SUDDIKSHANA KANNADA NEWS/ DAVANAGERE/ DATE-21-05-2025
ದಾವಣಗೆರೆ: ಮನೆಗಳ್ಳತನ ಮಾಡುತ್ತಿದ್ದ ಆರೋಪಿಗಳನ್ನು ಬಂಧಿಸಿರುವ ವಿದ್ಯಾನಗರ ಪೊಲೀಸರು ಅಂದಾಜು 7,30,0000 ರೂಪಾಯಿ ಮೌಲ್ಯದ ಚಿನ್ನಾಭರಣ ಹಾಗೂ ಬೆಳ್ಳಿನ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ.
ಆರೋಪಿಗಳು ಸಿಕ್ಕಿ ಬಿದ್ದಿದ್ದು ಹೇಗೆ?
ಕಳೆದ ಏಪ್ರಿಲ್ 29ರಂದು ಸಂಜೆ ಸಮಯದಲ್ಲಿ ವಿದ್ಯಾನಗರ ಪೊಲೀಸ್ ಠಾಣೆಗೆ ಹಾಜರಾಗಿ ಮಹಾಂತೇಶ್ ಅವರು ದೂರು ನೀಡಿದ್ದರು. ಏಪ್ರಿಲ್ 19ರಂದು ಟೈಲ್ಸ್ ಕೆಲಸ ಮಾಡಲು ಹಿರಿಯೂರಿನ ಸಮುದ್ರದಹಳ್ಳಿ ಗ್ರಾಮಕ್ಕೆ ಹೋಗಿದ್ದು ಅದೇ ತಿಂಗಳು 29ರಂದು ಮಧ್ಯಾಹ್ನ 2.30ಕ್ಕೆ ಮನೆಗೆ ಬಂದು ನೋಡಿದಾಗ ಮನೆಯ ಬಾಗಿಲು ಬೀಗ ಮುರಿದಿತ್ತು. ನಂತರ ಮನೆಯ ಒಳಗೆ ಹೋಗಿ ನೋಡಿದಾಗ ಬೀರುವಿನಲ್ಲಿ ಇಟ್ಟಿದ್ದ ಬಟ್ಟೆಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು.
ಯಾರೋ ಕಳ್ಳರು ಮನೆಯ ಗಾಡ್ರೇಜ್ ಬೀರುವಿನಲ್ಲಿ ಇಟ್ಟಿದ್ದ ಸುಮಾರು 35 ಗ್ರಾಂ ತೂಕದ ಬಂಗಾರದ ಆಭರಣಗಳನ್ನು ಕಳ್ಳತನ ಮಾಡಿಕೊಂಡು ಹೋಗಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದರು. ಈ ಸಂಬಂಧ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿಕೊಂಡು ಆರೋಪಿಗಳ ಪತ್ತೆಗೆ ಪೊಲೀಸರು ತಂಡ ರಚಿಸಿದ್ದರು. ವಿದ್ಯಾನಗರ ಠಾಣೆ ನಿರೀಕ್ಷಕಿ ಶಿಲ್ಪಾ ವೈ.ಎಸ್ ನೇತೃತ್ವದಲ್ಲಿ ಅಧಿಕಾರಿ ಸಿಬ್ಬಂದಿಗಳನ್ನು ಒಳಗೊಂಡ ತಂಡವು ಪ್ರಕರಣದ ಆರೋಪಿತರಾದ ಶಾಂತಿನಗರದ ಪ್ರದೀಪ್ ಅಲಿಯಾಸ್ ಕರಿಯಾ, ನಿಜಲಿಂಗಪ್ಪ ಬಡಾವಣೆ ವಾಸಿ ಮಣಿಕಂಠ (28), ಯಲ್ಲಮ್ಮ ನಗರದ ಸಂಜಯ್ (23) ಬಂಧಿಸಿತ್ತು.
ವಿದ್ಯಾನಗರ ಪೊಲೀಸ್ ಠಾಣೆ ಹಾಗೂ ಕೆಟಿಜೆ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳ್ಳತನ ಮಾಡಿದ ಬಂಗಾರದ ಆಭರಣ ಹಾಗು ಬೆಳ್ಳಿ ಆಭರಣಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿರುವ ಪೊಲೀಸರು, ಇನ್ನು ಇಬ್ಬರು ಆರೋಪಿತರ ಬಂಧನಕ್ಕೆ ಬಲೆ ಬೀಸಿದ್ದಾರೆ.
ಒಟ್ಟು 3 ಪ್ರಕರಣಗಳಿಗೆ ಸಂಬಂಧಿಸಿದಂತೆ ಒಟ್ಟು 7,00,000 ರೂ ಬೆಲೆಯ 87 ಗ್ರಾಂ ತೂಕದ ಬಂಗಾರದ ಆಭರಣ, ಬೆಲೆಯ 404 ಗ್ರಾಂ ತೂಕದ ಬೆಳ್ಳಿ ಆಭರಣಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಪತ್ತೆ ಕಾರ್ಯದಲ್ಲಿ ಯಶಸ್ವಿಯಾದ ವಿದ್ಯಾನಗರ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕಿ ವೈ. ಎಸ್. ಶಿಲ್ಪಾ, ಜಿಲ್ಲಾ ಪೊಲೀಸ್ ಕಛೇರಿಯ ಪೊಲೀಸ್ ಇನ್ಸ್ ಪೆಕ್ಟರ್ ಇಸ್ಮಾಯಿಲ್ ಬಿ, ಪಿಎಸ್ಐ ವಿಶ್ವನಾಥ ಜಿ ಎನ್, ಪಿಎಸ್ಐ ವಿಜಯ, ಮಂಜುನಾಥ ಕಲ್ಲೇದೇವರು ಹಾಗು ಸಿಬ್ಬಂದಿಗಳಾದ ಶಂಕರ್ ಜಾಧವ, ಆನಂದ ಎಂ, ಚಂದ್ರಪ್ಪ, ಬಸವರಾಜ, ಬೋಜಪ್ಪ, ಗುಡ್ಡಪ್ಪ, ಆಕಾಶ, ಬಸವರಾಜ, ರಾಮಚಂದ್ರಪ್ಪ, ಸೀಮಾ ಅವರನ್ನು ಜಿಲ್ಲಾ ಪೊಲೀಸ್ ಅಧೀಕ್ಷಕಿ ಉಮಾ ಪ್ರಶಾಂತ್ ಅವರು ಶ್ಲಾಘಿಸಿದ್ದಾರೆ.