Site icon Kannada News-suddikshana

ಕಂಬಳಕ್ಕೆ ಜಾತಿ-ಧರ್ಮದ ಬೇಲಿ ಇಲ್ಲ: ಈ ಕ್ರೀಡೆಗೆ ಸಿಎಂ ಸಿದ್ದರಾಮಯ್ಯ ಬಹುಪರಾಕ್!

SUDDIKSHANA KANNADA NEWS/ DAVANAGERE/ DATE:11-01-2025

ಮಂಗಳೂರು: ಕಂಬಳ ಕ್ರೀಡೆ ಮತ್ತು ಕಲೆಗೆ ಜಾತಿ-ಧರ್ಮದ ಬೇಲಿ ಇಲ್ಲ. ಇದು ಸರ್ವರ ಸಂಭ್ರಮ.‌ ನಮ್ಮ ದೇಶ ಬಹುತ್ವದ ದೇಶ‌ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬಣ್ಣಿಸಿದರು.

ಉಳ್ಳಾಲ ನರಿಂಗಾನದ ಮೂರನೇ ವರ್ಷದ ಲವ-ಕುಶ ಜೋಡುಕೆರೆ ಕಂಬಳೋತ್ಸವವನ್ನು ಉದ್ಘಾಟಿಸಿ ಮಾತನಾಡಿದ ಅವರು, ಜನಪದ ಕ್ರೀಡೆ ಕಂಬಳ ಸರ್ವ ಜಾತಿ ಧರ್ಮದ ಜನಸಮುದಾಯವನ್ನು ಬೆಸೆಯುವಂತೆ ಮಾಡುತ್ತಿದೆ ಎಂದರು.

ವಿವಿಧತೆಯಲ್ಲಿ ಏಕತೆಯನ್ನು ಕಾಣುವ ಭಾರತ ಸಂಸ್ಕೃತಿಯ ಒಂದು ಭಾಗ ಕರಾವಳಿ ಜಿಲ್ಲೆಗಳ ಸಂಸ್ಕೃತಿಯಾಗಿದೆ. ನಮ್ಮ ಸರ್ಕಾರ ಕೂಡ ಎಲ್ಲಾ ಜಾತಿ, ಎಲ್ಲಾ ಧರ್ಮದ ಪರವಾಗಿ ಕಾರ್ಯಕ್ರಮಗಳನ್ನು ರೂಪಿಸುತ್ತಿದೆ. ಮಹಿಳೆಯರಿಗೆ ಆರ್ಥಿಕ ಶಕ್ತಿ ಕೊಡುವ ಮೂಲಕ‌ ಕುಟುಂಬಗಳ ಮತ್ತು ಮಹಿಳಾ ಸಮಾಜದ ಆರ್ಥಿಕ‌ ಶಕ್ತಿಯನ್ನು ಹೆಚ್ಚಿಸುವ ಕಾರ್ಯಕ್ರಮಗಳನ್ನು ಇಡೀ ದೇಶದಲ್ಲಿ ಮೊದಲಿಗೆ ಕೊಟ್ಟಿದ್ದು ನಮ್ಮ ಸರ್ಕಾರ. ಆಶಾ ಕಾರ್ಯಕರ್ತೆಯರ ಬೇಡಿಕೆ ಈಡೇರಿಸಿ ಅವರು ಪ್ರತಿಭಟನೆ ಹಿಂತೆಗೆದುಕೊಳ್ಳುವಂತೆ ಮಾಡಿದ್ದು ನಮ್ಮ ಸರ್ಕಾರ. ಆಶಾ ಕಾರ್ಯಕರ್ತೆಯರಿಗೆ ತಿಂಗಳಿಗೆ 10 ಸಾವಿರ ಸಿಗುವಂತೆ ಮಾಡುವ ಜವಾಬ್ದಾರಿಯನ್ನು ನಮ್ಮ ಸರ್ಕಾರ ವಹಿಸಿಕೊಂಡಿದೆ ಎಂದು ತಿಳಿಸಿದರು.

ಸುಪ್ರೀಂಕೋರ್ಟ್ ನಿಷೇಧಿಸಿದ್ದ ಕಂಬಳ ಕ್ರೀಡೆಗೆ ಮರು ಚಾಲನೆ ಸಿಗುವಂತೆ ಮಾಡಿದ್ದು ನಮ್ಮ ಸರ್ಕಾರ. ಸುಪ್ರೀಂಕೋರ್ಟ್ ನಿಷೇಧವನ್ನು ತೆರವುಗೊಳಿಸಲು ಸರ್ಕಾರ ಶ್ರಮಿಸಿತು. ಇದು ಕರಾವಳಿಯ ಜನಪದ ಸಂಸ್ಕೃತಿಗೆ ನಮ್ಮ ಸರ್ಕಾರ ಕೊಟ್ಟ ಕೊಡುಗೆ ಎಂದರು.

ತಮ್ಮ ಮನೆ ಮಕ್ಕಳಂತೆ ಕೋಣಗಳನ್ನು ಸಾಕುತ್ತಾರೆ. ಕಂಬಳ ಕ್ರೀಡೆ ಜಿಲ್ಲೆಯ ಜನಪದ ಸಂಸ್ಕೃತಿಯ ಅವಿಭಾಜ್ಯ ಅಂಗವಾಗಿದೆ. ಹೀಗಾಗಿ ಈ ಸಾಂಪ್ರದಾಯಿಕ ಕ್ರೀಡೆಯನ್ನು ಉಳಿಸಲು ನಾನು ಮುಂದಾದೆ ಎಂದರು.

24 ಕಂಬಳಗಳನ್ನು ನಡೆಸಲು ಪ್ರತೀ ಕಂಬಳಕ್ಕೆ ತಲಾ 5 ಲಕ್ಷ ರೂಪಾಯಿ ನೆರವನ್ನು ನಮ್ಮ ಸರ್ಕರ ನೀಡಿದೆ ಎಂದು ತಿಳಿಸಿದರು.

ಕರ್ನಾಟಕ ವಿಧಾನಸಭೆಯ ಸ್ಪೀಕರ್ ಯು.ಟಿ.ಖಾದರ್, ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ಸಚಿವ ರಹೀಂ ಖಾನ್ ಸೇರಿ ಹಲವು ಪ್ರಮುಖರು, ಜಿಲ್ಲೆಯ ಶಾಸಕರು, ವಿಧಾನ ಪರಿಷತ್ ಸದಸ್ಯರು, ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು.

Exit mobile version