ಚೆನ್ನೈ: ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ನಟ ವಿಜಯ್ ಅವರ ತಮಿಳಗ ವೆಟ್ರಿ ಕಳಗಂ (TVK) ಪಕ್ಷವು 108 ಸ್ಥಾನಗಳನ್ನು ಗೆಲ್ಲುವ ಮೂಲಕ ಐತಿಹಾಸಿಕ ಸಾಧನೆ ಮಾಡಿದೆ.
ಆದರೆ, ಸರ್ಕಾರ ರಚಿಸಲು ಅಗತ್ಯವಿರುವ 118 ರ ಮ್ಯಾಜಿಕ್ ಸಂಖ್ಯೆಯನ್ನು ತಲುಪಲು 10 ಸ್ಥಾನಗಳ ಕೊರತೆ ಎದುರಾಗಿದೆ. ಈ ಹಿನ್ನೆಲೆಯಲ್ಲಿ, ಬಹುಮತ ಸಾಬೀತುಪಡಿಸಲು ವಿಜಯ್ ಅವರು ಕಾಂಗ್ರೆಸ್ ಮತ್ತು ಎಡಪಕ್ಷಗಳನ್ನು ಒಳಗೊಂಡ ವಿರೋಧ ಪಕ್ಷಗಳ ಒಕ್ಕೂಟದೊಂದಿಗೆ ಮಾತುಕತೆ ನಡೆಸಲು ಮುಂದಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಪ್ರಮುಖ ಅಂಶಗಳು:
ದ್ರಾವಿಡ ಪಾರುಪತ್ಯಕ್ಕೆ ಬ್ರೇಕ್: ಕಳೆದ ಮೂರು ದಶಕಗಳಿಂದ ತಮಿಳುನಾಡನ್ನು ಆಳುತ್ತಿದ್ದ ಡಿಎಂಕೆ ಮತ್ತು ಎಐಎಡಿಎಂಕೆ ಪಕ್ಷಗಳ ಪ್ರಾಬಲ್ಯವನ್ನು ವಿಜಯ್ ಯಶಸ್ವಿಯಾಗಿ ಮುರಿದಿದ್ದಾರೆ.
ಮುಖಭಂಗ ಅನುಭವಿಸಿದ ಎಂ.ಕೆ. ಸ್ಟಾಲಿನ್: ಹಾಲಿ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ತಮ್ಮ ಸ್ವಕ್ಷೇತ್ರ ಕೊಳತ್ತೂರಿನಲ್ಲಿ ಸೋಲನುಭವಿಸಿರುವುದು ಡಿಎಂಕೆ ಪಾಲಿಗೆ ದೊಡ್ಡ ಆಘಾತ ತಂದಿದೆ.
ಕಾಂಗ್ರೆಸ್‌ಗೆ ಆಹ್ವಾನ: ವಿಜಯ್ ಅವರ ತಂದೆ ಎಸ್.ಎ. ಚಂದ್ರಶೇಖರ್ ಅವರು ಕಾಂಗ್ರೆಸ್ ಪಕ್ಷಕ್ಕೆ ಬಹಿರಂಗವಾಗಿ ಆಹ್ವಾನ ನೀಡಿದ್ದು, “ಕಳೆದುಹೋದ ಅಧಿಕಾರವನ್ನು ಮರಳಿ ಪಡೆಯಲು ಇದು ಸರಿಯಾದ ಸಮಯ” ಎಂದು ಹೇಳಿದ್ದಾರೆ.
ಮೈತ್ರಿ ಲೆಕ್ಕಾಚಾರ: ಕಾಂಗ್ರೆಸ್ (5), ವಿಸಿ ಕೆ (2), ಸಿಪಿಐ (2), ಸಿಪಿಐ-ಎಂ (2) ಮತ್ತು ಐಯುಎಂಎಲ್ (2) ಪಕ್ಷಗಳು ಟಿವಿ ಕೆ ಜೊತೆ ಕೈಜೋಡಿಸಿದರೆ, ಮೈತ್ರಿಕೂಟದ ಬಲ 121 ಕ್ಕೆ ಏರಲಿದ್ದು, ಸುಲಭವಾಗಿ ಸರ್ಕಾರ ರಚಿಸಬಹುದಾಗಿದೆ.





Leave a comment