ದಾವಣಗೆರೆ: ದಾವಣಗೆರೆಯಲ್ಲೂ ಅಕ್ಕಪಡೆ ಕಾಲಿಟ್ಟಿದೆ. ಈಗ ಅಧಿಕೃತವಾಗಿಯೂ ಚಾಲನೆ ಸಿಕ್ಕಿದೆ.
ಅಕ್ಕ ಪಡೆಯ ಚಟುವಟಿಕೆ ಭಾಗವಾಗಿ ಸೂಕ್ಷ್ಮ ಪ್ರದೇಶಗಳಲ್ಲಿ ಗಸ್ತು ತಿರುಗುವುದು, ಮಹಿಳೆ ಮತ್ತು ಮಕ್ಕಳ ಸಂಕಷ್ಟದ ಕರೆಗಳಿಗೆ ಸ್ಪಂದಿಸುವುದು, ಲಿಂಗ ಸಮಾನತೆ, ಮಕ್ಕಳ ರಕ್ಷಣೆ, ಕಾನೂನು ಹಕ್ಕುಗಳು, ಸಹಾಯವಾಣಿಗಳ ಕುರಿತು ಶಾಲೆ, ಕಾಲೇಜು ಮಾರುಕಟ್ಟೆಗಳಲ್ಲಿ ಜಾಗೃತಿ ಅಭಿಯಾನ ನಡೆಸುವುದು.
ಮಕ್ಕಳ ಕಲ್ಯಾಣ ಸಮಿತಿಗಳು, ಸಹಾಯವಾಣಿಗಳು, ಸರ್ಕಾರೇತರ ಸಂಸ್ಥೆಗಳಿಗೆ ಕಾನೂನು ನೆರವು ಮತ್ತು ಆಶ್ರಯ ತಾಣ ಗಳೊಂದಿಗೆ ಸಂಪರ್ಕ ಕಲ್ಪಿಸಿ ಸಮಾಲೋಚನೆ ನೀಡುವುದು.
ಅಕ್ಕಪಡೆಯ ಸಹಾಯವಾಣಿಗಳು:
1098, 181, 112, 1930.ಈ ಸಂಖ್ಯೆಗಳಿಗೆ ಕರೆ ಮಾಡಿದ ತಕ್ಷಣ ಅಕ್ಕ ಪಡೆ ಕಾರ್ಯಪ್ರವೃತ್ತವಾಗಿ ಸ್ಪಂದಿಸಲಿದೆ. ಇದಕ್ಕೆ ಬೆಳಗ್ಗೆ 7 ರಿಂದ ಸಂಜೆ 8 ಗಂಟೆಯವರೆಗೆ ಕರೆ ಮಾಡಬಹುದಾಗಿದೆ. ಉಳಿದಂತೆ 112, 100 ಇವು ನಿರಂತರವಾಗಿರುತ್ತದೆ.
ಅಕ್ಕಪಡೆಯ ಅನುಷ್ಠಾನ ಮತ್ತು ಕಾರ್ಯ ನಿರ್ವಹಣೆ ಸಮಿತಿ:
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಅಧ್ಯಕ್ಷತೆಯಲ್ಲಿ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಪದವಿ ಪೂರ್ವ ಶಿಕ್ಷಣ ಇಲಾಖೆ, ಕಾಲೇಜು ಶಿಕ್ಷಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರುಗಳು, ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಗಳು, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿ, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಮಕ್ಕಳ ರಕ್ಷಣಾಧಿಕಾರಿಗಳು ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರು ಸದಸ್ಯ ಕಾರ್ಯದರ್ಶಿಗಳಾಗಿರುತ್ತಾರೆ.
ಸಂಸದೆ ಪ್ರಭಾ ಮಲ್ಲಿಕಾರ್ಜುನ್ ಏನಂದ್ರು?
ಜಿಲ್ಲೆಯಲ್ಲಿ ಅಪಾಯದಲ್ಲಿರುವ ಅಥವಾ ಸಂಕಷ್ಟದಲ್ಲಿರುವ ದುರ್ಬಲ ಮಹಿಳೆಯರು ಮತ್ತು ಮಕ್ಕಳಿಗೆ ತಕ್ಷಣ ರಕ್ಷಣೆ ನೀಡಲು ಅಕ್ಕಪಡೆ ಜಿಲ್ಲೆಯಾದ್ಯಂತ ಕಾರ್ಯನಿರ್ವಹಿಸಲಿದೆ ಎಂದು ಸಂಸದರಾದ ಡಾ; ಪ್ರಭಾ ಮಲ್ಲಿಕಾರ್ಜುನ ಅವರು ತಿಳಿಸಿದರು.
ಅಕ್ಕಪಡೆಯನ್ನು ಜಿಲ್ಲಾ ಪೊಲೀಸ್ ಕಚೇರಿ ಆವರಣದಲ್ಲಿ ಉದ್ಪಾಟಿಸಿ ಮಾತನಾಡಿದರು.
ಸಹಾನುಭೂತಿ ಮತ್ತು ಸಮುದಾಯ ಸೇವೆಯಲ್ಲಿ ಚಾಲಿತವಾಗಿರುವ ಅಕ್ಕಪಡೆ ಸಮಾಜದಲ್ಲಿ ಸ್ಪಂದಿಸುವ ಸುರಕ್ಷಣಾ ಘಟಕವಾಗಿ ಮತ್ತು ಶೈಕ್ಷಣಿಕ ಶಕ್ತಿಯಾಗಿ ಕಾರ್ಯ ನಿರ್ವಹಿಸುತ್ತದೆ. ಈ ಹಿಂದೆ ಜಿಲ್ಲೆಯ ಪೊಲೀಸ್ ವತಿಯಿಂದ ಕಾರ್ಯನಿರ್ವಹಿಸುತ್ತಿದ್ದ ಪೊಲೀಸ್ ಅಧಿಕಾರಿ ಸಿಬ್ಬಂದಿಗಳನ್ನೊಳಗೊಂಡ “ದುರ್ಗಾಪಡೆ” ಯ ಕಾರ್ಯವೈಖರಿಯ ಈ ನೂತನ ಅಕ್ಕಪಡೆ ಕಾರ್ಯವೈಖರಿಯಲ್ಲಿ ಮುಂದುವರೆಯುತ್ತದೆ ಎಂದು ತಿಳಿಸಿದರು.
ಅಕ್ಕ ಪಡೆಯ ಉದ್ದೇಶ, ಮಹಿಳೆಯರು ಮತ್ತು ಮಕ್ಕಳ ಮೇಲೆ ನಡೆಯುತ್ತಿರುವ ದೌರ್ಜನ್ಯ, ಹಿಂಸೆ, ಶೋಷಣೆಯಿಂದ ಹಾಗೂ ಸಾರ್ವಜನಿಕ ಮತ್ತು ಖಾಸಗಿ ಸ್ಥಳಗಳಲ್ಲಿ ಮಹಿಳೆಯರ ರಕ್ಷಣೆ ಮತ್ತು ಸುರಕ್ಷತೆ ಒದಗಿಸುವುದು. ಶಿಕ್ಷಣದ ಮೂಲಕ ಹಕ್ಕುಗಳು, ಕಾನೂನುಗಳು, ಸುರಕ್ಷತಾ ಕ್ರಮಗಳು ಮತ್ತು ಲಭ್ಯವಿರುವ ಬೆಂಬಲ ವ್ಯವಸ್ಥೆಗಳ ಬಗ್ಗೆ ಜಾಗೃತಿ ಮೂಡಿಸುವುದು. ಕಾನೂನಿನ ರಕ್ಷಣೆಯೊಂದಿಗೆ ಭಯಮುಕ್ತ ವಾತಾವರಣ ಸೃಷ್ಠಿಸುವುದು ಅಕ್ಕಪಡೆಯ ಉದ್ದೇಶವಾಗಿದೆ ಎಂದು ತಿಳಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ರಾಜನಾಯ್ಕ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.





Leave a comment