Site icon Kannada News-suddikshana

ಕುಸಿತ ಕಂಡಿದ್ದ ಅಡಿಕೆ ಧಾರಣೆ ಸ್ವಲ್ಪ ಏರಿಕೆ: ದರದ ಹಾವು- ಏಣಿ ಆಟ, ಆತಂಕದಲ್ಲಿ ಅಡಿಕೆ ಬೆಳೆಗಾರರು

SUDDIKSHANA KANNADA NEWS/ DAVANAGERE/ DATE:28-01-2024

ದಾವಣಗೆರೆ: ಅಡಿಕೆ ಧಾರಣೆಯು ಕಳೆದ ವರ್ಷದ ಕೊನೆ ಹಾಗೂ ಈ ವರ್ಷದ ಆರಂಭದಲ್ಲಿ ಏರು ಮುಖದಲ್ಲಿ ಸಾಗಿತ್ತು. ಪ್ರತಿ ಕ್ವಿಂಟಾಲ್ ಗೆ 50 ಸಾವಿರ ರೂಪಾಯಿ ಧಾರಣೆ ದಾಟುವ ನಿರೀಕ್ಷೆ ಇತ್ತು. ಆದ್ರೆ, ಮೊದಲ
ಹದಿನೈದು ದಿನಗಳಲ್ಲಿ ಏರುಮುಖದಲ್ಲಿ ಅಡಿಕೆ ಧಾರಣೆಯು ಮತ್ತೆ ಕುಸಿತ ಕಾಣಲಾರಂಭಿಸಿತು. ಹತ್ತು ದಿನಗಳಲ್ಲಿ ಎರಡು ಬಾರಿ ಅಡಿಕೆ ಧಾರಣೆ ಕುಸಿದಿತ್ತು. ಆದ್ರೆ, ತಿಂಗಳ ಕೊನೆಯಲ್ಲಿ ಮತ್ತೆ ಏರುಮುಖದಲ್ಲಿ ಸಾಗಿದ್ದು, ಅಡಿಕೆ ಬೆಳೆಗಾರರಲ್ಲಿ ಆತಂಕ ಮತ್ತಷ್ಟು ಹೆಚ್ಚಾಗುವಂತೆ ಮಾಡಿದೆ.

ಬಹುತೇಕ ಅಡಿಕೆ ಕೊಯ್ಲು ಮುಗಿದಿದೆ. ಹಸಿ ಅಡಿಕೆ ನೀಡುವ ರೈತರು ಈಗಾಗಲೇ ನೀಡಿ ಹಣ ಪಡೆದಿದ್ದಾರೆ. ಖೇಣಿ ಪಡೆದವರು ಅಡಿಕೆ ಸುಲಿಸಿ, ಒಣಗಿಸಿ ಮಾರುಕಟ್ಟೆಗೆ ಬಿಡಲು ಸಜ್ಜಾಗಿದ್ದಾರೆ. ಕಳೆದ ಹದಿನೈದು ದಿನಗಳಲ್ಲಿ ಎರಡು ಬಾರಿ ಅಡಿಕೆ ಧಾರಣೆ ಕುಸಿತ ಕಂಡಿತ್ತು. ಬರೋಬ್ಬರಿ 1500 ರೂಪಾಯಿ ಪ್ರತಿ ಕ್ವಿಂಟಾಲ್ ಗೆ ಕಡಿಮೆ ಆಗಿತ್ತು. ಆದ್ರೆ, ಈಗ ಸ್ವಲ್ಪ ಪ್ರಮಾಣದಲ್ಲಿ ಏರಿಕೆ ಕಂಡಿದೆ. ಇದು ಸ್ವಲ್ಪ ಸಮಾಧಾನ ತಂದರೂ ಆತಂಕ ಮಾತ್ರ ತಪ್ಪಿಲ್ಲ.

ವರ್ಷದ ಆರಂಭದಿಂದಲೂ ಏರುಮುಖ ಸಾಗುತ್ತಿದ್ದ ಅಡಿಕೆ ಧಾರಣೆಯು ಕುಸಿತ ಕಂಡಿದ್ದರಿಂದ ಮತ್ತೆ ಕುಸಿತ ಆಗಬಹುದು. 45 ಸಾವಿರ ರೂಪಾಯಿಗೆ ಇಳಿಯಬಹುದು ಎಂಬ ಲೆಕ್ಕಾಚಾರವೂ ಇತ್ತು. ಆದ್ರೆ, ಮತ್ತೆ ಏರಿಕೆ
ಕಂಡಿದ್ದು, ಧಾರಣೆಯು 100 ರೂಪಾಯಿ ಪ್ರತಿ ಕ್ವಿಂಟಾಲ್ ಗೆ ಹೆಚ್ಚಳವಾಗಿದೆ.

ಅಡಿಕೆ ಧಾರಣೆಯು ಪ್ರತಿ ಕ್ವಿಂಟಾಲ್ ಗೆ 50 ಸಾವಿರ ರೂಪಾಯಿ ಬಂದರೆ ಮಾರುಕಟ್ಟೆಗೆ ನೀಡುವ ಲೆಕ್ಕಾಚಾರದಲ್ಲಿದ್ದ ರೈತರು ಈಗ ಸಂಗ್ರಹಿಸಿ ಕಾಯಲು ಶುರು ಮಾಡಿದ್ದಾರೆ. ಗರಿಷ್ಠ ಬೆಲೆ ಕ್ವಿಂಟಲ್ ಗೆ 49200 ರೂಪಾಯಿ ದಾಖಲಿಸಿದ್ದರೆ, ಕನಿಷ್ಠ ಬೆಲೆ 46,512 ರೂಪಾಯಿ ಆಗಿದೆ.

2023ರ ಏಪ್ರಿಲ್ ತಿಂಗಳಿನಲ್ಲಿ 48 ಸಾವಿರ ರೂಪಾಯಿ ಮುಟ್ಟಿದ್ದ ಅಡಿಕೆ ಧಾರಣೆಯು ಜುಲೈನಲ್ಲಿ 57 ಸಾವಿರ ರೂಪಾಯಿ ದಾಖಲಿಸಿತ್ತು. ಇದೇ ಅತಿ ಹೆಚ್ಚು ಧಾರಣೆ ಆಗಿದ್ದು, ಆದ್ರೆ, ವರ್ಷಪೂರ್ತಿಯೂ 50 ಸಾವಿರ ರೂಪಾಯಿ ಗಡಿ ಮತ್ತೆ ದಾಟಲಿಲ್ಲ. ಈ ವರ್ಷ 50 ಸಾವಿರ ರೂಪಾಯಿ ದಾಟುವ ಅಂದಾಜು ಹಾಕಿದ್ದ ಬೆಳೆಗಾರರ ಲೆಕ್ಕಾಚಾರ ಆರಂಭದಲ್ಲಿ ಸ್ವಲ್ಪ ಪ್ರಮಾಣದಲ್ಲಿ ಉಲ್ಟಾ ಆಗಿದೆ. ಮುಂಬರುವ ದಿನಗಳಲ್ಲಿ ಮತ್ತೆ ಹೆಚ್ಚು ಧಾರಣೆ ಆಗಬಹುದು. ಆಗ ಮಾರುಕಟ್ಟೆಗೆ ಬಿಟ್ಟರೆ ಲಾಭ ಸಿಗಲಿದೆ ಎಂದು ರೈತರು ಹೇಳುತ್ತಾರೆ.

ಖೇಣಿದಾರರು ಅಡಿಕೆ ಒಣಗಿಸಿ ಸಂಗ್ರಹಿಸಿಟ್ಟುಕೊಂಡಿದ್ದಾರೆ. 56 ಸಾವಿರ ರೂಪಾಯಿ ಪ್ರತಿ ಕ್ವಿಂಟಾಲ್ ಗೆ ಬಂದರೆ ಅಡಿಕೆ ಮಾರುಕಟ್ಟೆಗೆ ಬಿಟ್ಟು ಹಣ ಎಣಿಸಿಕೊಳ್ಳುವ ಲೆಕ್ಕಾಚಾರದಲ್ಲಿದ್ದಾರೆ. ಲೋಕಸಭೆ ಚುನಾವಣೆಯು ಹತ್ತಿರವಾಗುತ್ತಿರುವ ಹಿನ್ನೆಲೆಯಲ್ಲಿ ಅಡಿಕೆಗೆ ಬಂಪರ್ ಬೆಲೆ ಬರಬಹುದು ಎಂಬ ಲೆಕ್ಕಾಚಾರವನ್ನೂ ಹಾಕಲಾಗುತ್ತಿದೆ. ಇದು ಎಷ್ಟರಮಟ್ಟಿಗೆ ಸಾಧ್ಯವಾಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

ಚನ್ನಗಿರಿ ಅಡಿಕೆ ಮಾರುಕಟ್ಟೆಯಲ್ಲಿ ಪ್ರತಿ ಕ್ವಿಂಟಲ್ ಅಡಿಕೆ 46,512 ರೂಪಾಯಿ ದಾಖಲಿಸಿದ್ದರೆ, ಗರಿಷ್ಠ ಬೆಲೆ 49,200 ರೂಪಾಯಿ ಆಗಿದೆ. ಸರಾಸರಿ ಬೆಲೆ 48,134 ರೂಪಾಯಿ ಆಗಿದ್ದರೆ, ಬೆಟ್ಟೆ ಅಡಿಕೆ ಗರಿಷ್ಠ 36,200 ರೂಪಾಯಿಗೆ ವಹಿವಾಟು ಮುಗಿಸಿದೆ.

ಬೇಸಿಗೆ ಪ್ರಾರಂಭವಾಗುತ್ತಿದ್ದು, ಅಡಿಕೆ ಮರಗಳಿಗೆ ನೀರು ಬೇಕು. ಭದ್ರಾ ಡ್ಯಾಂನಿಂದ ನೀರು ಹರಿಸಲಾಗಿದ್ದರೂ ಕೆಲವೊಂದು ಪ್ರದೇಶಗಳಿಗೆ ನೀರು ತಲುಪಿಲ್ಲ. ಇದರಿಂದ ಅಡಿಕೆ ಬೆಳೆಗಾರರು ಮತ್ತಷ್ಟು ಆತಂಕದಲ್ಲಿದ್ದಾರೆ. ಅಡಿಕೆ ಮಾರುಕಟ್ಟೆಗೆ ಬಿಟ್ಟರೂ ನೀರು ಒದಗಿಸಲು ಲಕ್ಷಾಂತರ ರೂಪಾಯಿ ವ್ಯಯಿಸಬೇಕಾಗಿದೆ. ಈ ಹಿನ್ನೆಲೆಯಲ್ಲಿ ಈ ವರ್ಷ ಅಡಿಕೆ ಬೆಳೆಗಾರರಿಗೆ ಇತ್ತ ಲಾಭವೂ ಇಲ್ಲ, ಅತ್ತ ನಷ್ಟವೂ ಇಲ್ಲ ಎಂಬಂತಾಗಿದೆ. ಅಡಿಕೆ ಗಿಡಗಳು ಉಳಿದರೆ ಸಾಕು, ಮುಂದಿನ ವರ್ಷದ ಇಳುವರಿಯಲ್ಲಿ ಹೆಚ್ಚು ಬರಬಹುದು ಎಂಬ ಆಶಾಭಾವನೆ ಹೊಂದಿದ್ದಾರೆ.

ಮತ್ತೊಂದೆಡೆ ಈ ಬಾರಿ ಬೆಳೆಯು ಕಡಿಮೆ ಬಂದಿದೆ. ಹವಾಮಾನ ವೈಪರೀತ್ಯ, ಸರಿಯಾದ ವೇಳೆಗೆ ಮಳೆ ಬಾರದಿರುವುದರಿಂದ ಅಡಿಕೆ ಗಟ್ಟಿಯಾಗಿಲ್ಲ. ಜೊಳ್ಳು ಜೊಳ್ಳು ಆಗಿರುವ ಕಾರಣದಿಂದ ತೂಕ ಹೆಚ್ಚಿಲ್ಲ. ಈ ಕಾರಣದಿಂದ ಅಡಿಕೆ ಬೆಳೆಗಾರರಿಗೆ 2023 ಹಾಗೂ 2024ರ ಆರಂಭದ ತಿಂಗಳು ಅಷ್ಟೇನು ಶುಭದಾಯಕವಾಗಿಲ್ಲ.

 

Exit mobile version