Site icon Kannada News-suddikshana

ನನ್ನ ರಕ್ತದ ಕಣಕಣದಲ್ಲೂ ಬಿಜೆಪಿ – ಹಿಂದುತ್ವ: ಕಾಂಗ್ರೆಸ್ ಸೇರೋ ಪ್ರಶ್ನೆಯೇ ಇಲ್ಲವೆಂದ್ರು ಎಂ. ಪಿ. ರೇಣುಕಾಟಾರ್ಯ…!

SUDDIKSHANA KANNADA NEWS/ DAVANAGERE/ DATE:16-08-2024

ದಾವಣಗೆರೆ: ನನ್ನ ರಕ್ತದ ಕಣಕಣದಲ್ಲಿಯೂ ಬಿಜೆಪಿ, ಹಿಂದುತ್ವ ಇದೆ. ನಾನು ಕಾಂಗ್ರೆಸ್ ವಿರುದ್ಧ ಹೋರಾಟ ಮಾಡುವ ಮೂಲಕ ರಾಜಕಾರಣ ಪ್ರವೇಶಿಸಿದ್ದೇನೆ. ಕಾಂಗ್ರೆಸ್ ಸೇರುವ ಪ್ರಶ್ನೆಯೇ ಇಲ್ಲ ಎಂದು ಮಾಜಿ ಸಚಿವ ಎಂ. ಪಿ. ರೇಣುಕಾಚಾರ್ಯ ಹೇಳಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನು ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ. ಕೆ. ಶಿವಕುಮಾರ್, ಸಚಿವ ಕೃಷ್ಣಬೈರೇಗೌಡ, ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್, ಎನ್. ಚೆಲುವರಾಯಸ್ವಾಮಿ, ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪರನ್ನು ಭೇಟಿಯಾಗಿದ್ದು ನಿಜ. ಮಲ್ಲಿಕಾರ್ಜುನ್ ಅವರನ್ನು ನಾನು ಹೊನ್ನಾಳಿ ತಾಲೂಕು ಬರಪೀಡಿತವೆಂದು ಘೋಷಿಸಿ ಎಂದು ಮನವಿ ಮಾಡಲು ಹೋಗಿದ್ದೆ. ಮತ್ತೊಮ್ಮೆ ರೈತರು ಸಮಸ್ಯೆ ಹೇಳಿಕೊಳ್ಳಲು ಬಂದಾಗ ಜೊತೆಗಿದ್ದೆ. ಇದನ್ನೇ ತಪ್ಪಾಗಿ ಅರ್ಥೈಸಲಾಗಿದೆ ಎಂದು ತಿಳಿಸಿದರು.

ಎಸ್. ಎಸ್. ಮಲ್ಲಿಕಾರ್ಜುನ್ ಅವರು ಸ್ವಾತಂತ್ರ್ಯ ದಿನಾಚರಣೆಯ ಧ್ವಜಾರೋಹಣ ನೆರವೇರಿಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡುವಾಗ ನಾನು ಕಾಂಗ್ರೆಸ್ ಸೇರಲು ಬಂದಿದ್ದೆ ಎಂದಿದ್ದರು. ಆಮೇಲೆ ಅವರೇ ಸ್ಪಷ್ಟನೆ
ನೀಡಿದ್ದಾರೆ. ಕೆಲ ಪತ್ರಿಕೆಗಳಲ್ಲಿ ವರದಿ ಪ್ರಕಟವಾಗಿದೆ. ಮತ್ತೆ ಕೆಲವು ಪತ್ರಿಕೆಗಳಲ್ಲಿ ಬಂದಿದೆ. ನಾನು ಕಾಂಗ್ರೆಸ್ ಸೇರಲು ಹೋಗಿಲ್ಲ. ಕ್ಷೇತ್ರದ ಸಮಸ್ಯೆಗಳ ಪರಿಹಾರಕ್ಕೆ ಹೋಗಿದ್ದೆ. ಶಾಮನೂರು ಶಿವಶಂಕರಪ್ಪರು ಹಿರಿಯ ಶಾಸಕರು. ಜನುಮದಿನಕ್ಕೆ ಶುಭ ಹಾರೈಸಲು ಆಗಿರಲಿಲ್ಲ. ಹಾಗಾಗಿ ಮನೆಗೆ ಹೋಗಿದ್ದೆ. ಬೆಂಗಳೂರಿನಲ್ಲಿಯೂ ಭೇಟಿಯಾಗಿದ್ದೆ ಎಂದು ಹೇಳಿದರು.

ಬಿಜೆಪಿಯಿಂದ ನಾನು ಮೂರು ಬಾರಿ ಶಾಸಕನಾಗಿ, ಕೋಲಾರ ಚಿನ್ನದ ಹಟ್ಟಿ ಅಧ್ಯಕ್ಷನಾಗಿ, ಸಚಿವನಾಗಿ, ಸಿಎಂ ರಾಜಕೀಯ ಕಾರ್ಯದರ್ಶಿಯಾಗಿ ಕೆಲಸ ಮಾಡಿದ್ದೇನೆ. ಒಬ್ಬ ಕಾರ್ಯಕರ್ತನನ್ನು ಈ ಮಟ್ಟಕ್ಕೆ ಪಕ್ಷ ಬೆಳೆಸಿದೆ. ನಾನು ಜನತಾ ಪಕ್ಷದಿಂದ ರಾಜಕೀಯ ಶುರು ಮಾಡಿದವನು. ಕಾಂಗ್ರೆಸ್ ವಿರುದ್ಧ ಹೋರಾಡುತ್ತಲೇ ಬೆಳೆದವನು. ದಾವಣಗೆರೆಯ ಕಲ್ಲೇಶ್ವರ ರೈಸ್ ಮಿಲ್ ನಲ್ಲಿಯೂ ಮಲ್ಲಿಕಾರ್ಜುನ್ ಅವರನ್ನು ಭೇಟಿ ಮಾಡಿದ್ದೆ. ಆದ್ರೆ, ಕೆಲವರು ಇದನ್ನೇ ನಾನು ಕಾಂಗ್ರೆಸ್ ಸೇರುತ್ತೇನೆ ಎಂದು ಸುಳ್ಳು ವದಂತಿ ಹಬ್ಬಿಸಿದರು. ನಾನು ಎಂದಿಗೂ ಕಾಂಗ್ರೆಸ್ ಗೆ ಅರ್ಜಿ ಹಾಕಿಲ್ಲ, ಇದರ ಅವಶ್ಯಕತೆಯೂ ಇಲ್ಲ ಎಂದು ರೇಣುಕಾಚಾರ್ಯ ಹೇಳಿದರು.

Exit mobile version