Site icon Kannada News-suddikshana

ಅಕ್ರಮ ಕ್ರಷರ್‌ಗಳಿಗೆ ಕಡಿವಾಣ ಹಾಕಿ: ಬಂಗಾರ, ದುಬಾರಿ ವಾಚ್ ಕಂಡು ಉಪಲೋಕಾಯುಕ್ತರೇ ಗಾಬರಿ..!

SUDDIKSHANA KANNADA NEWS/ DAVANAGERE/ DATE-24-04-2025

ದಾವಣಗೆರೆ: ಉಪಲೊಕಾಯುಕ್ತ ನ್ಯಾಯಮೂರ್ತಿ ಬಿ.ವೀರಪ್ಪ ನಗರದ ಗಣಿ ಮತ್ತು ಭೂ ವಿಜ್ಞಾನ, ಪ್ರಾದೇಶಿಕ ಸಾರಿಗೆ ಹಾಗೂ ಬೆಸ್ಕಾಂ ಕಚೇರಿಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ ಜಿಲ್ಲೆಯಲ್ಲಿನ ಕಲ್ಲು ಗಣಿಗಾರಿಕೆ ಹಾಗೂ ಅಕ್ರಮ ಕ್ರಷರ್‌ಗಳ ಆರ್ಭಟಕ್ಕೆ ಕಡಿವಾಣ ಹಾಕಲು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಮೊದಲಿಗೆ ಗಣಿ ಇಲಾಖೆ ಕಚೇರಿ ಭೇಟಿ ನೀಡಿದ ನ್ಯಾ.ಬಿ.ವೀರಪ್ಪ ಜಿಲ್ಲೆಯಲ್ಲಿ ಪರವಾನಿಗೆ ಪಡೆದ ಕಲ್ಲುಕ್ವಾರಿ ಹಾಗೂ ಕ್ರಷರ್‌ಗಳ ಮಾಹಿತಿಯನ್ನು ಎಷ್ಟು ಎಂದು ಪ್ರಶ್ನಿಸಿದರು. ಜಿಲ್ಲೆಯಲ್ಲಿ 128 ಕ್ಕೂ ಹೆಚ್ಚು ಕ್ರಷರ್‌ಗಳಿಗೆ ಪರವಾನಿಗೆ ನೀಡಿರುವುದಾಗಿ ಅಧಿಕಾರಿಗಳು ಮಾಹಿತಿ ನೀಡಿದರು. ಪರವಾನಗಿ ಪಡೆದ ಕಲ್ಲುಕ್ವಾರಿ ಹಾಗೂ ಕ್ರಷರ್‌ಗಳು ಸರಿಯಾಗಿ ರಾಜಧನ ಪಾವತಿಸಿವಿಯೇ.? ಎಷ್ಟು ರಾಜಧನ ಸರ್ಕಾರಕ್ಕೆ ಸಂದಾಯವಾಗಿದೆ, ಎಷ್ಟು ನಿಂತಿವೆ ಎನ್ನುವ ಮಾಹಿತಿಯನ್ನು ಲೋಕಾಯುಕ್ತಕ್ಕೆ ನೀಡುವಂತೆ ಅವರು ನಿರ್ದೇಶಿಸಿದರು. ಕಲ್ಲುಕ್ವಾರಿಗಳ ಸುತ್ತ ತಂತಿ ಬೇಲಿ ಅಳವಡಿಸಬೇಕು. ಕ್ರಷರ್‌ಗಳು ಹೆಚ್ಚು ವಾಯುಮಾಲಿನ್ಯವಾಗದಂತೆ ಕಲ್ಲುಗಳನ್ನು ಪುಡಿ ಮಾಡಬೇಕು. ಈ ಸಂಬಧವಾಗಿ ಎಲ್ಲಾ ನಿಯಮಗಳನ್ನು ಪಾಲನೆ ಮಾಡಲಾಗುತ್ತಿದೆಯೇ ಎಂಬುದನ್ನು ಅಧಿಕಾರಿಗಳು ಪರಿಶೀಲಿಸಬೇಕು ಎಂದು ನ್ಯಾ.ಬಿ.ವೀರಪ್ಪ ಹೇಳಿದರು.

ಉಪಲೋಕಾಯುಕ್ತರ ಭೇಟಿ ವೇಳೆ ದಾವರಣಗೆರೆ ತಾಲ್ಲೂಕಿನ ಗಣಿ ಇಲಾಖೆ ಅಧಿಕಾರಿ ರಜೆ ಮೇಲೆ ತೆರಳಿದ್ದರು. ಇತರೆ ಅಧಿಕಾರಿಗಳು ಸರಿಯಾದ ಮಾಹಿತಿಯನ್ನು ನ್ಯಾಯಮೂರ್ತಿಗಳಿಗೆ ನೀಡಲಿಲ್ಲ.

ಬಂಗಾರ ಹಾಗೂ ದುಬಾರಿ ವಾಚು:

ಉಪಲೋಕಾಯುಕ್ತ ನ್ಯಾ.ಬಿ.ವೀರಪ್ಪನವರ ಗಣಿ ಇಲಾಖೆ ಕಚೇರಿ ಭೇಟಿ ಸಂದರ್ಭದಲ್ಲಿ ಗಣಿ ಇಲಾಖೆಯ  ಅಧಿಕಾರಿಯೊಬ್ಬರು ಲಕ್ಷ ಲಕ್ಷ ಬಂಗಾರ ಖರೀದಿಸಿದ ಬಿಲ್‌ಗಳು ಅವರ ವಾಹನದಲ್ಲಿ ದೊರತಿವೆ. ಇವುಗಳನ್ನು ಪರಿಶೀಲಿಸಿ, ಬಿಲ್‌ನ ಪ್ರತಿ ಪಡೆದುಕೊಂಡ ನ್ಯಾಯಮೂರ್ತಿಗಳು ಸಂಬಂಧ ಪಟ್ಟ ಅಧಿಕಾರಿಗೆ ಬಂಗಾರ ಖರೀದಿ ವ್ಯವಹಾರ ಸಂಪೂರ್ಣ ವಿವರವನ್ನು ಲೋಕಾಯಕ್ತಕ್ಕೆ ನೀಡುವಂತೆ ತಾಕೀತು ಮಾಡಿದರು.

ಇದೇ ವೇಳೆ ಸಿಕ್ಕ ವಾಚು ನ್ಯಾ.ಬಿ.ವೀರಪ್ಪ ಅವರ ಗಮನ ಸೆಳೆಯಿತು. ನೋಡಲು ಲಕ್ಷ ಲಕ್ಷ ಬೆಲೆಬಾಳುವಂತೆ ವಾಚು ಕಂಡುಬರುತ್ತಿತ್ತು. ಈ ಕುರಿತು ಸಿಬ್ಬಂದಿಯನ್ನು ವಿಚಾರಿಸಿ, ಆನ್‌ಲೈನ್‌ನಲ್ಲಿ ವಾಚಿನ ಬೆಲೆ ಪರಿಶೀಲಿಸಿದಾಗ ಹೆಚ್ಚಿತ್ತು, ಆದರೆ ಅಂಗಡಿಯಲ್ಲಿ ಪರಿಶೀಲಿಸಿದಾಗ ಅಷ್ಟೊಂದು ಬೆಲೆ ಬಾಳದ ವಾಚು ಎಂಬುದು ಕಂಡುಬಂದಿತು. ನಂತರ ಪ್ರಾದೇಶಿಕ ಸಾರಿಗೆ ಇಲಾಖೆ ಅಧಿಕಾರಿಗಳ ಕಚೇರಿ ಭೇಟಿ ನೀಡಿದ ನ್ಯಾ.ಬಿ.ವೀರಪ್ಪ, ಜಿಲ್ಲೆಯಲ್ಲಿ ಒಟ್ಟು  ನೊಂದಾಯಿತ ವಾಹನಗಳ ಸಂಖ್ಯೆ, ಶಾಲಾ ವಾಹನಗಳು ಹಾಗೂ ಅದಿರು ಸಾಗಾಣಿಕೆ ವಾಹನಗಳ ಮಾಹಿತಿ ಪಡೆದುಕೊಂಡರು.

ಕಲ್ಲುಕ್ವಾರಿ ಹಾಗೂ ಕ್ರಷರ್‌ಗಳಿಂದ ಕಲ್ಲಿನ ಪುಡಿಗಳನ್ನು ಸಾಗಾಟ ಮಾಡುವ ವಾಹನಗಳಿಗೆ ಜಿಪಿಎಸ್ ಅಳವಡಿಸುವಂತೆ ಹಾಗೂ ಅವುಗಳ ಓಡಾಟದ ಬಗ್ಗೆ ನಿಖರ ಮಾಹಿತಿ ಪಡೆದುಕೊಳ್ಳುವಂತೆ ಸಾರಿಗೆ ಅಧಿಕಾರಿಗಳಿಗೆ ನಿರ್ದೇಶಿಸಿದರು.

ಬೆಸ್ಕಾಂ ಕಚೇರಿಗೆ ಭೇಟಿ ನೀಡಿದ ನ್ಯಾ.ಬಿ.ವೀರಪ್ಪ ರೈತರಿಗೆ ಸರಬರಾಜು ಮಾಡುವ ಉಚಿತ ವಿದ್ಯುತ್ ಕುರಿತು ಮಾಹಿತಿ ಪಡೆದರು. ರಾತ್ರಿ ವೇಳೆ ಕ್ರಷರ್‌ಗಳು ಅನಧಿಕೃತವಾಗಿ ವಿದ್ಯುತ್ ಸಂಪರ್ಕ ಪಡೆದು ಕಾರ್ಯಾಚರಣೆ ನಡೆಸುತ್ತಿರುವುದಾಗಿ ಆರೊಪಗಳು ಕೇಳಿ ಬಂದಿವೆ. ಬೆಸ್ಕಾಂ ಅಧಿಕಾರಿಗಳು ಇದಕ್ಕೆ ಅವಕಾಶ ನೀಡದಂತೆ ಅವರು ಸೂಚಿಸಿದರು.

ಈ ವೇಳೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸುರೇಶ್ ಬಿ ಇಟ್ನಾಳ್ , ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾಪ್ರಶಾಂತ್, ಅಪರ ಜಿಲ್ಲಾಧಿಕಾರಿ ಪಿ. ಎನ್. ಲೋಕೇಶ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಜಿ. ಮಂಜುನಾಥ್, ಕರ್ನಾಟಕ ಲೋಕಾಯುಕ್ತದ ಅಪರ ನಿಬಂಧಕರಾದ ಕೆ.ಎಂ.ರಾಜಶೇಖರ್, ಉಪ ನಿಬಂಧಕರಾದ ಅರವಿಂದ.ಎನ್.ವಿ., ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಮಹಾವೀರ ಮ. ಕರೆಣ್ಣವರ್, ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಎಂ.ಎಸ್. ಕೌಲಪೂರೆ, ಉಪವಿಭಾಗಾಧಿಕಾರಿ ಸೋತೋಷ್ ಸೇರಿದಂತೆ ಜಿಲ್ಲೆಯ ಲೋಕಾಯುಕ್ತ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು, ಮತ್ತಿತರರು ಹಾಜರಿದ್ದರು.

Exit mobile version