Site icon Kannada News-suddikshana

ಫಸಲಿಗೆ ಬಂದಿದ್ದ 300ಕ್ಕೂ ಹೆಚ್ಚು ಅಡಿಕೆ ಗಿಡಗಳ ಕಡಿದ ದುಷ್ಕರ್ಮಿಗಳು!

ಅಡಿಕೆ

SUDDIKSHANA KANNADA NEWS/ DAVANAGERE/DATE:08_08_2025

ದಾವಣಗೆರೆ: ಫಸಲಿಗೆ ಬಂದಿದ್ದ 300ಕ್ಕೂ ಹೆಚ್ಚು ಅಡಿಕೆ ಗಿಡಗಳನ್ನು ದುಷ್ಕರ್ಮಿಗಳು ಕಡಿದು ಹಾಕಿರುವ ಘಟನೆ ಜಗಳೂರು ತಾಲೂಕಿನ ಸೊಕ್ಕೆ ಗ್ರಾಮ ಸಮೀಪದ ತೋಟದಲ್ಲಿ ನಡೆದಿದೆ.

READ ALSO THIS STORY: ವೈಯಕ್ತಿಕ ಸಾಲ vs ಕ್ರೆಡಿಟ್ ಕಾರ್ಡ್: ಯಾವುದು ಬೆಸ್ಟ್?

ಸೊಕ್ಕೆ ಸಮೀಪದ ಕಾಟೇನಹಳ್ಳಿ ಬೀಚರಾಕ್ ಗ್ರಾಮದಲ್ಲಿನ ನಾಗರಾಜ್ ಎಂಬುವವರು ಕಳೆದ ನಾಲ್ಕು ವರ್ಷಗಳ ಹಿಂದೆ ಅಡಿಕೆ ಸಸಿ ನೆಟ್ಟಿದ್ದರು. ನಾಲ್ಕು ವರ್ಷದ ಗಿಡಗಳು ಇನ್ನೇನೂ ಫಸಲು ಬಿಡಬೇಕಿತ್ತು. ಆದ್ರೆ, ದುಷ್ಕರ್ಮಿಗಳು ದ್ವೇಷದಿಂದ ಗಿಡಗಳನ್ನು ಕಡಿದು ಹಾಕಿದ್ದಾರೆ ಎನ್ನಲಾಗಿದೆ. ಇದರಿಂದಾಗಿ ರೈತ ನಾಗರಾಜ್ ಅವರಿಗೆ ಸುಮಾರು ಆರೂವರೆ ಲಕ್ಷ ರೂಪಾಯಿ ನಷ್ಟ ಆಗಿದೆ.

ಬರಗಾಲ ಬಂದಾಗಲೂ ಎದೆಗುಂದದೇ ನೀರಿಗೆ ಕೊರತೆಯಾಗದಂತೆ ಮಕ್ಕಳಂತೆ ಅಡಿಕೆ ಗಿಡಗಳನ್ನು ಬೆಳೆಸಿದ್ದೆ. ಸಾಲ ಮಾಡಿ ಗಿಡಗಳನ್ನು ಪೋಷಿಸಿದ್ದೇನೆ. ತೋಟ ಚೆನ್ನಾಗಿ ಇರುವುದನ್ನು ನೋಡಿ ಸಹಿಸಲಾಗದೇ ಕೆಲವರು ಕೊಚ್ಚಿ ಹಾಕಿದ್ದಾರೆ. ಕೂಡಲೇ ಬಂಧಿಸಿ ಶಿಕ್ಷೆ ವಿಧಿಸಬೇಕು. ಮುಂದೆ ಯಾವ ರೈತನ ಅಡಿಕೆ ಗಿಡಗಳನ್ನು ಕಡಿದು ಹಾಕದಂತ ಶಿಕ್ಷೆ ನೀಡಬೇಕು. ರೈತರು ಮೊದಲೇ ಸಂಕಷ್ಟದಲ್ಲಿದ್ದಾರೆ. ಫಸಲಿಗೆ ಬಂದ ಅಡಿಕೆ ಗಿಡಗಳು ದುರುಳರಿಗೆ ಏನು ಮಾಡಿತ್ತು. ಇಂಥವರನ್ನು ಸುಮ್ಮನೆ ಬಿಡಬಾರದು ಎಂದು ಅಳಲು ತೋಡಿಕೊಂಡರು.

ಜಗಳೂರು ಸಿಪಿಐ ಸಿದ್ದರಾಮಯ್ಯ, ಪಿಎಸ್ಐ ಗಾದಿಲಿಂಗಪ್ಪ ಅವರು ತೋಟಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಆರೋಪಿಗಳ ಬಗ್ಗೆ ಸುಳಿವು ಸಿಕ್ಕಿದ್ದು ಆದಷ್ಟು ಬೇಗ ಬಂಧಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ಅಡಿಕೆ ಗಿಡಗಳ ಕಡಿದಿರುವ ಕುರಿತಂತೆ ಜಗಳೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Exit mobile version