಿಸಿದ್ದಾರೆ. 64 ವರ್ಷದ ನಾನು ನಡೆದುಕೊಂಡು ಕಚೇರಿಗಳಿಗೆ ಭೇಟಿ ನೀಡುವುದು ಸಾಧ್ಯವಿಲ್ಲ. ಹಾಗಾಗಿ ವಾಹನ ಬಳಿಸಿ ಸಂಚರಿಸಿದ್ದೇನೆ. ಇದು ದುಂದುವೆಚ್ಚ ಆಡಂಬರದ ವಿಷಯವಲ್ಲ. ಯಾವುದೇ ಕಚೇರಿ ಭೇಟಿಯ ವೇಳೆ ಅಧಿಕಾರಿಗಳು ನೀಡುವ ನೀರನ್ನು ಸಹ ಕುಡಿಯದೇ, ಪರಿಶೀಲನೆ ನಡೆಸಿದ್ದೇನೆ. ಅಕ್ರಮಗಳನ್ನು ಕಂಡು ಬಂದಲ್ಲಿ ಮುಲಾಜು ಇಲ್ಲದೇ ಸ್ವಂ ಪ್ರೇರಿತ ಪ್ರಕರಣ ದಾಖಲಿಸಿದ್ದೇನೆ. ಸಾರ್ವಜನಿಕರಿಗೆ ಲೋಕಾಯುಕ್ತ ಸಂಸ್ಥೆಯ ಮೇಲಿನ ನಂಬಿಕೆ ಕಡಿಮೆಯಾಗದಂತೆ ಕಾಪಾಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ನ್ಯಾ.ಬಿ.ವೀರಪ್ಪ ಹೇಳಿದರು.
ಶೇ.90 ರಷ್ಟು ವಿದ್ಯಾವಂತರಿಗೆ ಕಾನೂನು ಅರಿವಿಲ್ಲ:
ದೇಶಕ್ಕೆ ಸ್ವಾತಂತ್ರ್ಯ ಬಂದ ಸಂದರ್ಭದಲ್ಲಿ ಸಾಕ್ಷರತೆ ಶೇ.18 ರಷ್ಟಿತ್ತು. ಇಂದು ಸಾಕ್ಷರತೆ ಪ್ರಮಾಣ ಶೇ.80 ರಷ್ಟಿದೆ, ಆದರೆ ಸಾಕ್ಷರರಾದ ಶೇ.90 ರಷ್ಟು ವಿದ್ಯಾವಂತರಿಗೆ ಕಾನೂನುಗಳ ಅರಿವಿಲ್ಲ ಎಂದು ನ್ಯಾ.ಬಿ.ವೀರಪ್ಪ ಹೇಳಿದರು. ಹೆಚ್ಚಿನ ಪ್ರಕರಣ, ತಂಟೆ ತಕರಾರುಗಳು ವಿದ್ಯಾವಂತರಿಂದ ಆಗುತ್ತಿವೆ. ಡಾ.ಡಿ.ವಿ.ಗುಂಡಪ್ಪನವರು ಮಂಕುತಿಮ್ಮನ ಕಗ್ಗದಲ್ಲಿ ಹೇಳಿರುವಂತೆ ಮುಂದೊಂದು ದಿನ ಈ ದೇಶ ವಿದ್ಯಾವಂತ ಮೋಸಗಾರರಿಂದಲೇ ಅಧೋಗತಿ ತಲುಪುತ್ತದೆ ಎಂದು ಕಳವಳ ವ್ಯಕ್ತಪಡಿಸಿದರು.
ಕೋವಿಡ್ ನಂತರ ಭ್ರಷ್ಟಾಚಾರ ಹೆಚ್ಚಳ:
ಕೋವಿಡ್-19 ಬಂದ ಸಂದರ್ಭದಲ್ಲಿ ಇಡಿ ವಿಶ್ವವೇ ತಲ್ಲಣಿಸಿ ಹೋಗಿತ್ತು. ಜನರಿಗೆ ಜೀವ ಉಳಿಸಿಕೊಳ್ಳುವುದು ಮುಖ್ಯವಾಗಿತ್ತು. ದೇಶದಲ್ಲಿ ವಕೀಲರು,ಪೊಲೀಸರು, ವೈದ್ಯರು, ಸೇರಿದಂತೆ ಸಾವಿರಾರು ಜನರು ಕೋವಿಡ್‌ನಿಂದ
ಮೃತಪಟ್ಟರು. ಕೋವಿಡ್ ವೈರಸ್ ಜನರಿಗೆ ನಿಜ ಬದುಕಿನ ಅನಾವರಣೆ ಮಾಡಿ, ಬುದ್ದಿ ಕಲಿಸಿದೆ, ಉತ್ತಮ ಮಾರ್ಗದಲ್ಲಿ ಜೀವಿಸಲು ಕಾರಣವಾಗಿದೆ ಎಂದು ಭಾವಿಸಿದ್ದಾಗಿ ಹೇಳಿದ ನ್ಯಾ.ವಿ.ವೀರಪ್ಪ ಅವರು, ಆದರೆ, 2021ರ ನಂತರ ನಾಯಿ
ಬಾಲ ಡೊಂಕು ಎಂಬಂತೆ ರಾಜ್ಯದಲ್ಲಿ ಭ್ರಷ್ಟಾಚಾರದಲ್ಲಿ ಹೆಚ್ಚಳವಾಗಿದೆ ಎಂದು ಅವರು ಹೇಳಿದರು.
ಸ್ವಾರ್ಥಿ ಮನುಷ್ಯನಿಂದ ಪ್ರಕೃತಿ ನಾಶ:
ಸ್ವಾರ್ಥಿಯಾದ ಮನುಷ್ಯನಿಂದ ನಿಸ್ವಾರ್ಥಿಯಾದ ಗಿಡಮರಗಳು, ಪ್ರಾಣಿ ಪಕ್ಷಿಗಳು ಸೇರಿದಂತೆ ಪ್ರಕೃತಿಯ ನಾಶವಾಗುತ್ತಿದೆ. ಇದರಿಂದ ಪ್ರಾಕೃತಿಕ ಅವಘಡಗಳು ಸಂಭವಿಸುತ್ತಿವೆ. ಪ್ರಾಣಿ ಹಾಗೂ ಮನುಷ್ಯ ನಡುವೆ ಸಂಘರ್ಷ ಹೆಚ್ಚಾಗಿದೆ. ಜಿಲ್ಲೆಯ ಗಣಿ ಪ್ರದೇಶಗಳಿಗೆ ಭೇಟಿ ನೀಡಿದ್ದೇನೆ. ಪರವಾನಿಗೆ ಪಡೆದ ಪ್ರದೇಶಕ್ಕಿಂತ ಹೆಚ್ಚಿನ ಜಾಗದಲ್ಲಿ ಗಣಿಗಾರಿಕೆ ನಡೆಸಲಾಗಿದೆ. ಇದಕ್ಕೆ ಇಲ್ಲಿನ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣವಾಗಿದೆ. ಈ ಬಗ್ಗೆ ಸ್ವಯಂ ಪ್ರೇರಿತ ಲೋಕಾಯುಕ್ತ ದೂರು ದಾಖಲಿಸಿಕೊಳ್ಳುವುದಾಗಿ ನ್ಯಾ.ಬಿ.ವೀರಪ್ಪ ಹೇಳಿದರು.