SUDDIKSHANA KANNADA NEWS/DAVANAGERE/DATE:29_12_2025
ದಾವಣಗೆರೆ: ದಾವಣಗೆರೆ ಜಿಲ್ಲೆಯನ್ನು ಡ್ರಗ್ಸ್ ಮುಕ್ತ ಜಿಲ್ಲೆಯನ್ನಾಗಿಸಲು ಪಣ ತೊಟ್ಟಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಅವರು ಈ ನಿಟ್ಟಿನಲ್ಲಿ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದ್ದಾರೆ.
ಜೆ. ಹೆಚ್. ಪಟೇಲ್ ಬಡಾವಣೆಯ ಪಾರ್ಕ್ ಬಳಿ ಡ್ರಗ್ಸ್ ಮಾರಾಟ ಮತ್ತು ಸೇವನೆ ಕುರಿತಂತೆ ವಿದ್ಯಾನಗರ ಪೊಲೀಸರು ದಾಳಿ ನಡೆಸಿ ಡಿಸೆಂಬರ್ 22ರಂದು ನಾಲ್ವರನ್ನು ಬಂಧಿಸಿದ್ದರು. ಕಾಂಗ್ರೆಸ್ ಮುಖಂಡ ಮತ್ತು ರಿಯಲ್ ಎಸ್ಟೇಟ್ ಉದ್ಯಮಿ ಶಾಮನೂರು ವೇದಮೂರ್ತಿ ಅಲಿಯಾಸ್ ಜಿ. ಎಸ್. ವೇದಮೂರ್ತಿ ಶಾಮನೂರು ಸೇರಿದಂತೆ ನಾಲ್ವರನ್ನು ಬಂಧಿಸಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಭಾನುವಾರ ಮತ್ತೆ ನಾಲ್ವರನ್ನು ಬಂಧಿಸಲಾಗಿದೆ. ಬಂಧಿತರ ಸಂಖ್ಯೆ ಎಂಟಕ್ಕೇರಿದೆ. ಇನ್ನೂ ಈ ಪ್ರಕರಣದಲ್ಲಿ ಕೆಲವರು ಭಾಗಿಯಾಗಿರುವ ಕುರಿತಂತೆ ಮಾಹಿತಿ ಇದ್ದು, ಈ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ತಿಳಿಸಿದ್ದಾರೆ.
ಬಂಧಿತರು ಯಾರ್ಯಾರು?
ಜೆ. ಹೆಚ್. ಪಟೇಲ್ ಬಡಾವಣೆಯ ಪಾರ್ಕ್ ಬಳಿ ಸಿಕ್ಕ ನಾಲ್ವರ ವಿರುದ್ಧ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಎನ್ ಡಿಪಿಎಸ್ ಕೇಸ್ ದಾಖಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ಬಂಧಿಸಲಾಗಿತ್ತು. ಈ ಸಂಬಂಧ ಪರಶುರಾಮ್, ಕೃಷ್ಣಮೂರ್ತಿ ಸಿಂಗಾರ, ಅನ್ವರ್ ಬಾಷಾ, ಮಂಜುನಾಥ್ ಎಂ. ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಬಂಧಿತ ಆರೋಪಿಗಳನ್ನು ವಿಚಾರಣೆ ನಡೆಸಿದಾಗ ಮತ್ತು ಬೇರೆ ಸಾಕ್ಷ್ಯಾಧಾರ ಪರಿಶೀಲಿಸಿದ ಬಳಿಕ ಶಾಮನೂರು ವೇದಮೂರ್ತಿ ಅವರಿಂದ ಡ್ರಗ್ಸ್ ಖರೀದಿಸಿ ಮತ್ತು ಆರೋಪಿಗಳು ಬಳಕೆ ಮಾಡುತ್ತಿದ್ದರು ಎಂಬುದು ಖಚಿತವಾದ ಹಿನ್ನೆಲೆಯಲ್ಲಿ ಬಂಧನ ಮಾಡಲಾಗಿದೆ. ಇನ್ಯಾರು ಈ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂಬ ಕುರಿತಂತೆ ಮಾಹಿತಿ ಕಲೆಹಾಕಲಾಗುತ್ತಿದ್ದು, ಖಚಿತತೆ ಕಂಡು ಬಂದರೆ ಅವರನ್ನೂ ಬಂಧಿಸಲಾಗುವುದು ಎಂದು ತಿಳಿಸಿದರು.
ಬಂಧಿತ ಎಂಟು ಮಂದಿಯೂ ಬ್ಯುಸಿನೆಸ್ ಹೊಂದಿದವರಾಗಿದ್ದು, ಡ್ರಗ್ಸ್ ಸೇವನೆ ಅಭ್ಯಾಸ ಇರುವುದು ಕಂಡು ಬಂದಿದೆ. ಹೊಸ ವರ್ಷವೆಂದು ಡ್ರಗ್ಸ್ ಸಂಗ್ರಹ ಅಥವಾ ಮಾರಾಟ ಎಂದೇನಿಲ್ಲ. ಇವರೆಲ್ಲರೂ ಡ್ರಗ್ಸ್ ಸೇವನೆ ಮಾಡುತ್ತಿದ್ದರು ಎಂದು ಹೇಳಿದರು.
ಈಗಾಗಲೇ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು ಡ್ರಗ್ಸ್ ಮುಕ್ತ ಕರ್ನಾಟಕ ಮಾಡಬೇಕು. ಡ್ರಗ್ಸ್ ವಿರುದ್ಧ ಸಮರ ಸಾರುವಂತೆ ಸೂಚನೆ ನೀಡಿದ್ದಾರೆ. ಈ ನಿಟ್ಟಿನಲ್ಲಿ ಜಿಲ್ಲಾ ಪೊಲೀಸ್ ಇಲಾಖೆಯು ಕಾರ್ಯನಿರ್ವಹಿಸುತ್ತಿದೆ. ಕಳೆದ ಜುಲೈ ತಿಂಗಳಿನಲ್ಲಿಯೇ ಟಾಸ್ಕ್ ಫೋರ್ಸ್ ರಚಿಸಲಾಗಿದೆ. ಸಕ್ರಿಯವಾಗಿ ಕೆಲಸ ಮಾಡಿದಷ್ಟು ಭಯ ಜಾಸ್ತಿಯಾಗುತ್ತದೆ. ಯಾರೂ ಸಹ ಡ್ರಗ್ಸ್ ಸೇವನೆ ಮಾಡಬಾರದು. ಇಂಥ ಚಟುವಟಿಕೆಗಳು ನಡೆಯುತ್ತಿದ್ದರೆ ಪೊಲೀಸ್ ಇಲಾಖೆಗೆ ಮಾಹಿತಿ ನೀಡಿ. ಪ್ರತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 105, 102ಗೆ ದೂರು ನೀಡಬಹುದು ಎಂದು ಹೇಳಿದ್ದಾರೆ.
ಮಾದಕ ವಸ್ತುಗಳ ಸೇವನೆ ಮಾಡುವವರನ್ನು ಸಂತ್ರಸ್ತರನ್ನಾಗಿ ನೋಡುವುದಷ್ಟೇ ಅಲ್ಲ. ಕಣ್ಗಾವಲಿಗೆ ಪೊಲೀಸರನ್ನೂ ನಿಯೋಜಿಸಲಾಗಿದೆ. ಮಾದಕ ವ್ಯಸನದಂಥ ಚಟಕ್ಕೆ ಯಾರೂ ಬಲಿಯಾಗಬಾರದು. ಸರಿ ದಾರಿಗೆ ಅಂತವರನ್ನು ತಂದು ಬದುಕು ಸರಿಯಾಗಿಸಬೇಕೆಂಬ ನಿಟ್ಟಿನಲ್ಲಿ ಸನ್ಮಿತ್ರ ಪಡೆ ರಚಿಸಲಾಗಿದೆ. ಪೆಡ್ಲರ್ ಬಗ್ಗೆ ಫಾಲೋ ಮಾಡಲು ಒಬ್ಬೊಬ್ಬ ಪೊಲೀಸರನ್ನು ನೇಮಿಸಲಾಗಿದೆ. ಡ್ರಗ್ಸ್ ನಿರ್ಮೂಲನೆ ಮಾಡುವ ನಿಟ್ಟಿನಲ್ಲಿ ಕೆಲಸ ಮಾಡುತ್ತೇವೆ. ಪ್ರತಿಯೊಂದು ಪೊಲೀಸ್ ಠಾಣಾ ಬೀಟ್ ನಲ್ಲಿ ಪೊಲೀಸರು ನಿಗಾ ವಹಿಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.






Leave a comment