SUDDIKSHANA KANNADA NEWS/ DAVANAGERE/ DATE_09-07_2025
ದಾವಣಗೆರೆ: ಮಾಜಿ ಸಂಸದ ಪ್ರತಾಪ್ ಸಿಂಹಗೆ ದಾವಣಗೆರೆ ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರ ಬಗ್ಗೆ ಮಾತನಾಡುವ, ಹೇಳಿಕೆ ನೀಡುವ ಯಾವುದೇ ಯೋಗ್ಯತೆ, ನೈತಿಕತೆ ಉಳಿಸಿಕೊಂಡಿಲ್ಲ. ಇದು ಬಿಜೆಪಿಯವರೇ
ಸಾಬೀತುಪಡಿಸಿದ್ದಾರೆ. ಮೈಸೂರಿನಲ್ಲಿ ಟಿಕೆಟ್ ನೀಡದಿರಲು ಕಾರಣ ಏನು ಎಂಬ ಬಗ್ಗೆ ಇದುವರೆಗೆ ತಿಳಿದುಕೊಳ್ಳಲು ಆಗದ ಪ್ರತಾಪ್ ಸಿಂಹಗೆ ದಾವಣಗೆರೆ ಅಭಿವೃದ್ಧಿ ಬಗ್ಗೆ ಏನು ಗೊತ್ತು ಎಂದು ದಾವಣಗೆರೆ ಜವಾಹರ್ ಬಾಲ್ ಮಂಚ್ ಜಿಲ್ಲಾಧ್ಯಕ್ಷ ಮೊಹಮ್ಮದ್ ಜಿಕ್ರಿಯಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿರುವ ಅವರು, ಮಾಜಿ ಸಂಸದ ಡಾ. ಜಿ. ಎಂ. ಸಿದ್ದೇಶ್ವರ ಅವರು ಕೊಟ್ಟ ಚೀಟಿ ಹಿಡಿದು ಮಾತನಾಡಿದ್ದ ಪ್ರತಾಪ್ ಸಿಂಹಗೆ ಮೈಸೂರಿನ ಬಗ್ಗೆಯೇ ಸರಿಯಾಗಿ ಗೊತ್ತಿಲ್ಲ. ದಾವಣಗೆರೆ ಸಂಸದರ
ಬಗ್ಗೆ ಲಘುವಾಗಿ ಮಾತನಾಡಿದ್ದಾರೆ. ಬಿಜೆಪಿಯವರ ಮಾತು ಯಾವ ರೀತಿ ಇದೆ ಎಂಬುದನ್ನು ರಾಜ್ಯ ಜನತೆ ನೋಡಿದ್ದಾರೆ. ಸಿ. ಟಿ. ರವಿ, ಎನ್. ರವಿಕುಮಾರ್, ಪ್ರತಾಪ್ ಸಿಂಹ ಸೇರಿದಂತೆ ಹಲವು ನಾಯಕರಿಗೆ ಏನು ಮಾತನಾಡಬೇಕು ಎಂಬುದೇ ಗೊತ್ತಿಲ್ಲ ಎಂದು ಕಿಡಿಕಾರಿದ್ದಾರೆ.
ಬಿಜೆಪಿಯವರು ಗೆದ್ದಾಗ ಯಾವ ತಂತ್ರಗಾರಿಕೆ ಇರಲ್ಲ. ಕಾಂಗ್ರೆಸ್ ನವರು ಗೆದ್ದರೆ ಮಾತ್ರ ಹೊಂದಾಣಿಕೆ ರಾಜಕೀಯ ಎಂದು ಪ್ರತಾಪ್ ಸಿಂಹ ಅಂದುಕೊಂಡಿದ್ದಾರೆ. ಅವರ ಪಕ್ಷದವರೇ ಪ್ರತಾಪ್ ಸಿಂಹ ಬಗ್ಗೆ ಮಾಡಿರುವ ಆರೋಪದ ಬಗ್ಗೆ ಪ್ರತಿಕ್ರಿಯೆ ನೀಡುವ ಯೋಗ್ಯತೆಯನ್ನೂ ಉಳಿಸಿಕೊಳ್ಳದೇ ದಾವಣಗೆರೆ ಅಭಿವೃದ್ಧಿ ಮಾಡಿದ್ದು ಸಿದ್ದೇಶ್ವರ ಎಂದಿದ್ದಾರೆ. ಇಲ್ಲಿನ ಬಿಜೆಪಿ ನಾಯಕರೇ ಸಿದ್ದೇಶ್ವರ ಏನು ಮಾಡಿಲ್ಲ ಎಂದಿದ್ದಾರೆ. ಪ್ರಭಾ ಮಲ್ಲಿಕಾರ್ಜುನ್ ಅವರು ಕಳೆದ ಒಂದು ವರ್ಷದಲ್ಲಿ ಸಂಸತ್ ನಲ್ಲಿ ಎಷ್ಟು ಬಾರಿ ಮಾತನಾಡಿದ್ದಾರೆ, ಜನರ ಸಮಸ್ಯೆಗಳಿಗೆ ಸ್ಪಂದಿಸುವ, ಕಷ್ಟಗಳನ್ನು ಪರಿಹರಿಸಲು ಪ್ರಾಮಾಣಿಕ ಪ್ರಯತ್ನ ನಡೆಸುತ್ತಿದ್ದಾರೆ ಎಂದು ಹೇಳಿದ್ದಾರೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೇ ಪ್ರಭಾ ಮಲ್ಲಿಕಾರ್ಜುನ್ ಅವರನ್ನು ಹೊಗಳಿದ್ದಾರೆ. ಇದು ಬಿಜೆಪಿ ಪಕ್ಷದ ನಾಯಕರ ವಿರುದ್ಧವೇ ಮಾತನಾಡುವವರಿಗೆ ಇಷ್ಟವಾಗಿಲ್ಲ. ಯಾರೋ ಹೇಳಿದ್ದನ್ನು ಕೇಳಿ ಮಾತನಾಡಿರುವ ಪ್ರತಾಪ್ ಸಿಂಹ ಹೇಳಿಕೆ ಮಾತು ಕೇಳುವುದನ್ನು ಬಿಡಲಿ. ಜನರ ಆಶೀರ್ವದಿಸಿದ್ದರಿಂದ, ಸಿದ್ದೇಶ್ವರ ಅವರ ದುರಂಹಕಾರಕ್ಕೆ ಸೋಲಾಗಿದೆ. ನೀವು ಪ್ರಚಾರಕ್ಕೆ ಬಂದಿದ್ದರೂ ಯಾಕೆ ಸೋಲಾಯಿತು? ಮೈಸೂರಿನಲ್ಲೇ ನಿಮಗೆ ನೆಲೆ ಇಲ್ಲ, ನೀವು ಬಿಜೆಪಿಯ ಯಾವ ಗುಂಪಿನಲ್ಲಿದ್ದೀರಾ? ಬಿಜೆಪಿ ಹೈಕಮಾಂಡ್ ಟಿಕೆಟ್ ನೀಡಲು ಯಾಕೆ ನಿರಾಕರಿಸಿತು ಎಂಬುದನ್ನು ಸ್ಪಷ್ಟಪಡಿಸಿ. ಆ ನಂತರ ಶಾಮನೂರು ಶಿವಶಂಕರಪ್ಪ, ಎಸ್. ಎಸ್. ಮಲ್ಲಿಕಾರ್ಜುನ್, ಪ್ರಭಾ ಮಲ್ಲಿಕಾರ್ಜುನ್ ಅವರ ಬಗ್ಗೆ ಹೇಳಿಕೆ ಕೊಡಲಿ ಎಂದು ಮೊಹಮ್ಮದ್ ಜಿಕ್ರಿಯಾ ಸವಾಲು ಹಾಕಿದ್ದಾರೆ.